ಗುರುವಾರ , ಮೇ 13, 2021
18 °C

ದರ್ಶನ್ ದಂಪತಿ ವಿವಾದ: ಚಿತ್ರನಟರ ರಾಜಿ ಯತ್ನ ನ್ಯಾಯಾಂಗ ನಿಂದನೆಯೇ?

ಸುಚೇತನಾ ನಾಯ್ಕ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಚಿತ್ರನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ರಾಜಿ ಸಂಧಾನ ನಡೆಸಲು ಪ್ರಯತ್ನಿಸಿರುವ ಚಿತ್ರನಟರಾದ ಅಂಬರೀಷ್, ಜಗ್ಗೇಶ್, ವಿಜಯ್ ಹಾಗೂ ಇತರರು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಸಾಧ್ಯತೆ ಇದೆ.ಕಾರಣ, ನ್ಯಾಯಾಲಯದಲ್ಲಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವಾಗ, ಅದರ ಮಧ್ಯೆ ಇವರು ಪ್ರವೇಶ ಮಾಡಿದ್ದಾರೆ ಎಂಬ ಆರೋಪ. ಈ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕ್ರಿಮಿನಲ್ ಮೊಕದ್ದಮೆ ಹೂಡಲು ವಕೀಲ ಎ.ವಿ.ಅಮರನಾಥನ್ ನಿರ್ಧರಿಸ್ದ್ದಿದು, ಈ ಕುರಿತು ದಾಖಲೆಗಳನ್ನು ಕಲೆಹಾಕಿದ್ದಾರೆ.ನ್ಯಾಯಾಂಗ ನಿಂದನೆ ಏಕೆ?: ನ್ಯಾಯಾಂಗ ನಿಂದನೆ ಎಂದರೆ ನ್ಯಾಯಾಲಯದ ಮಧ್ಯೆ ಅನಗತ್ಯ ಪ್ರವೇಶ ಮಾಡುವುದು. ಈ ಪ್ರಕರಣದಲ್ಲಿಯೂ ಈ ಚಿತ್ರನಟರು ಇದೇ ತಪ್ಪು ಎಸಗಿದ್ದಾರೆ ಎನ್ನುವುದು ಅಮರನಾಥನ್ ಅವರ ಆರೋಪ.`ಪತಿಯಿಂದ ಗಂಭೀರವಾಗಿ ಹಲ್ಲೆಗೆ ಒಳಗಾದ ವಿಜಯಲಕ್ಷ್ಮಿ ಈ ಕುರಿತು ವೈದ್ಯರ ಮುಂದೆ ಹೇಳಿಕೆ ನೀಡಿದರು. ಈ ಹೇಳಿಕೆಯ ದಾಖಲೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

  ಯಾವುದೇ ಒಂದು ಪ್ರಕರಣವು ಪೊಲೀಸರ ಮುಂದೆ ಹೋದ ತಕ್ಷಣ ಅಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿ ಅದನ್ನು 24 ಗಂಟೆ ಒಳಗೆ ಕೋರ್ಟ್‌ಗೆ ನೀಡಲಾಗುತ್ತದೆ.   ಒಮ್ಮೆ ಕೋರ್ಟ್‌ಗೆ ದೂರು ದಾಖಲಾದ ತಕ್ಷಣ ಅದು ಕೋರ್ಟ್ ವ್ಯಾಪ್ತಿಗೆ ಒಳಪಡುತ್ತದೆ. ಇದರ ಮಧ್ಯೆ ಪ್ರವೇಶ ಮಾಡುವ ಅಧಿಕಾರ ಯಾರಿಗೂ ಇಲ್ಲ.`ಆದರೆ, ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಅವರ ದೂರಿನ ಅನ್ವಯ ಇದೇ 8ರಂದು ಬೆಳಿಗ್ಗೆ ಸುಮಾರು 3.30ಕ್ಕೆ ಎಫ್‌ಐಆರ್ ದಾಖಲಾಗಿದ್ದು, ಅದೀಗ ಕೋರ್ಟ್‌ಗೆ ಬಿಟ್ಟ ವಿಷಯ. ಕೋರ್ಟ್ ಆದೇಶ ಹೊರಡಿಸುವ ಮುಂಚೆಯೇ ಈ ನಟರು ರಾಜಿ ಸಂಧಾನಕ್ಕೆ ಪ್ರಯತ್ನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಟರ ಹೇಳಿಕೆಗಳ ಕುರಿತು ಸಾಕ್ಷಿಗಳಿವೆ. ಇದು ನ್ಯಾಯಾಂಗ ನಿಂದನೆ ಆಗಿದೆ. ದೂರುದಾರರ ಮೇಲೆ ಒತ್ತಡ ಹಾಕುವುದು, ಕೇಸನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕುವುದು ಇವೆಲ್ಲ ಅಪರಾಧ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.ರಾಜಿ ಸಂಧಾನ ಸಾಧ್ಯವಿಲ್ಲ: ಈ ಮಧ್ಯೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) 307 (ಕೊಲೆ ಯತ್ನ) ಹಾಗೂ 498ಎ (ಕೌಟುಂಬಿಕ ದೌರ್ಜನ್ಯ) ಪ್ರಕರಣಗಳಲ್ಲಿ ಕೋರ್ಟ್ ಆದೇಶ ಹೊರಡಿಸುವ ಪೂರ್ವದಲ್ಲಿ ದಂಪತಿ ಮಧ್ಯೆ ರಾಜಿ ಸಂಧಾನಕ್ಕೆ ಅವಕಾಶ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತ.ಈ ಕುರಿತು ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು, 498ಎ ಅಡಿ ದಾಖಲಾಗುವ ದೂರುಗಳು `ರಾಜಿ ಸಂಧಾನಕ್ಕೆ ಯೋಗ್ಯ~ ಎಂದು ಪರಿಗಣಿಸುವಂತೆ ಕಾನೂನು ಆಯೋಗಕ್ಕೆ ವಿಪರೀತ ಒತ್ತಡಗಳು ಬರುತ್ತಿವೆ. ಆದರೆ ಆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಕಾರಣ, ರಾಜಿಗೆ ಕಾನೂನಿನ ಅಡಿ ಅವಕಾಶ ಇಲ್ಲ~ ಎಂದರು.ಮಾಜಿ ನ್ಯಾಯಮೂರ್ತಿ ರವಿ ಬಿ. ನಾಯಕ್ ಹಾಗೂ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರ ಪ್ರಕಾರ, ಯಾವುದೇ ಪ್ರಕರಣದಲ್ಲಿ ಕೊಲೆಗೆ ಯತ್ನ ನಡೆಸಿರುವುದು ಸಾಬೀತಾದರೆ ಅದಕ್ಕೆ ಜೀವಾವಧಿ ಶಿಕ್ಷೆಯಾಗುತ್ತದೆ. ಇಂತಹ ಪ್ರಕರಣದಲ್ಲಿ ರಾಜಿಯ ಪ್ರಶ್ನೆ ಇಲ್ಲ.ಒಂದು ವೇಳೆ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಸಂದರ್ಭದಲ್ಲಿ ಮಾತ್ರ ದೂರನ್ನು ನ್ಯಾಯಾಲಯ ರದ್ದು ಮಾಡಬಹುದು.ಇದೇ ಅಭಿಪ್ರಾಯ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರದ್ದು. ಅವರ ಪ್ರಕಾರ ಈ ಪ್ರಕರಣವನ್ನು ಪೊಲೀಸರು ಅಷ್ಟು ಸುಲಭದಲ್ಲಿ ಮುಚ್ಚಿಹಾಕಲು ಆಗುವುದಿಲ್ಲ.ಇದರ ಸತ್ಯಾಸತ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸಬೇಕು. ವಿಜಯಲಕ್ಷ್ಮಿ ಅವರು ವೈದ್ಯರಲ್ಲಿ ನೀಡಿರುವ ಹೇಳಿಕೆಗಳು ಈಗ ದಾಖಲೆ. ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ತನಿಖಾಧಿಕಾರಿ ಪ್ರಕರಣವನ್ನು ಮುಂದುವರಿಸಬೇಕಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.