ಬುಧವಾರ, ಆಗಸ್ಟ್ 21, 2019
22 °C

ದನಕ್ಕೂ ಬಂತು ಸಂಕೋಲೆ, ಬೀಗ

Published:
Updated:

ಸುರತ್ಕಲ್: ಸ್ವತಂತ್ರವಾಗಿ ಸ್ವಚ್ಛಂದವಾಗಿ ಮೇಯುತ್ತಿದ್ದ ದನಗಳಿಗೆ ಇದೀಗ ಗೂಡಿನ ಬಂಧನ ಒದಗಿದೆ. ಕತ್ತಿಗೆ ಸಂಕೋಲೆ ಬಿಗಿಸಿಕೊಂಡು ಅದಕ್ಕೆ ಎರಡೆರಡು ಕಡೆ ಬೀಗ ಹಾಕಿಸಿಕೊಂಡು ಹಟ್ಟಿಯೊಳಗೆ ಸಂಕಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಇಲ್ಲಿ ದನಗಳ್ಳತನ ಮಿತಿ ಮೀರಿದೆ.ಅಂಗಡಿಗಳಲ್ಲಿ ಉಪ್ಪನ್ನು ಹೊರಗೆ ಇಟ್ಟು ಬೀಗ ಹಾಕುತ್ತಿದ್ದ ರೀತಿಯಲ್ಲೇ ಉತ್ತಮ ತಳಿಯ ದನಗಳನ್ನೂ ಅದರಷ್ಟಕ್ಕೇ ಮೇಯಲು ಬಿಡುತ್ತಿದ್ದ ಕಾಲವೊಂದಿತ್ತು. ಇವೆರಡನ್ನೂ ಯಾರೂ ಕದಿಯಲಾರರು ಎನ್ನುವ ನಂಬಿಕೆ ಆಗ ಇತ್ತು. ಇಂದು ಚಿತ್ರಣವೇ ಬದಲಾಗಿದೆ. ದನದ ಕುತ್ತಿಗೆಗೆ ಸಂಕೋಲೆ ಬಿಗಿದು ಬೀಗ ಹಾಕಿ, ಹಟ್ಟಿಗೂ ನಾಲ್ಕು ಮೂಲೆಯಿಂದ ಬೀಗ ಜಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ.ಮಕ್ಕಳಂತೆ ಸಾಕುತ್ತಿದ್ದ ದನವನ್ನು ಅಮಾನುಷ ರೀತಿಯಲ್ಲಿ ಕಸಾಯಿಖಾನೆಗೆ ಸಾಗಿಸಲು ವಿಫಲ ಯತ್ನ ನಡೆಸಿದ್ದನ್ನು ಕಣ್ಣಾರೆ ಕಂಡ ಸಸಿಹಿತ್ಲು ನಿವಾಸಿ ಕೊರಗಪ್ಪ ಪೂಜಾರಿ ಎಂಬವರು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ದನದ ಹಟ್ಟಿಗೆ ಕಬ್ಬಿಣದ ಗೇಟು ಮಾಡಿಸಿದ್ದಾರೆ. ಮೂರು ದನಗಳಿಗೆ ಸಂಕೋಲೆ ಹಾಕಿ ಬೀಗ ಜಡಿದು ರಕ್ಷಣೆ ನೀಡಿದ್ದಾರೆ. ಹಗಲಲ್ಲೂ ದನಗಳನ್ನು ಅದರಷ್ಟಕ್ಕೆ ಬಿಡದೆ ದನದೊಂದಿಗೆ ತಿರುಗುತ್ತಾ ಮೇಯಿಸುತ್ತಿದ್ದಾರೆ.ಬಡತನದಲ್ಲಿದ್ದ ನಾನು ಬೆಳೆದು ನನ್ನ ಮಕ್ಕಳನ್ನೂ ಬೆಳೆಸಲು ನನಗೆ ಹೈನುಗಾರಿಕೆಯೇ ಜೀವನಾಧಾರವಾಗಿತ್ತು. ಇಂದು ಮಕ್ಕಳು ದುಡಿಯುತ್ತಿದ್ದರೂ ದನಗಳು ನನ್ನ ಜೀವ ಎಂಬ ನುಡಿ ಕೊರಗಪ್ಪ ಅವರದು. ಹಟ್ಟಿಯಲ್ಲೇ ಮಲಗುವಷ್ಟರ ಮಟ್ಟಿಗೆ ದನಗಳ್ಳರ ಹಾವಳಿ ಬೆಳೆದಿದೆ. ಪೊಲೀಸರು ಸ್ವಲ್ಪ ಎಚ್ಚೆತ್ತುಕೊಂಡರೆ ಕಳ್ಳರನ್ನು ಹಿಡಿಯುವುದು ಕಷ್ಟವಲ್ಲ. ಅವರ ನಿರ್ಲಕ್ಷ್ಯ ದನಗಳ್ಳರಿಗೆ ವರದಾನವಾಗಿದೆ ಎನ್ನುತ್ತಾರೆ.ದನಗಳ್ಳತನ ಹೆಚ್ಚಾಗಿದ್ದು ಮುಂದೆ ದನವನ್ನು ಮನೆಯೊಳಗೆ ಮಲಗಿಸಬೇಕಾದ ದಿನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಜನರು ಹೇಳುತ್ತಾರೆ.

 

Post Comments (+)