ಭಾನುವಾರ, ಏಪ್ರಿಲ್ 18, 2021
33 °C

ದ.ಕ: 4 ವರ್ಷದ ಸಾಧನೆ ಮುಂದಿಟ್ಟ ಸಚಿವ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ.ಕ: 4 ವರ್ಷದ ಸಾಧನೆ ಮುಂದಿಟ್ಟ ಸಚಿವ ರವಿ

ಮಂಗಳೂರು: ಬಿಜೆಪಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 991.57 ಕೋಟಿ ರೂಪಾಯಿ ವಿನಿಯೋಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಹೇಳಿದ್ದಾರೆ.ಇಲ್ಲಿನ ನೆಹರು ಮೈದಾನದಲ್ಲಿ ಬುಧವಾರ 66ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಜಿಲ್ಲೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೂಲಗೇಣಿ ಪದ್ಧತಿಯನ್ನು ರದ್ದುಗೊಳಿಸಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಮೂಲಗೇಣಿದಾರರ ಅನೇಕ ವರ್ಷಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದು ಬಿಜೆಪಿ ಸರ್ಕಾರದ ಇಚ್ಛಾಶಕ್ತಿಗೆ ಒಂದು ನಿದರ್ಶನ ಎಂದರು.ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ 22,693 ಮಂದಿಗೆ ಮಾಸಿಕ 500 ರೂಪಾಯಿ ಮಾಸಾಶನ ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿಯ ವಾರ್ಷಿಕ ಅನುದಾನವನ್ನು 6 ಲಕ್ಷದಿಂದ 8 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಮೀನುಗಾರರಿಗೆ ನೀಡುವ ತೆರಿಗೆ ರಹಿತ ಡೀಸೆಲ್ ಅನ್ನು 1 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ.ಹಾಲು ಉತ್ಪಾದಕರಿಗೆ ಲೀಟರ್‌ಗೆ 2 ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಬೀಡಿ ಮತ್ತು ದರ್ಜಿ ಕಾರ್ಮಿಕರ ಕಲ್ಯಾಣಿ ನಿಧಿಯಂತಹ ಹಲವಾರು ಜನಪರ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ, ಕೃಷಿಕರ ಸಾಲ ಮನ್ನಾದಂತಹ ಕ್ರಮಗಳು ನೆರವಿಗೆ ಬಂದಿವೆ. `ಸಕಾಲ~ ಯೋಜನೆ ಸರ್ಕಾರಿ ಕೆಲಸವನ್ನು ತ್ವರಿತಗೊಳಿಸಿದೆ ಎಂದರು.ಪಿಲಿಕುಳದಲ್ಲಿ 24.5 ಕೋಟಿ ರೂಪಾಯಿ ವೆಚ್ಚದಲ್ಲಿ 3ಡಿ ತಾರಾಲಯ ಸ್ಥಾಪನೆ, ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣಗೊಂಡಿದೆ.

 

ಬಂಗ್ರ ಕೂಳೂರಿನಲ್ಲಿ ಜಿಲ್ಲಾಡಳಿತ ಸಂಕೀರ್ಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. 15 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣವಾಗಲಿದೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ 23 ಕೋಟಿ ರೂಪಾಯಿ ವೆಚ್ಚದಲ್ಲಿ 103 ಕಾಮಗಾರಿಗಳ ಪೈಕಿ 88 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಚಿವರು ವಿವರಿಸಿದರು.ಕೊಯಿಲದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಶು ವೈದ್ಯಕೀಯ ಕಾಲೇಜು ಆರಂಭವಾಗಲಿದೆ ಎಂದ ಅವರು, ಮಳೆಗಾಲ ಕೊನೆಗೊಂಡ ತಕ್ಷಣ ಮಂಗಳಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗುವುದು ಎಂದರು.ವಿವಾದದಿಂದ ದೂರ

ಸುಮಾರು 15 ನಿಮಿಷಗಳ ಸಚಿವರ ಭಾಷಣದಲ್ಲಿ ವಿವಾದಾತ್ಮಕ ಎತ್ತಿನಹೊಳೆ ಯೋಜನೆಯ ಪ್ರಸ್ತಾಪವಾಗಲೀ, ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಪ್ರಸ್ತಾಪವಾಗಲೀ ಇರಲಿಲ್ಲ. ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಒಳಪಡಿಸಿರುವ ನೈತಿಕ ಪೊಲೀಸ್, ಮಾದಕ ದ್ರವ್ಯ ಮಾಫಿಯಾದಂತಹ ವಿಚಾರಗಳನ್ನೂ ಭಾಷಣದಿಂದ ಕೈಬಿಡಲಾಗಿತ್ತು.16ನೇ ಶತಮಾನದಲ್ಲೇ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ರಾಣಿ ಅಬ್ಬಕ್ಕ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಒಡನಾಡಿ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ, ಕಾರ್ನಾಡು ಸದಾಶಿವರಾಯರನ್ನು ಸ್ಮರಿಸಿದ ಸಚಿವರು, ಹಿರಿಯರು ಗಳಿಸಿಕೊಟ್ಟ ಈ ಸ್ವಾತಂತ್ರ್ಯದ  ದೀಪವನ್ನು ಜೋಪಾನವಾಗಿ ರಕ್ಷಿಸಿ ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿ.ಪಂ.ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್, ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ, ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ, ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಎಸ್‌ಪಿ ಅಭಿಷೇಕ್ ಗೋಯಲ್, ವಿವಿಧ ಅಕಾಡೆಮಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಇದ್ದರು.ಆಕರ್ಷಕ ಪಥಸಂಚಲನ

ಪೆರೇಡ್ ಕಮಾಂಡರ್ ಆರ್‌ಪಿಐನ ಆರ್.ರಾಘವೇಂದ್ರ ಅವರ ನೇತೃತ್ವದಲ್ಲಿ ಅತ್ಯಾಕರ್ಷಕ ಪಥ ಸಂಚಲನ ನಡೆಯಿತು. ಕೆಎಸ್‌ಆರ್‌ಪಿ, ಡಿಎಆರ್, ಪೊಲೀಸ್, ಪೊಲೀಸ್ ಬ್ಯಾಂಡ್, ಎನ್‌ಸಿಸಿ, ಭಾರತ್ ಸೇವಾದಳ, ರಸ್ತೆ ಸುರಕ್ಷತಾ ತಂಡ, ಅಳಿಕೆ ಸತ್ಯಸಾಯಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಬ್ಯಾಂಡ್ ತಂಡ ಸಹಿತ 18 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡವು. ಇಂಡಿಯನ್ ಏರೋ ಮಾಡೆಲಿಂಗ್ ಸೊಸೈಟಿಯ ನಿರ್ದೇಶಕ ರತ್ನಾಕರ್ ನಾಯಕ್ ಅವರ ಮಾದರಿ ಹೆಲಿಕಾಪ್ಟರ್ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಆಗಸದಲ್ಲಿ ಸುತ್ತಾಡಿ ಗಮನ ಸೆಳೆಯಿತು.ಚರಣ್‌ರಾಜ್ ನೇತೃತ್ವದ ಎನ್‌ಸಿಸಿ ಜ್ಯೂನಿಯರ್ ಏರ್‌ವಿಂಗ್ ಘಟಕ ಮತ್ತು ಬಾಲಕರ ರಸ್ತೆ ಸುರಕ್ಷತಾ ತಂಡ ಉತ್ತಮ ಪಥಸಂಚಲನ ಪ್ರಶಸ್ತಿ ಗಳಿಸಿಕೊಂಡವು.ಬಳಿಕ ಸ್ಪೋರ್ಟ್ಸ್ ಪ್ರಮೋಟರ್ಸ್‌ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಕ್ರಿಕೆಟ್ ಪಂದ್ಯಾಟ ನಡೆಯಿತು.ಮುಖ್ಯಾಂಶಗಳು

       * ಮೂಲಗೇಣಿದಾರರಿಗೆ ಕೊಟ್ಟ ಭಾಷೆ ಈಡೇರಿಕೆ

       * ಮುಂದಿನ ವರ್ಷದಿಂದ ಪಶು ವೈದ್ಯಕೀಯ ಕಾಲೇಜು

       * ವಿವಾದಿತ ಎತ್ತಿನಹೊಳೆ ಯೋಜನೆಯ ಪ್ರಸ್ತಾಪ ಇಲ್ಲ

       * ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿ- ಚಕಾರ ಇಲ್ಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.