ಗುರುವಾರ , ಫೆಬ್ರವರಿ 25, 2021
18 °C

ದನ ಹುಲ್ಲು ಮೇದ್ಹಂಗೆ ಮೇದ್ಬುಟ್ರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದನ ಹುಲ್ಲು ಮೇದ್ಹಂಗೆ ಮೇದ್ಬುಟ್ರು

ಕೊರಟಗೆರೆ: ‘ಅಣ್ಣಾ... ಅಧ್ಯಕ್ಷರ್ರು ಎಲೆಕ್ಷನ್‌ ಯಾವ್‌ ಡೇಟ್‌ ಅಂತಾ ಗೊತ್ತಾತಾ? ದನ ಹುಲ್ಲು ಮೇದ್ಹಂಗೆ ಮೇಯ್ತಾವ್ರೆ. ಎಷ್ಟ್‌ ಕಾಸು ಹೊಂಚುದ್ರೂ ಸಾಕಾಗ್ತಿಲ್ಲ...’ – ಇದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೀಸಲಾತಿ ಪ್ರಕಟಗೊಂಡ ನಂತರ ಸದಸ್ಯರನ್ನು ಪ್ರವಾಸಕ್ಕೆ ಕೊಂಡೊಯ್ದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಅಳಲು ತೋಡಿಕೊಂಡ ಪರಿ.ಕೈಲಿರುವ ಕಾಸು ಖರ್ಚಾಗುತ್ತಿದ್ದರೂ ಸದಸ್ಯರನ್ನು ಮತ್ತೆ ಊರಿಗೆ ಕರೆತರಲು ಅವರಿಗೆ ಧೈರ್ಯವಿಲ್ಲ. ಊರಿಗೆ ಬಂದ ಮೇಲೆ ಯಾವ ಸದಸ್ಯ ಮನಸ್ಸು ಬದಲಾಯಿಸಿ ಎದುರು ಪಾರ್ಟಿ ಕಡೆ ವಾಲುತ್ತಾನೋ ಎಂಬ ಭಯ ಅವರನ್ನು ಕಾಡುತ್ತಿದೆ.

ಕೆಲವೇ ದಿನದಲ್ಲಿ ಅಧ್ಯಕ್ಷನಾಗಿ ಆಯ್ಕೆಯಾಗುತ್ತೆನೆ ಎಂಬ ಆಸೆಯಿಂದ ಸದಸ್ಯರಿಗೆ ಆಮಿಷ ಒಡ್ಡಿ ಜೂನ್ 17ರಂದು ಪ್ರವಾಸ ಕರೆದೊಯ್ದವರ ಜೇಬಿಗೆ ನಿರೀಕ್ಷೆಗೂ ಮೀರಿ ಕತ್ತರಿ ಬಿದ್ದಿದೆ. ಆಯ್ಕೆ ದಿನವನ್ನು ಅವರು ಕಾತರದಿಂದ ಕಾಯುತ್ತಿದ್ದಾರೆ.ಅಧ್ಯಕ್ಷ ಸ್ಥಾನ ಚುನಾವಣೆಗೆ ಮೊದಲು ಊರು ಸೇರಿದರೆ ಸದಸ್ಯರು ಮತ್ತೆಲ್ಲಿ ಮನಸ್ಸು ಬದಲಾಯಿಸುವರೋ ಎಂದು ಪ್ರವಾಸ ಮುಂದುವರೆಸಿದ್ದೇವೆ ಎಂದು ಗ್ರಾಮ ಪಂಚಾಯಿತಿಯೊಂದರ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಅಭ್ಯರ್ಥಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.ಹೇಳಿದಂತೆ ಕೇಳಬೇಕು: ‘ನಮ್ಮ ಗುಂಪಿನ ಸದಸ್ಯರಿಗೆ ಬಟ್ಟೆಯಿಂದ ಹಿಡಿದು ಎಲ್ಲವನ್ನೂ ಕೊಡಿಸುತ್ತಿದ್ದೇನೆ. ಒಳ್ಳೆಯ ಹೋಟೆಲ್‌ ಆಗಬೇಕು. ಅವರು ಕೇಳಿದ ಊಟ, ತಿಂಡಿ, ಮದ್ಯವನ್ನೇ ಕೊಡಿಸಬೇಕು. ಚೂರು ಹೆಚ್ಚು ಕಡಿಮೆಯಾದರೂ ವಾಪಸ್‌ ಊರಿಗೆ ಹೋಗುವ ಬೆದರಿಕೆ ಹಾಕುತ್ತಾರೆ. ಅಧ್ಯಕ್ಷ ಆಗಬೇಕಂದ್ರೆ ಅವ್ರ್‌ ಹೇಳದ್ಹಂಗೇ ಕೇಳಬೇಕು ಎನ್ನುವ ಸ್ಥಿತಿ ಒದಗಿದೆ’ ಎಂದು ಆಕಾಂಕ್ಷಿಯೊಬ್ಬರು ಹೇಳಿದರು.ಕೆಲ ಆಕಾಂಕ್ಷಿಗಳು ತಾವು ಊರಿನಲ್ಲೇ ಉಳಿದುಕೊಂಡು ನಂಬಿಕಸ್ಥರೊಂದಿಗೆ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿದ್ದಾರೆ. ಪ್ರವಾಸದ ಖರ್ಚು ಕಂಡು ಗಾಬರಿಯಾಗುತ್ತಿದ್ದಾರೆ. ‘ಪ್ರತಿ ದಿನ ಬ್ಯಾಂಕ್‌ ಖಾತೆಗೆ ಹಣ ಹಾಕಿ ಮನೆ ಹಾಳಾಗುತ್ತಿದೆ’ ಎಂಬುದು ಅವರ ಅಳಲು.ಮಾಡ್ಲಿ ಬುಡ್ಲ: ‘ಖರ್ಚ್‌ ಮಾಡ್ಲಿ ಬುಡ್ಲ, ಈಗಲ್ದೇ ಇನ್ಯಾವಾಗ ಖರ್ಚ್‌ ಮಾಡ್ತಾರೆ, ಐದ್‌ ವರ್ಸ ಅಧ್ಯಕ್ಷ ಆಗಲ್ವಾ, ಆಮೇಲೆ ಗೋಚಲ್ವಾ?’ ಎಂಬ ಮಾತುಗಳು ಹಳ್ಳಿ ಕಟ್ಟೆಗಳಲ್ಲಿ ಕೇಳಿ ಬರುತ್ತಿದೆ.

ಮಹಿಳೆಯರ ಮೇಲೆ ಹೊರೆ

ಇನ್ನು ಮಹಿಳಾ ಅಭ್ಯರ್ಥಿಗಳ ಕಥೆಯೇ ಬೇರೆ. ಆಯ್ಕೆಯಾಗಿರುವ ಬಹುತೇಕ ಮಹಿಳೆಯರು ಎಂದಿನಂತೆ ಊರಿನಲ್ಲೆ ಇದ್ದು, ಮನೆ ಕೆಲಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಪರವಾಗಿ ಪತಿರಾಯರು ಪ್ರವಾಸಕ್ಕೆ ತೆರಳಿರುವ ಕಾರಣ ಹೊಲ– ತೋಟದ ಕೆಲಸದ ಹೊರೆಯೂ ಅವರ ಮೇಲೆ ಬಿದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.