ದರೋಡೆಗೆ ಸಂಚು-ಬಂಧನ

7

ದರೋಡೆಗೆ ಸಂಚು-ಬಂಧನ

Published:
Updated:

ಬೆಂಗಳೂರು: ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ರೌಡಿ ಬೇಕರಿ ರಘುನ ಸಹಚರರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಎರಡು ಬೈಕ್‌ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಆಜಾದ್‌ನಗರದ ರಾಹಿಲ್‌ (21), ಚಾಮರಾಜ ಪೇಟೆಯ ಮಂಜು (24), ಹನುಮಂತನಗರದ ವಿನಯ್‌ (22) ಮತ್ತು ಕೆಂಪೇಗೌಡನಗರದ ಪ್ರವೀಣ್‌ (19) ಬಂಧಿತರು.ಆರೋಪಿಗಳು ಕೆಂಪೇಗೌಡನಗರದ ನಂಜಾಂಬ ಅಗ್ರಹಾರದ ಬಳಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಅಪಹರಣ ಮತ್ತು ಕೊಲೆಯತ್ನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸರು ರಾಹುಲ್‌ ಹಾಗೂ ಮಂಜುನನ್ನು ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಆತ್ಮಹತ್ಯೆ: ಜೀವನ್‌ಬಿಮಾನಗರ ಸಮೀಪದ ನಂಜಾರೆಡ್ಡಿ ಕಾಲೊನಿಯಲ್ಲಿ ಸೋಮವಾರ ರಾತ್ರಿ ಹಾಂಗ್‌ ರಿಪಮ್‌ (29) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಣಿಪುರ ಮೂಲದ ಹಾಂಗ್‌, ತಂಗಿಯ ಜತೆ ನಂಜಾರೆಡ್ಡಿ ಕಾಲೊನಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ನಗರದ ವಸ್ತ್ರವಿನ್ಯಾಸ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಹಾಂಗ್‌, ನಾಲ್ಕೈದು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು. ತಂಗಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅವರು ಪಾನಮತ್ತರಾಗಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಜೀವನ್‌ಬಿಮಾನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಅಪಘಾತ: ಸಾವು

ರಾಮಮೂರ್ತಿನಗರ ಸಮೀಪದ ಎನ್‌ಜಿಇಎಫ್ ಲೇಔಟ್‌ನಲ್ಲಿ ಸೋಮವಾರ ರಾತ್ರಿ ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜಣ್ಣ (35) ಎಂಬುವರು ಸಾವನ್ನಪ್ಪಿದ್ದಾರೆ.ಕಲ್ಕೆರೆ ಮುಖ್ಯರಸ್ತೆ ಬಳಿಯ ಆದಿತ್ಯನಗರ ನಿವಾಸಿಯಾದ ಅವರು ಕೇಬಲ್‌ ಆಪರೇಟರ್‌ ಆಗಿದ್ದರು. ಅವರು ಬೆನ್ನಿಗಾನಹಳ್ಳಿಯಲ್ಲಿ ಸ್ನೇಹಿತರನ್ನು ಭೇಟಿಯಾಗಿ ಬೈಕ್‌ನಲ್ಲಿ ಮನೆಗೆ ವಾಪಸ್‌ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.ರಾಜಣ್ಣ, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯನ್ನು ಗಮನಿಸದೆ ಹಿಂದಿನಿಂದ ಬೈಕ್‌ ಗುದ್ದಿಸಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಲಾರಿ ಚಾಲಕ ಪರಾರಿಯಾಗಿದ್ದು, ಕೆ.ಆರ್‌.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry