ದರ್ಗಾದಲ್ಲಿ ದೀಪೋತ್ಸವ

7

ದರ್ಗಾದಲ್ಲಿ ದೀಪೋತ್ಸವ

Published:
Updated:

ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲು ಗುಲ್ಬರ್ಗದಲ್ಲಿ ವಿಶೇಷವಾದ ದೀಪೋತ್ಸವವೊಂದು ನಡೆಯುತ್ತದೆ. ಅದೂ ದರ್ಗಾದಲ್ಲಿ!  ಈ ಆಚರಣೆಯ ಹೆಸರು `ಚಿರಾಗ್~.ಖ್ವಾಜಾ ಬಂದೇ ನವಾಜ್~ ದರ್ಗಾದಲ್ಲಿ ನಡೆಯುವ ಚಿರಾಗ್ ಆಚರಣೆಯಲ್ಲಿ ಮುಸ್ಲಿಮರಷ್ಟೇ ಅಲ್ಲ ಇತರ ಮತಾವಲಂಬಿಗಳೂ ಪಾಲ್ಗೊಳ್ಳುತ್ತಾರೆ! ಹರಕೆ ಹೊತ್ತು, ಅದು ಈಡೇರಿದಾಗ ಚಿರಾಗ್ ಆಚರಣೆ ಸಂದರ್ಭದಲ್ಲಿ ದರ್ಗಾಕ್ಕೆ ಬಂದು ಹಣತೆ ಉರಿಸಿ ಪ್ರಾರ್ಥಿಸುತ್ತಾರೆ.ಮುಸ್ಲಿಮರಲ್ಲಿ ದೇವರಿಗೆ ದೀಪ ಹಚ್ಚುವ, ಆರತಿ ಬೆಳಗಿಸುವ ಆಚರಣೆಗಳಿಲ್ಲ. ಬದಲಾಗಿ `ಉರುಸ್~ ಇರುತ್ತದೆ. ಆದರೆ ಚಿರಾಗ್ ಎಂಬ ದೀಪೋತ್ಸವ ಇರುವುದಿಲ್ಲ. ಇಲ್ಲಿನ ದರ್ಗಾದ `ಉರುಸ್~ನಲ್ಲಿ ಸಾಮೂಹಿಕವಾಗಿ ಹಣತೆ ಹಚ್ಚುವ `ಚಿರಾಗ್~ ಆಚರಣೆಗೆ ವಿಶೇಷ ಮಹತ್ವವಿದೆ. ಇಲ್ಲಿನ ಧರ್ಮಗುರುಗಳ ಪ್ರಕಾರ ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಚಿರಾಗ್ ವೈಶಿಷ್ಟ್ಯ:
ಹಣತೆ ಹಚ್ಚುವ ಇತ್ಯಾದಿ ಆಚರಣೆಗಳೇ ಇಲ್ಲದ ಮುಸ್ಲಿಮರಲ್ಲಿ `ಚಿರಾಗ್~ ಆಚರಣೆ ನಡೆಸುವುದೇಕೆ, ಇದರ ಹಿನ್ನೆಲೆ ಏನಿರಬಹುದು ಎಂಬ ಕುತೂಹಲ ಸ್ವಾಭಾವಿಕ.ಈ ದೀಪೋತ್ಸವ ಬರಿದೇ ಆಚರಿಸಲಾಗುವುದಿಲ್ಲ. ಇದರಲ್ಲೂ ಆಧ್ಯಾತ್ಮಿಕ ವಿಶ್ವಾಸ ಅಡಗಿದೆ. ದೇವರು ಮತ್ತು ಭಕ್ತನ ನಡುವಿನ ಅವಿನಾ ಸಂಬಂಧದ ಸಂಕೇತವಿದು. ಇದನ್ನೇ `ಮಿಸಾಲ್~ (ಮಿಲನ) ಎಂದೂ ಹೇಳುತ್ತಾರೆ.

 

ಇದು ಸತಿ-ಪತಿ ಸಂಬಂಧದಂತೆ ಇರುವುದರಿಂದ ಮಿಸಾಲ್ ಎಂಬ ಪದ ಬಳಕೆಯಲ್ಲಿದೆ. ದೇವರು ಮತ್ತು ಭಕ್ತರನ್ನು ಆಶಿಕ್-ಮಾಶಿಕ್ ಎನ್ನಲಾಗುತ್ತದೆ. ಆಶಿಕ್-ಮಾಶಿಕ್ ಎಂದರೆ ಪ್ರಿಯತಮ-ಪ್ರೇಯಸಿ ಎಂಬ ಪರಿಕಲ್ಪನೆ ಈ ಪದದಲ್ಲಿ ಅಂತರ್ಲೀನವಾಗಿದೆ.ಸೂಫಿ ಪಂಥದ ಸಂದೇಶಗಳಲ್ಲಿ ಪ್ರಧಾನವಾಗಿ ಇರುವಂತೆ ದೇವಮಾರ್ಗದಲ್ಲಿ ಪರಿಶುದ್ಧವಾಗಿ ಮುನ್ನಡೆದು ಪರಮಾತ್ಮನಲ್ಲಿ ವಿಲೀನವಾಗುವುದು. ಇದಕ್ಕೂ ಮೊದಲು ಜೀವಾತ್ಮನನ್ನು ಶುದ್ಧೀಕರಿಸುವ `ಅಗ್ನಿಪರೀಕ್ಷೆ~ಯೇ ಚಿರಾಗ್ ಎಂದು ಹೇಳಬಹುದು.ಆಚರಣೆ ವಿಧಾನ: `ಉರುಸ್~ ಎಂದರೆ ಮದುವೆ (ಭಕ್ತ-ದೇವರ ನಡುವಿನ ಆತ್ಮಾನುಸಂಧಾನ) ಎಂಬ ಅರ್ಥವಿದೆ. ಉರುಸ್ ಮೂರು ದಿನಗಳ ಆಚರಣೆ. ಈ  ಅವಧಿಯಲ್ಲಿ ಒಂದು ದಿನ `ಸಂದಲ್~ (ಗಂಧ), ಒಂದು ದಿನ ಚಿರಾಗ್(ದೀಪ ಬೆಳಗುವುದು), ಮತ್ತೊಂದು ದಿನ `ಜಿಯಾರಾತ್~ (ಸಮರ್ಪಣ ಭಾವದ) ಆಚರಣೆ ನಡೆಯುತ್ತದೆ.ಗಂಧದ ಅರ್ಪಣೆ ದಿನ ಗುಲ್ಬರ್ಗದ ಸಾರ್ವಜನಿಕ (ಪಬ್ಲಿಕ್ ಗಾರ್ಡನ್) ಉದ್ಯಾನದಿಂದ ಗಂಧದ ಮೆರವಣಿಗೆ ಆರಂಭವಾಗುತ್ತದೆ. ಅಲ್ಲಿಂದ ನೇರವಾಗಿ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ತೆರಳಿ ಅಲ್ಲಿರುವ ಗೋರಿಗೆ ಗಂಧ ಹಚ್ಚಲಾಗುತ್ತದೆ. ದೇವರು-ಭಕ್ತ ಸಮಾಗಮನದ ವಿವಾಹದಲ್ಲಿ  ಭಕ್ತ ಅಡಕ ವಾಗಿರುವ ಗೋರಿಯನ್ನೇ ವಧು ಎಂದು ಕಲ್ಪಿಸಿಕೊಂಡು ಮದುವೆ ಹೆಣ್ಣನ್ನು ಹೇಗೆ ಸಿಂಗಾರ ಮಾಡುತ್ತಾರೋ ಹಾಗೆ ಅಲಂಕರಿಸುತ್ತಾರೆ. ಇದರ ಮರುದಿನ ಚಿರಾಗ್ ಆಚರಣೆ ನಡೆಯುತ್ತದೆ.ಹೆಣ್ಣು- ಗಂಡನನ್ನು ಸೇರುವ ಅಥವಾ ಸಮಾಗಮದ ಹಂತದಲ್ಲಿ ನಡೆಯುವ ಪರಿಶುದ್ಧತೆ, ಶುದ್ಧೀಕರಣದ ಸಂಕೇತ. ಅಂದು ಇಡೀ ರಾತ್ರಿ ಕವಾಲಿಗಳನ್ನು ಹಾಡಲಾಗುತ್ತದೆ. ಇದರ ಅಂಗವಾಗಿಯೇ `ಜಿಯಾರಾತ್~ ಮಾಡಲಾಗುತ್ತದೆ. ಜಿಯಾರತ್ ಆಚರಣೆ ಸಂದರ್ಭದಲ್ಲಿ ಗೋರಿಗಳಿಗೆ ಹೋಗಿ ಫಾತೀಯಾ ಮಾಡುವ ಕಾರ್ಯಕ್ರಮವಿರುತ್ತದೆ ಎನ್ನುತ್ತಾರೆ ಸೂಫಿ ಪಂಥದ ಕಾರ್ಯಕರ್ತ ಸೈಯದ್ ರೋಫ್ ಖಾದ್ರಿ.ಬೆಳಕನ್ನು ಬಳಸಿ ಭಕ್ತನಿಗೆ ಪರಮಾತ್ಮನನ್ನು ಸೇರುವ ಹಾದಿ ತೋರುವ ಚಿರಾಗ್ ಆಚರಣೆ ಮುಕ್ತಿ ಮಾರ್ಗದ ಪ್ರತೀಕ. ಕತ್ತಲಿನಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ, ಅಸತ್‌ನಿಂದ ಸತ್‌ನ ಕಡೆಗೆ ಸಾಗುವ ದೀವಳಿಗೆ ಹಬ್ಬದ ಸಂದರ್ಭದಲ್ಲೇ ನಡೆಯುವ `ಚಿರಾಗ್~ ಸರ್ವಧರ್ಮ ಭಾವೈಕ್ಯದ ಸಂಕೇತವಾಗಿ ಪ್ರತಿವರ್ಷ ನಡೆಯುತ್ತದೆ.ಏನಿದು ಉರುಸ್?

ಸಾಕಷ್ಟು ಜನರಿಗೆ ಉರುಸ್ ಆಚರಣೆ ಎಂದರೆ ಏನೆಂದು ತಿಳಿದಿಲ್ಲ. ಉರುಸ್ ಸತ್ತ ಸಂತರಿಗೆ ಸೂಚಿಸುವ ಗೌರವ ಅಷ್ಟೇ ಎನ್ನುವುದು ಕೆಲವರ ನಂಬಿಕೆ. `ಉರುಸ್ ಎಂಬ ಪದ ಮದುವೆ ಎಂಬ ಅರ್ಥ ನೀಡುತ್ತದೆ.

 

ಇಲ್ಲಿ ದೇವರು ಮತ್ತು ಭಕ್ತನ ನಡುವಿನ ಸಮಾಗಮವೇ ಉರುಸ್~ ಎಂಬುದು ಈ ಭಾಗದ ಜನರ ವಿಶ್ವಾಸ. ಶುಕ್ರವಾರದಿಂದ ಗುಲ್ಬರ್ಗದಲ್ಲಿ ಖ್ವಾಜಾ ಬಂದೇ ನವಾಜ್ ಅವರ `ಉರುಸ್-ಇ-ಶರೀಫ್~ ನಡೆಯುತ್ತಿದೆ. ಮುಸ್ಲಿಮ್ ಪಂಥಗಳಲ್ಲಿ ಸೂಫಿ ಕೂಡ ಒಂದು.ಸೂಫಿ  ಪಂಥದಲ್ಲಿ ಪ್ರಾದೇಶಿಕತೆಯನ್ನು ಅಪ್ಪಿಕೊಳ್ಳಲಾಗುತ್ತದೆ. ತಮ್ಮದೇ ಆದಂತಹ ಆಚಾರ-ವಿಚಾರಗಳನ್ನು ಹೊಂದಿರುವುದು ಇವರ ಪ್ರತ್ಯೇಕತೆ. ಸೂಫಿ ಪಂಥ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಒತ್ತುಕೊಟ್ಟು ಜನಸಾಮಾನ್ಯರ ಬದುಕನ್ನು ಸ್ವೀಕರಿಸಿದೆ. ವಾಸ್ತವತೆಗೆ ಹೆಚ್ಚು ಮಹತ್ವವನ್ನು ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry