ಸೋಮವಾರ, ಜೂನ್ 21, 2021
26 °C
ನಳಿನ್ ₨ 11.37 ಲಕ್ಷ ಒಡೆಯ – ಪತ್ನಿ ಬಳಿ ಬುಲ್‌ಡೋಜರ್‌

ದ.ಕ: ನಾಮಪತ್ರ ಸಲ್ಲಿಕೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರೊಂದಿಗೆ ಈ ಬಾರಿಯ ಮಹಾ ಚುನಾವಣೆಯು ಹಣಾಹಣಿಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಈ ಬಾರಿ ಮೊದಲು ನಾಮಪತ್ರ ಸಲ್ಲಿಸಿದ್ದು ಬಿಜೆಪಿಯ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌.ನಳಿನ್‌ ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶರವು ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಬಂಟ್ಸ್‌ ಹಾಸ್ಟೆಲ್‌ನಲ್ಲಿ ತೆರೆಯಲಾದ ಪಕ್ಷದ ಚುನಾವಣಾ ಕಚೇರಿ ಉದ್ಘಾಟನೆಯಲ್ಲಿ ಪಾಲ್ಗೊಂಡು ಅಲ್ಲಿಂದ ನೇರವಾಗಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಬೆಳಿಗ್ಗೆ 11.25ಕ್ಕೆ ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಯಾವುದೇ ಮೆರವಣಿಗೆ ಹಮ್ಮಿಕೊಳ್ಳದೆ ಇತರ ಅಭ್ಯರ್ಥಿಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟರು. ನಳಿನ್‌ ಕುಮಾರ್‌ ಅವರ ಜತೆ ಶಾಸಕರಾದ ಎಸ್‌.ಅಂಗಾರ, ಮೋನಪ್ಪ ಭಂಡಾರಿ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್‌ ಹಾಗೂ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ರುಕ್ಮಯ ಪೂಜಾರಿ ಇದ್ದರು.ನಳಿನ್‌ ಕುಮಾರ್‌ ಕಟೀಲ್‌ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ ಅವರು ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ ಒಟ್ಟು ₨ 11.37 ಲಕ್ಷ ಆಸ್ತಿಯ ಒಡೆಯ. ಅವರಿಗೆ ಯಾವುದೇ ಸಾಲವೂ ಇಲ್ಲ, ಅವರ ಬಳಿ ಸ್ವಂತ ವಾಹನವೂ ಇಲ್ಲ. ನಳಿನ್‌ ಅವರಿಗೆ ಪುತ್ತೂರು ತಾಲ್ಲೂಕಿನ ಕಡಬಾ ಹೋಬಳಿಯ ಪಾಲ್ತಾಡಿಯಲ್ಲಿ ಪಿತ್ರಾರ್ಜಿತವಾಗಿ ಬಂದ 8.19 ಎಕರೆ ಕೃಷಿ ಭೂಮಿ ಮಾತ್ರ ಇದೆ. ನಳಿನ್‌ ಅವರು ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಕಲಿತದ್ದು ಪುತ್ತೂರಿನ ಸೇಂಟ್‌ ಫಿಲೋಮಿನಾ ಪ್ರೌಢಶಾಲೆಯಲ್ಲಿ. ಅವರ ಪತ್ನಿ ಶ್ರೀದೇವಿ ಅವರ ಹೆಸರಿನಲ್ಲಿ ₨ 80.69 ಲಕ್ಷ ಮೌಲ್ಯದ ಆಸ್ತಿ ಇದೆ. ಈ ಪೈಕಿ ಮಾರುತಿ ಆಲ್ಟೊ ಕಾರು ಹಾಗೂ ಒಂದು ಬುಲ್‌ಡೋಜರ್‌ (ಎಸ್ಕವೇಟರ್‌) ಕೂಡಾ ಸೇರಿದೆ. ಅವರಿಗೆ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ₨ 14.93 ಲಕ್ಷ ಸಾಲವೂ ಇದೆ.  ಪುತ್ರಿಯರಾದ ಸನ್ನಿಧಿ ಹಾಗೂ ಸಂಸ್ಕೃತಿ ಅವರ ಬಳಿ ತಲಾ ₨ 61,111 ಚರಾಸ್ತಿ ಇದೆ.ನಳಿನ್‌ ಅವರು ಪ್ರಸ್ತುತ ವಾಸವಿರುವ ನಗರದ ಬೋಳೂರು ಗ್ರಾಮದ ಹೊಯ್ಗೆಬೈಲ್‌ ರಸ್ತೆ ಬಳಿ ಅಶೋಕ ಅಪಾರ್ಟ್‌ಮೆಂಟ್‌ ಪತ್ನಿಯ ಹೆಸರಿನಲ್ಲಿದೆ. ಅದನ್ನು 2009ರ ಮಾ.16ರಂದು ಅವರು ಖರೀದಿಸಿದ್ದರು. ಬಳಿಕ ಅದರ ನವೀಕರಣಕ್ಕೆ 15 ಲಕ್ಷ ವೆಚ್ಚ ಮಾಡಿದ್ದರು. ಮನೆಯ ಈಗಿನ ಮಾರುಕಟ್ಟೆ ಮೌಲ್ಯ ₨ 35 ಲಕ್ಷ.ನಳಿನ್‌ ಬಳಿ 20 ಗ್ರಾಂ ತೂಕದ ಚಿನ್ನಾಭರಣ (₨ 56 ಸಾವಿರ) ಹಾಗೂ 600 ಗ್ರಾಂ ತೂಕದ ಬೆಳ್ಳಿ ಸ್ವತ್ತುಗಳಿವೆ (₨ 36 ಸಾವಿರ). ಪತ್ನಿ ಬಳಿ 950 ಗ್ರಾಂ ಚಿನ್ನಾಭರಣ (₨ 26.60 ಲಕ್ಷ), 200 ಗ್ರಾಂ ಬೆಳ್ಳಿ (₨ 12 ಸಾವಿರ), ₨ 50 ಸಾವಿರ ಮೌಲ್ಯದ ಪೀಠೋಪಕರಣಗಳು ಹಾಗೂ ₨ 1 ಲಕ್ಷ ಮೌಲ್ಯದ ವಿದ್ಯುನ್ಮಾನ ಉಪಕರಣಗಳು ಇವೆ. ಮಗಳು ಸನ್ನಿಧಿ ಹಾಗೂ ಸಂಸ್ಕೃತಿ ಬಳಿ ತಲಾ 20 ಗ್ರಾಂ ಚಿನ್ನಾಭರಣಗಳಿವೆ (ತಲಾ ₨ 56ಸಾವಿರ). ನಳಿನ್‌ ಕೈಯಲ್ಲಿ ₨ 30 ಸಾವಿರ ನಗದು ಹಾಗೂ ಪತ್ನಿ ಬಳಿ ₨ 15 ಸಾವಿರ ನಗದು ಇದೆ.ಮೋದಿ ಅಲೆ

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಳಿನ್‌, ‘ಜಿಲ್ಲೆಯಲ್ಲಿ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೊದಿ ಪರ ಅಲೆ ಇದೆ. ಕಳೆದ ಬಾರಿ ಆಶೀರ್ವಾದ ಮಾಡಿದ ಜನರ ವಿಶ್ವಾಸ ಉಳಿಸಿಕೊಂಡಿದ್ದೇನೆ. ಈ ಬಾರಿ ಕಳೆದ ಬಾರಿಗಿಂತಲೂ (40 ಸಾವಿರ ಮತಗಳ ಅಂತರ) ಹೆಚ್ಚು ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ’ ಎಂದರು.‘ನಳಿನ್‌ ಕುಮಾರ್‌ಗೆ ಪಕ್ಷದಲ್ಲೇ ವಿರೋಧ ಇದೆ ಎಂಬುದು ವಿರೋಧ ಪಕ್ಷದವರು ಹಬ್ಬಿಸಿದ ವದಂತಿ. ಈ ಚುನಾವಣೆ ಮೋದಿ ಹಾಗೂ ಪೂಜಾರಿ ನಡುವಿನದಲ್ಲ, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನದು. ದೊಡ್ಡ ವ್ಯಕ್ತಿಯ ಎದುರು ಸೋತಿದ್ದೇನೆ ಎಂದು ಹೇಳಿಕೊಳ್ಳಲು ಕಾಂಗ್ರೆಸ್‌ ಈ ತಂತ್ರ ಅನುಸರಿಸಿದೆ. ನಾನು ರಾಷ್ಟ್ರೀಯತೆ,  ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ’ ಎಂದರು. ಎನ್‌ಸಿಪಿ ದ.ಕ. ಜಿಲ್ಲಾ ಅಧ್ಯಕ್ಷ ಸುಪ್ರೀತ್‌ ಕುಮಾರ್‌ ಪೂಜಾರಿ ಅವರೂ ಗುರುವಾರ ನಾಮಪತ್ರ ಸಲ್ಲಿಸಿದರು. ಅವರು ಆಸ್ತಿ ವಿವರ ಹಾಗೂ ಪಕ್ಷದ ಬಿ ಫಾರ್ಮ್‌ ಸಲ್ಲಿಸಿಲ್ಲ.ಸುಪ್ರೀತ್‌ ಅವರು  2008ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ನಿಂದ ಹಾಗೂ 2012ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲೂ ಕಣಕ್ಕಿಳಿದಿದ್ದರು.‘ಪಾಲಿಕೆಯು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದರೂ, ಅದನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾಧಿ­ಕಾರಿಗೆ ಗುರುವಾರ ದೂರು ನೀಡಿದೆ. ಈ ದೂರನ್ನು ಪಾಲಿಕೆ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳಿಗೆ ವಿಚಾರಣೆ­ಗಾಗಿ ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಳಿನ್ ಕುಮಾರ್ ಕಟೀಲ್‌ ವಿರುದ್ಧ ಬಿಜೆಪಿ ವಿರೋಧಿಗಳು ವಾಟ್ಸ್‍ಆಪ್ ಮೂಲಕ ಅವಹೇಳನಕಾರಿ­ಯಾಗಿ ಅಪಪ್ರಚಾರ ಮಾಡಿರುವ ಬಗ್ಗೆಯೂ ಬಿಜೆಪಿ ಗುರುವಾರ ದೂರು ನೀಡಿದೆ. ಈ ದೂರನ್ನು ತನಿಖೆಗಾಗಿ ನಗರ ಪೊಲೀಸ್‌ ಆಯುಕ್ತರಿಗೆ ಕಳುಹಿಸಿಕೊಡಲಾಗಿದೆ’ ಎಂದು ಅವರು ತಿಳಿಸಿದರು.

‘ಪಾಲಿಕೆಯು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದರೂ, ಅದನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾಧಿ­ಕಾರಿಗೆ ಗುರುವಾರ ದೂರು ನೀಡಿದೆ. ಈ ದೂರನ್ನು ಪಾಲಿಕೆ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳಿಗೆ ವಿಚಾರಣೆ­ಗಾಗಿ ಕಳುಹಿಸಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಳಿನ್ ಕುಮಾರ್ ಕಟೀಲ್‌ ವಿರುದ್ಧ ಬಿಜೆಪಿ ವಿರೋಧಿಗಳು ವಾಟ್ಸ್‍ಆಪ್ ಮೂಲಕ ಅವಹೇಳನಕಾರಿ­ಯಾಗಿ ಅಪಪ್ರಚಾರ ಮಾಡಿರುವ ಬಗ್ಗೆಯೂ ಬಿಜೆಪಿ ಗುರುವಾರ ದೂರು ನೀಡಿದೆ. ಈ ದೂರನ್ನು ತನಿಖೆಗಾಗಿ ನಗರ ಪೊಲೀಸ್‌ ಆಯುಕ್ತರಿಗೆ ಕಳುಹಿಸಿಕೊಡಲಾಗಿದೆ’ ಎಂದು ಅವರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.