ದರೋಡೆ: ಮುಖ್ಯ ಕಾನ್‌ಸ್ಟೇಬಲ್ ಪುತ್ರ ಸೇರಿ ಮೂವರ ಸೆರೆ

7

ದರೋಡೆ: ಮುಖ್ಯ ಕಾನ್‌ಸ್ಟೇಬಲ್ ಪುತ್ರ ಸೇರಿ ಮೂವರ ಸೆರೆ

Published:
Updated:

ಬೆಂಗಳೂರು: ನಗರದ ಯಶವಂತಪುರದಲ್ಲಿ ಇತ್ತೀಚೆಗೆ ನಡೆದಿದ್ದ ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಖ್ಯ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಪುತ್ರ ಸೇರಿದಂತೆ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮುಖ್ಯ ಕಾನ್‌ಸ್ಟೇಬಲ್ ಆಗಿರುವ ಶಿವಕುಮಾರ್ ಎಂಬುವರ ಪುತ್ರ ನವೀನ್ (24), ಅಗ್ರಹಾರ ದಾಸರಹಳ್ಳಿಯ ಸ್ವಾಮಿ (26) ಮತ್ತು ಮೂಡಲಪಾಳ್ಯದ ರಾಘವೇಂದ್ರ (21) ಬಂಧಿತರು. ಆರೋಪಿಗಳಿಂದ 150 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ವಾಮಿ ಮತ್ತು ರಾಘವೇಂದ್ರ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಾಗಿದ್ದು, ಅವರ ವಿರುದ್ಧ ಕಾಮಾಕ್ಷಿಪಾಳ್ಯ ಹಾಗೂ ವಿಜಯನಗರ ಠಾಣೆಯಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಡಿಪ್ಲೊಮಾ ಓದಿದ್ದ ನವೀನ್‌ಗೆ ಅವರಿಬ್ಬರೂ ಸ್ನೇಹಿತರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಯಶವಂತಪುರದಲ್ಲಿರುವ ಲಕ್ಷ್ಮಿ ನರಸಿಂಹ ಟ್ರಾನ್ಸ್‌ಪೋರ್ಟ್ ಏಜೆನ್ಸಿ ಕಚೇರಿಗೆ ನುಗ್ಗಿ ಏಜೆನ್ಸಿಯ ಮಾಲೀಕ ಮತ್ತು ಅವರ ಸ್ನೇಹಿತರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ 320 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ಏಜೆನ್ಸಿ ಮಾಲೀಕರು ಮತ್ತು ಅವರ ಸ್ನೇಹಿತರು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪನವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಪಿ.ನಾಗೇಶ್ ಕುಮಾರ್, ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry