ದಯಾನಂದ ಕಾಮತ್ ನಿಧನ

7

ದಯಾನಂದ ಕಾಮತ್ ನಿಧನ

Published:
Updated:

ಮಂಗಳೂರು: ಕರಾವಳಿ ಭಾಗ ಕಂಡ ಮಾಜಿ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ದಯಾನಂದ ಕಾಮತ್ (68) ಅವರು ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಕೊಡಿಯಾಲಗುತ್ತುವಿನ ಭಗವತಿನಗರದ ಸ್ವಗೃಹದಲ್ಲಿ ನಿಧನರಾದರು.ಅವರು ಅವಿವಾಹಿತರಾಗಿದ್ದರು. ಆಲ್‌ರೌಂಡರ್ ಆಗಿದ್ದ ದಯಾನಂದ ಕಾಮತ್ 1962 ರಿಂದ 1967ರವರೆಗೆ ಹರಡಿಕೊಂಡಿದ್ದ ಮೊದಲ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 22 ಪಂದ್ಯಗಳನ್ನು ಆಡಿದ್ದು, ಒಂದು ಶತಕ (ಅಜೇಯ 100), ಮೂರು ಅರ್ಧ ಶತಕ ಸೇರಿದಂತೆ 32 ಇನಿಂಗ್ಸ್‌ಗಳಲ್ಲಿ 674 ರನ್ ಬಾರಿಸಿದ್ದರು. ಎಡಗೈ ಬೌಲಿಂಗ್ ದಾಳಿಯಲ್ಲಿ 23 ವಿಕೆಟ್‌ಗಳನ್ನು ಪಡೆದಿದ್ದರು. 42ಕ್ಕೆ 7 ವಿಕೆಟ್ ಪಡೆದದ್ದು ಅವರ ಸರ್ವಶ್ರೇಷ್ಠ ಸಾಧನೆ.ಕಾಮತ್ 1967ರಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಿ ಗ್ಯಾರಿಫೀಲ್ಡ್ ಸೋಬರ್ಸ್ ನೇತೃತ್ವದ ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರಲ್ಲದೆ, 44 ರನ್ ಗಳಿಸಿದ್ದರು. ಅತ್ಯಂತ ಚುರುಕಿನ ಕ್ಷೇತ್ರರಕ್ಷಕ ಎನಿಸಿದ್ದರು. ಸೋಬರ್ಸ್ ಅವರಂತೆ ಎಡಗೈ ಆಲ್‌ರೌಂಡರ್ ಆಗಿದ್ದರಿಂದ ಅವರನ್ನು ‘ಭಾರತೀಯ ಸೋಬರ್ಸ್’ ಎಂದು ಕರೆಯುತ್ತಿದ್ದರು ಎಂದು ಹಿರಿಯ ಆಟಗಾರರು ನೆನಪಿಸಿಕೊಳ್ಳುತ್ತಾರೆ.ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಉದ್ಯೋಗಿ ಕಾಮತ್, ಮಂಗಳೂರು ಲೀಗ್‌ನಲ್ಲಿ ಪೆಂಟ್‌ಲೆಂಡ್ ಪೇಟ್ ಸ್ಪೋರ್ಟ್ಸ್ ಅಸೋಷಿಯೇಷನ್ (ಪಿಪಿಸಿಎ) ಪರ ಆಡಿದ್ದರು. ದಯಾನಂದ ಕಾಮತ್ ನಿಧನಕ್ಕೆ ದಕ್ಷಿಣ ಕನ್ನಡ ಕ್ರಿಕೆಟ್ ಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry