ದತ್ತಪೀಠಕ್ಕಾಗಿ ಹೋರಾಟ ನಿರಂತರ: ರವಿ

7

ದತ್ತಪೀಠಕ್ಕಾಗಿ ಹೋರಾಟ ನಿರಂತರ: ರವಿ

Published:
Updated:

ಚಿಕ್ಕಮಗಳೂರು: ದತ್ತಪೀಠ ವಿಚಾರದಲ್ಲಿ ಹಿಂದೂಗಳಿಗೆ ಅನ್ಯಾಯವಾಗಿದೆ. ದತ್ತಪೀಠದ ಮುಕ್ತಿಗಾಗಿ ರಾಜಕೀಯ, ಧಾರ್ಮಿಕ ಹಾಗೂ ಕಾನೂನು  ಹೋರಾಟವು  ಮುಂದುವರಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಘೋಷಿಸಿದರು.ನಗರದಲ್ಲಿ ಬುಧವಾರ ಸಂಘಪರಿವಾರದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ದತ್ತ ಜಯಂತಿಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.ಪೀಠದ ಮೇಲೆ ನಂಬಿಕೆ ಇರುವವರು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಬಹುದು. ನಾವು ಈ ಬಾರಿ ಯಾರನ್ನೂ ಆಹ್ವಾನಿಸಿಲ್ಲ. ಕಳೆದ ಬಾರಿ ಆಮಂತ್ರಣ ಪಡೆದವರು ಪೀಠಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಹ ಆದರು. ಆದರೆ, ನಂತರದ ದಿನಗಳಲ್ಲಿ ಅವರು ಪೀಠ ಮರೆತರು. ತಪ್ಪು ನಡವಳಿಕೆ ತೋರಿದವರಿಗೆ ತಕ್ಕ ಪಾಠ ಆಗಿದೆ. ಹುಸಿ ಆಶ್ವಾಸನೆ ನೀಡಿ, ಜನರ ಭಾವನೆಗಳಿಗೆ ಘಾಸಿ ಮಾಡಿದವರನ್ನು ಸಮಾಜ ಒಪ್ಪುವುದಿಲ್ಲ. ದತ್ತ ಪೀಠ ಮರೆತವರು ಹೆಚ್ಚು ದಿನ ಪೀಠ (ಅಧಿಕಾರ)ದಲ್ಲಿ ಉಳಿಯುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿಗಳ ಮೇಲೆ ವಾಗ್ದಾಳಿ ನಡೆಸಿದರು.ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ಗ್ರಾಮ ದೇವತೆಗಳು ಪಾಲ್ಗೊಂಡಿವೆ. ಗ್ರಾಮ ದೇವತೆಗಳ ಪಾಲ್ಗೊಳ್ಳುವಿಕೆಯಿಂದ ಇಡೀ ಸಮಾಜ ಒಗ್ಗೂಡಲು ಸಾಧ್ಯವಾಗಲಿದೆ. ಈ ಪರಂಪರೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.ರಾಜಕೀಯ ಹೋರಾಟಕ್ಕೆ ಬೆಂಬಲವಿಲ್ಲ: ಉನ್ನತ ಶಿಕ್ಷಣ ಸಚಿವರ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ, `ದತ್ತ ಜಯಂತಿ ಬಜರಂಗದಳ ಮತ್ತು ಸಂಘಪರಿವಾರದ ಕಾರ್ಯಕ್ರಮ. ಇದಕ್ಕೆ ರಾಜಕೀಯ ಬೆರೆಸಲು ಯಾರಿಗೂ ಅವಕಾಶ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.ಪೀಠದ ಮುಕ್ತಿಗೆ ಧಾರ್ಮಿಕ ಹೋರಾಟ ಮುಂದುವರಿಯಲಿದೆ. ರಾಜಕೀಯ ಹೋರಾಟವನ್ನು ಸಂಘಪರಿವಾರ ಬೆಂಬಲಿಸುವುದಿಲ್ಲ. ಪೂರ್ಣ ಪ್ರಮಾಣದ ಹಿಂದೂ ಪೀಠವಾಗಿ ಘೋಷಣೆಯಾಗಬೇಕು. ಮುಸ್ಲಿಂ ಬಾಂಧವರು ಉದಾರಾ ಮನಸಿನಿಂದ ಗೋರಿಗಳ ತೆರವಿಗೆ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.ಅನುಸುಯಾ ಜಯಂತಿಗೆ ಆಗಮಿಸಿದ್ದ ಮಾತೆಯರಿಗೆ ಸಚಿವರ ಮನೆಯಲ್ಲಿ ಸೀರೆ ವಿತರಿಸಿರುವುದು ಅವರ ವೈಯಕ್ತಿಕ ವಿಷಯ. ಇದರಲ್ಲಿ ಸಂಘಪರಿವಾರದ ಪಾತ್ರ ಇಲ್ಲ. ಸಂಘಟನೆ ಜತೆಗೆ ಸೀರೆ ವಿತರಣೆ ವಿಚಾರ ತಳುಕು ಹಾಕಬೇಡಿ ಎಂದು ವಿನಂತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry