ಶುಕ್ರವಾರ, ಡಿಸೆಂಬರ್ 6, 2019
18 °C

ದರ ಹೆಚ್ಚಿದೆ: ಬಾಕಿ ಬಂದಿಲ್ಲ

Published:
Updated:
ದರ ಹೆಚ್ಚಿದೆ: ಬಾಕಿ ಬಂದಿಲ್ಲ

ಸರ್ಕಾರ ರೈತರ ಅನುಕೂಲಕ್ಕಾಗಿ ಹಾಲಿನ ದರ ಏರಿಕೆ ಮಾಡಿದೆ; ಆದರೆ, ಇದೇ ಸರ್ಕಾರ ರೈತರಿಗೆ ನೀಡಬೇಕಾದ ಕೋಟ್ಯಂತರ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ ಐದು ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ. ಇತ್ತೀಚೆಗೆ ಸರ್ಕಾರ ಲೀಟರ್ ಹಾಲಿಗೆ ಮೂರು ರೂ ಏರಿಕೆ ಮಾಡಿದ್ದು, ಇದರಲ್ಲಿ 2.85 ಪೈಸೆ ಹಣವನ್ನು ರೈತರಿಗೆ ತಕ್ಷಣದಿಂದ ನೀಡಲು ಆದೇಶಿಸಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಬರೆ ಹಾಕಿದ ಸರ್ಕಾರ ತಾನು ರೈತರಿಗೆ ಕೊಡಬೇಕಾದ ಹಣವನ್ನು ಕೊಡಲು ಮಾತ್ರ ಮರೆತಿದೆ.ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ (ಶಿಮೂಲ್) ವ್ಯಾಪ್ತಿಯಲ್ಲಿ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿದ್ದು, ಇವುಗಳಿಂದ ಒಟ್ಟು ಅಂದಾಜು 42,000 ಹಾಲು ಹಾಕುವ ಸದಸ್ಯರಿದ್ದಾರೆ.ದಿನ ಒಂದಕ್ಕೆ ಶಿಮೂಲ್‌ಗೆ ಸರಾಸರಿ 2.35 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ 2 ರೂ ಪ್ರೋತ್ಸಾಹಧನ ಶಿಮೂಲ್ ವ್ಯಾಪ್ತಿಯ 42 ಸಾವಿರ ಸದಸ್ಯರಿಗೆ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಬಂದಿಲ್ಲ.ಶಿಮೂಲ್ ವ್ಯಾಪ್ತಿಯಲ್ಲಿನ ಸದಸ್ಯರಿಗೆ ಪ್ರತಿ ತಿಂಗಳು ಸರ್ಕಾರ ಅಂದಾಜು 1.40 ಕೋಟಿ ರೂ ಪ್ರೋತ್ಸಾಹಧನ ನೀಡಬೇಕಾಗುತ್ತದೆ. ಐದು ತಿಂಗಳಿಗೆ ಒಟ್ಟು ಏಳು ಕೋಟಿ ರೂ ಕೊಡಬೇಕಾಗಿದೆ. ಸರ್ಕಾರ ಇಷ್ಟೂ ಹಣವನ್ನು ಬಾಕಿ ಉಳಿಸಿಕೊಂಡಿದೆ.

 

`ಈ ಹಿಂದೆ ಖಾಸಗಿ ಡೈರಿಗೆ ಹಾಲು ಹಾಕುತ್ತಿದ್ದೆವು. ಸರ್ಕಾರ ನೀಡುವ ಪ್ರೋತ್ಸಾಹ ನೆಚ್ಚಿಕೊಂಡೇ ಅಲ್ಲಿ ನಿಲ್ಲಿಸಿ ಈಗ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕೊಡಲು ಆರಂಭಿಸಿದೆವು. ಆದರೆ, ಇದುವರೆಗೂ ನಮಗೆ ಪ್ರೋತ್ಸಾಹಧನ ಸಿಕ್ಕಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಭದ್ರಾವತಿ ಅರಹತೊಳಲು ಮಂಜಪ್ಪ.ಈ ಮಧ್ಯೆ ಮೇವಿನ ಕೊರತೆ ಬೇರೆ ಇದೆ. ಪಶು ಆಹಾರದ ಬೆಲೆ ದಿಢೀರನೆ ಏರಿಕೆ ಕಂಡಿದೆ. ಈಗ ಸರ್ಕಾರ ಲೀಟರ್‌ಗೆ 2.85 ರೂ ಬೆಲೆ ಏರಿಸಿದೆ ನಿಜ. ಆದರೆ, ಅದರ ಜತೆಗೆ ಸರ್ಕಾರವೂ ನೀಡಬೇಕಾದ 2ರೂ ಕಾಲಕಾಲಕ್ಕೆ ಬಿಡುಗಡೆ ಮಾಡಿದರೆ ನಮಗೂ ಸ್ವಲ್ಪ ನೆಮ್ಮದಿ ಎನ್ನುವ ಮಾತು ಅವರದ್ದು.

 

ರೈತರಿಗೆ ನೀಡಬೇಕಾದ ಈ ಪ್ರೋತ್ಸಾಹಧನವನ್ನು ಬಜೆಟ್‌ನಲ್ಲೇ ಹಂಚಿಕೆ ಮಾಡಲಾಗಿದೆ. ಒಂದು ವೇಳೆ ಸರ್ಕಾರ ವಂಚನೆ ಮಾಡಿದರೂ ನ್ಯಾಯಾಲಯಕ್ಕೆ ಹೋಗಿ ಅನುದಾನ ಪಡೆದುಕೊಳ್ಳಬಹುದು. ಸರ್ಕಾರ ಆದಷ್ಟು ಬೇಗ ಈ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್. `ಕಳೆದ ವರ್ಷದಲ್ಲಿ ಜುಲೈವರೆಗೂ ಪ್ರೋತ್ಸಾಹ ಧನ ಬಿಡುಗಡೆಯಾಗಿತ್ತು. ಅಲ್ಲಿಂದ ಐದು ತಿಂಗಳು ಬಿಡುಗಡೆಯಾಗಿಲ್ಲ. ಸದ್ಯದಲ್ಲಿಯೇ ಮೂರು ತಿಂಗಳ ಪ್ರೋತ್ಸಾಹ ಧನ ಬಿಡುಗಡೆಯಾಗಲಿದೆ. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಬೇಕಿದೆ. ಈ ಹಣ ಬಂದೇ ಬರುತ್ತದೆ. ರೈತರು ಭಯಪಡಬೇಕಿಲ್ಲ~ ಎನ್ನುತ್ತಾರೆ ಶಿಮೂಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಡಿ. ಹಂಪಾಳಿ.

ಪ್ರತಿಕ್ರಿಯಿಸಿ (+)