ಬುಧವಾರ, ಮಾರ್ಚ್ 3, 2021
25 °C
ಚಿತ್ರ: ಚತುರ್ಭುಜ

ದಣಿದ ಭುಜಗಳಿಗೆ ಒರಗಿ...

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ದಣಿದ ಭುಜಗಳಿಗೆ ಒರಗಿ...

ನಿರ್ಮಾಣ: ಎಂ.ಬಿ. ಶಿವನಂಜಪ್ಪ

ನಿರ್ದೇಶನ: ಎಂ.ಎನ್. ಕೃಷ್ಣಲೇಖನ

ತಾರಾಗಣ: ಆರ್ವ, ಶ್ರೇಯಾ, ಬಾದಲ್, ತಬಲಾ ನಾಣಿ, ಚಂದ್ರಿಕಾ, ಮೋಹನ್ ಜುನೇಜ, ಟೆನ್ನಿಸ್ ಕೃಷ್ಣ, ಮತ್ತಿತರರು.
ಸಿನಿಮಾದ ಕೊನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ‘ಶುಭಂ’ ಜಾಗದಲ್ಲಿ ನಿರ್ದೇಶಕರ ಹೆಸರು ಕಾಣಿಸಲು ಶುರುವಾಗಿ ಸಾಕಷ್ಟು ಕಾಲವಾಯಿತು. ಆದರೆ, ‘ಚತುರ್ಭುಜ’ ಸಿನಿಮಾ ಕೊನೆಗೊಳ್ಳುವುದು ‘ಎ ಫಿಲಂ ಬೈ ಕೃಷ್ಣಲೇಖನ ಅಂಡ್ ಟೀಂ’ ಎನ್ನುವ ಬರಹದೊಂದಿಗೆ. ಇದು ನನ್ನ ಸಿನಿಮಾ ಎಂದು ಹೇಳಿಕೊಳ್ಳುವ ನಿರ್ದೇಶಕರೇ ಹೆಚ್ಚಾಗಿರುವ ಸಂದರ್ಭದಲ್ಲಿ ಚಿತ್ರತಂಡವನ್ನು ತನ್ನ ಹೆಸರಿನೊಂದಿಗೆ ದಾಖಲಿಸುವ ಕೃಷ್ಣಲೇಖನ ಎಲ್ಲರಂಥಲ್ಲ ಎನ್ನಿಸುತ್ತಾರೆ. ಆ ಮಟ್ಟಿಗೆ ಅವರದು ಭಿನ್ನ ಯೋಚನೆ. ‘ಚತುರ್ಭುಜ’ ಕಥನದ ಕ್ಲೈಮ್ಯಾಕ್ಸ್ ನಲ್ಲಿ ಕೂಡ ಅನೂಹ್ಯ ತಿರುವೊಂದಿದೆ. ಆ ಮಟ್ಟಿಗೆ ಸಿನಿಮಾ ವಿಭಿನ್ನ. ಇಷ್ಟು ಮಾತ್ರವಲ್ಲ, ಸಿನಿಮಾದ ಬಹುತೇಕ ಪಾತ್ರಗಳು ಆಗಾಗ್ಗೆ ‘ಥೂ ಥೂ’ ಎನ್ನುತ್ತಿರುತ್ತವೆ. ಇಂಥ ಆತ್ಮವಿಮರ್ಶೆ ಕೂಡ ಗಾಂಧಿನಗರದಲ್ಲಿ ಅಪರೂಪ.

ಅಕ್ಷಯಪಾತ್ರೆಗಳಂಥ ಹಳ್ಳಿಗಳಿಂದ ಬೆಂಗಳೂರೆಂಬ ಶೋಣಿತಪುರಿಗೆ ಬಂದು ಕಂಗಾಲಾಗುವ, ದಿಕ್ಕುತಪ್ಪುವ ತರುಣರ ಕಥೆಗಳ ಒಂದು ಸಮೃದ್ಧ ಪರಂಪರೆಯನ್ನು ಕಳೆದ ಒಂದೂವರೆ ದಶಕದ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಬಹುದು. ಈ ಪರಂಪರೆಯ ಭಾಗವಾಗುವ ಹಂಬಲ ‘ಚತುರ್ಭುಜ’ ಚಿತ್ರಕ್ಕೆ ಇದ್ದಂತಿದೆ. ನಿರ್ದೇಶಕರಿಗೆ ಬೆಂಗಳೂರಿನ ಬಗ್ಗೆ ಇದ್ದಿರಬಹುದಾದ ಅಸಹನೆ–ಸಿಟ್ಟು ಕೂಡ ಚಿತ್ರಕಥೆಯಲ್ಲಿ ಸ್ಥಾನ ಪಡೆದಿದೆ.ನಾಯಕನ ಅಮಾಯಕತೆಯ ಮೂಲಕ ನಗರದ ಹುಳುಕುಗಳು ಚಿತ್ರದಲ್ಲಿ ಅನಾವರಣಗೊಂಡಿವೆ. ಕಳ್ಳರು, ಪೊಲೀಸರು, ಅನಾ­ಥರು, ವೇಶ್ಯೆಯರು, ಮಿತ್ರದ್ರೋಹಿಗಳು– ಹೀಗೆ, ನಗರದ ದುರವಸ್ಥೆಯನ್ನು ಪ್ರೇಕ್ಷಕರಿಗೆ ಕಾಣಿಸಲು ಪಾತ್ರಗಳ ಕಾಮೆಂಟರಿ ಮಾತ್ರವಲ್ಲದೆ ಅಶರೀರವಾಣಿಯೂ ಶ್ರಮಿಸುತ್ತದೆ. ಆಟೊ ರಿಕ್ಷಾ ಓಡಿಸುವ ನಾಯಕನ ಬದುಕು ರಿಕ್ಷಾ ಮೀಟರ್‌ನಂತೆಯೇ ಯದ್ವಾತದ್ವಾ ಓಡುತ್ತಿದೆ. ಆಗ ಅವನ ಬದುಕಿಗೆ ವೇಗ ನಿಯಂತ್ರಕದಂತೆ ನಾಯಕಿ ಪ್ರವೇಶಿಸು­ತ್ತಾಳೆ. ಇಬ್ಬರ ಪ್ರೇಮದ ನಡುವೆ ಖಳನೊಬ್ಬನಿದ್ದಾನೆ. ನಾಯಕಿಯನ್ನು ಸಂಗಾತಿಯಾಗಿ ಹೊಂದುವುದು ಆತನ ಜೀವನದ ಪರಮ ಗುರಿ. ನಾಯಕಿಯ ಬದುಕಿಗೆ ಸಂಬಂಧಿಸಿದ ಸತ್ಯವೊಂದರ ಸ್ಫೋಟದ ಮೂಲಕ ತ್ರಿಕೋನ ಪ್ರೇಮದ ಫೈನಲ್ ಕೊನೆಗೊಳ್ಳುತ್ತದೆ.ತಾವು ಕಲ್ಪಿಸಿಕೊಂಡ ಕಥೆಯನ್ನು ಸರಾಗವಾಗಿ, ಸರಳವಾಗಿ ಹೇಳಲು ಕೃಷ್ಣಲೇಖನ್ ಅವರಿಗೆ ಸಾಧ್ಯವಾಗಿಲ್ಲ. ಸಿನಿಮಾದ ಅಂತ್ಯದಲ್ಲಿ ಅವರು ಪ್ರತಿಪಾದಿಸುವ ಕಾಳಜಿಗೆ ಇಡೀ ಸಿನಿಮಾ ಪೂರಕವಾಗಿಲ್ಲ. ಇದನ್ನು ತಂತ್ರಜ್ಞರ ಸಿನಿಮಾ ಎನ್ನಲು ಕೂಡ ಕಾರಣಗಳು ಸಿಗುವುದಿಲ್ಲ. ತಾರಾಗಣದ ಪೈಕಿ ಗಮನಸೆಳೆಯುವುದು ಮಗು ಮುಖದ ಖಳನಾಯಕ ಬಾದಲ್. ಅವರ ವೇಷ, ಮಾತು ಎರಡೂ ಭಿನ್ನವಾಗಿವೆ. ಹೊಸಬರಾದ ನಾಯಕಿ ಶ್ರಾವ್ಯ ಹಾಗೂ ನಾಯಕ ಆರ್ವ ಅವರ ನಟನೆಯಲ್ಲಿ ಜೀವನೋತ್ಸಾಹವೇ ಕಾಣಿಸುವುದಿಲ್ಲ. ತಬಲಾ ನಾಣಿ ಅವರ ಪಾತ್ರ ಚೆನ್ನಾಗಿದ್ದರೂ, ಆ ಪಾತ್ರಪ್ರಸಂಗ ಚಿತ್ರದಿಂದ ಹೊರಗೇ ಉಳಿಯುತ್ತದೆ.‘ಚತುರ್ಭುಜ’ ಎನ್ನುವ ಶೀರ್ಷಿಕೆಯಲ್ಲಿ ಮದುವೆಯ ಸಂಭ್ರಮ, ಮಸಣದ ಸೂತಕ ಎರಡೂ ಇದೆ. ಇವೆರಡರ ಬಗೆಗಿನ ಕಾಮೆಂಟರಿ ಸಿನಿಮಾದಲ್ಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.