ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತಪರ ಕಾವಲು ತತ್ವ

ಗಾಂಧಿ ಈಗ
Last Updated 25 ಜನವರಿ 2014, 19:30 IST
ಅಕ್ಷರ ಗಾತ್ರ

ಅಸ್ಪೃಶ್ಯತೆಯ ವಿರಾಟ್ ಪಶ್ಚಾತ್ತಾಪ, ಪಾಪಪ್ರಜ್ಞೆ ಮೊದಲಿಗೆ ಭಾರತದಲ್ಲಿ ಆದದ್ದು ಮಹಾತ್ಮ ಗಾಂಧೀಜಿ ಅವರ ಮನದಲ್ಲಿ. ಒಂದು ವೇಳೆ ಗಾಂಧೀಜಿ ಅವರಲ್ಲಿ ಈ ಪರಿಯ ಜಾತಿ ವ್ಯವಸ್ಥೆಯ ಕ್ರೌರ್ಯದ ಅರಿವಾಗದೇ ಹೋಗಿದ್ದಿದ್ದರೆ, ಅಷ್ಟರಮಟ್ಟಿಗೆ ಜಾತಿಯ ನರಕ ಮೇಲು ಜಾತಿಗಳ ಮನದಲ್ಲಿ ಇನ್ನೂ ಬಲವಾಗಿಯೇ ಉಳಿದಿರುತ್ತಿತ್ತು. ಗಾಂಧೀಜಿಯ ಕಾರಣದಿಂದಲೇ ಅನಿವಾರ್ಯವಾಗಿ ಹಿಂದೂ ಸನಾತನಿಗಳು ಕೂಡ ಕೆಲಮಟ್ಟಿನ ಜಾತಿವಾದವನ್ನು ಉದಾರವಾದಿಯಾಗಿ ನೋಡಬೇಕಾದ ಒತ್ತಡ ಉಂಟಾದದ್ದು. ಪ್ರಜ್ಞಾವಂತ ಆದವರೆಲ್ಲ ಗಾಂಧೀಜಿಯ ‘ಹರಿಜನ ಪ್ರಜ್ಞೆ’ಯಿಂದಾಗಿಯೇ ಜಾತ್ಯತೀತವಾಗಿ ಆಲೋಚಿಸುವ ಕ್ರಮ ಕಂಡುಕೊಂಡದ್ದು. ಗಾಂಧಿವಾದಿಗಳು ಜಾತಿ ವಿನಾಶದ ಕಾಯಕದಲ್ಲಿ ತೊಡಗಿದ್ದರಿಂದಲೇ ಸ್ವತಃ ದಲಿತರಿಗೂ ಎಚ್ಚರವಾದದ್ದು.

ನಾನು ಹುಟ್ಟಿ ಬೆಳೆದ ಮೈಸೂರು ಸೀಮೆಯಲ್ಲಿ ಗಾಂಧಿ ಮತ್ತು ಗಾಂಧಿವಾದಿಗಳದೇ ಪ್ರಭಾವ ಹೆಚ್ಚಾಗಿತ್ತು. ನಮ್ಮ ಮನೆಯಲ್ಲಿ ಗಾಂಧೀಜಿಯ ಪೋಟೊ ಇತ್ತು. ಅದರ ಜೊತೆಯಲ್ಲೇ ನಾಲ್ವಡಿ ಕೃಷ್ಣರಾಜರ ಚಿತ್ರಪಟವಿತ್ತು. ಅಂಬೇಡ್ಕರ್ ಅವರ ಪೋಟೊ ಇರಬೇಕಿತ್ತಾದರೂ ಅವರ ಪ್ರಭಾವ ನಮಗೆ ಆಗಿಯೇ ಇರಲಿಲ್ಲ. ನಮ್ಮ ತಾತ ಗಾಂಧೀಜಿಯನ್ನು ಕಂಡು ಅವರ ಪಾದ ಮುಟ್ಟಿ ಬಂದಿದ್ದ. ಅವರ ಪ್ರಭಾವ ನಮ್ಮ ತಾತನ ಮೇಲೆ ಗಾಢವಾಗಿ ಆಗಿದ್ದರಿಂದ ಯಾವತ್ತೂ ಗಾಂಧಿಯ ಸೈರಣೆಯನ್ನು, ಅಹಿಂಸೆಯ ತತ್ವವನ್ನು ಸರ್ವೋದಯದ ಆಶಯವನ್ನು ತಾತ ನಮಗೆಲ್ಲ ಬೋಧಿಸಿದ್ದ.

ಗಾಂಧಿ ಹೆಚ್ಚೊ, ಅಂಬೇಡ್ಕರ್ ಹೆಚ್ಚೋ ಎಂಬ ಹೋಲಿಕೆಯೇ ತಪ್ಪು. ಅವೆರಡೂ ಭಾರತದ ಆತ್ಮಸಾಕ್ಷಿಯ ಎರಡು ಕಣ್ಣುಗಳು. ಇಬ್ಬರ ದೃಷ್ಟಿಕೋನಗಳು ಯಾವತ್ತೂ ನಮ್ಮ ದೇಶಕ್ಕೆ ಬೇಕು. ದಲಿತರ ಮೇಲೆ ಗಾಂಧಿ ತೋರಿದ ಪ್ರೀತಿಯಿಂದಾಗಿಯೇ ದಲಿತರ ಮೇಲಿನ ಎಷ್ಟೋ ಹಲ್ಲೆಗಳು ಒಂದಿಷ್ಟಾದರೂ ತಗ್ಗಿವೆ.

ಗಾಂಧೀಜಿಯ ಪ್ರೀತಿಯು ಅಂತಃಕರಣದ ದಾಹದಲಿ ನಲುಗುತ್ತಿದ್ದ ದಲಿತರ ಪಾಲಿಗೆ ಗುಟುಕು ಜೀವವನ್ನಾದರೂ ನೀಡಿದೆ. ಗಾಂಧಿವಾದವು ಜಾತಿಯ ವಿರುದ್ಧದ ಒಂದು ಎಚ್ಚರಿಕೆಯ ಗಂಟೆಯಂತೆ ಕೆಲಸ ಮಾಡಿದೆ. ಪ್ರಜಾಪ್ರಭುತ್ವಕ್ಕೆ ಅಂಬೇಡ್ಕರ್ ಜಾತ್ಯತೀತವಾದ ಸಂವೇದನೆಯನ್ನು ಬಿತ್ತಿದ್ದರೆ, ಗಾಂಧೀಜಿ ಮನಸ್ಸಿನ ಒಳಗಿನ ಜಾತಿಯ ಕ್ರೌರ್ಯವನ್ನು ತಗ್ಗಿಸಿಕೊಳ್ಳಲು ದಾರಿ ಮಾಡಿದ್ದಾರೆ. ಪೂನಾ ಒಪ್ಪಂದದಲ್ಲಿ ಗಾಂಧಿ ಹಾಗೂ ಅಂಬೇಡ್ಕರ್ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯವು ದಲಿತ ವಿಮೋಚನೆಯ ಸಂದರ್ಭದ ಚಾರಿತ್ರಿಕ ದ್ವಂದ್ವವೇ ಹೊರತು ಗಾಂಧೀಜಿ ದಲಿತರ ವಿರುದ್ಧವಾಗಿದ್ದರೂ, ಸನಾತನಿಗಳ ಪರವಾಗಿ ಮುಗುಮ್ಮಾಗಿ ಇದ್ದರು ಎಂತಲ್ಲ. ಗಾಂಧೀಜಿಯ ದಲಿತನಿಷ್ಟೆಯು ಪ್ರಶ್ನಾತೀತವಾದದ್ದು. ದಲಿತರಾದ ನಾವು ಗಾಂಧೀಜಿ ಅವರನ್ನು ಕಳೆದುಕೊಂಡರೆ ಅದರಿಂದ ಸನಾತನಿಗಳಿಗೇ ಹೆಚ್ಚು ಲಾಭ. ಆಗ ಅಂಬೇಡ್ಕರ್ ವಾದವನ್ನೂ ದಮನ ಮಾಡಲು ಬಲಪಂಥೀಯರಿಗೆ ಸುಲಭವಾಗಿಬಿಡುತ್ತದೆ.
ದಲಿತ ಸಮಸ್ಯೆ ಅಂಬೇಡ್ಕರ್ ತತ್ವ ಒಂದರಿಂದಲೇ ಪರಿಹಾರವಾಗುವುದಿಲ್ಲ. ಹಾಗೆಂದು ಗಾಂಧಿವಾದದಿಂದಲೇ ಜಾತಿ ವಿನಾಶ ಆಗುತ್ತದೆಂದು ಹೇಳುತ್ತಿಲ್ಲ.

ದಲಿತ ಸಮಸ್ಯೆ ಒಂದು ಭಾರತೀಯ ಸಮಸ್ಯೆ. ಒಂದಲ್ಲ ಒಂದು ಬಗೆಯಲ್ಲಿ ಇದು ಎಲ್ಲರ ಸಮಸ್ಯೆಯೂ ಹೌದು. ಜಾತಿ ವ್ಯವಸ್ಥೆಯಿಂದ ವಿಮುಕ್ತನಾಗುವುದು ಎಂದರೆ ನಾನು ನನ್ನ ತಲೆ ಮೇಲೆ ನಿಂತಿರುವವರೆಲ್ಲರ ಮುಕ್ತಿಯನ್ನೂ ಸಾಧಿಸಿದಂತೆ. ನಾನು ಮಾತ್ರ ಜಾತಿಯ ನರಕದಿಂದ ತಪ್ಪಿಸಿಕೊಂಡರೆ ಸಾಲದು. ಆ ಜಾತಿಯ ನರಕವನ್ನು ಪಾಲಿಸುತ್ತಿರುವವರು ಮೊದಲು ಆ ನರಕದಿಂದ ಪಾರಾಗಬೇಕಾಗಿದೆ. ಗಾಂಧಿಯ ಸರ್ವೋದಯದಲ್ಲಿ ಈ ಆಶಯವಿದೆ, ಧ್ಯಾನವಿದೆ, ಅಧ್ಯಾತ್ಮವಿದೆ. ಬಹಿಷ್ಕೃತರಾಗಿದ್ದ ದಲಿತರಿಗೆ ಗಾಂಧಿವಾದ ಎಷ್ಟು ತಲುಪಿತೊ ಏನೊ... ಆದರೆ ಗಾಂಧಿವಾದವು ದಲಿತರ ಪರವಾದ ಒಂದು ಕಾವಲು ತತ್ವದಂತೆ ಕೆಲಸ ಮಾಡಿದೆ. ಅದು ಮುಂದೆಯೂ ಈ ಕೆಲಸವನ್ನು ಮಾಡಲಿದೆ. ತಣ್ಣಗೆ ಭಾರತವೀಗ ಬಹುರಾಷ್ಟ್ರೀಯ ಕಂಪನಿಗಳ ಸಾಮಾಜಿಕ ತತ್ವಕ್ಕೆ ತಕ್ಕಂತೆ ಸಾಗುತ್ತಿದೆ. ಅದರಲ್ಲಿ ಜಾತಿ ವ್ಯವಸ್ಥೆಯು ಹೊಸ ಹೊಸ ರೂಪ ಪಡೆದು ಅದು ಮತ್ತೂ ಹರಿತವಾಗಿ ಜಾಣ್ಮೆಯನ್ನೆಲ್ಲ ಕರಗತ ಮಾಡಿಕೊಂಡು ದಲಿತ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣವಾಗಿಸಬಲ್ಲದು. ಅದಕ್ಕೆ ತಕ್ಕಂತೆಯೇ ಬಲಪಂಥೀಯ ರಾಜಕಾರಣವೂ ಮುನ್ನುಗ್ಗುತ್ತಿದೆ. ಅಂತಲ್ಲಿ ಗಾಂಧಿವಾದವು ಇವತ್ತಿನದಕ್ಕಿಂತಲೂ ಹೆಚ್ಚು ಪ್ರಸ್ತುತವಾಗಲಿದೆ. ಗಾಂಧಿಯನ್ನು ಬಿಡಿಯಾದ ವಿಚಾರಗಳಿಂದ ನೋಡಿದರೆ ಏರುಪೇರುಗಳು ಕಾಣುವುದು ಸಹಜ. ಅವರನ್ನು ಭಾರತದ ಆತ್ಮಸಾಕ್ಷಿಯ ಅಖಂಡ ಪ್ರಜ್ಞೆಯಿಂದಲೇ ಭಾವಿಸಬೇಕು. ಬುದ್ಧನ ದುಃಖತತ್ವದ ಗುಣವೂ ಗಾಂಧೀಜಿ ಅವರ ವಿಚಾರಗಳ ಆಳದಲ್ಲಿ ಪರೋಕ್ಷವಾಗಿದೆ. ಅದಿಲ್ಲದಿದ್ದರೆ ದಲಿತರ ಪರವಾದ ಕರುಣೆ ಗಾಂಧೀಜಿಗೆ ಸಾಧ್ಯವಾಗುತ್ತಿರಲಿಲ್ಲ. ಗಾಂಧೀಜಿ ನೋವಿನ ಹಾದಿಯಲ್ಲಿ ಭಾರತವನ್ನು ಧ್ಯಾನಿಸಿದವರು. ಅಖಂಡ ಭಾರತವನ್ನು ಒಂದೇ ಕರುಳಿಂದ ಮಿಡಿದವರು. ದಲಿತರು ಗಾಂಧಿವಾದವನ್ನು ನಿರಾಕರಿಸಿದಂತೆಲ್ಲ ಬಲಪಂಥೀಯರೂ ಮತೀಯವಾದಿಗಳೂ ಒಳಗೊಳಗೇ ಸಂಭ್ರಮಿಸುತ್ತಾರೆ. ಗಾಂಧಿಯು ದಲಿತರ ಪರವಾದ ಅಹಿಂಸೆಯ ಅತ್ಯುನ್ನತ ಸಾಧನ. ಇದನ್ನವರು ಕಳೆದುಕೊಳ್ಳಲಿ ಎಂಬುದೇ ಸನಾತನಿಗಳ ಅಪೇಕ್ಷೆ. ನಾವಿದಕ್ಕೆ ಯಾವತ್ತೂ ಅವಕಾಶ ಮಾಡಿಕೊಡಕೂಡದು.

ಗಾಂಧಿವಾದವು ಜಾರಿಯಾಗುವುದಕ್ಕಿಂತಲೂ ಅದು ಅಪವ್ಯಾಖ್ಯಾನಕ್ಕೆ ಒಳಗಾದದ್ದೇ ಹೆಚ್ಚು. ಇದರಲ್ಲಿ ರಾಜಕಾರಣವೂ ಇದೆ, ಜಾತಿವಾದವೂ ಇದೆ. ಅನೇಕ ತಬ್ಬಲಿ ಜಾತಿಗಳಿಗೆಲ್ಲ ಗಾಂಧಿಯ ತಾಯ್ತನ ಬೇಕಿದೆ. ಗಾಂಧೀಜಿಯ ಅಖಂಡ ಮಾನವೀಯತೆಯನ್ನು ಅಂಬೇಡ್ಕರ್ ಜಾತ್ಯತೀತ ತತ್ವದಿಂದ ಸಂವಿಧಾನ ತತ್ವಗಳಲ್ಲಿ ವಿಸ್ತರಿಸಿ ಮಾನವೀಯತೆಯ ನ್ಯಾಯವನ್ನು ಸರ್ವರಿಗೂ ಹಂಚಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರನ್ನೂ ಇಡೀಯಾಗಿಯೇ ನೋಡಬೇಕು. ದಲಿತ ಸಮಸ್ಯೆಯ ಬುಡವನ್ನು ಅಂಬೇಡ್ಕರ್ ಬಿಡಿಸಿದರೆ, ಅದರ ತುದಿಯನ್ನು ಗಾಂಧಿವಾದವು ನಿವಾರಿಸುತ್ತದೆ. ಜಾತಿ ವಿನಾಶದಿಂದ ಮಾತ್ರ ಆಧುನಿಕೋತ್ತರ ಜಾತ್ಯತೀತ ಭಾರತವನ್ನು ಕಟ್ಟಲು ಸಾಧ್ಯ. ಅದಕ್ಕಾಗಿ ಯಾವತ್ತೂ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಜೊತೆಯಾಗಿಯೇ ಕರೆದೊಯ್ಯಬೇಕು.

ಭಾರತದಂತಹ ಬಹುಸಂಸ್ಕೃತಿಗಳ ಮನಸ್ಸು ವಿಪ್ಲವಕಾರಿ ಆದುದಲ್ಲ. ಅದು ಅಧ್ಯಾತ್ಮದ ದಿವ್ಯತೆಯಲ್ಲಿ ಸಾಮಾಜಿಕತೆ ಭಾವಿಸುತ್ತದೆ. ಇದಕ್ಕೆ ಗಾಂಧಿವಾದವು ಹೆಚ್ಚು ಹತ್ತಿರವಾಗಿದೆ. ಕಾಲಕಾಲದ ಅಧ್ಯಾತ್ಮದ ಹಾದಿಗಳು ಭಾರತೀಯ ಸಮಾಜಗಳನ್ನು ಸುಧಾರಿಸಲು ಯತ್ನಿಸಿವೆ. ಕ್ರಾಂತಿಯ ಪಲ್ಲಟಗಳು ಅಷ್ಟು ಸುಲಭವಾಗಿ ಭಾರತೀಯ ಸಮಾಜಗಳಲ್ಲಿ ಸಾಧ್ಯವಿಲ್ಲ. ಭಾಗಶಃ ಗಾಂಧೀಜಿಗೆ ಈ ಪರಿ ತಿಳಿದಿತ್ತೇನೊ. ಆದ್ದರಿಂದಲೇ ಅವರು ಅಹಿಂಸೆಯ ದೊಡ್ಡ ಶಕ್ತಿಯನ್ನು ಕಂಡುಕೊಂಡು ಅದರ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ತಿದ್ದಲು ಯತ್ನಿಸಿದ್ದು. ಜಾತಿ ವಿನಾಶವನ್ನು ಕೂಡ ಅಧ್ಯಾತ್ಮದ ಒಂದು ದಂಗೆಯನ್ನಾಗಿಯೇ ರೂಪಿಸಬೇಕು. ಮಧ್ಯಕಾಲೀನ ಭಾರತದ ಉದ್ದಕ್ಕೂ ಇಂತಹ ಅವೈದಿಕ ಅಧ್ಯಾತ್ಮದ ದಂಗೆಗಳು ಸಾಕಷ್ಟು ಆಗಿವೆ. ಆ ಮಟ್ಟಿಗೆ 20ನೇ ಶತಮಾನದಲ್ಲಿ ಅಸ್ಪೃಶ್ಯತೆಯ ನಿವಾರಣೆಗೆ ಗಾಂಧೀಜಿ ಮಾಡಿದ್ದು ಕೂಡ ಒಂದು ಬಗೆಯಲ್ಲಿ ಅಧ್ಯಾತ್ಮದ ದಂಗೆಯೇ.

ಜಾತಿ ವ್ಯವಸ್ಥೆಯ ವಿರುದ್ಧ ಕಟುವಾಗಿ ದಂಗೆ ಎದ್ದಂತೆಲ್ಲ ಅದು ದಂಗೆ ಎದ್ದವರನ್ನೇ ತಿಂದು ಹಾಕುವಷ್ಟು ಬಲಶಾಲಿ. ಆದ್ದರಿಂದಲೇ ಅದನ್ನು ಸಹನೆಯಿಂದಲೇ ಪಳಗಿಸಿ ಪಳಗಿಸಿ ಮನುಷ್ಯ ರೂಪಕ್ಕೆ ತಂದು ಮನುಷ್ಯತ್ವ ಕಲಿಸಬೇಕಾಗಿದೆ. ಗಾಂಧೀಜಿ ಹೋರಾಟದ ಹಾದಿ ಮನಃ ಪರಿವರ್ತನೆಯದು. ಈ ಪರಿವರ್ತನೆಯ ಪ್ರಕ್ರಿಯೆ ಜಾತಿನಿಷ್ಟ ಸಮಾಜದಲ್ಲಿ ಸದಾ ಆಗುತ್ತಲೇ ಇರಬೇಕು. ಗಾಂಧೀಜಿ ಅಷ್ಟರಮಟ್ಟಿಗೆ ನಮ್ಮೆಲ್ಲರ ಪ್ರಜ್ಞೆಯ ಭಾಗವಾಗಿಯೇ ಇರಬೇಕು. ಅಂಬೇಡ್ಕರ್ ಆ ಪ್ರಜ್ಞೆಯ ಮತ್ತೊಂದು ವಿಸ್ತರಣೆಯಾಗಿ ಬೆಳೆಯುತ್ತಲೇ ಇರಬೇಕು. ಆಗ ಜಾತಿಯ ವಿರಾಟ್ ಶಾಪದಿಂದ ಭಾರತ ಮುಕ್ತವಾಗಲು ಸಾಧ್ಯ.
 

ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮೊಗಳ್ಳಿ ಗಣೇಶ್‌ ಕನ್ನಡದ ಸಮಕಾಲೀನ ಕಥನ ಸಾಹಿತ್ಯದ ಪ್ರಮುಖ ಹೆಸರು. ಸಂಸ್ಕೃತಿ ಚಿಂತಕರಾಗಿಯೂ ಅವರು ಪ್ರಸಿದ್ಧರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT