ಶುಕ್ರವಾರ, ಮೇ 14, 2021
31 °C

ದರಖಾಸ್ತು ಭೂಮಿ ಕೊಂಡ ಶಾಸಕರ ಪತ್ನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಪರಿಶಿಷ್ಟ ಪಂಗಡದ ಮಹಿಳೆಗೆ ಸರ್ಕಾರದಿಂದ 1996-97ರಲ್ಲಿ ದರಖಾಸ್ತು ಮೂಲಕ ಮಂಜೂರಾಗಿದ್ದ 2.20 ಎಕರೆ ಜಮೀನಿಗೆ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಪತ್ನಿ ಸುಮತಿ ಜಿಪಿಎ (ಸಾಮಾನ್ಯ ಅಧಿಕಾರ ಪತ್ರ) ಮಾಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.  ತಾಲ್ಲೂಕಿನ ತರೀಪುರ ಬಳಿ ಇರುವ ಹೆಬ್ಬಾಡಿಹುಂಡಿ ಸರ್ವೆ ನಂಬರ್ 286ರಲ್ಲಿ ಮೈಸೂರು ತಾಲ್ಲೂಕು ರಮ್ಮನಹಳ್ಳಿಯ ನಂಜಮ್ಮ ಹೆಸರಿಗೆ ಮಂಜೂರಾಗಿದ್ದ 2. 20 ಎಕರೆ ಜಮೀನಿಗೆ ಸುಮತಿ ಜಿಪಿಎ ಪಡೆದಿದ್ದಾರೆ. ಸುಮತಿ ಕೋಂ ಎ.ಬಿ.ರಮೇಶ ಹೆಸರಿಗೆ ಅಕ್ಟೋಬರ್ 21, 2011ರಲ್ಲಿ ನಂಜಮ್ಮ ಹೆಸರಿನ ಜಮೀನಿಗೆ ಸುಮತಿ ಅಧಿಕಾರ ಪತ್ರ ಪಡೆದುಕೊಂಡಿದ್ದಾರೆ.

 

ನಂಜಮ್ಮ 13 ವರ್ಷಗಳ ಹಿಂದೆ ಸರ್ಕಾರಕ್ಕೆ ರೂ.610 ಶುಲ್ಕ ಕಟ್ಟಿ  ಸಾಗುವಳಿ ಪತ್ರ ಪಡೆದುಕೊಂಡಿದ್ದರು. `ದರಖಾಸ್ತು ಮೂಲಕ ಮಂಜೂರಾದ ಜಮೀನನ್ನು 15 ವರ್ಷ ತುಂಬುವ ಮೊದಲು ಪರಭಾರೆ ಮಾಡುವ ಇಲ್ಲವೆ ಆ ಜಮೀನಿಗೆ ಜಿಪಿಎ ಪಡೆಯುವ ಹಕ್ಕು ಇರುವುದಿಲ್ಲ~ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

  1996-97ರಲ್ಲಿ ಈಗಿನ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ತಾಯಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಶಾಸಕರಾಗಿದ್ದ ಕಾಲದಲ್ಲಿ ರಮ್ಮನಹಳ್ಳಿಯ ನಂಜಮ್ಮ ಅವರಿಗೆ ಈ ಜಮೀನು ಮಂಜೂರಾಗಿತ್ತು.ಸದರಿ ಜಮೀನನ್ನು ಶಾಸಕರ ಪತ್ನಿ ಸುಮತಿ ರೂ.7,24,000 ಹಣ ಕೊಟ್ಟು ಜಿಪಿಎ ಪಡೆದಿದ್ದಾರೆ ಎಂಬುದು ಲಭ್ಯ ದಾಖಲೆಗಳಿಂದ ತಿಳಿದು ಬಂದಿದೆ. ಆದರೆ ಈ ಜಮೀನಿನ ಸದ್ಯದ ಮಾರುಕಟ್ಟೆ ಮೌಲ್ಯ 50 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ. ನಂಜಮ್ಮ ಅವರ ಮಕ್ಕಳ ಪೈಕಿ ಒಬ್ಬರಾದ ಚಿಕ್ಕಯ್ಯ ಸರ್ವೆ ನಂಬರ್ 286ರ ಜಮೀನಿಗೆ ತಕರಾರು ತೆಗೆದಿದ್ದಾರೆ.ಸುಮತಿಗೆ ಜಿಪಿಎ ನೀಡಿದ ನಂತರ ಬಂದ ಹಣವನ್ನು ನಂಜಮ್ಮ ತನ್ನ ಮಕ್ಕಳಿಗೆ ಸಮನಾಗಿ ಹಂಚಲಿಲ್ಲ ಎಂಬ ಕಾರಣಕ್ಕೆ ಚಿಕ್ಕಯ್ಯ ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರಯತ್ನದಲ್ಲಿದ್ದಾರೆ.ನಂಜಮ್ಮ ಅವರ ಜಮೀನಿಗೆ ತಮ್ಮ ಪತ್ನಿ ಸುಮತಿ ಜಿಪಿಎ ಪಡೆದಿರುವುದನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ ಒಪ್ಪಿಕೊಂಡಿದ್ದಾರೆ. `ನಂಜಮ್ಮಳಿಗೆ ಹಣ ಕೊಟ್ಟು ಜಿಪಿಎ ಪಡೆಯಲಾಗಿದೆ.ಅದಕ್ಕೆ ಜಮೀನಿನ ಹಕ್ಕುದಾರಳಾದ ನಂಜಮ್ಮ ಮತ್ತು ಅವರ ಎಲ್ಲ ಮಕ್ಕಳ ಒಪ್ಪಿಗೆ ಕೂಡ ಪಡೆದಿದ್ದೇವೆ. ದರಖಾಸ್ತು ಭೂಮಿಯನ್ನು 15 ವರ್ಷಗಳ ಕಾಲ ಪರಭಾರೆ ಮಾಡಬಾರದು ಎಂಬ ನಿಯಮ ಜಿಪಿಎ ಪಡೆಯಲು ಅನ್ವಯಿಸುವುದಿಲ್ಲ ಎಂದು ಭಾವಿಸಿದ್ದೇವೆ~ ಎಂದು `ಪ್ರಜಾವಾಣಿ~ಗೆ  ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.