ಭಾನುವಾರ, ಮೇ 16, 2021
22 °C

ದನಗಳ ಸಂತೆಯಲ್ಲಿ ಬಿಡಿಗಾಸಿಗೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: “ಸದ್ಯದ ಬರಗಾಲ ಪರಿಸ್ಥಿತಿಯಲ್ಲಿ ದನಕರುಗಳನ್ನು ಮೊದಲಿನಂತೆ ಜೋಪಾನ ಮಾಡುವುದು ಕಷ್ಟ. ಇದೇ ಸ್ಥಿತಿ ಮುಂದುವರಿದರೆ ಅವುಗಳು ಬದುಕುವುದೂ ಕಷ್ಟ. ಮನುಷ್ಯರಿಗೇ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಕೆರೆ, ಕಟ್ಟೆ, ನಾಲಾಗಳು ಬತ್ತುತ್ತಿವೆ. ದನಕರುಗಳ ಗತಿ ಏನು. ಮೇವಿನ ಸಮಸ್ಯೆ ಆಗುತ್ತಿದೆ. ಈ ಮೂಕ ಬಸವಣ್ಣ ದೇವ್ರ ಕಷ್ಟ ಅನುಭವಿಸೋದು ನೋಡುವುದು ನಮ್ಮಿಂದ ಆಗೋದಿಲ್ಲ. ಅದ್ಕೆ ಮಾರಾಟ ಮಾಡಲು ಬಂದಿದ್ದೇವೆ. ಮಾರಾಟ ಮಾಡಿದ್ರೆ ಎಲ್ಲಿಯಾದ್ರೂ ಬದುಕ್ತಾವು...”ಇವು ಇಲ್ಲಿನ ಎಪಿಎಂಸಿ ಗಂಜ್ ಆವರಣದಲ್ಲಿ ಸೋಮವಾರ ದನಗಳ ಸಂತೆಯಲ್ಲಿ ಎತ್ತು ಮತ್ತು ಹೋರಿಗಳನ್ನು ಮಾರಾಟ ಮಾಡಲು ಬಂದ ರೈತರ ನುಡಿಗಳು.ಮುಂಗಾರು-ಹಿಂಗಾರು ಮಳೆಯೂ ಬರ‌್ಲಿಲ್ಲ. ಸಂಗ್ರಹಿಸಿದ್ದ ಮೇವು ಖಾಲಿಯಾಗುತ್ತಿದೆ. ಒಂದು ಟ್ರ್ಯಾಕ್ಟರ್ ಮೇವಿಗೆ ನಾಲ್ಕೈದು ಸಾವಿರ ಕೇಳುತ್ತಾರೆ. ದೂರದ ಊರಿಂದ ತರಬೇಕು. ಹಸಿರು ಮೇವು ಸಿಗುತ್ತಿಲ್ಲ.

 

ಕೃಷ್ಣಾ ನದಿ ಬತ್ತಿದ್ದರೆ ತುಂಗಭದ್ರಾ ಕಾಲುವೆಯಲ್ಲಿ ನೀರು ಕಡಿಮೆ ಆಗಿದೆ. ಬಿಸಿಲಿನ ತಾಪಕ್ಕೆ ದನಕರುಗಳು ಬಯಲು ಪ್ರದೇಶದಲ್ಲಿ ಮೇಯಲು ಹೋಗುವುದು ಕಷ್ಟವಾಗಿದೆ ಎಂದು ರೈತರು ಹೇಳಿದರು. ಇಲ್ಲಿನವರು ದನಕರು ಖರೀದಿಸಲು ಬಂದಿರುವುದು ಕಡಿಮೆ. ಆಂಧ್ರಪ್ರದೇಶದವರು ಖರೀದಿಗೆ ಬಂದಿದ್ದಾರೆ.  ಸಾಮಾನ್ಯ ಒಂದು ಜೋಡಿ ಎತ್ತುಗಳು 25ರಿಂದ 40 ಸಾವಿರದವರೆಗೆ ಇವೆ. ಅತ್ಯಂತ ಕನಿಷ್ಠ ದರಕ್ಕೆ ಖರೀದಿಸುತ್ತಾರೆ ಎಂದು ರೈತರು ದನಗಳ ಸಂತೆಯ ಈಗಿನ ಸ್ಥಿತಿಯ ಮಾಹಿತಿ ನೀಡಿದರು.ಮೇವು ಸಂಗ್ರಹಣೆಗೆ ಹೆಚ್ಚು ಒತ್ತು ಕೊಡಬೇಕಾದ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿಲ್ಲ. ಎಲ್ಲೆಡೆ ಮೇವು ಸಮಸ್ಯೆ ಆಗಿದೆ. ಕಾಟಾಚಾರಕ್ಕೆ ಕೆಲವೆಡೆ ಮೇವು ಸಂಗ್ರಹಣೆ ಬ್ಯಾಂಕ್ ತೆರೆದಿದ್ದರೂ ಅಲ್ಲಿರುವುದು ಒಂದೆರಡು ಟ್ರ್ಯಾಕ್ಟರ್ ಮೇವು ಮಾತ್ರ. ಅದು ನಾಲ್ಕು ರೈತರ ದನಕರುಗಳಿಗೆ ಸಾಲುವುದಿಲ್ಲ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.