ಭಾನುವಾರ, ಜೂನ್ 13, 2021
25 °C

ದರೋಡೆ ಪ್ರಕರಣ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌­ನಲ್ಲಿ ಮಹಿಳೆಯರನ್ನು ಪರಿಚಯಿಸಿ­ಕೊಂಡು ನಿರಂತರವಾಗಿ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದ ಆರೋಪಿ­ಗಳನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ಹನುಮಂತನಗರದ ಕುಮಾರ್‌ (27), ಕಿಶೋರ್‌ (21) ಮತ್ತು ಪುನೀತ್ (27) ಬಂಧಿತರು. ಆರೋಪಿ­ಗಳಿಂದ ₨ 27 ಸಾವಿರ ವಶಪಡಿಸಿಕೊಳ್ಳಲಾಗಿದೆ. ಆರೋಪಿ­ಗಳು ನಾಗರಬಾವಿ ನಿವಾಸಿ ಶ್ಯಾಮ್‌­ಕುಮಾರ್‌ ಎಂಬುವರನ್ನು ದರೋಡೆ ಮಾಡಿದ್ದರು.ಖಾಸಗಿ ಕಂಪೆನಿ ಉದ್ಯೋಗಿಯಾದ ಶ್ಯಾಮ್‌­ಕುಮಾರ್‌, ಎಂಜಿನಿಯರಿಂಗ್‌ ವಿದ್ಯಾರ್ಥಿಯ ಸೋಗಿ­ನಲ್ಲಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದರು.ಆ ಖಾತೆಯ ಮೂಲಕ ಯುವತಿಯರನ್ನು ಆಕರ್ಷಿಸಿ ಸ್ನೇಹ ಸಂಪಾದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ಯಾಮ್‌ಕುಮಾರ್‌, ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡು ಅವರ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದರು. ನಂತರ ಆ ಮಹಿಳೆಗೆ ಪದೇ ಪದೇ ಕರೆ ಮಾಡುತ್ತಿದ್ದರು. ಮಹಿಳೆ ಈ ವಿಷಯವನ್ನು ಪರಿಚಿತ ವ್ಯಕ್ತಿಯೊಬ್ಬರಿಗೆ ತಿಳಿಸಿದ್ದರು.ಆ ವ್ಯಕ್ತಿ ಇತರೆ ಆರೋಪಿಗಳೊಂದಿಗೆ ಸೇರಿ ಶ್ಯಾಮ್‌ಕುಮಾರ್‌ ಅವರನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಪೂರ್ವಯೋಜಿತ ಸಂಚಿನಂತೆ ಮಾ.11ರಂದು ಶ್ಯಾಮ್‌ಕುಮಾರ್‌ ಅವರಿಗೆ ಕರೆ ಮಾಡಿದ್ದ ಆರೋಪಿಗಳು ಮಹಿಳೆಯ ದನಿಯಲ್ಲಿ ಮಾತನಾಡಿ,  ಹನುಮಂತನಗರದ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಬಂದು ಭೇಟಿಯಾಗುವಂತೆ ತಿಳಿಸಿದ್ದರು.ಅದೇ ರೀತಿ ಶ್ಯಾಮ್‌ಕುಮಾರ್‌, ಅವರನ್ನು ಭೇಟಿಯಾಗಲು ಕಾರಿನಲ್ಲಿ ಹೋದಾಗ ಆರೋಪಿಗಳು ತಾವು ಸಿಸಿಬಿ ಪೊಲೀಸರೆಂದು ಹೇಳಿಕೊಂಡಿದ್ದಾರೆ.‘ಫೇಸ್‌ಬುಕ್‌ನಲ್ಲಿ ಪರಿಚಿತರಾದ ಮಹಿಳೆಯ­ರೊಂದಿಗೆ ಅನುಚಿತವಾಗಿ ವರ್ತಿಸಿದ ಸಂಬಂಧ ನಿಮ್ಮ ವಿರುದ್ಧ ದೂರು ಬಂದಿದೆ’ ಎಂದು ಅವರನ್ನು ಬೆದರಿ­ಸಿದ ಆರೋಪಿಗಳು, ಎಟಿಎಂ ಕಾರ್ಡ್‌ ಕಿತ್ತುಕೊಂಡು ₨ 65 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ.ಅಲ್ಲದೇ, ₨ 5 ಸಾವಿರ ಮತ್ತು ಮೊಬೈಲ್‌ ದೋಚಿ ಈ ಸಂಗತಿ­ಯನ್ನು ಯಾರಿಗೂ ತಿಳಿಸದಂತೆ ಬೆದರಿಸಿ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಘಟನೆ ಸಂಬಂಧ ಶ್ಯಾಮ್‌ಕುಮಾರ್‌, ಹನುಮಂತನಗರ ಠಾಣೆಗೆ ಮಾ.14ರಂದು ದೂರು ನೀಡಿ­ದ್ದರು. ನಂತರ ಆರೋಪಿಗಳ ಮೊಬೈಲ್‌ ಕರೆಯ ಸುಳಿವು ಆಧರಿಸಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ವಿವಾಹಿತರಾದ ಶ್ಯಾಮ್‌ಕುಮಾರ್‌, ಫೇಸ್‌ಬುಕ್‌ ಮೂಲಕ 50ಕ್ಕೂ ಹೆಚ್ಚು ಹುಡುಗಿಯರೊಂದಿಗೆ ಸ್ನೇಹ ಸಂಪಾ­ದಿಸಿ ಅವರಿಗೆ ನಿರಂತರವಾಗಿ ಕರೆ ಮಾಡಿ ಮಾತನಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.