ದರ ಏರಿಕೆಯ ಹೊಡೆತ

7

ದರ ಏರಿಕೆಯ ಹೊಡೆತ

Published:
Updated:

ಯಾವುದೇ ಮುನ್ಸೂಚನೆ ನೀಡದೆ ಬಸ್ ಪ್ರಯಾಣ ದರವನ್ನು ಮಧ್ಯರಾತ್ರಿ ಏರಿಕೆ ಮಾಡುವ ಚಾಳಿಯನ್ನು ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ಮತ್ತೊಮ್ಮೆ ಮುಂದುವರಿಸಿವೆ.

 

ಈ ಮೂಲಕ ಪ್ರಯಾಣಿಕರಿಗೆ ಇನ್ನೊಂದು ಹೊಡೆತ ಕೊಟ್ಟಿವೆ. ಆದರೆ ಈ ಸಲದ್ದು ಭಾರೀ ಏರಿಕೆಯ ಹೊರೆ. ಇದರಿಂದ ಪ್ರಯಾಣ ದರ ಶೇ 12ರಷ್ಟು ಹೆಚ್ಚಿದೆ. ಕಳೆದ ತಿಂಗಳು ಕೇಂದ್ರ ಸರ್ಕಾರ ಡೀಸೆಲ್ ದರವನ್ನು ಲೀಟರ್‌ಗೆ 5 ರೂಪಾಯಿಯಷ್ಟು ಹೆಚ್ಚಿಸಿತ್ತು.ಆ ಸಂದರ್ಭದಲ್ಲಿ `ಬಸ್ ದರ ಏರಿಕೆಯ ಆಲೋಚನೆಯೇ ಇಲ್ಲ~ ಎಂದು ಸರ್ಕಾರ ಮತ್ತು ಸಾರಿಗೆ ಸಂಸ್ಥೆಗಳು ಹೇಳಿದ್ದು ಬರೀ ಬೊಗಳೆ ಎಂಬುದು ಶ್ರೀಸಾಮಾನ್ಯ ಪ್ರಯಾಣಿಕರಿಗೆ ಈಗ ಮನದಟ್ಟಾಗಿದೆ.  `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಡೀ ದೇಶದಲ್ಲಿಯೇ ಲಾಭ ಗಳಿಸುತ್ತಿರುವ ಏಕೈಕ ನಗರ ಸಾರಿಗೆ, ಕೆಎಸ್‌ಆರ್‌ಟಿಸಿ ಲಾಭದಲ್ಲಿದೆ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ನಿಗಮಗಳು ನಷ್ಟದಿಂದ ಹೊರಬರುವ ಹಾದಿಯಲ್ಲಿವೆ~ ಎಂದು ಸಾರಿಗೆ ಮಂತ್ರಿಗಳು, ಸಂಸ್ಥೆಯ ಅಧಿಕಾರಿಗಳು ಅವಕಾಶ ಸಿಕ್ಕಾಗಲೆಲ್ಲ ಹೇಳುತ್ತಲೇ ಬಂದ್ದ್ದಿದರು.ಹಾಗಿದ್ದರೆ ಈ ಲಾಭದ ಹಣದಲ್ಲಿ ಡೀಸೆಲ್ ದರ ಏರಿಕೆಯನ್ನು ಸರಿದೂಗಿಸಿಕೊಂಡು ಪ್ರಯಾಣ ದರ ಹೆಚ್ಚಳವನ್ನು ತಡೆಹಿಡಿಯಬಹುದಿತ್ತು. ಈಗಿನ ಸಂದರ್ಭದಲ್ಲಿ ದರ ಏರಿಕೆ ಸಹಿಸಲಾಗದಂಥ ಹೊರೆ ಎನ್ನಲು ಬಲವಾದ ಕಾರಣವೂ ಇದೆ.ಏಕೆಂದರೆ ಈಗ ರಾಜ್ಯದಲ್ಲಿ   ಮುಕ್ಕಾಲು ಪಾಲಿಗಿಂತ ಹೆಚ್ಚು ತಾಲ್ಲೂಕುಗಳು  ಬರದ ಸಂಕಷ್ಟಕ್ಕೆ ಸಿಲುಕಿವೆ. ಜನ ತುಂಬ ಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಯಾಣ ದರವನ್ನು ಶೇ 12ರಷ್ಟು ಹೆಚ್ಚಿಸಿರುವುದು ಮಾನವೀಯತೆಯ ಕ್ರಮವಲ್ಲ.ಕಳೆದ ಮೂರು ವರ್ಷದಿಂದ ದರ ಏರಿಕೆ ಎನ್ನುವುದು ವಾರ್ಷಿಕ ಶಾಸ್ತ್ರವಾಗಿದೆ. 2010ರಲ್ಲಿ ಸುಮಾರು ಶೇ 4.76, 2011ರಲ್ಲಿ ಶೇ 6.95ರಷ್ಟು ದರ ಹೆಚ್ಚಿಸಲಾಗಿತ್ತು. ಇತ್ತೀಚಿನ ಡೀಸೆಲ್ ದರ ಏರಿಕೆ ಮತ್ತು ನೌಕರರ ತುಟ್ಟಿಭತ್ಯ ಹೆಚ್ಚಳದಿಂದ ವರ್ಷಕ್ಕೆ 300 ಕೋಟಿ ರೂಪಾಯಿ ಹೊರೆ ಬೀಳುತ್ತದೆ ಎಂದು ಸಾರಿಗೆ ನಿಗಮಗಳು ಹೇಳುತ್ತಿವೆ.

 

ಸಾರ್ವಜನಿಕರಿಗೆ ಸೇವೆ ನೀಡುವ ಸರ್ಕಾರಿ ಸಂಸ್ಥೆಗಳು ಹಾನಿಯಲ್ಲಿ  ನಡೆಯಬೇಕು ಎನ್ನುವ ಅಭಿಪ್ರಾಯ ಯಾರಿಗೂ ಇಲ್ಲ. ಆದರೆ ಈ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಬಹುದಿತ್ತು.ಏಕೆಂದರೆ ತೈಲೋತ್ಪನ್ನಗಳ ದರ ಹೆಚ್ಚಿದಂತೆಲ್ಲ ಮಾರಾಟ, ಪ್ರವೇಶ ತೆರಿಗೆ ಮತ್ತಿತರ ಸುಂಕಗಳ ಪ್ರಮಾಣವೂ ಹೆಚ್ಚುತ್ತದೆ. ಅದು ನೇರವಾಗಿ ರಾಜ್ಯ ಸರ್ಕಾರದ ಬೊಕ್ಕಸ ಸೇರುತ್ತದೆ.  ಅನಾವಶ್ಯಕ ಖರ್ಚುಗಳ ನಿಯಂತ್ರಣ, ಇಂಧನ ದಕ್ಷತೆ, ಎಥೆನಾಲ್ ಬಳಕೆ ಹೆಚ್ಚಳ ಮುಂತಾದ ಪರ್ಯಾಯ ಮಾರ್ಗಗಳತ್ತ ನಿಗಮಗಳೂ ಗಮನ ಹರಿಸಬಹುದಿತ್ತು.

ದೇಶದ ಇತರೆಲ್ಲ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನಗರ ಸಾರಿಗೆ ಬಸ್ ಪ್ರಯಾಣ ದರ ಅತ್ಯಂತ ದುಬಾರಿ. ಇದನ್ನೆಲ್ಲ ಪರಿಗಣಿಸದೆ ದರ ಏರಿಕೆಯೊಂದೇ ಪರಿಹಾರ ಎಂದು ಭಾವಿಸಿರುವುದು ಒಳ್ಳೆಯ ಬೆಳವಣಿಗೆಯಂತೂ ಖಂಡಿತ ಅಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry