ಶನಿವಾರ, ಮೇ 15, 2021
25 °C

ದರೋಡೆ -ಎಂಟು ವಿದ್ಯಾರ್ಥಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರಾಖಂಡದ ವಿದ್ಯಾರ್ಥಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಪ್ರಕರಣವನ್ನು ಘಟನೆ ನಡೆದ 24 ಗಂಟೆಗಳಲ್ಲಿ ಭೇದಿಸಿರುವ ಹೈಗ್ರೌಂಡ್ಸ್ ಪೊಲೀಸರು ಎಂಟು ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.ಬನಶಂಕರಿಯ ಕಾಮಾಕ್ಯ ಲೇಔಟ್ ನಿವಾಸಿ ರಾಜು ಎಂಬುವರ ಮಗ ಆರ್.ನವೀನ್ (19), ಜಯನಗರ ಒಂಬತ್ತನೇ ಬ್ಲಾಕ್‌ನ 26ನೇ ಮುಖ್ಯರಸ್ತೆ ನಿವಾಸಿ ರಂಗದೇವ್ ಎಂಬುವರ ಮಗ ಆರ್.ಪ್ರವೀಣ್‌ಕುಮಾರ್ (21), ಜಯನಗರ ಒಂಬತ್ತನೇ ಬ್ಲಾಕ್‌ನ 26ನೇ ಮುಖ್ಯರಸ್ತೆ ನಿವಾಸಿ ಬಸವರಾಜ್ ಎಂಬುವರ ಮಗ ಚಂದನ್ (19), ಕುಮಾರಸ್ವಾಮಿಲೇಔಟ್‌ನ 59ನೇ ತಿರುವಿನ ನಿವಾಸಿ ಸಿದ್ದಪ್ಪಾಜಿ ಎಂಬುವರ ಪುತ್ರ ಪುರುಷೋತ್ತಮ್ (19), ಕುಮಾರಸ್ವಾಮಿಲೇಔಟ್‌ನ ವಾಟರ್ ಟ್ಯಾಂಕ್ ಸಮೀಪದ ನಿವಾಸಿ ವಿ.ಶಿವಶಂಕರ್ ಎಂಬುವರ ಮಗ ಶ್ರೀಕಾಂತ (21), ಕನಕಪುರ ರಸ್ತೆ ಬೊಳಾರೆಗೇಟ್ ನಿವಾಸಿ ಗುರುಮೂರ್ತಿ ಎಂಬುವರ ಮಗ ಕಾರ್ತಿಕ್ (20), ಕುಮಾರಸ್ವಾಮಿಲೇಔಟ್ ಒಂದನೇ ಹಂತದ 15ನೇ ಮುಖ್ಯರಸ್ತೆ ನಿವಾಸಿ ಸಿ.ಅರುಣ್‌ಕುಮಾರ್ (21) ಮತ್ತು ಶ್ರೀನಿವಾಸನಗರ ಏಳನೇ ಮುಖ್ಯರಸ್ತೆ ನಿವಾಸಿ ವೆಂಕಟೇಶ್ (20) ಬಂಧಿತರು. ಪ್ರಕರಣದ ಇತರೆ ಆರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.`ಬಂಧಿತ ಆರೋಪಿಗಳು ವಕೀಲರು ಹಾಗೂ ಉದ್ಯಮಿಗಳ ಮಕ್ಕಳಾಗಿದ್ದಾರೆ. ಅವರೆಲ್ಲ ಎಂಜಿನಿಯರಿಂಗ್, ಡಿಪ್ಲೊಮಾ, ಬಿ.ಕಾಂ ವಿದ್ಯಾರ್ಥಿಗಳು. ಶನಿವಾರ ರಾತ್ರಿ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಉತ್ತರಾಖಂಡ ಮೂಲದ ವಿದ್ಯಾರ್ಥಿನಿಯರು ಮತ್ತು ಅವರ ಗೆಳೆಯರ ಮೇಲೆ ವಿಂಡ್ಸರ್ ಮ್ಯಾನರ್ ಹೋಟೆಲ್ ಬಳಿ ಹಲ್ಲೆ ನಡೆಸಿ ಎಳೆದಾಡಿದ್ದರು.

 

ಮೊಬೈಲ್ ಫೋನ್, ಕ್ರೆಡಿಟ್ ಕಾರ್ಡ್, ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದರು~ ಎಂದು ಶೇಷಾದ್ರಿಪುರ ಉಪವಿಭಾಗದ ಎಸಿಪಿ ಓಂಕಾರಯ್ಯ `ಪ್ರಜಾವಾಣಿ~ಗೆ ತಿಳಿಸಿದರು.`ಇದೇ ಮೊದಲ ಬಾರಿಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಈ ಹಿಂದೆ ಅವರು ಇಂತಹ ಕೃತ್ಯ ಎಸಗಿದ್ದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೋಜಿನ ಜೀವನ ನಡೆಸುವ ಸಲುವಾಗಿ ಅವರು ದರೋಡೆ ಮಾಡಿದ್ದರು~ ಎಂದು ಅವರು ಮಾಹಿತಿ ನೀಡಿದರು.ನಗರದ ಪ್ರಮಖ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದ್ದ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಭೇದಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.