ಶುಕ್ರವಾರ, ಮೇ 27, 2022
21 °C

ದಲಿತರಿಗೆ ಮೀಸಲಿಟ್ಟ ನಿವೇಶನ ಬದಲಾವಣೆ ಸಾಧ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾ ಸ್ಥಳವನ್ನು ಸರ್ಕಾರಿ ನಿವೇಶನ ಎಂಬುದಾಗಿ ತಿದ್ದುಪಡಿ ಮಾಡಿ ಬದಲಿಸಲು ಸಾಧ್ಯವಿದೆಯೇ ಎಂಬುದನ್ನು ಜಿಲ್ಲಾಡಳಿತದ ಬಳಿ ಕೇಳಿ ಸ್ಪಷ್ಟ ಮಾರ್ಗದರ್ಶನ ದೊರಕಿಸಿಕೊಡಬೇಕು ಎಂಬ ಒತ್ತಾಯ ದಲಿತ ಸಮುದಾಯದಿಂದ ಕೇಳಿಬಂದಿದೆ.ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ಎಸ್.ಪಿ.ಆನಂದ್ ಈ ಪ್ರಶ್ನೆ ಕೇಳಿದರು. ದೇರೆಬೈಲ್ ಗ್ರಾಮದಲ್ಲಿ 19 ಸೆಂಟ್ಸ್ ಸ್ಥಳ ಡಿಸಿ ಮನ್ನಾ ಸ್ಥಳವಾಗಿದ್ದು, ಅದನ್ನು ಸರ್ಕಾರಿ ಸ್ಥಳವೆಂದು ಬದಲಿಸಿದ್ದರ ಹಿನ್ನೆಲೆಯಲ್ಲಿ ಅವರು ಸ್ಪಷ್ಟೀಕರಣ ಬಯಸಿದರು. ಈ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಳ್ಳುವುದಾಗಿ ಡಿಸಿಪಿ ಎ.ಮುತ್ತೂರಾಯ ತಿಳಿಸಿದರು.ಕದ್ರಿಯಲ್ಲಿ ಕಳೆದ 75 ವರ್ಷಗಳಿಂದ ವಾಸವಿದ್ದ ದಲಿತರೊಬ್ಬರ ನಿವೇಶನ ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ನಗರದ ಪ್ರಮುಖ ಹೋಟೆಲ್ ಒಂದರ ಮಾಲೀಕರು ಮೂವರು ದಲಿತ ಮಹಿಳೆಯರಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.ಇತ್ತೀಚೆಗೆ ನಡೆದ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ `ದಿಕ್ಕ~ ಪದ ಪ್ರಯೋಗವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಾವೂರು ಸಮೀಪ ಇತ್ತೀಚೆಗೆ ಕೊರಗ ಸಮುದಾಯದ ಯುವಕ ಕುಮಾರ್ ಅವರನ್ನು ಕೊಲೆ ಮಾಡಿದ ತಂಡದಲ್ಲಿದ್ದ ಪ್ರಮುಖ ಆರೋಪಿಯ ಹೆಸರನ್ನು ಎಫ್‌ಐಆರ್‌ನಲ್ಲಿ ಕೈಬಿಟ್ಟದ್ದಕ್ಕೆ ರಮೇಶ್ ಕೋಟ್ಯಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪೂರಕ ದೂರು ನೀಡಿ ಆರೋಪಿಯ ಹೆಸರು ಸೇರಿಸಬಹುದು ಎಂದು ಎಸಿಪಿ ಪುಟ್ಟಮಾದಯ್ಯ ಸಲಹೆ ನೀಡಿದರು.ಕಂಕನಾಡಿಯ ಬ್ಯೂಟಿ ಪಾರ್ಲರ್‌ನಲ್ಲಿ ಈಗಲೂ ಕೆಲವು ಯುವಕರಿಂದ ಅಕ್ರಮ ದಂಧೆ ನಡೆಯುತ್ತಿದೆ. ಆದರೆ ದಲಿತ ಪೊಲೀಸ್ ಮುಖಂಡ ಕಿರಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಅವರಿಗೆ ಅನ್ಯಾಯ ಮಾಡಲಾಗಿದೆ, ದಲಿತರಿಗಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದರು ಎಂದು ಕಂಕನಾಡಿಯ ಹರಿಕುಮಾರ್ ದೂರಿದರು.ಉಳ್ಳಾಲದ ಪರಿಶಿಷ್ಟ ಕಾಲೊನಿಯಲ್ಲಿ ಇತ್ತೀಚೆಗೆ ಮೂರು ತಲವಾರುಗಳು ಪತ್ತೆಯಾಗಿದ್ದು, ಅಲ್ಲಿ ಕೆಲವು ಯುವಕರು ರಾತ್ರಿ ಬಹು ಹೊತ್ತು ಕುಳಿತುಕೊಂಡಿರುತ್ತಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಿರೀಶ್ ಕುಮಾರ್ ಆಗ್ರಹಿಸಿದರು. ಎಸಿಪಿ ಟಿ.ಆರ್.ಜಗನ್ನಾಥ್ ಈ ದೂರಿನಿಂದ ವಿಚಲಿತರಾದರು.

 

ಶಂಕಿತ ಯುವಕರನ್ನೂ ಠಾಣೆಗೆ ಕರೆಸಿ ವಿಚಾರಿಸಲಾಗಿದೆ ಎಂದ ಅವರು, ಉಳ್ಳಾಲದಲ್ಲಿ ಇಂದು ಒಬ್ಬರೇ ಒಬ್ಬರು ರೌಡಿಗಳಿಲ್ಲ, ಯಾವುದೇ ಅಶಾಂತಿ ವಾತಾವರಣ ನೆಲೆಸುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದರು.

ನಗರದ ಕೆಲವು ಕಡೆಗಳಲ್ಲಿ ರಾತ್ರಿ ಬಹುಹೊತ್ತಿನವರೆಗೆ ಬಾರ್‌ಗಳು ತೆರೆದಿರುತ್ತವೆ ಎಂದು ಸದಾಶಿವ ಅವರು ದೂರಿದಾಗ, ಅಂತಹ ಬಾರ್‌ಗಳ ಹೆಸರನ್ನು ಗೋಪ್ಯವಾಗಿ ನೀಡುವಂತೆ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಕೇಳಿಕೊಂಡರು.

 

ಸಭೆಯಲ್ಲಿ `ಕೋಳಿ ಅಂಕ~

`ನೇಮೋತ್ಸವ ಸಂದರ್ಭದಲ್ಲಿ ಕೋಳಿ ಅಂಕಕ್ಕೆ ಅವಕಾಶ ನೀಡಬೇಕು ಎಂದು ಹೇಳುವವರು ನೀವೇ, ನೇಮೋತ್ಸವ ಮುಗಿದ ನಂತರ 10 ದಿನಗಳವರೆಗೆ ಕೋಳಿ ಅಂಕ ನಡೆಯುತ್ತಿದೆ ಎಂದು ದೂರು ನೀಡುವವರೂ ನೀವೇ. ಕೋಳಿ ಅಂಕ ನಡೆಯುವ ಸಂದರ್ಭದಲ್ಲೇ ನಮಗೆ ಏಕೆ ದೂರು ನೀಡುವುದಿಲ್ಲ~ ಎಂದು ಎಸಿಪಿ ಟಿ.ಆರ್.ಜಗನ್ನಾಥ್ ಪ್ರಶ್ನಿಸಿದರು.ಕಾವೂರಿನಲ್ಲಿ ನೇಮೋತ್ಸವದ ಹೆಸರಲ್ಲಿ ಹತ್ತು ದಿನಗಳ ಕಾಲ ಕೋಳಿ ಅಂಕ ನಡೆದುದು ಕುಮಾರ್ ಕೊಲೆಗೆ ಕಾರಣ. ಇಂತಹ ಕೋಳಿ ಅಂಕಗಳಿಂದ ದ್ವೇಷ ಬೆಳೆಯುತ್ತದೆ, ಹೀಗಾಗಿ ಕೋಳಿ ಅಂಕಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯ ಮೇರೆಗೆ ಅವರಿಂದ ಈ ಪ್ರಶ್ನೆ ಕೇಳಿಬಂತು. ನಿಯಮ ಪ್ರಕಾರ ಕೋಳಿ ಅಂಕ ನಡೆಸುವಂತೆಯೇ ಇಲ್ಲ, ಆದರೂ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ನೇಮೋತ್ಸವದ ದಿನಗಳಂದು  ನಿರ್ದಿಷ್ಟ ಅವಧಿಗೆ ಮಾತ್ರ ಕೋಳಿ ಅಂಕಕ್ಕೆ ಅವಕಾಶ ಕಲ್ಪಿಸುತ್ತಿದ್ದಾರೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.