ದಲಿತಪರ ಸಂಘಟನೆಗಳಿಂದ ರಸ್ತೆ ತಡೆ

7

ದಲಿತಪರ ಸಂಘಟನೆಗಳಿಂದ ರಸ್ತೆ ತಡೆ

Published:
Updated:

ಕೂಡ್ಲಿಗಿ: ಇತ್ತೀಚೆಗೆ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ದಲಿತರ ಮೇಲೆ ಮಾಡಿದ ಲಾಠಿ ಪ್ರಹಾರ ಖಂಡಿಸಿ ಹಾಗೂ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಶುಕ್ರವಾರ ಡಾ.ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆನ ನಡೆಸಿ ಪ್ರತಿಭಟಿಸಿದರಲ್ಲದೇ ನಂತರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ಸಾಮಾಜಿಕ ನ್ಯಾಯಕ್ಕಾಗಿ ದನಿ ಇಲ್ಲದವರ ದನಿ ಎತ್ತುವ ಸಲುವಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವ ವರದಿ ಪಡೆಯಲು ಪ್ರಾಣಾರ್ಪಣೆ ಮಾಡಲು ಸಿದ್ಧವಾಗಿರುವ ನಮಗೆ ಲಾಠಿ ಏಟು ಲೆಕ್ಕಕ್ಕಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಸದನದಲ್ಲಿ ಕೊಟ್ಟ ಮಾತಿನಂತೆ ಸದಾಶಿವ ಆಯೋಗದ ವರದಿಯನ್ನು ಮುಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಮಾನವೀಯವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ  (ಡಿ.ಜಿ.ಸಾಗರ್ ಬಣ) ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ), ಮಾದಿಗ ದಂಡೋರ, ಮಾದಿಗ ಮಿಸಲಾತಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆ, ತಾಲ್ಲೂಕು ಛಲವಾದಿ ಮಹಾಸಭಾ, ತಾಲ್ಲೂಕು ಹಮಾಲರ ಸಂಘ, ಸೈಕಲ್ ರಿಕ್ಷಾ ಚಾಲಕರ ಸಂಘ, ಡಾ.ಬಿ.ಆರ್. ಅಂಬೇಡ್ಕರ್ ರೈತರ ಸಂಘ ಮತ್ತು ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಯಕರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry