ದರ್ಬಾರ್ ಹಾಲ್‌ಗೆ ಹೊಸ ಕಳೆ

5

ದರ್ಬಾರ್ ಹಾಲ್‌ಗೆ ಹೊಸ ಕಳೆ

Published:
Updated:

ನವದೆಹಲಿ (ಪಿಟಿಐ): ಜವಾಹರ್ ಲಾಲ್ ನೆಹರು ಅವರು ದೇಶದ ಮೊದಲ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿ ಭವನದ ಐತಿಹಾಸಿಕ ದರ್ಬಾರ್ ಹಾಲ್ ಹೊಸ ರೂಪ ಪಡೆದುಕೊಂಡಿದೆ. ಹಲವು ತಿಂಗಳಿಂದ ನಡೆಯುತ್ತಿದ್ದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಈಗ ಅದು ಕಳೆಗಟ್ಟಿದೆ.ಇಲ್ಲಿನ ಹಲವು ಐತಿಹಾಸಿಕ ಸ್ಥಳಗಳನ್ನು ನವೀಕರಿಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸೂಚನೆ ನೀಡಿದ್ದಾರೆ. ಅದರಲ್ಲಿ ದರ್ಬಾರ್ ಹಾಲ್ ಕೂಡ ಸೇರಿದೆ.ರಾಷ್ಟ್ರಪತಿ ಭವನದ ಹೃದಯ ಭಾಗದಲ್ಲಿರುವ ದರ್ಬಾರ್ ಹಾಲ್ ಅನ್ನು 1913ರಲ್ಲಿ ಎಡ್ವಿನ್ ಲುತೆನ್ ವಿನ್ಯಾಸಗೊಳಿಸಿದ್ದರು. ಇದನ್ನು ಪದ್ಮ ಪ್ರಶಸ್ತಿ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪದವಿ ಪ್ರದಾನ ಮಾಡುವುದಕ್ಕಾಗಿ ಬಳಸಲಾಗುತ್ತಿತ್ತು.ದರ್ಬಾರ್ ಹಾಲ್ ನವೀಕರಣ ಕಾರ್ಯ ಪೂರ್ಣಗೊಂಡ ಬಳಿಕ ಮೊದಲ ಬಾರಿಗೆ ಗುರುವಾರ ಸಂಜೆ ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 131 ದೇಶಗಳ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಇತರ ಅತಿಥಿಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮಾತನಾಡಿದರು.ಡಿಸೆಂಬರ್ 20ರಿಂದ ಎರಡು ದಿನ ನಡೆಯಲಿರುವ ಒಂಬತ್ತನೇ ಆಸಿಯಾನ್-ಭಾರತ ಶೃಂಗಸಭೆ ನೆನಪಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಇದೇ ಹಾಲ್‌ನಲ್ಲಿ ಆಯೋಜಿಸುವ ಸಾಧ್ಯತೆ ಇದೆ. ಈ ಹಾಲ್‌ನಲ್ಲಿ 33 ಮೀಟರ್ ಎತ್ತರದಲ್ಲಿ ಎರಡು ಟನ್ ಭಾರದ ಅಲಂಕೃತ ದೀಪಧಾರೆ ಆಕರ್ಷಣೆಯ ಕೇಂದ್ರ.1947ರ ಆಗಸ್ಟ್ 15ರಂದು ದರ್ಬಾರ್ ಹಾಲ್‌ನಲ್ಲಿಯೇ ನೆಹರು ಅವರು ದೇಶದ ಮೊದಲ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಿ. ರಾಜಗೋಪಾಲಾಚಾರಿ ಕೂಡ ಇಲ್ಲಿಯೇ ಭಾರತದ ಮೊದಲ ಗವರ್ನರ್ ಜನರಲ್ ಆಗಿ ಪ್ರಮಾಣ ತೆಗೆದುಕೊಂಡಿದ್ದರು.ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮ್ಮದ್ ಅವರು ನಿಧನ ಹೊಂದಿದಾಗ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಲ್ಲಿಯೇ ಇಡಲಾಗಿತ್ತು.

`ಇಷ್ಟು ದಿನ ದುರದೃಷ್ಟವಶಾತ್ ದರ್ಬಾರ್ ಹಾಲ್ ಅನ್ನು ಬಳಸುತ್ತಿರಲಿಲ್ಲ. ಆದರೆ, ಹಲವು ತಿಂಗಳ ಕಠಿಣ ಕಾರ್ಯದ ನಂತರ ಮತ್ತೆ ಹೊಸ ರೂಪ ಪಡೆದುಕೊಂಡಿದೆ.ಹೊಸ ಧ್ವನಿ ಬೆಳಕಿನ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯ ಕಲ್ಪಿಸಲಾಗಿದೆ' ಎಂದು ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ವೇಣು ರಾಜಮೋನಿ ಶುಕ್ರವಾರ ಇಲ್ಲಿ ತಿಳಿಸಿದರು.ರಾಷ್ಟ್ರಪತಿಯವರಿಗೆ ಐತಿಹಾಸಿಕ ಸ್ಥಳಗಳ ಬಗ್ಗೆ ವಿಶೇಷ ಒಲವಿದೆ. ರಾಷ್ಟ್ರಪತಿ ಭವನಕ್ಕೆ ಹಿಂದಿನ ವೈಭವ ತಂದುಕೊಡಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವಂತೆ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇತರ ಕಾರ್ಯಕ್ರಮಗಳು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಈ ಹಾಲ್‌ನಲ್ಲಿಯೇ ಆತಿಥ್ಯ ನೀಡಲು ರಾಷ್ಟ್ರಪತಿಯವರು ಉದ್ದೇಶಿಸಿದ್ದಾರೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry