`ದತ್ತಪೀಠ ಹಿಂದೂ ಪೀಠವಾಗಲಿ'

7

`ದತ್ತಪೀಠ ಹಿಂದೂ ಪೀಠವಾಗಲಿ'

Published:
Updated:
`ದತ್ತಪೀಠ ಹಿಂದೂ ಪೀಠವಾಗಲಿ'

ಚಿಕ್ಕಮಗಳೂರು: ಸಾವಿರಾರು ವರ್ಷಗಳಿಂದ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ದತ್ತ ಪೀಠವನ್ನು ಪೂರ್ಣ ಹಿಂದೂ ಪೀಠವಾಗಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಘೋಷಣೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಆಗ್ರಹಿಸಿದರು.ಇನಾಂ ದತ್ತಾತ್ರೇಯ ಪೀಠದಲ್ಲಿ ಗುರುವಾರ ನಡೆದ ದತ್ತ ಜಯಂತಿಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಹಿಂದೂ ಶ್ರದ್ಧಾ ಕೇಂದ್ರಗಳು ಪರಾಧೀನವಾಗಿವೆ. ಅವುಗಳು ಪುನಾ ಹಿಂದೂಗಳ ಕೈವಶವಾದಾಗ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತೆ. ಈಗ ಸಿಕ್ಕಿರುವುದು ಅರ್ಧ ಸ್ವಾತಂತ್ರ್ಯ ಮಾತ್ರ ಎಂದರು.  ಸ್ವಾಮೀಜಿಗಳು ಪಾದುಕೆಗಳಿಗೆ ತೀರ್ಥ, ಹೂವು ಹಾಕಿ ಪೂಜೆ ಮಾಡಿರುವುದೇ ನ್ಯಾಯಾಂಗ ನಿಂದನೆಯಾಗುವುದಾದರೆ? ಹಿಂದೂ ಶ್ರದ್ಧಾ ಕೇಂದ್ರದಲ್ಲಿ ನ್ಯಾಯಾಲಯದ ಆದೇಶ ಇದ್ದಾಗಲೂ ಕಣ್ಣೆದುರೆ ಗೋರಿಗಳು ನಿರ್ಮಾಣ ಆಗಲು ಅವಕಾಶ ನೀಡಿದ್ದು ನ್ಯಾಯ ಸಮರ್ಥನೀಯವೇ? ಎಂದು ಪ್ರಶ್ನಿಸಿದರು.ಹಿಂದೂಗಳ ಶ್ರದ್ಧಾಕೇಂದ್ರ ಅನ್ಯರಿಂದ ಆಕ್ರಮಣವಾಗಿರುವುದನ್ನು ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳಬೇಕು. ಇದನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ನ್ಯಾಯಾಂಗದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ನಿಲ್ಲಲಿ. ಹಿಂದೂಗಳ ಸಹನೆಯ ಕಟ್ಟೆ ಒಡೆಯುವ ಮೊದಲು ಅಕ್ರಮವಾಗಿ ಕಟ್ಟಿರುವ ಗೋರಿಗಳನ್ನು ತೆರವುಗೊಳಿಸಬೇಕು ಎಂದರು.ಬಜರಂಗದಳ ರಾಜ್ಯ ಸಂಚಾಲಕ ಸೂರ್ಯ ನಾರಾಯಣ ಮಾತನಾಡಿ, ವಿಚಾರವಾದಿಗಳು ಹೇಳುವಂತೆ ದತ್ತಪೀಠ ಹಿಂದೂ, ಮುಸ್ಲಿಂ ಸೌಹಾರ್ದ ಕೇಂದ್ರವಾಗಲು ಹಿಂದೂ ಸಮಾಜ ಒಪ್ಪುವುದಿಲ್ಲ. ಇದೊಂದು ಹಿಂದೂಗಳ ಪೂರ್ಣಪೀಠವಾಗಬೇಕು. ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.  ದತ್ತ ಪೀಠದಲ್ಲಿ ಕಾಲ್ಪನಿಕ ಗೋರಿಗಳನ್ನು ನಿರ್ಮಿಸಿ ಇಸ್ಲಾಮೀಕರಣ ಮಾಡುವ ಷಡ್ಯಂತ್ರ ನಡೆದಿದೆ. ಮೊದಲು ಗೋರಿಗಳ ಸ್ಥಳಾಂತರ ಆಗಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ,  ದತ್ತ ಪೀಠದಲ್ಲಿ ಬರುವ ಭಕ್ತಾದಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಮತ್ತು ಪೀಠದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ನೀಡಲು ಸರ್ಕಾರ ಬದ್ಧವಿದೆ. ನಿಷೇಧಿತ ಜಾಗದ ಹೊರಗೆ ಅನುಸೂಯ ಭವನ ನಿರ್ಮಿಸಲು ಚಿಂತಿಸಲಾಗಿದೆ ಎಂದು ಹೇಳಿದರು.ದತ್ತ ಪೀಠದ ವಿವಾದದ ತೀರ್ಪು ಸದ್ಯದಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ನ್ಯಾಯಾಲಯಕ್ಕೆ ವಾಸ್ತವಿಕತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ತೀರ್ಪು ನಮ್ಮ ಪರ ಬರುವ ವಿಶ್ವಾಸವೂ ಇದೆ ಎಂದರು.  ಬಜರಂಗದಳ ರಾಷ್ಟ್ರೀಯ ಸಹ ಸಂಚಾಲಕ ರಾಜೇಶ್ ಪಾಂಡೆ ಮಾತನಾಡಿ, ಧರ್ಮಕ್ಕೆ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅಪಚಾರವಾದಾಗ ಬಲಿದಾನ ಮಾಡಿಯಾದರೂ ನಮ್ಮ ಧರ್ಮದ ಶ್ರದ್ಧಾ ಕೇಂದ್ರಗಳನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.  ಕಲ್ಯಾಣ ನಗರದ ಜಯಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಡೂರಿನ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ವೃಷಭೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ವಿ.ಸುನೀಲ್‌ಕುಮಾರ್ ಇನ್ನಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry