ದಣಿವರಿಯದ ನಿವೃತ್ತ ಶಿಕ್ಷಕ `ಹಳ್ಳೂರು ಮಾಸ್ತರ'

7

ದಣಿವರಿಯದ ನಿವೃತ್ತ ಶಿಕ್ಷಕ `ಹಳ್ಳೂರು ಮಾಸ್ತರ'

Published:
Updated:

ಯಲಬುರ್ಗಾ: ಸುಮಾರು 75ವರ್ಷಗಳ ಶಿಕ್ಷಕ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಿ 98ರ ಇಳಿವಯಸ್ಸಿನಲ್ಲಿಯೂ ಆಗೊಮ್ಮೆ ಈಗೊಮ್ಮೆ ಪಾಠ ಮಾಡುವ `ಶ್ರೇಷ್ಠ ಶಿಕ್ಷಕ ರತ್ನ' ಪುರಸ್ಕೃತ ತಾಲ್ಲೂಕಿನ ಹೊಸಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಶಿವಪ್ಪ ಸಿದ್ದಪ್ಪ ಹಳ್ಳೂರ ಒಬ್ಬ ದಣಿವರಿಯದ ಅಪರೂಪದ ಕಾಯಕಯೋಗಿ.ಯಾವುದೇ ಪ್ರಚಾರ, ಪ್ರಶಸ್ತಿ, ಪುರಸ್ಕಾರ, ಸತ್ಕಾರ, ಸನ್ಮಾನ ಬಯಸದೇ ಕೇವಲ ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುವ ಮೂಲಕ ಶಿಕ್ಷಕ ವೃತ್ತಿಗೂ ವಿಶೇಷ ಗೌರವಿಸುವುದರ ಜೊತೆಗೆ ಶಿಕ್ಷಕ ಎಂಬ ಅರ್ಥಕ್ಕೆ ಪರ್ಯಾಯ ಪದವಾಗಿ ನಿಂತಿದ್ದಾರೆ.ಇವರು ಶಿಕ್ಷಕ ವೃತ್ತಿಯಿಂದ ನಿವೃತ್ತಿ   (1973)ಯಾಗಿಯೇ 40ವರ್ಷ ಗತಿಸಿವೆ. ಮೂಲತಃ ವಿಜಾಪುರ ಜಿಲ್ಲೆಯ ಹಿರೇಬಾದ                  ವಾಡಗಿಯವರು.ಹೊಸಳ್ಳಿಯಲ್ಲಿ ಜಮೀನು ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನಿವೃತ್ತರಾದ ಬಳಿಕವೂ ಪಾಠ ಮಾಡಿ ನಿತ್ಯ ಲವಲವಿಕೆಯಿಂದ ಓಡಾಡಿಕೊಂಡಿದ್ದಾರೆ.ಗ್ರಾಮೀಣ ಪ್ರದೇಶದ ಮಕ್ಕಳಿಗೆ ಇಂಗ್ಲಿಷ್ ವ್ಯಾಕರಣ ಹೇಳಿಕೊಡುತ್ತಿದ್ದಾರೆ. ಇಂದಿಗೂ ಕನ್ನಡಕವನ್ನು ಬಳಸದ ಈ ಮೇಷ್ಟ್ರಿಗೆ ಸ್ವಲ್ಪ ಕಿವಿ ಕೇಳಿಸದಿರುವುದು ಬಿಟ್ಟರೆ ಇವರ ಓಡಾಟಕ್ಕೆ ಬೆತ್ತವೇ ಸಹಾಯಕ.ಮಕ್ಕಳಿಗೆ ಪ್ರೀತಿಯ ಅಜ್ಜನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿ ಪಾಠ ಹೇಳಿಸಿಕೊಳ್ಳುವುದು ಎಲ್ಲಿಲ್ಲದ ಖುಷಿ.

ಶ್ವೇತ ಬಣ್ಣದ ನಿಲುವಂಗಿ, ಧೋತಿ ಹಾಗೂ ಗಾಂಧಿ ಟೋಪಿ ಇವರ ಉಡುಪು, ಸುಮಾರು ವರ್ಷಗಳಿಂದಲೂ ಈ ಮಾದರಿ ಉಡುಪಿನಲ್ಲಿಯೇ ಗುರುತಿಸಿಕೊಂಡ ಈ ಹಳ್ಳೂರರು ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಪ್ರತಿವರ್ಷ ನೇರವೇರಿಸುತ್ತಾ ಬರುತ್ತಿದ್ದಾರೆ.ಗ್ರಾಮಸ್ಥರೇ ಸುಮಾರು ವರ್ಷಗಳ ಹಿಂದೆ ಈ ತೀರ್ಮಾನ ಕೈಗೊಂಡು ಅವರಿಗೆ ಈ ವಿಶೇಷ ಗೌರವ ನೀಡಿದ್ದಾರೆ. ಹಾಗೆಯೇ ತುಮಕೂರಿನ ವಿದ್ಯಾವಾಹಿನಿ ಪದವಿಪೂರ್ವ ಕಾಲೇಜು ಶ್ರೇಷ್ಠ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry