ದಯವಿಟ್ಟು ನನ್ನ ಮಾತನ್ನೂ ಕೇಳಿ!

7

ದಯವಿಟ್ಟು ನನ್ನ ಮಾತನ್ನೂ ಕೇಳಿ!

Published:
Updated:

ಹಿಂದೆಂದೋ ನೋಡಿದ ಒಂದು ಚಲನಚಿತ್ರ. ಹೆಸರು ನೆನಪಿಲ್ಲ. ಅದರಲ್ಲಿ ನಮ್ಮ ಹೀರೋ ಜೀತದಾಳು. ಅಪ್ಪ ಮಾಡಿಟ್ಟು ಹೋದ ಸಾಲವನ್ನು ತೀರಿಸಲು ಯಜಮಾನರ ಮನೆಯಲ್ಲಿ ಕೂಲಿ. ಅವರ ಹೊಲದಲ್ಲಿ ಕೆಲಸ. ಹೀಗೆ ದಿನದ ಎಲ್ಲ ವೇಳೆ ಅವರ ಸೇವೆಯಲ್ಲೇ ಕಳೆಯುತ್ತಾನೆ.ಆ ಯಜಮಾನನೇ ಚಿತ್ರದ ಖಳನಾಯಕ. ಖಳನಾಯಕ ಅಂದ ಮೇಲೆ ಕೇಳಬೇಕೆ? ಎಲ್ಲ ಕೆಟ್ಟ ಗುಣಗಳ ಆಗರ ಅವನು. ತನ್ನ ಆಸ್ತಿ - ಅಂತಸ್ತಿನ ಅಹಂಕಾರದಿಂದ ಅವನ ದರ್ಪ ಎಲ್ಲೆ ಮೀರುತ್ತದೆ. ಸಾಲ ತೀರಿಸದವರ ಹೊಲ ಕಬಳಿಸುತ್ತಾನೆ. ಅವರ ಹೆಣ್ಣು ಮಕ್ಕಳ ಮಾನಹರಣ ಮಾಡುತ್ತಾನೆ.ತನ್ನ ವಿಜಯೋತ್ಸವವನ್ನು ಆಗಿಂದಾಗ್ಗೆ ಹೊಲದ ತನ್ನ ಖಾಸಗಿ ಬಂಗಲೆಯಲ್ಲಿ ರಾತ್ರಿ ಗುಂಡು ಹಾಕುತ್ತ, ಕಣ್ಣು ತೆರೆದು ನೋಡುತ್ತಿರುವ ಪ್ರೇಕ್ಷಕರಿಗೆ ಕಚಗುಳಿ ಇಡುವಂತೆ ದಡೂತಿ ಹೆಂಗಸಿನ ಕ್ಯಾಬರೆಯಲ್ಲಿ ಮೈಮರೆಯುತ್ತಾನೆ.ಇವನ ಹೆಂಡತಿ ತೀರಾ ಸಾದ್ವಿ. ಸತಿ  ಸಕ್ಕೂಬಾಯಿ! ಗಂಡನ ಪಾಪಗಳನ್ನೆಲ್ಲ ದೇವರ ಮನೆಯಲ್ಲಿ ಕುಳಿತು ದಿನವೂ ಸ್ವಚ್ಛ ಮಾಡುತ್ತಾಳೆ. ಅವಳಿಗೆ ನಮ್ಮ ಕಳಂಕರಹಿತ ಹೀರೊನ ಬಗ್ಗೆ ಅತೀವ ಪ್ರೀತಿ. ಅವಳ ಒಬ್ಬಳೇ ಮಗಳಿಗಂತೂ ನಮ್ಮ ಹೀರೊ  ಅಂದರೆ ಪಂಚಪ್ರಾಣ. ಇನ್ನು ಇಡಿಯ ಚಿತ್ರದ ಕತೆಯನ್ನು ಹೇಳುವ ಅವಶ್ಯಕತೆಯೇ ಇಲ್ಲ. ಎಲ್ಲ ಗೊತ್ತಾಗಿರಬೇಕು.ಆದರೆ, ನಾನು ಹೇಳಬೇಕೆಂದಿರುವ ವಿಷಯವೇ ಬೇರೆ. ಯಜಮಾನನ ದೌರ್ಜನ್ಯದ ವಿರುದ್ಧ ಮೆಲ್ಲ ದನಿ ಎತ್ತಿದ ಹೀರೊನನ್ನು ಮರಕ್ಕೆ ಕಟ್ಟಿ ಯಜಮಾನ ಕೈಯಲ್ಲಿ ಹಿಡಿದ ಚಾಟಿ ತುಂಡಾಗುವವರೆಗೂ ಹೊಡೆಯುತ್ತಾನೆ. ಈ ಪರಿಯ ಅವನ ಅನೇಕ ದೌರ್ಜನ್ಯಗಳನ್ನೂ ನಮ್ಮ ಹೀರೊ  ಚಿತ್ರದುದ್ದಕ್ಕೂ ಸಹಿಸಿಕೊಂಡು ಬರುತ್ತಾನೆ. ಕಾರಣ ಇಷ್ಟೆ - ಯಜಮಾನತಿಯ ಪ್ರೀತಿ - ವಾತ್ಸಲ್ಯ. ಅವನ ಮನಸ್ಸಿನ ಗಾಯಕ್ಕೆ ಮುಲಾಮು ಹಚ್ಚುವ ನಮ್ಮ ಸುಂದರ ಹೀರೊಯಿನ್‌ನ ಮುದ್ದಾದ ಮಾತುಗಳು ಅವನನ್ನು ಹತೋಟಿಯಲ್ಲಿ ಇಡುವುದು ಅವರದೇ ವಿಷಯಗಳು!ಜೀತ ಪದ್ಧತಿಯನ್ನು ಎಂದೂ ಹತ್ತಿರದಲ್ಲಿ ಕಾಣದ ನನಗೆ ಅದರ ಬಗ್ಗೆ ನಿರ್ದಿಷ್ಟನಾಗಿ ಬರೆಯುವುದು ಸಾಧ್ಯವಿಲ್ಲ. ಆದರೂ ನನಗನ್ನಿಸುವುದಿಷ್ಟೆ.ಜೀತದಾಳುಗಳನ್ನು ಯಜಮಾನರು ಪ್ರೀತ್ಯಾದರಗಳಿಂದ, ಮಾನವೀಯತೆಯಿಂದ ನೋಡಿಕೊಂಡಿದ್ದೇ ಆಗಿದ್ದರೆ ಆ ಪದ್ಧತಿ ನಮ್ಮಲ್ಲಿನ್ನೂ ಪ್ರಚಲಿತದಲ್ಲಿ ಇರುತ್ತಿತ್ತೋ ಏನೊ. ಜೀತದಾಳುಗಳಿಗೆ ತಾವು ಜೀತ ಮಾಡುತ್ತಿದ್ದೇವೆ ಎಂಬ ಭಾವನೆಗಿಂತ, ಇದೇ ತಮ್ಮ ಜೀವಿತವೆಂದೆನಿಸಿ ಆನಂದವಾಗಿ ಇದ್ದು ಬಿಡುತ್ತಿದ್ದರೇನೊ. ಈ ಪದ್ಧತಿ ಅದೆಷ್ಟೇ ಅಮಾನವೀಯವಾದರೂ ಇದರ ಅಂತ್ಯವಾದದ್ದಕ್ಕೆ ಮೂಲಕಾರಣ ಅಲ್ಲಿ ಪರಸ್ಪರ ಪ್ರೀತಿ ಇಲ್ಲದೇ ಇದ್ದದ್ದೇ ಇರಬಹುದು!ಈಗ ಜೀತದಿಂದ ಸಂಬಳಕ್ಕೆ ಬರೋಣ. ನನ್ನ ತಂದೆಯವರ ಕೆಲಸದಲ್ಲಿ ಇದ್ದದ್ದು ದೂರವಾಣಿ ಉಪಕರಣಗಳನ್ನು ತಯಾರಿಸುತ್ತಿದ್ದ ಬೆಂಗಳೂರಿನ ಐ.ಟಿ.ಐ. ಕಾರ್ಖಾನೆಯಲ್ಲಿ. ಅಮ್ಮನೂ ಅಲ್ಲಿಯ ಸ್ಕೂಲಿನಲ್ಲಿ ಟೀಚರ್. ಹೀಗಾಗಿ ನನ್ನ ಬಾಲ್ಯವನ್ನೆಲ್ಲ ನಾನು ಕಳೆದದ್ದು ಕಾರ್ಖಾನೆಯು ತನ್ನ ನೌಕರರಿಗೆಂದು ನಿರ್ಮಿಸಿದ್ದ ದೂರವಾಣಿನಗರ ಎಂಬ ಕಾಲೋನಿಯಲ್ಲಿ. ದೂರವಾಣಿನಗರ ಪ್ರಾಯಶಃ ಆ ದಿನಗಳಲ್ಲಿ ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತವಾದ ಕಾಲೋನಿಗಳಲ್ಲಿ ಒಂದಾಗಿತ್ತು. ಸಂಪೂರ್ಣ ಜೀವನಕ್ಕೆ ಏನೇನು ಬೇಕೋ ಅವೆಲ್ಲವೂ ಅಲ್ಲಿ ಲಭ್ಯವಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ.ಇನ್ನು ಕಾರ್ಖಾನೆಯ ವಿಚಾರ. ಅಲ್ಲಿ ಯಾರಿಗೂ ಯಾವುದೇ ಒತ್ತಡವಿರಲಿಲ್ಲ. ಎಂಟು ಗಂಟೆಗಳ ನಿಗದಿತ ಕೆಲಸ. ಕಾರ್ಖಾನೆಯೂ ಲಾಭದಾಯಕವಾಗಿ ನಡೆಯುತ್ತಿದ್ದರಿಂದ ಎಲ್ಲರಿಗೂ ಸಂಬಳ ಹಾಗೂ ಸವಲತ್ತುಗಳು ಪ್ರತಿ ತಿಂಗಳೂ ತಪ್ಪದೇ ಸಂದಾಯವಾಗುತ್ತಿತ್ತು. ಒಟ್ಟಾರೆ ಕಾರ್ಖಾನೆಯಲ್ಲಿನ ಹಗುರವಾದ ದಿನದ ಕೆಲಸ ಹಾಗೂ ಕಾಲೋನಿಯಲ್ಲಿನ ವೈವಿಧ್ಯಮಯ ಹಾಗೂ ಆತಂಕವಿಲ್ಲದ ಸಂಜೆಗಳಿಂದಾಗಿ ಅಲ್ಲಿ ಯಾರೂ ರಾತ್ರಿ ನಿದ್ದೆ ಇಲ್ಲದೆ ಪರಿತಪಿಸಿದ್ದನ್ನು ನಾನು ಕಂಡಿಲ್ಲ. ಹೊರ ಪ್ರಪಂಚದ ಬದಲಾವಣೆಗಳೊಂದು ನಮ್ಮ ಕಾಲೋನಿಯ ಕಾಂಪೌಂಡಿನ ಹತ್ತಿರಕ್ಕೂ ಸುಳಿಯಲಿಲ್ಲವೇನೋ ಎನ್ನುವಷ್ಟು ಸಾಂತ್ವನ ಅಲ್ಲಿನ ಬಹುತೇಕರಲ್ಲಿತ್ತು ಎಂಬುದು ಸತ್ಯಕ್ಕೆ ಬಹು ದೂರವಿಲ್ಲದ ಮಾತು!ನಮ್ಮ ತಂದೆ ಅವರನ್ನು ಕಾಣಲು ಅವರ ಅನೇಕ ಸ್ನೇಹಿತರು ಮನೆಗೆ ಬರುತ್ತಿದ್ದರು. ಅವರಲ್ಲಿ ಒಬ್ಬರದು ಯಾವಾಗಲೂ ಒಂದೇ ಕೊರಗು. ‘ಸಾರ್ ನನಗೆ ಇತ್ತೀಚೆಗೆ ಕೆಲಸ ಮಾಡೋಕೆ ಮನಸ್ಸೇ ಇಲ್ಲವಾಗಿ  ಬಿಟ್ಟಿದೆ. ಆ ನನ್ನ ಹೊಸ ಬಾಸ್ ಶುದ್ಧ ಅಹಂಕಾರಿ. ನಾವೆಲ್ಲ ಅವನಿಗೆ ಕೆಲಸಕ್ಕೆ ಬಾರದವರಂತೆ ಮೆರೀತಾ ಇದಾನೆ. ಮೊನ್ನೆ ಪಾರ್ಕ್‌ನಲ್ಲಿ ಸಿಕ್ಕಿದ್ದ. ಹಲೋ ಅನ್ನೋದಕ್ಕೂ ಅವನಿಗೆ ಮುಜಗರ. ಅದಕ್ಕೇ ನಾನು ಅವನಿಗೆ ಕ್ಯಾರೇ ಅನ್ನೋದಿಲ್ಲ. ಅವನು ಅದೇನೇ ಕೆಲಸ ಹೇಳಿದರೂ ನಾನು ಸರಿಯಾಗಿ ಮಾಡಲ್ಲ. ಅವನು ಅದೇನು ಮಾಡ್ಕೋತಾನೋ ಮಾಡ್ಕಳ್ಳಿ. ಅಬ್ಬಬ್ಬಾ ಅಂದ್ರೆ ನಂದೊಂದು ಇನ್‌ಕ್ರಿಮೆಂಟ್ ಹಿಡಿಬಹುದಷ್ಟೆ ಅದನ್ನ ಅವನೇ ಇಟ್ಕೊಳ್ಳಿ’.ಅವರೆಂದೂ ತಮ್ಮ ಬಾಸಿನ ಕಾರ್ಯನಿಷ್ಠೆಯ ಅಥವಾ ಕಾರ್ಯಜ್ಞಾನದ ವಿಚಾರದಲ್ಲಿ ಎರಡು ಮಾತನಾಡಿಲ್ಲ. ತನ್ನನ್ನು ತನ್ನ ಬಾಸ್ ಗೌರವದಿಂದ ಕಾಣುವುದಿಲ್ಲ ಎಂಬುದೊಂದೇ ಅವರ ನಿಜವಾದ ಅಳಲು. ಕೆಲಸದಲ್ಲಿ ಸ್ವತಃ ಚುರುಕಾಗಿದ್ದರೂ ತನಗೆ ಸಲ್ಲಬೇಕಾದ ಗೌರವ ನೀಡದ ಬಾಸ್‌ನಿಂದಾಗಿ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವ ಅನೇಕರ ಕತೆ ಇದು. ಇಂತಹ ಅನೇಕರಿಂದಲೇ ಮೇಲ್ನೋಟಕ್ಕೆ ಎಲ್ಲ ಸರಿ ಎಂದು ತೋರಿಬರುವ ಕಂಪೆನಿಗಳಲ್ಲೂ ಒಳಗೊಳಗೇ ಬಿರುಕು ಬಿಡುತ್ತದೆ. ಆ ಬಿರುಕನ್ನು ಮುಚ್ಚಲು ಮೇಲಧಿಕಾರಿಗಳು ಮಾಡಬೇಕಿರುವುದಿಷ್ಟೆ - ತಮ್ಮ ತಮ್ಮ ಮಂದಿಯನ್ನು ಗೌರವದಿಂದ ಕಾಣುವುದು, ಸೋರುತ್ತಿರುವ ಮನದ ಮಾಳಿಗೆಗೆ ಅದೆಷ್ಟು ಸುಲಭ ಪರಿಹಾರ ನೋಡಿ!ಈಗ ಸಂಬಳದಿಂದ ಪರಸ್ಪರ ಸಹಕಾರಿ ಮನೋ ಭಾವದ ಕಾರ್ಯತಾಣಗಳಾದ ಆಧುನಿಕ ಹೈಟೆಕ್ ಕಂಪೆನಿಗಳಿಗೆ ಬರೋಣ. ಇಲ್ಲಿರುವ ಎಲ್ಲರೂ ಕಾರ್ಯಜ್ಞಾನದ ಸ್ತರದಲ್ಲಿ ಹೆಚ್ಚೂ ಕಡಿಮೆ ಒಂದೇ ಮೆಟ್ಟಲಲ್ಲಿ ನಿಂತಿರುತ್ತಾರೆ. ಇಲ್ಲಿರುವ ಎಲ್ಲರೂ ಸಾಕಷ್ಟು ಓದಿಕೊಂಡವರು. ಇಲ್ಲಿರುವ ಎಲ್ಲರೂ ತಮ್ಮ ಕಂಪೆನಿಯ ಹೊರತಾಗಿ ಬೇರೆ ಕಂಪೆನಿಗಳಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಲ್ಲ ತಾಕತ್ತು ಇರುವವರೇ ಆಗಿರುತ್ತಾರೆ. ಇವರ ಬೇಕು - ಬೇಡಗಳೇ ಬೇರೆ! ಹೆಚ್ಚಿನ ಸಂಬಳದಂತೆಯೇ ಇಲ್ಲಿನವರ ಕೆಲಸ ಹಾಗೂ ಜವಾಬ್ದಾರಿಗಳೂ ಅಧಿಕವಾಗಿಯೇ ಇರುತ್ತವೆ. ಹೀಗಾಗಿ ಇಲ್ಲಿ ಯಾರಿಗೂ ತಮ್ಮ ಕಾರ್ಯಕ್ಷೇತ್ರದಲ್ಲಿ ‘ಪ್ರೀತಿ’ ಎಂಬ ಭಾವಕ್ಕೆ ಅನಿವಾರ್ಯತೆಯೂ ಇಲ್ಲ. ಸಮಯವಂತೂ ಇಲ್ಲವೇ ಇಲ್ಲ. ಇನ್ನು ಪರಸ್ಪರ ಗೌರವದ ವಿಷಯ.ಒಳಮನಸ್ಸಿನಲ್ಲಿ ಯಾರು ಯಾರನ್ನು ಗೌರವಿಸುತ್ತಾರೋ ಎಂದು ಗೊತ್ತಾಗದಿದ್ದರೂ ಎಲ್ಲರೂ ಎಲ್ಲರನ್ನೂ ಮೇಲ್ನೋಟದಲ್ಲಿ ಸಾಕಷ್ಟು ಗೌರವದಿಂದಲೇ ಕಾಣುತ್ತಾರೆ! ತಮ್ಮ ಓದಿನ ಬಲದಿಂದಾಗಿ ಹಾಗೂ ಆಧುನಿಕತೆಯ ಲೌಕಿಕ ಚಾಣಾಕ್ಷತನದಿಂದಾಗಿ ಸಹಜವಾಗಿ ಮೂಡಿಬರುವ ಸುಸಂಸ್ಕೃತ ವ್ಯವಹಾರದಲ್ಲಿ ಎಲ್ಲರೂ ಗೌರವಾನ್ವಿತರೆ!! ಪ್ರೀತಿ ಹಾಗೂ ಗೌರವಗಳಿಂದ ಹೊಡೆದಾಡುವ ಪ್ರಮೇಯವೇ ಇಲ್ಲವೆಂದ ಮೇಲೆ ಈ ಮಂದಿಯ ನಿಜವಾದ ಅಳಲೇನು? ಇದನ್ನು ಅರಿತುಕೊಳ್ಳುವುದಕ್ಕೆ ಮತ್ತೆ ವ್ಯಾಸ ವಿರಚಿತ ಗ್ರಂಥಕ್ಕೆ ಮರಳೋಣ.ಪಾಂಡವರಿಗಿದ್ದದ್ದು ಕೃಷ್ಣ ಸಾರಥ್ಯ ಮಾತ್ರ. ಅವನ ನಿರ್ದೇಶನವೊಂದೇ ಅವರೆಲ್ಲರ ಜೀವಿತದ ಗುರಿ.  ಶ್ರೀಕೃಷ್ಣನೂ ಅವರೆಲ್ಲರನ್ನು ಅಷ್ಟೇ ಪ್ರೀತಿಯಿಂದ ಹಾಗೂ ಗೌರವದಿಂದ ನಡೆಸಿಕೊಂಡ. ಇವೆರಡಕ್ಕೂ ಮಿಗಿಲಾಗಿ  ಅವರೆಲ್ಲರ ಮಾತುಗಳಿಗೆ, ನಿಲುವುಗಳಿಗೆ ಅಭಿಪ್ರಾಯಗಳಿಗೆ ತಾಳ್ಮೆಯಿಂದ ಕಿವಿ ಕೊಟ್ಟು ಪ್ರಾಮಾಣಿಕವಾಗಿ ಅದಕ್ಕೊಂದು ಬೆಲೆ ಕೊಟ್ಟ. ಹೀಗಾಗಿ ಪಾಂಡವರದೊಂದು ಸುಭದ್ರವಾದ ಕೋಟೆ.ಅದೇ ಕೌರವರದು! ಅದೊಂದು ಒಡೆದ ಮನೆ. ಅಲ್ಲಿ ಭೀಷ್ಮಾದಿ ದ್ರೋಣರಿಗೇ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವುದಿರಲಿ ಅದನ್ನು ಮುಕ್ತಮನಸ್ಸಿನಿಂದ ಪ್ರತಿಪಾದಿಸಲೂ ಆಗಲಿಲ್ಲ. ದುರ್ಯೋಧನ ಏನೇ ಹೇಳಿದರೂ, ಅದು ಅದೆಷ್ಟೇ ತಪ್ಪೆಂದು ಮನವರಿಕೆಯಾದರೂ, ಎಲ್ಲರೂ ಅದರ ಪಾಲನೆಯಲ್ಲಿ ಋಣ ತೀರಿಸುವವರ ಹಾಗೆ, ಸಂಬಳಕ್ಕೆ ಬಿದ್ದವರ ಹಾಗೆ ಜೀತದಾಳಾದರೇ ಹೊರತು ಯಾರೂ ದುರ್ಯೋಧನ ಗೆಲ್ಲಲೇಬೇಕೆಂಬ ಏಕ ಚಿತ್ತದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಳ್ಳಲಿಲ್ಲ.ಹಾಗೆ ನೋಡಿದರೆ, ದುರ್ಯೋಧನ ಒಬ್ಬ ಒಳ್ಳೆಯ ಬಾಸ್! ಅವನಲ್ಲಿ ಅಚಲವಾದ ಛಲವಿತ್ತು. ತಾನು ಗೆದ್ದೇ ಗೆಲ್ಲುತ್ತೇನೆಂಬ ಸಕಾರಾತ್ಮಕವಾದ ನಿಲುವಿತ್ತು. ತನ್ನವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಉದಾರ ಮನಸ್ಸಿತ್ತು ಎಂಬುದು ಅವನು ಕರ್ಣನನ್ನು ನಡೆಸಿಕೊಂಡ ರೀತಿಯಲ್ಲೇ ಗೊತ್ತಾಗುತ್ತದೆ. ಇಷ್ಟೆಲ್ಲ ಆದರೂ, ಅವನೆಂದೂ ತನ್ನ ಪರಿವಾರದ ಯಾರನ್ನೂ ತನ್ನ ನಿರ್ಧಾರಗಳಲ್ಲಿ ಭಾಗಿ ಮಾಡಲೇ ಇಲ್ಲ. ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ತಾನು ಹೇಳಿದ್ದೇ ಸರಿ. ಅದೇ ಲೋಕೋತ್ತರ ಎಂದು ಭಾವಿಸಿಬಿಟ್ಟ. ತನ್ನ ಋಣಕ್ಕೆ ಬಿದ್ದ ಮಂದಿ ತನಗಾಗಿ ಏನನ್ನೂ ಪ್ರಶ್ನಿಸದೆ ದುಡಿಯಲೇಬೇಕೆಂಬ ವಿಚಾರದಲ್ಲಿ ಹುಂಬನಾಗಿ ಬಿಟ್ಟ. ಅದೇ ಅವನ ತಪ್ಪಾಯಿತು.ಆಧುನಿಕ ಜಗತ್ತಿನ ಬೋರ್ಡ್ ರೂಮಿನ ಸುತ್ತಮುತ್ತಲಿನ ನಾಯಕರುಗಳು ಈ ಸತ್ಯವನ್ನು ಅರಿತುಕೊಳ್ಳಬೇಕು. ತಮ್ಮೊಂದಿಗಿನ ಎಲ್ಲರೂ ತಮ್ಮಷ್ಟೇ ಬುದ್ಧಿವಂತರಾದ್ದರಿಂದ ಅವರೆಲ್ಲರನ್ನೂ ತಮ್ಮ ನಿರ್ಧಾರಗಳಲ್ಲಿ ಸಮಭಾಗಿಗಳನ್ನಾಗಿ ಮಾಡಿಕೊಳ್ಳುವುದೇ ತಮಗೆ ಶ್ರೇಯಸ್ಕರವೆಂಬ ಕಟು ವಾಸ್ತವವನ್ನು ತಿಳಿದುಕೊಳ್ಳಬೇಕು.ಒಳ್ಳೆಯ ಸಂಬಳದಲ್ಲಿರುವ, ಸಂಭಾವಿತನಾದ ಹಾಗೂ ಬುದ್ಧಿವಂತನಾದ ಆಧುನಿಕ ಹೈಟೆಕ್ ಕಾರ್ಮಿಕನಿಗೆ ಒಂದು ಹಂತದಲ್ಲಿ ಹಣದ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಸವಲತ್ತುಗಳೂ ಬೇಕಿರುವುದಿಲ್ಲ. ತನ್ನನ್ನು ಕಾರ್ಯಕ್ಷೇತ್ರದಲ್ಲಿ ಇನ್ನಿತರರು ಪ್ರೀತಿಸಬೇಕೆಂಬ ಭಾವುಕತೆಯೂ ಅವನಿಗಿರುವುದಿಲ್ಲ. ತನ್ನನ್ನು ಎಲ್ಲರೂ ಮೇಲ್ನೋಟಕ್ಕೆ ಗೌರವಿಸಲಿ ಎಂಬ ಚಪಲವೂ ಇರುವುದಿಲ್ಲ. ಅವನದೊಂದೇ ಒಂದು ಮನವಿ - ‘ನನ್ನ ವಿಚಾರಗಳಿಗೆ ಅನಿಸಿಕೆಗಳಿಗೆ ಬೆಲೆ ನೀಡಿ. ಕಂಪೆನಿಯ ನಿರ್ಧಾರಗಳಲ್ಲಿ ನನ್ನ ಅನುಭವಕ್ಕೂ ಒಂದು ಅವಕಾಶ ಕೊಡಿ’! ಅಷ್ಟೆ.ಮಹಾಭಾರತದ ಎರಡು ಬಾಸ್‌ಗಳಾದ ಕೃಷ್ಣ ಹಾಗೂ ದುರ್ಯೊಧನರ ನಡುವಿನ ಅಂತರವೂ ಇಷ್ಟೆ. ಒಬ್ಬ ಎಲ್ಲರಿಗೂ ಮಾತನಾಡಲು ಅವಕಾಶ ಕೊಟ್ಟು ನಂತರ ಅವರೆಲ್ಲ ಒಪ್ಪುವ ಹಾದಿಯಲ್ಲಿ ಅವರನ್ನು ಗೌರವದಿಂದ ಮುನ್ನಡೆಸಿದ. ಮತ್ತೊಬ್ಬ ಯಾರಿಗೂ ಮಾತನಾಡಲು ಅವಕಾಶ ಕೊಡದೆ ತನಗೆ ಸರಿ ಎನಿಸಿದ ಹಾದಿಯಲ್ಲಿ ಅವನನ್ನು ಬಲವಂತದಿಂದ ಮುನ್ನಡೆಸಿದ. ಪರಿಣಾಮ ಏನಾಯಿತೆಂದು ನಿಮಗೆ ಗೊತ್ತಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆಯೇ ಇಲ್ಲ!! ಲೇಖಕರನ್ನು 

satyesh@india.tejasnetworks.com

 ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry