ಬುಧವಾರ, ಮೇ 12, 2021
17 °C

ದರ ಪರಿಷ್ಕರಣೆ ಅನಿವಾರ್ಯ: ಜೆಸ್ಕಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: 2011-12ನೇ ಸಾಲಿನಲ್ಲಿ ನಿರೀಕ್ಷಿಸಲಾದ 198 ಕೋಟಿ ರೂಪಾಯಿ ನಷ್ಟವನ್ನು ಸರಿದೂಗಿಸಲು ಪ್ರತಿ ಯೂನಿಟ್‌ಗೆ 88 ಪೈಸೆ ಏರಿಕೆ ಮಾಡಬೇಕಾಗಿರುವುದು ಅನಿವಾರ್ಯ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪೆನಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುನೀಶ್ ಮೌದ್ಗಿಲ್ ಹೇಳಿದರು.“ನಷ್ಟ ಅನುಭವಿಸಲು ನಿಗಮದ ಕಾರ್ಯವೈಖರಿ ಕಾರಣವಲ್ಲ; ಬದಲಾಗಿ ಗ್ರಾಹಕರಿಗೆ ಪೂರೈಸಲು ಅಧಿಕ ಪ್ರಮಾಣದ ವಿದ್ಯುತ್ ಖರೀದಿಸಿದ್ದೇ ಇದಕ್ಕೆ ಕಾರಣ” ಎಂದು ಅವರು ಪ್ರತಿಪಾದಿಸಿದರು.ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಶುಕ್ರವಾರ ಇಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ಅಹವಾಲು ಸಭೆಗೆ ಮುನ್ನ ಅವರು ನಿಗಮದ ಲೆಕ್ಕಾಚಾರ ಮಂಡಿಸಿದರು. ಕಳೆದ ವರ್ಷ ನಷ್ಟದ ಪ್ರಮಾಣ ರೂ. 300 ಕೋಟಿ ಇದ್ದರೆ ಈ ಸಲ ಅದು 198 ಕೋಟಿಗೆ ಇಳಿದಿದೆ ಎಂಬ ಮಾಹಿತಿ ನೀಡಿದರು.“ಆರು ಜಿಲ್ಲೆಗಳಲ್ಲಿ 33 ಲಕ್ಷ ಗ್ರಾಹಕರನ್ನು ಹೊಂದಿರುವ ಜೆಸ್ಕಾಂ, ಈ ವರ್ಷ ರೂ. 2,400 ಕೋಟಿ ವಹಿವಾಟು ನಡೆಸಿದ್ದು, 7,000 ದಶಲಕ್ಷ ಯೂನಿಟ್ ಬೇಡಿಕೆ ಇರುವ ಸಾಧ್ಯತೆಯಿದೆ. ಕಳೆದ ವರ್ಷ ಈ ಪ್ರಮಾಣ 6,300 ದಶಲಕ್ಷ ಯೂನಿಟ್ ಇತ್ತು. ಹಾಗಾಗಿ ಹೆಚ್ಚುವರಿ 7000 ದಶಲಕ್ಷ ಯೂನಿಟ್ ಖರೀದಿಸಬೇಕಾಗಿದೆ” ಎಂದು ಮೌದ್ಗಿಲ್ ವಿವರಿಸಿದರು.ಪ್ರತಿ ಯೂನಿಟ್‌ಗೆ ರೂ. 5 ಕೊಟ್ಟು ಖರೀದಿಸಿದ ಬಳಿಕ, ಅದನ್ನು ಗ್ರಾಹಕರಿಗೆ 3.5 ರೂಪಾಯಿ ದರದಲ್ಲಿ ಕೊಡಲಾಗುತ್ತದೆ. ಅಂದರೆ ಯೂನಿಟ್‌ಗೆ ಒಂದೂವರೆ ರೂಪಾಯಿ ಅಧಿಕ ದರ ಜೆಸ್ಕಾಂಗೆ ಹೊರೆ ಬೀಳುತ್ತಿದ್ದು, ಈ ದರದಲ್ಲಿ ಖರೀದಿಸಲು ರೂ. 75 ಕೋಟಿ ಹೆಚ್ಚುವರಿ ಹಣ ಅಗತ್ಯವಿದೆ ಎಂದು ಅವರು ತಿಳಿಸಿದರು.

ಆಯೋಗದ ನಿರ್ದೇಶನದ ಪ್ರಕಾರ, ಈಗಾಗಲೇ ಶೇ. 37ರಷ್ಟು ಟಿ.ಸಿ.ಗಳಿಗೆ ಮೀಟರ್ ಅಳವಡಿಸಲಾಗಿದೆ. ಅಕ್ರಮ ಐಪಿ ಸೆಟ್ ಸಕ್ರಮಕ್ಕೆ 17,000 ಅರ್ಜಿ ಬಂದಿದ್ದು, ಆರು ತಿಂಗಳೊಳಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೌದ್ಗಿಲ್ ಭರವಸೆ ನೀಡಿದರು.ಪರಿಹಾರ ಏನು?

ಗುಲ್ಬರ್ಗ:
“ಇತ್ತ ದರ ಏರಿಕೆ ಮಾಡುವುದು ಬೇಡ ಎನ್ನುತ್ತೀರಿ. ಅತ್ತ ಉತ್ಪಾದನೆ ಕಡಿಮೆಯಾದಾಗ ಅಧಿಕ ದರ ಕೊಟ್ಟು ಎಸ್ಕಾಂಗಳು ಖರೀದಿ ಮಾಡುವುದು ಬೇಡ ಅನ್ನುತ್ತೀರಿ. ಹಾಗಾದರೆ ಇದಕ್ಕೆ ಪರಿಹಾರ ಏನು...?”- ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಪ್ರಶ್ನೆ ಇದು!ಶುಕ್ರವಾರ ಇಲ್ಲಿ ನಡೆದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ಅಹವಾಲು ಸಭೆಯಲ್ಲಿ ಎಫ್‌ಕೆಸಿಸಿಐ ಪ್ರತಿನಿಧಿ ಶ್ರೀಧರ ಪ್ರಭು ಅವರು, ಜೆಸ್ಕಾಂನ ಪ್ರಸ್ತಾವಗಳನ್ನು ಒಂದೊಂದಾಗಿ ತಳ್ಳಿ ಹಾಕುತ್ತಿದ್ದ ಸಂದರ್ಭದಲ್ಲಿ ಅಧ್ಯಕ್ಷರು ಈ ಪ್ರಶ್ನೆ ಹಾಕಿದರು.ಆಗ ಪರಿಸರವಾದಿ ದೀಪಕ್ ಗಾಲಾ ಮಾತನಾಡಿ, “ಬೇಡಿಕೆ ಇದ್ದಾಗ ಧಾವಿಸಿ ಖರೀದಿಸುವ ಬದಲಿಗೆ ಮೊದಲೇ ನಿರ್ಧರಿಸಿ ಖರೀದಿಸುವುದು ಒಳ್ಳೆಯದು. ಇದಕ್ಕೊಂದು ನೀತಿ ರೂಪಿಸಬೇಕು” ಎಂದು ನುಡಿದರು. ಇದಕ್ಕೆ ಅಧ್ಯಕ್ಷರು “ಆಗಲೇ ಆಯೋಗ ಸ್ಪಷ್ಟ ನಿರ್ದೇಶನ ನೀಡಿದೆ” ಎಂದಾಗ, ದೀಪಕ್ ಗಾಲಾ “ಆದರೆ ಅದು ಪಾಲನೆಯಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.“ಈ ಸಮಸ್ಯೆಗೆ ಪರಿಹಾರ ಹುಡುಕಲು ಕೈಗಾರಿಕೆಗಳ ಒಕ್ಕೂಟ ಗಂಭೀರ ಸಲಹೆ ಕೊಡುವಂತೆ ಹೇಳಿ” ಎಂದು ಶ್ರೀನಿವಾಸಮೂರ್ತಿ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.