ಶುಕ್ರವಾರ, ಜೂನ್ 25, 2021
27 °C
ಎನ್‌ಜಿಇಎಫ್‌ ರಸ್ತೆ ಜಂಕ್ಷನ್‌, ಹಳೆಯ ಮದ್ರಾಸ್‌ ರಸ್ತೆ ಅವ್ಯವಸ್ಥೆ

ದಟ್ಟಣೆ –ದೂಳು, ಸಂಚಾರವೇ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ದಟ್ಟಣೆಯಿಂದ ಸಾಲುಗಟ್ಟಿ ನಿಂತ ವಾಹನಗಳು, ಚಿಕ್ಕದಾಗಿರುವ ಹದಗೆಟ್ಟ ರಸ್ತೆ, ಮುಖಕ್ಕೆ ರಾಚುವ ದೂಳು, ಸಂಚರಿಸಲು ಕಷ್ಟಪಡುವ ವಾಹನ ಸವಾರರು...

ಇದು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿಯ ಎನ್‌ಜಿಇಎಫ್‌ ರಸ್ತೆ  ಜಂಕ್ಷನ್‌ ಹಾಗೂ ಹಳೆಯ ಮದ್ರಾಸ್‌ ರಸ್ತೆಯಲ್ಲಿ ಕಂಡುಬರುವ ನೋಟವಿದು.ಮೊದಲು ರಸ್ತೆ ದೊಡ್ಡದಿದ್ದು, ಸರಾಗವಾಗಿ ಸಂಚರಿಸಲು ಸಾಧ್ಯವಾಗಿತ್ತು. ಆದರೆ, ಈಗ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ನಿರ್ಮಾಣ­ದಿಂದ ರಸ್ತೆ ಅತಿ ಚಿಕ್ಕದಾಗಿದೆ. ಇದರಿಂದ, ಇಲ್ಲಿನ ರಸ್ತೆಗಳಲ್ಲಿ ಸಂಚರಿಸಲು ಕಷ್ಟಪಡುವಂತಾಗಿದೆ ಎಂಬುದು ಅಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ನಿವಾಸಿಗಳ ದೂರು.‘ಇಲ್ಲಿ ದ್ವಿಮುಖ ಸಂಚಾರವಿದೆ.  ಮೆಟ್ರೊ ರೈಲು ನಿಲ್ದಾಣದ ನಿರ್ಮಾಣದಿಂದ ರಸ್ತೆ ಚಿಕ್ಕದಾಗಿದ್ದು,  ಇಲ್ಲಿ ದ್ವಿಮುಖ ಸಂಚಾರ ದುಸ್ತರವಾಗಿದೆ. ರಸ್ತೆಗಳ ಮಧ್ಯೆ ವಿಭಜಕಗಳ ನಿರ್ಮಾಣವೇ ಇಲ್ಲ.  ಇದರಿಂದ, ದ್ವಿಚಕ್ರ ವಾಹನ ಸವಾರರು ತಮಗೆ ಹೇಗೆ ಬೇಕು ಹಾಗೆ ವಾಹನ ಚಲಾಯಿಸುತ್ತಾರೆ. ಇದರಿಂದ, ಸಂಚಾರ ದಟ್ಟಣೆ ಹೆಚ್ಚಾಗುತ್ತದೆ’ ಎಂದು ಖಾಸಗಿ ಕಂಪೆನಿ ಉದ್ಯೋಗಿಯಾದ ರಮೇಶ್‌ ಹೇಳಿದರು.‘ಇಲ್ಲಿ ರಸ್ತೆ ಚಿಕ್ಕದಾಗಿದೆ. ಇದರಿಂದ, ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಎಲ್ಲರಿಗೂ ತಮ್ಮ ಕೆಲಸಕ್ಕೆ  ಬೇಗ ಹೋಗಬೇಕೆಂಬುದಿರುತ್ತದೆ.ಹೀಗಾಗಿ ಇಲ್ಲಿ ಯಾರನ್ನೂ ದೂರುವಂತಿಲ್ಲ’ ಎಂದರು.‘ಮೊದಲು ನಾನು ಕಚೇರಿಗೆ ತೆರಳಲು ಗರಿಷ್ಠ 20 ನಿಮಿಷ ಹಿಡಿಯುತ್ತಿತ್ತು. ಆದರೆ, ಈಗ ಈ ರಸ್ತೆಯಲ್ಲಿ ಸಂಚರಿಸಿ  ಕಚೇರಿಯನ್ನು ತಲುಪಲು ಅರ್ಧ ಗಂಟೆ  ಹಿಡಿಯುತ್ತದೆ. ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಿರು­ತ್ತದೆ. ಇದರಿಂದ, ತುಂಬಾ ತೊಂದರೆ ಅನುಭವಿಸು­ವಂತಾಗಿದೆ’ ಎಂದು ಖಾಸಗಿ ಕಂಪೆನಿ ಉದ್ಯೋಗಿ ಶ್ರೀನಿವಾಸ್‌ ದೂರಿದರು.‘ಇಲ್ಲಿ ಪಾದಚಾರಿಗಳಿಗೆ ಸಂಚರಿಸಲು ಸರಿ­ಯಾದ ಪಾದಚಾರಿ ಮಾರ್ಗವೇ ಇಲ್ಲ. ರಸ್ತೆಯ ತುಂಬೆಲ್ಲಾ ದೂಳು. ರಸ್ತೆಯ ಪಕ್ಕದಲ್ಲಿಯೇ ಕಟ್ಟಡದ ತ್ಯಾಜ್ಯ, ಇನ್ನಿತರ ತ್ಯಾಜ್ಯಗಳನ್ನು ತಂದು ಸುರಿ­ಯುತ್ತಾರೆ. ರಸ್ತೆಯ ಪಕ್ಕದಲ್ಲಿಯೇ ಮರಳು ತಂದು ಸುರಿದಿದ್ದಾರೆ’ ಎಂಬುದು ಶಿಕ್ಷಕಿ ಎಸ್‌.ರಾಧಾ ಅವರ ದೂರು.‘ರಸ್ತೆ ದಟ್ಟಣೆ ಉಂಟಾದರೆ, ಆಂಬುಲೆನ್ಸ್‌, ತುರ್ತು ವಾಹನಗಳು ಇಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ಸಂಜೆ 5 ರಿಂದ ರಾತ್ರಿ 8.30 ರವರೆಗೆ ವಿಪ­ರೀತ ಸಂಚಾರ ದಟ್ಟಣೆ ಉಂಟಾಗುತ್ತದೆ. ಹೀಗಾಗಿ ಕಚೇರಿಯಿಂದ ಎಷ್ಟು ಬೇಗ ಹೊರಟರೂ ಮನೆಗೆ ತಲುಪುವುದು ತಡವಾಗುತ್ತದೆ’ ಎಂದು ಜೆ.ಕೆ.­ಟವರ್ಸ್‌ ನಿವಾಸಿ ರಶ್ಮಿ ಬೇಸರ ವ್ಯಕ್ತಪಡಿಸಿದರು.‘ಮೆಟ್ರೊ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ಈಗ ನೋಡಿದರೆ, ಸಂಚಾರ ದಟ್ಟಣೆ ಇನ್ನೂ ಹೆಚ್ಚಾಗಿದೆ. ಇದರಿಂದ, ಸಾರ್ವಜನಿಕರು ಕಷ್ಟ­ಪಡು­ವಂತಾಗಿದೆ’ ಎಂದು ನಿವಾಸಿ ಗಿರೀಶ್‌ ಹೇಳಿದರು.‘ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ವಿಪರೀತ ದೂಳು. ಇದರಿಂದ, ಇಲ್ಲಿ ಸಂಚರಿಸಲು ಕಷ್ಟಪಡಬೇಕು. ನಮ್ಮ ಜೀವದ ಹಂಗು ಬಿಟ್ಟು ಇಲ್ಲಿ ಸಂಚರಿಸಬೇಕಾಗಿದೆ’ ಎಂದು ಆಕ್ರೋಶ­ವ್ಯಕ್ತಪಡಿಸುತ್ತಾರೆ ಆರ್‌.ರವಿಕುಮಾರ್‌ ಅವರು.‘ಬಿಬಿಎಂಪಿ ಅಧಿಕಾರಿಗಳಿಗೆ ಈ ಕುರಿತು ಅನೇಕ ಬಾರಿ ದೂರುಗಳನ್ನು ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕನಿಷ್ಠ ರಸ್ತೆ ವಿಭಜಕಗಳ ನಿರ್ಮಾಣ ಮತ್ತು ರಸ್ತೆಯನ್ನಾದರೂ ದುರಸ್ತಿಗೊಳಿಸಬಹುದು. ಆದರೆ, ನಮ್ಮ ಮನವಿಗಳೆಲ್ಲ ಕಸದ ಬುಟ್ಟಿಗೆ ಸೇರಿವೆ’ ಎಂದು ನಿವಾಸಿ ಕೇಶವ ಆಕ್ರೋಶ ವ್ಯಕ್ತಪಡಿಸಿದರು.ಸಂಚರಿಸುವ ಮಾರ್ಗಗಳು

ಎನ್‌ಜಿಇಎಫ್‌ ನಿಂದ ಬರುವ ವಾಹನಗಳು ಹಲಸೂರು, ಬಿಇಎಂಎಲ್‌ ರಸ್ತೆ, ಕೆ.ಆರ್‌.ಪುರ ಕಡೆಗೆ ಸಂಚರಿಸುತ್ತವೆ. ಹಳೆಯ ಮದ್ರಾಸ್‌ ರಸ್ತೆಯಿಂದ ಸಂಚರಿಸುವ ವಾಹನಗಳು ಬೈಯಪ್ಪನಹಳ್ಳಿ, ಹೊಸಕೋಟೆ, ರಾಮಮೂರ್ತಿನಗರ ಮತ್ತಿತರ ಸ್ಥಳಗಳಿಗೆ ಸಂಚರಿಸುತ್ತವೆ.ಮೇಲ್ಸೇತುವೆ ನಿರ್ಮಾಣ: ಯೋಜನಾ ವರದಿ

ಎನ್‌ಜಿಇಎಫ್‌ ಜಂಕ್ಷನ್‌ನ ಸಂಚಾರ ದಟ್ಟಣೆ ಕುರಿತು ಹಲವರೊಂದಿಗೆ ಮಾತುಕತೆಯಾಡಿದ್ದಾನೆ. ಎನ್‌ಜಿಇಎಫ್‌ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣದ ಕುರಿತು ವಿವರವಾದ ಯೋಜನಾ ವರದಿಯನ್ನು ಒಂದು ವರ್ಷದ ಹಿಂದೆಯೇ ತಯಾರಿಸಿದ್ದೇನೆ. ಆದರೆ, ಅಧಿಕಾರಿಗಳು, ಒಂದೇ ಪ್ಯಾಕೇಜ್‌ ಅಡಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಯೋಜನೆ ಕುರಿತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಅವರಿಗೆ ಈ ಕುರಿತು ಚಿಂತನೆ ನಡೆಸುವಂತೆ ಹೇಳಿದ್ದೇನೆ.

– ಎಸ್‌.ರಘು, ಶಾಸಕ‘ಶೀಘ್ರ ಕ್ರಮ’

ಎನ್‌ಜಿಇಎಫ್‌ ಹಾಗೂ ಹಳೆಯ ಮದ್ರಾಸ್‌ ರಸ್ತೆಯಲ್ಲಿನ ಸಂಚಾರ ದಟ್ಟಣೆಯ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ಆದರೆ, ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಸಂಚಾರ ಪೊಲೀಸ್‌ ಅಧಿಕಾರಿಗಳ ಅಭಿಪ್ರಾಯವನ್ನು ಕೇಳಲಾಗಿದೆ. ಅವರಿಂದ ಅಭಿಪ್ರಾಯ, ಸಲಹೆ, ಸೂಚನೆಗಳು ಬಂದ ನಂತರ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು.

– ಎಂ.ಲಕ್ಷ್ಮಿನಾರಾಯಣ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಆಯುಕ್ತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.