ದಯಾನಂದ ಪೈ ಕಾರಿನ ಮೇಲೆ ಗುಂಡಿನ ದಾಳಿ

7

ದಯಾನಂದ ಪೈ ಕಾರಿನ ಮೇಲೆ ಗುಂಡಿನ ದಾಳಿ

Published:
Updated:

ಬೆಂಗಳೂರು: ಉದ್ಯಮಿ ಪಿ.ದಯಾನಂದ ಪೈ ಅವರ ಕಾರಿನ ಮೇಲೆ ದುಷ್ಕರ್ಮಿಗಳು ನಗರದ ಬಸವನಗುಡಿಯ ರಾಮಕೃಷ್ಣ ಆಶ್ರಮದ ಬಳಿ ಮಂಗಳವಾರ ಸಂಜೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಪೈ ಅವರು ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ದಯಾನಂದ ಪೈ ಅವರು ಸಂಜೆ ಆರು ಗಂಟೆ ಸುಮಾರಿಗೆ ಚಾಲಕ ಸಿದ್ದರಾಜು ಜತೆ ಕಾರಿನಲ್ಲಿ (ಡಿಎಲ್-3ಎಫ್, ಜಿಎ-7777) ಹೋಗುತ್ತಿದ್ದಾಗ ದುಷ್ಕರ್ಮಿಗಳು, ಪಿಸ್ತೂಲ್‌ನಿಂದ ಅವರ ವಾಹನದ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿದ್ದರಿಂದ ಬುಲೆಟ್‌ಗಳು ಒಳ ಹೊಕ್ಕಿಲ್ಲ. ಇದರಿಂದಾಗಿ ಪೈ ಮತ್ತು ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ಸಂದರ್ಭದಲ್ಲಿ ಪೈ ಅವರು ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ದುಷ್ಕರ್ಮಿಗಳು, ಚಾಲಕ ಹಾಗೂ ಪೈ ಅವರ ಪಕ್ಕದ ಕಿಟಕಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಕಾರಿನ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.`ಸೆಂಚುರಿ~ ರಿಯಲ್ ಎಸ್ಟೇಟ್ ವ್ಯವಹಾರ ಸಂಸ್ಥೆಯ ಸಂಸ್ಥಾಪಕರಾಗಿರುವ ದಯಾನಂದ ಪೈ ಅವರು ಮಂಗಳೂರು, ಮಣಿಪಾಲ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಆಗಿದ್ದಾರೆ. ಅಲ್ಲದೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಹೋಟೆಲ್‌ಗಳನ್ನು ಸಹ ನಡೆಸುತ್ತಿದ್ದಾರೆ.`ಬಸವನಗುಡಿಯ ಬಿಎಂಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿರುವ ಅವರು, ಸಹಕಾರನಗರದಲ್ಲಿ ವಾಸವಾಗಿದ್ದಾರೆ. ಅವರು ಸದಾಶಿವನಗರದಲ್ಲಿನ ಕಚೇರಿಯಿಂದ ಜೆ.ಸಿ.ನಗರ ಮಾರ್ಗವಾಗಿ ಬಿಎಂಎಸ್ ಕಾಲೇಜಿಗೆ ಬರುತ್ತಿದ್ದರು. ಈ ವೇಳೆ ಸಂಜೆ 5.50ರ ಸುಮಾರಿಗೆ ಅವರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ, ನಾನು ಹೆಬ್ಬೆಟ್ಟು ಮಂಜ. ದೇವನಹಳ್ಳಿಯಲ್ಲಿರುವ ನಿಮ್ಮ ಜಮೀನನ್ನು ನನಗೆ ನೀಡಬೇಕು ಎಂದು ಹೇಳಿದ್ದಾನೆ.

 

ನಂತರ ಆರು ಗಂಟೆಗೆ ಅದೇ ದೂರವಾಣಿ ಸಂಖ್ಯೆಯಿಂದ ಆತ ಪುನಃ ಕರೆ ಮಾಡಿ, ವಿವಾದವಿರುವುದು ನಿಮ್ಮ ತಮ್ಮ ಸತೀಶ್ ಪೈ ಜತೆ. ಭೂಮಿ ನೀಡುವಂತೆ ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇನೆ ಎಂದು ಹೇಳಿದ್ದಾನೆ.

ಬಳಿಕ, 6.05ರ ಸುಮಾರಿಗೆ ಪೈ ಅವರ ಕಾರು ರಾಮಕೃಷ್ಣ ಆಶ್ರಮದ ಬಳಿ ಬರುತ್ತಿದ್ದಂತೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸುದ್ದಿಗಾರರಿಗೆ ತಿಳಿಸಿದರು.`ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಲಾಗಿದೆ. ಈ ಹಿಂದೆ ಪೈ ಅವರಿಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ. ಈಗ ದಾಳಿ ನಡೆಸಿದವರು ಯಾರೆಂಬುದು ಪೈ ಅವರಿಗೂ ಗೊತ್ತಿಲ್ಲ~ ಎಂದು ಮಿರ್ಜಿ ಹೇಳಿದರು.ಸತೀಶ್ ಪೈ ಅವರು ಈ ಹಿಂದೆ ಮಂಗಳೂರಿನಲ್ಲಿದ್ದಾಗ ಅವರಿಗೆ ಬೆದರಿಕೆ ಕರೆ ಬಂದಿತ್ತು ಎನ್ನಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಿರ್ಜಿ, `ಕೆಲಸದ ನಿಮಿತ್ತ ಮೈಸೂರಿಗೆ ಹೋಗಿರುವ ಸತೀಶ್ ಪೈ ಅವರೊಂದಿಗೂ ಈಗಾಗಲೇ ಮಾತನಾಡಿದ್ದೇವೆ. ಜಮೀನು ವಿಷಯವಾಗಿ ಯಾವುದೇ ವಿವಾದವಿಲ್ಲ.ಈವರೆಗೂ ಅಂತಹ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಮಂಗಳೂರು ಪೊಲೀಸರೊಂದಿಗೂ ಚರ್ಚಿಸುತ್ತೇನೆ. ಘಟನೆ ಹಿನ್ನೆಲೆಯಲ್ಲಿ ಪೈ ಕುಟುಂಬ ಸದಸ್ಯರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ನಿರ್ಧರಿಸಲಾಗಿದೆ~ ಎಂದರು.`ಕಾರಿನ ಗಾಜುಗಳಿಗೆ ಯಾರೊ ಕಲ್ಲಿನಿಂದ ಹೊಡೆದಂತೆ ಶಬ್ದ ಕೇಳಿಸಿತು. ಕೆಲ ಹೊತ್ತಿನ ನಂತರ ವಾಹನದಿಂದ ಕೆಳಗಿಳಿದು ನೋಡಿದಾಗ ಗುಂಡಿನ ದಾಳಿ ನಡೆದಿದೆ ಎಂದು ಗೊತ್ತಾಯಿತು. ಕೂಡಲೇ ಕಾಲೇಜಿಗೆ ತೆರಳಿದೆ~ ಎಂದು ದಯಾನಂದ ಪೈ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.`ಪ್ರಭಾವಿ ವ್ಯಕ್ತಿಯಾಗಿರುವ ದಯಾನಂದ ಪೈ ಆತ್ಮರಕ್ಷಣೆಗಾಗಿ ಸೆಕ್ಯುರಿಟಿ ಏಜೆನ್ಸಿಗಳ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದಾರೆ. ಪ್ರತಿದಿನ ಬೆಂಜ್ ಕಾರಿನಲ್ಲಿ ಹೋಗುತ್ತಿದ್ದ ಅವರು, ಮಂಗಳವಾರ `ಬೆಂಟ್ಲಿ~ ಕಾರಿನಲ್ಲಿ ಹೋಗಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಅವರ ಜತೆ ಭದ್ರತಾ ಸಿಬ್ಬಂದಿ ಇರಲಿಲ್ಲ~ ಎಂದು  ಪೊಲೀಸರು ಹೇಳಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಜ್ಯೋತಿಪ್ರಕಾಶ್ ಮಿರ್ಜಿ, ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ. ಸುನಿಲ್‌ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಂತಿ, ಡಿಸಿಪಿ ಸಿದ್ದರಾಮಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಬಿಎಂಎಸ್ ಕಾಲೇಜಿನಲ್ಲಿ ಸತತ ಐದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

 ಘಟನೆ ಸಂಬಂಧ ಬಸವನಗುಡಿ ಪೊಲೀಸರು ಕೊಲೆ ಯತ್ನ ಆರೋಪ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯಾರೀ ಹೆಬ್ಬೆಟ್ಟು ಮಂಜ?

ಮಂಜುನಾಥ ಅಲಿಯಾಸ್ ಹೆಬ್ಬೆಟ್ಟು ಮಂಜ ನಗರದ ಕುಖ್ಯಾತ ರೌಡಿ. ಮೂಲತಃ ಶಿವಮೊಗ್ಗದ ಆತ ರೌಡಿ ಲೋಕೇಶ ಅಲಿಯಾಸ್ ಮುಲಾಮನ ಸಹಚರ. ಕೊಲೆ, ಕೊಲೆ ಯತ್ನ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಮಂಜನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.ರೌಡಿ ಕೊರಂಗು ಕೃಷ್ಣನ ಸಹಚರ ದೀಪು ಎಂಬಾತನನ್ನು ಕೊಲೆ ಮಾಡಿದ್ದ ಮಂಜನನ್ನು ಹಿರಿಯೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ದುಬೈನಲ್ಲಿ ತಲೆಮರೆಸಿಕೊಂಡಿದ್ದಾನೆ. ಆತ ಅಲ್ಲಿದ್ದುಕೊಂಡೆ ಸಹಚರರ ಮೂಲಕ ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ಎಸಗುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪೈ ಕುಟುಂಬಕ್ಕೆ ಎಚ್ಚರಿಕೆ 

ಪೈ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದಲ್ಲೇ ಸುದ್ದಿವಾಹಿನಿಯೊಂದಕ್ಕೆ ಕರೆ ಮಾಡಿದ ಹೆಬ್ಬೆಟ್ಟು ಮಂಜ, `ದೇವನಹಳ್ಳಿಯಲ್ಲಿ ಪೈ ಕುಟುಂಬಕ್ಕೆ ಸೇರಿದ ಜಮೀನು ಇದೆ. ಅದನ್ನು ಬಡವರಿಗೆ ಕೊಡುವಂತೆ ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದೆ. ಆದರೆ, ಅವರು ನನ್ನ ಮಾತು ಕೇಳಿರಲಿಲ್ಲ. ಈ ದಾಳಿ ಮೂಲಕ ಸಣ್ಣ ಎಚ್ಚರಿಕೆ ನೀಡಿದ್ದೇನೆ. ಈಗಲೂ ಬುದ್ಧಿ ಕಲಿಯದಿದ್ದರೆ ಖಂಡಿತ ಅವರನ್ನು ಜೀವಂತವಾಗಿ ಬಿಡುವುದಿಲ್ಲ. ನ್ಯಾಯಕ್ಕಾಗಿ ಈ ಹೋರಾಟ ಮಾಡುತ್ತಿದ್ದು, ಇದು ಗೂಂಡಾಗಿರಿ ಅಲ್ಲ~ ಎಂದು ತಿಳಿಸಿದ್ದಾನೆ.ಪ್ರಾಣ ಉಳಿಸಿದ ಬೆಂಟ್ಲಿ

ದಯಾನಂದ ಪೈ ಅವರು ಪ್ರಯಾಣಿಸುತ್ತಿದ್ದ ಕಾರು `ಬೆಂಟ್ಲಿ~ ಕಂಪೆನಿಯದಾಗಿದ್ದು, ಅದರ ಮಾರುಕಟ್ಟೆ ಬೆಲೆ ಸುಮಾರು 2.50 ಕೋಟಿ ರೂಪಾಯಿ ಇದೆ. ಬೆಂಟ್ಲಿ ಕಂಪೆನಿ ಜರ್ಮನಿ ಮೂಲದ್ದು. ಆ ಕಾರು ಗುಂಡು ನಿರೋಧಕ (ಬುಲೆಟ್ ಪ್ರೂಫ್) ವ್ಯವಸ್ಥೆ ಹೊಂದಿದೆ.

ಇದರಿಂದಾಗಿ ದುಷ್ಕರ್ಮಿಗಳು ಹಾರಿಸಿದ ಗುಂಡುಗಳು ವಾಹನವನ್ನು ಹೊಕ್ಕಿಲ್ಲ. ಇದರಿಂದಾಗಿ ದಯಾನಂದ್ ಪೈ ಅವರ ಜೀವಕ್ಕೆ ಅಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry