ಗುರುವಾರ , ಏಪ್ರಿಲ್ 15, 2021
26 °C

ದಲಿತರಪರ ಯೋಜನೆ ಅನುಷ್ಠಾನ ರೂ. 154 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ‘ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತ ಸಮುದಾಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ದಾಖಲೆ ಪ್ರಮಾಣದಲ್ಲಿ ಕೊಳವೆ ಬಾವಿ ಸೌಲಭ್ಯ ಒದಗಿಸಲಾಗಿದೆ’ ಎಂದು ಕ್ಷೇತ್ರದ ಶಾಸಕ ಕೆ. ನೇಮರಾಜ ನಾಯ್ಕ ಹೇಳಿದರು.ಪಟ್ಟಣದ ಗುರುಭವನದಲ್ಲಿ ಈಚೆಗೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಜನಪರ ಸಂಘಟನೆಗಳು ಮತ್ತು ನಾನಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 120ನೇ ಮತ್ತು ಡಾ.ಬಾಬು ಜಗಜೀವನರಾಮ್ ಅವರ 104ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

 

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ತಾಲ್ಲೂಕಿನ 46,055 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದ್ದು, ಜೊತೆಗೆ ದಲಿತಪರ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನಿಗಮದಿಂದ ರಾಜ್ಯ ಸರಕಾರ ರೂ.154 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.ಅಂಬೇಡ್ಕರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ದೊಡ್ಡಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರ ದಲಿತ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿ.ಟಿ.ತೇನಸಿಂಗನಾಯ್ಕ ಉಪನ್ಯಾಸ ನೀಡಿದರು.

 

ಇದೇ ವೇಳೆ ಕ್ಯಾಸಿಯೋ ವಾದಕ ವಿಕ್ರಂ, ನಾಟಿ ವೈದ್ಯ ವಡ್ಡರ ಹನಮಂತಪ್ಪ ಮತ್ತು ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಿ.ಶಿವಾನಂದ್ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ತಹಸೀಲ್ದಾರ್ ತಾ.ಪಂ. ಅಧ್ಯಕ್ಷೆ ಗಂಗಮ್ಮ ಪವಾಡಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ನಫೀಸಾ ಮುತಾಲಿಬ್, ಜಿ.ಪಂ. ಸದಸ್ಯರಾದ ರೋಗಾಣಿ ಹುಲುಗಪ್ಪ, ಹೇಮ್ಲಮ್ಮ ಕೃಷ್ಣಾ ನಾಯ್ಕ, ಮುಖಂಡ ಹೆಗ್ಡಾಳು ರಾಮಣ್ಣ, ತಾ.ಪಂ. ಉಪಾಧ್ಯಕ್ಷೆ ಭಾರತಿ ಬೆಲ್ಲದ್, ಸದಸ್ಯರಾದ ಉಪ್ಪಾರ ಬಾಲು, ಚಿಂತ್ರಪಳ್ಳಿ ಗ್ರಾ.ಪಂ.ಅಧ್ಯಕ್ಷೆ ಸಾಕಮ್ಮ ರಾಮಣ್ಣ, ಹ.ಬೊ.ಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಪೂಜಾರ್ ಮಲ್ಲಮ್ಮ, ಕಸಾಪ ಅಧ್ಯಕ್ಷ ಮಾತಾಗ್ಯಾಸ್ ಎರಿಸ್ವಾಮಿ, ದಲಿತ ಮುಖಂಡ ಅಲಬೂರು ಮರಿಯಪ್ಪ, ಎಚ್. ಬಸಪ್ಪ, ವೈ. ಅಂಬರೀಶ್, ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ಕೆಚ್ಚಿನಬಂಡಿ ದುರುಗಪ್ಪ ಉಪಸ್ಥಿತರಿದ್ದರು. 

ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಗೋಪ್ಯಾ ನಾಯ್ಕ ಮತ್ತು ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ಕೊಟ್ರೇಶಪ್ಪ ನಿರೂಪಿಸಿದರು.

ಪ್ರಸ್ತಾಪಕ್ಕೆ ಬಾರದ ಚಿಲವಾರ ಬಂಡಿ ಏತ ನೀರಾವರಿ ಯೋಜನೆ: ತಾಲ್ಲೂಕಿನ ಅಡವಿ ಆನಂದದೇವನಹಳ್ಳಿ ಸೇರಿದಂತೆ 8  ಗ್ರಾಮಗಳ ದಲಿತ ಸಮುದಾಯದ ರೈತರೇ ಫಲಾನುಭವಿಗಳಾಗಿರುವ ನೂರಾರು ಎಕರೆ ಜಮೀನಿಗೆ ನೀರುಣಿಸುವ ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಕುರಿತಂತೆ ಶಾಸಕರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿಲ್ಲ. ಈ ಯೋಜನೆ ದಶಕಗಳಿಂದ ನೆನೆಗುದಿಗೆ ಬಿದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.