ದರ ಸಮರ: ಅಗ್ಗದ ಬೆಲೆಗೆ ಐಪ್ಯಾಡ್

ಶನಿವಾರ, ಜೂಲೈ 20, 2019
24 °C

ದರ ಸಮರ: ಅಗ್ಗದ ಬೆಲೆಗೆ ಐಪ್ಯಾಡ್

Published:
Updated:

 ನೀವು ಆ್ಯಪಲ್ ಕಂಪೆನಿಯನ್ನು ಇಷ್ಟಪಡಬಹುದು ಇಲ್ಲವೇ ದೂಷಿಸಬಹುದು. ಆದರೆ ಒಂದಂತೂ ನಿಜ; ಅದರ ಅಚ್ಚುಮೆಚ್ಚಿನ ಆಟ ಎಂದರೆ ಸದಾ ಉದ್ಯಮದ ನಾಯಕನಾಗಿರುವುದು.

 

ಹಾಗೆಯೇ ಉದ್ಯಮದ ಮೆಚ್ಚಿನ ಆಟ ಎಂದರೆ ಅದು ಆ ನಾಯಕನ ಅನುಯಾಯಿ ಯಾಗಿರುವುದು. ಸ್ಟೀವ್ ಜಾಬ್ಸ್ ಯಾವತ್ತಿಗೂ ಅನುಕರಣೆ ಇಷ್ಟಪಡುತ್ತಿರಲಿಲ್ಲ!

`ಗೂಗಲ್ ಐಫೋನ್ ಅನ್ನು ಆವರಿಸಿಕೊಂಡದ್ದಷ್ಟೇ ಅಲ್ಲ, ನಮ್ಮನ್ನೂ ಅತಿಕ್ರಮಿಸಿತು. ನಾನು ಗೂಗಲ್ ಆಂಡ್ರಾಯ್ಡ ಸಾಫ್ಟ್‌ವೇರ್ ನಾಶ ಮಾಡುತ್ತೇನೆ. ಏಕೆಂದರೆ ಅದೊಂದು ಕದ್ದ ಮಾಲು~...ಜಾಬ್ಸ್ ತಮ್ಮ ಜೀವನಚರಿತ್ರೆ ಬರೆಯುತ್ತಿದ್ದ ವಾಲ್ಟರ್ ಇಸಾಕ್ಸನ್ ಅವರಿಗೆ ಹೇಳಿದ್ದ ಮಾತಿದು.ಆದರೆ ಇಂಥ ಅನುಕರಣೆ ಕುರಿತಂತೆ ಒಳ್ಳೆಯ ಅಭಿಪ್ರಾಯವೂ ಇದೆ. ಅನುಕರಣೆ ಸಾಧ್ಯವಾಗದೇ ಹೋಗಿದ್ದರೆ ಆ್ಯಪಲ್ ಒಂದೇ ಐಫೋನ್ ಮಾರುಕಟ್ಟೆಯಲ್ಲಿ ವಿಜೃಂಭಿಸಬೇಕಿತ್ತು ಅಥವಾ ಇಡೀ ಮಾರುಕಟ್ಟೆ ಆ್ಯಪಲ್ ನಿಯಂತ್ರಣದಲ್ಲಿರಬೇಕಿತ್ತು ಎಂದು ಯಾರು ಬೇಕಾದರೂ ವಾದಿಸಬಹುದು.ಹೀಗೆ ವಿಶಾಲ ದೃಷ್ಟಿಕೋನದಲ್ಲಿ ಯೋಚಿಸುವುದಾದರೆ ಹೊಸ ಉತ್ಪನ್ನವೊಂದರ ಕುರಿತ ಗೂಗಲ್ ಘೋಷಣೆ ಒಳ್ಳೆಯ ಸುದ್ದಿಯಾಗಿ ಕಾಣುತ್ತಿದೆ.  ವಿವಿಧ ಅಪ್ಲಿಕೇಷನ್ ಟ್ಯಾಬ್‌ಗಳು, ಇ- ಬುಕ್ಸ್, ಟಿವಿ ಕಾರ್ಯಕ್ರಮಗಳು, ಚಲನಚಿತ್ರ, ಸಂಗೀತ, ಐಟ್ಯೂನ್ ಮುಂತಾದವುಗಳನ್ನು ಒಳಗೊಂಡ ಏಕೀಕೃತ ಆನ್‌ಲೈನ್ ಅಂಗಡಿಯೊಂದನ್ನು ಗೂಗಲ್ ಮೊದಲಿಗೆ ತೆರೆಯಿತು.

 

ಬಳಿಕ ಅದು ಟಿವಿಗೆ ಸಂಪರ್ಕ ಕಲ್ಪಿಸಿ ಸಂಗೀತ, ವಿಡಿಯೋಗಳನ್ನು ಆನಂದಿಸಬಹುದಾದ `ನೆಕ್ಸಸ್ ಕ್ಯೂ~ವನ್ನು ಪರಿಚಯಿಸಿತು. ಆ್ಯಪಲ್‌ನ ದಿ ಬ್ಲಾಕ್ ಸ್ಕ್ವೇರ್‌ನಂತೆಯೇ ಕೆಲಸ ಮಾಡುತ್ತದೆ `ಕ್ಯೂ~ನ ಬ್ಲ್ಯಾಕ್ ಸ್ಪಿಯರ್.ಗೂಗಲ್ ಮಾಡಿದ ಮತ್ತೊಂದು ಮಹತ್ವದ ಕೆಲಸವೆಂದರೆ `ನೆಕ್ಸಸ್7~ ಹೆಸರಿನ ಹೊಳೆವ ಕಪ್ಪು ಟ್ಯಾಬ್ಲೆಟ್ ಪರಿಚಯಿಸಿದ್ದು. ಆ ಮೂಲಕ ಅದು ಆ್ಯಪಲ್ ಐಪ್ಯಾಡ್ ಹಾಗೂ ಅಮೆಜಾನ್‌ನ `ಕಿಂಡಲ್ ಫೈರ್~ಗೆ ಸವಾಲೆಸೆಯಿತು. (ನೆಕ್ಸಸ್ ಫೋನ್, ನೆಕ್ಸಸ್ ಟ್ಯಾಬ್ಲೆಟ್, ನೆಕ್ಸಸ್ ಸ್ಫಿಯರ್ ಥಿಂಗ್; ಅಂತೂ ಇಂತೂ ಗೂಗಲ್ ಯೋಚಿಸುತ್ತಿ ರುವುದೇನು? ಅದು ನಿಜಕ್ಕೂ ಆ್ಯಪಲ್ ಅನ್ನು ಅನುಕರಿಸುತ್ತಿದ್ದರೆ ಖಂಡಿತ ಅದು ಗೊಂದಲಗಳನ್ನು ಕಡಿಮೆ ಮಾಡಬೇಕೇ ವಿನಾ ಬೆಳೆಸಬಾರದು).ಕಿಂಡಲ್ ಫೈರ್‌ನ ಮುಖ್ಯ ಗುಣಲಕ್ಷಣ ಎಂದರೆ ಅದರ ಬೆಲೆ: ರೂ 11,100. ಐಪ್ಯಾಡ್ ಒಂದರ ಕನಿಷ್ಠ ಬೆಲೆಯೇ ರೂ. 27,732 ಇರುವಾಗ ಕಿಂಡಲ್ ಫೈರ್ ಇಷ್ಟು ಕಡಿಮೆ ಬೆಲೆಗೆ ಐಪ್ಯಾಡ್ ಒದಗಿಸುತ್ತಿರುವುದು ಅನೇಕರ ಕಣ್ಣರಳಿಸುವಂತೆ ಮಾಡಿದೆ. ಆದರೆ ಐಪ್ಯಾಡ್‌ಗೆ ಸರಿಸಾಟಿ ಎನ್ನುವಂತೆ ಫೈರ್ ಇಲ್ಲ ಎಂಬುದನ್ನು ಇಲ್ಲಿ ನೆನಪಿಡಬೇಕು. ಇದು ಏಳಿಂಚಿನ ಪುಟ್ಟ ಪರದೆ ಹೊಂದಿದ್ದು ಸ್ವಲ್ಪ ದಪ್ಪವೂ ಇದೆ.ಅಲ್ಲದೆ ಇದಕ್ಕೆ ಕ್ಯಾಮೆರಾ, ಮೈಕ್ರೊಫೋನ್, ಜಿಪಿಎಸ್ ವ್ಯವಸ್ಥೆ, ಬ್ಲೂಟೂತ್, ಹಾಗೂ ಮೆಮೊರಿ ಕಾರ್ಡ್ ಅಡಕ ಇಲ್ಲ ಎಂಬುದು ಗಮನಾರ್ಹ. ಅಮೆಜಾನ್‌ನಿಂದ ಖರೀದಿಸುವ ಪುಸ್ತಕಗಳು ಹಾಗೂ ವಿಡಿಯೊಗಳನ್ನು ತೋರಿಸಬಲ್ಲಷ್ಟು ಪ್ರಾಥಮಿಕ ಸಾಮರ್ಥ್ಯವನ್ನು ಮಾತ್ರ ಇದು ಹೊಂದಿದೆ.ಹಾಗೆಂದೇ `ಆಸಸ್~ನಿಂದ ತಯಾರಿಸಲಾದ ಗೂಗಲ್‌ನ ನೆಕ್ಸಸ್ ಐಪ್ಯಾಡ್‌ಗೆ ಎಲ್ಲಿಲ್ಲದ ಮಹತ್ವ. ಇದು ಕೂಡ ಏಳಿಂಚು ವಿಸ್ತೀರ್ಣದ ಪರದೆ ಹೊಂದಿದ್ದು, ರೂ. 11,100ಕ್ಕೆ ದೊರೆಯುತ್ತದೆ. ಆದರೆ ಫೈರ್‌ನಂತೆ ಇರದ ಇದರ ನುಣುಪಾದ, ದುಂಡನೆ ಮೂಲೆಯುಳ್ಳ ಬಾಹ್ಯರೂಪ ಬಲು ಸುಂದರ.ಹಾಗೆಯೇ ತೆಳುವಾದ ಹಿಂಬದಿ ಪ್ಯಾನೆಲ್ ಹಿಡಿಯಲು ಹಿತಕರ. ಕೇವಲ 2.6 ಔನ್ಸ್ ತೂಗುವ ಇದು ಫೈರ್‌ಗಿಂತಲೂ ಹಗುರ. ಫೈರ್‌ಗಿಂತ ತೆಳುವಾಗಿದ್ದರೂ ಐಪ್ಯಾಡ್‌ಗಿಂತ ತುಸು ಧಡೂತಿ ಮೈ ಇದರದ್ದು.ನೆಕ್ಸಸ್‌ನ ವಿಶೇಷ ಗುಣವೆಂದರೆ ನೀವು ಇಲ್ಲಿ ಕೇವಲ ಯಾರೋ ನೀಡಿದ್ದನ್ನು(ಅಪ್ಲಿಕೇಷನ್) ಪಡೆಯಬೇಕಿಲ್ಲ, ನಿಮಗೆ ಬೇಕಾದುದನ್ನು ಸೃಷ್ಟಿಸಿಕೊಳ್ಳಬಹುದು. ಅಲ್ಲದೆ ಸದ್ಯ ಚಾಲ್ತಿಯಲ್ಲಿರುವ ಉಳಿದ ಆ್ಯಂಡ್ರಾಯ್ಡ ಟ್ಯಾಬ್ಲೆಟ್ ಅಪ್ಲಿಕೇಷನ್‌ಗಳಲ್ಲಿಯೇ ಇದು ತುಂಬಾ ಕ್ಷಿಪ್ರ, ದಕ್ಷ ಹಾಗೂ ನಾಜೂಕಿನ ಕೆಲಸಗಾರ.ನೆಕ್ಸಸ್ ತನ್ನ ಎದುರಾಳಿ ಕಿಂಡಲ್ ಫೈರ್‌ಗೆ ಮಾತ್ರ ಸವಾಲೆಸೆದಿಲ್ಲ. ತನ್ನದೇ ಸೋದರ ಸೃಷ್ಟಿಯಂತಿರುವ ಆ್ಯಂಡ್ರಾಯ್ಡನ ಇತರ ಟ್ಯಾಬ್ಲೆಟ್ ಸ್ಪರ್ಧಾಳುಗಳನ್ನೂ ಹಿಂದಿಕ್ಕಿದೆ. ಉದಾಹರಣೆಗೆ ಇದರಂತೆಯೇ 8 ಗಿಗಾಬೈಟ್ ಮೆಮೊರಿ ಸಾಮರ್ಥ್ಯದ ಸ್ಯಾಮ್ಸಂಗ್‌ನ ಏಳಿಂಚಿನ ಆ್ಯಂಡ್ರಾಯ್ಡ ಟ್ಯಾಬ್ಲೆಟ್ ಗೆಲಾಕ್ಸಿ ಟ್ಯಾಬ್-2ರ ಬೆಲೆ 13,866 ರೂಪಾಯಿ.ಇಷ್ಟು ಕಡಿಮೆ ಬೆಲೆಗೆ ನೆಕ್ಸಸ್ ಲಭ್ಯವಾದದ್ದು ಹೇಗೆ? ಈ ಬಗ್ಗೆ ನಾನು ನೆಕ್ಸಸ್ ತಂಡದ ಸದಸ್ಯರನ್ನು ಕೇಳಿದಾಗ ಅವರು ಅನುಸರಿಸುತ್ತಿರುವ ಮಾರುಕಟ್ಟೆ ತಂತ್ರತಿಳಿಯಿತು. ರೇಜರ್‌ಗೆ ಕಡಿಮೆ ಬೆಲೆಯಿಟ್ಟು ಬ್ಲೇಡ್‌ಗಳನ್ನು ಹೆಚ್ಚು ಬೆಲೆಗೆ ಮಾರುವ ಬುದ್ಧಿವಂತಿಕೆಯ ಮಾದರಿಯನ್ನೇ ಇಲ್ಲಿಯೂ ಬಳಸಲಾಗಿದೆ.ನೆಕ್ಸಸ್ ಟ್ಯಾಬ್ಲೆಟ್ ನಿಮಗೆ ಕಡಿಮೆ ಬೆಲೆಗೆ ದೊರೆಯುತ್ತದೆ. ಆದರೆ ಅದು ಒದಗಿಸುವ ಪುಸ್ತಕಗಳು, ಸಂಗೀತ, ಚಲನಚಿತ್ರ ಹಾಗೂ ಟಿವಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೆಲೆ ತೆರಬೇಕು. ಕಾಸಿಗೆ ತಕ್ಕ ಕಜ್ಜಾಯ!ಹೇಗೇ ನೋಡಿದರೂ ನೆಕ್ಸಸ್7 ಕಡಿಮೆ ಬೆಲೆಗೆ ದೊರೆಯಬಹುದಾದ ಉತ್ತಮ ಟ್ಯಾಬ್ಲೆಟ್ ಎಂಬುದರಲ್ಲಿ ಅನುಮಾನವಿಲ್ಲ. ವೈಫೈ, ಬ್ಲೂಟೂತ್, ಒಂಬತ್ತು ಗಂಟೆ ಶಕ್ತಿಯೂಡುವ ಬ್ಯಾಟರಿ, ಕಾಂತಿಯುತ ಹಾಗೂ ತೀಕ್ಷ್ಣವಾದ ಪರದೆ, ಲೌಡ್ ಮೋನೊ ಸ್ಪೀಕರ್ ಹಾಗೂ ಜಿಪಿಎಸ್ ವ್ಯವಸ್ಥೆ ಇದರಲ್ಲಿದೆ. ಜಿಪಿಎಸ್ ನ್ಯಾವಿಗೇಟರ್ ಇದರ ಮತ್ತೊಂದು ವಿಶೇಷ.

ಆದರೆ ಹಾರ್ಡ್‌ವೇರ್‌ನಲ್ಲಿ ಕೆಲವು ತೊಡಕುಗಳಿವೆ.

 

ಪರದೆಯ ಮುಂಬದಿಯಲ್ಲಿರುವ ಕ್ಯಾಮೆರಾ ಹಿಂಬದಿಗೆ ಇಲ್ಲ. ಬ್ಯಾಟರಿಯನ್ನು ಬದಲಿಸಲು ಸಾಧ್ಯವಿಲ್ಲ. ಫೋನ್ ಮಾಡುವ ಅವಕಾಶವಿಲ್ಲ. ವೈ ಫೈ ಮುಖಾಂತರವೇ ಅಂತರ್ಜಾಲಕ್ಕೆ ಸಂಪರ್ಕ ಪಡೆಯಬೇಕು. ಇಲ್ಲಿಯೂ ಮೆಮೊರಿ ಕಾರ್ಡ್ ಅಡಕಕ್ಕೆ ಅವಕಾಶವಿಲ್ಲ. ಇರುವ 8 ಗೀಗಾಬೈಟ್ ಮೆಮೊರಿಯಲ್ಲೇ ನಿಮಗೆ ಬೇಕಾದುದೆಲ್ಲವನ್ನೂ ಸಂಗ್ರಹಿಸಿಡಬೇಕು.(ಹೆಚ್ಚುವರಿಯಾಗಿ ರೂ 2,773 ನೀಡಿದರೆ 16 ಗೀಗಾಬೈಟ್‌ನ ಮಾಡೆಲ್ ಲಭ್ಯವಿದೆ).

ಇಷ್ಟಾದರೂ ಇದು ಜೆಲ್ಲಿ ಬೀನ್ ಎಂದು ಕರೆಯಲಾಗುವ ಆ್ಯಂಡ್ರಾಯ್ಡ 4.1ನ ಹೊಸ ಆವೃತ್ತಿ. ಜೆಲ್ಲಿ ಬೀನ್ ಡಜನ್‌ಗಟ್ಟಲೆ ಹೊಸ ಫೀಚರ್‌ಗಳನ್ನು ಒದಗಿಸುತ್ತದೆ.ಇದರಲ್ಲಿ ಅಂತರ್ಜಾಲದ ಸಹಾಯವಿಲ್ಲದೆ ನಿಮಗೆ ಬೇಕಾದ ಪ್ರದೇಶದ ಭೂಪಟವನ್ನು ಸೇವ್ ಮಾಡಿಟ್ಟುಕೊಳ್ಳಬಹುದು. ಸಾಗರೋತ್ತರ ಯಾನ ಕೈಗೊಂಡಾಗ ಇದು ಬಲು ಉಪಯುಕ್ತ. ಹವಾಮಾನ, ಏರ್ ಟಿಕೆಟ್ ಇತ್ಯಾದಿ ಇತ್ಯಾದಿ ತಾಜಾ ಮಾಹಿತಿಗಳ ಖಜಾನೆಯೇ ಇಲ್ಲಿ ಲಭ್ಯ.ಆ್ಯಂಡ್ರಾಯ್ಡನ `ಟಾಕ್ ಟು ಟೈಪ್~ ಸೌಲಭ್ಯದಿಂದಾಗಿ ಅಂತರ್ಜಾಲ ಸಂಪರ್ಕ ಇಲ್ಲದೆಯೂ ಕೆಲ ಮಾಹಿತಿಗಳನ್ನು ಪಡೆಯಬಹುದು. ಈ ಸೌಲಭ್ಯ ಐಪ್ಯಾಡ್, ಐಫೋನ್‌ಗಳಲ್ಲಿ ಇಲ್ಲ. ಎಲ್ಲದಕ್ಕೂ ಮುಖ್ಯವಾದುದು ಇದರ ನಾಜೂಕು ಕಾರ್ಯಕ್ಷಮತೆ.ಉದಾಹರಣೆಗೆ ಅನಿಮೇಷನ್ ದೃಶ್ಯಗಳು ಕಿರುತೆರೆ, ಹಿರಿತೆರೆಯಲ್ಲಿ ಚಲಿಸುವಷ್ಟೇ ಸರಾಗವಾಗಿ ಇಲ್ಲಿಯೂ ಚಲಿಸಬಲ್ಲವು. ಅಲ್ಲದೆ ಐಪಾಡ್‌ನಂತೆಯೇ ಟಚ್‌ಸ್ಕ್ರೀನ್ ಸೌಲಭ್ಯ ಇಲ್ಲುಂಟು.ಬೇಸರದ ಸಂಗತಿಯೆಂದರೆ ಜೆಲ್ಲಿ ಬೀನ್‌ನಲ್ಲಿ ಆನ್‌ಲೈನ್ ಫ್ಲಾಷ್ ವಿಡಿಯೊಗಳು ಹೆಚ್ಚು ಕಾಲ ಉಳಿಯಲಾರವು. ಅಲ್ಲದೆ ಪರದೆಯನ್ನು ಪೋರ್ಟ್‌ರೇಟ್‌ನಿಂದ ಲ್ಯಾಂಡ್‌ಸ್ಕೇಪ್‌ಗೆ ಬದಲಿಸಿಕೊಳ್ಳುವುದು ಸಾಧ್ಯವಿಲ್ಲ. ಐಪ್ಯಾಡ್‌ನ ನಕಲು ಎಂಬ ಆರೋಪದಿಂದ ಹೊರಬರುವ ಉದ್ದೇಶದಿಂದಾಗಿ ಗೂಗಲ್ ನೆಕ್ಸಸ್‌ನಲ್ಲಿ ವಿಡಿಯೋ, ಸಂಗೀತ, ಹಾಗೂ ಪುಸ್ತಕಗಳ ಬಳಕೆಗೆ ಬೇರೆಯದೇ ತಂತ್ರದ ಮೊರೆ ಹೋಗಿದೆ.ಆದರೆ ಇದು ಆ್ಯಪಲ್ ಅನ್ನು ಸರಿಗಟ್ಟುವಲ್ಲಿ ಸಫಲವಾಗಿಲ್ಲ. ದುರದೃಷ್ಟದ ಸಂಗತಿಯೆಂದರೆ ಗೂಗಲ್ ತಯಾರಿಸಿರುವ ಆನ್‌ಲೈನ್ ಸ್ಟೋರ್ ಇನ್ನೂ ಅಂಬೆಗಾಲಿಡುತ್ತಿದೆ. ಆ್ಯಪಲ್ ಹಾಗೂ ಕಿಂಡಲ್ ಫೈರ್‌ಗೆ ಹೋಲಿಸಿದರೆ ಇದರ ಸ್ಟೋರ್‌ಗಳಲ್ಲಿ ದೊರೆಯುವ `ಸಾಮಗ್ರಿ~ ಅತ್ಯಲ್ಪ. ಉದಾಹರಣೆ ಅಮೆಜಾನ್ 600 ಡಿಜಿಟಲ್ ನಿಯತಕಾಲಿಕೆಗಳು ಹಾಗೂ ಸುದ್ದಿ ಪತ್ರಿಕೆಗಳನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ಗೂಗಲ್‌ಗೆ ಮೂರನೇ ಸ್ಥಾನ.ಗೂಗಲ್ `ಮ್ಯೂಸಿಕ್ ಸ್ಟೋರ್~ನಿಂದ ಕೂಡ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ. ಆ್ಯಪಲ್ ಹಾಗೂ ಅಮೆಜಾನ್ ಟ್ಯಾಬ್ಲೆಟ್‌ಗಳಲ್ಲಿ ಎಷ್ಟು ಬೇಕಾದರೂ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಂದು ಹಾಡನ್ನು ಎರಡು ಬಾರಿ ಖರೀದಿಸಿದ ನಂತರವಷ್ಟೇ ಗೂಗಲ್ ನಿಮಗೆ ಉಚಿತ ಡೌನ್‌ಲೋಡ್ ಸೇವೆ ಒದಗಿಸುತ್ತದೆ.ಇದರ ಮೂವಿ ಸ್ಟೋರ್‌ನಲ್ಲಿ ಫಾಕ್ಸ್ ಪ್ರೊಡಕ್ಷನ್, ಸಮ್ಮಿತ್ ಪ್ರೊಡಕ್ಷನ್ ಸಿನಿಮಾಗಳಿಗಿಂತ ಬೇರೇನೂ ದೊರೆಯುವುದಿಲ್ಲ. ಅಲ್ಲದೆ ಕೆಲವೇ ಟಿವಿ ಕಾರ್ಯಕ್ರಮಗಳು ಮಾತ್ರ ಲಭ್ಯ. ಎಲ್ಲಕ್ಕಿಂತ ಹೆಚ್ಚು ಚಿಂತೆ ತರುವುದೆಂದರೆ ಟ್ಯಾಬ್ಲೆಟ್‌ಗೆ ಹೇಳಿ ಮಾಡಿಸಿದ ಅಸಂಖ್ಯ ಅಪ್ಲಿಕೇಷನ್‌ಗಳು ಆ್ಯಪಲ್‌ನಲ್ಲಿ ಲಭ್ಯ. ಆದರೆ ನೆಕ್ಸಸ್‌ನಲ್ಲಿ ಇವುಗಳ ಕೊರತೆ ಎದ್ದು ಕಾಣುತ್ತದೆ. ಆದರೂ ನೆಕ್ಸಸ್ ಟ್ಯಾಬ್ಲೆಟ್ ಹೆಚ್ಚು ಆಪ್ಯಾಯಮಾನ. ಏಕೆಂದರೆ ಇದರ ನಾಜೂಕು ಸಾಫ್ಟ್‌ವೇರ್. ಮುಂದಿನ ದಿನಗಳಲ್ಲಿ ಇದರ ಜನಪ್ರಿಯತೆ ಹೆಚ್ಚಾದರೆ ಅನೇಕ ಮೂವಿ, ಆಡಿಯೊ, ವಿಡಿಯೊ ಕಂಪೆನಿಗಳು ಮುಂದೆ ಬಂದು ಸೌಲಭ್ಯಗಳನ್ನು ಒದಗಿಸಬಹುದು.ಅಲ್ಲಿಯವರೆಗೂ ಹಾರ್ಡ್‌ವೇರ್, ಸಾಫ್ಟ್‌ವೇರ್ ಹಾಗೂ ಸಂಗ್ರಹ ಕ್ಷೇತ್ರದ ರಾಜನಾಗಿ ಐಪ್ಯಾಡ್ ಮುಂದುವರಿಯಲಿದೆ. ಆದರೆ ಇದರ 9.7 ಇಂಚಿನ ಬೃಹತ್ ಪರದೆ ಎಲ್ಲೆಂದರಲ್ಲಿ ಕೊಂಡೊಯ್ಯಲು ಸೂಕ್ತವಾಗಿಲ್ಲ ಎನಿಸಿದರೆ ಇದಕ್ಕಿಂತ ಚಿಕ್ಕದಾದ, ಹಗುರವಾದ ಹಾಗೂ ಸುಲಭ ಬೆಲೆಗೆ ದಕ್ಕುವ ನೆಕ್ಸಸ್ ನಿಮಗೆ ಹೆಚ್ಚು ತೃಪ್ತಿ ನೀಡಬಲ್ಲದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry