ದಲಿತರ ಅಭಿವೃದ್ಧಿ ಕಡೆಗಣನೆ:ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಾಟೆ

ಬುಧವಾರ, ಜೂಲೈ 17, 2019
27 °C

ದಲಿತರ ಅಭಿವೃದ್ಧಿ ಕಡೆಗಣನೆ:ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಾಟೆ

Published:
Updated:

ಶಿವಮೊಗ್ಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಎ. ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಶೇ. 22.57ರ ನಿಧಿ ಅಸಮರ್ಪಕ ಬಳಕೆ ಬಗ್ಗೆ ಮೊದಲೇ ಸಾಕಷ್ಟು ಮಾಹಿತಿ ಹೊಂದಿದ್ದ ಸಚಿವರು, ಪ್ರಶ್ನೆ ಮೇಲೆ ಪ್ರಶ್ನೆ, ಏಕವಚನ ಬಳಕೆ ಮೂಲಕ ಅಧಿಕಾರಿಗಳ ಮೇಲೆ ಹರಿಹಾಯ್ದರು.ಜಿಲ್ಲೆಯ ಅನೇಕ ಗ್ರಾಮ ಪಂಚಾಯ್ತಿಗಳಲ್ಲಿ ಶೇ. 22.57ರ ಮೀಸಲಾತಿಯಡಿಯಲ್ಲಿ ವ್ಯಯ ಮಾಡಲು ನಿರೀಕ್ಷಿತಮಟ್ಟದಲ್ಲಿ ತೆರಿಗೆ ಸಂಗ್ರಹವಾಗದಿರುವ ಬಗ್ಗೆ ಸಿಡಿಮಿಡಿಗೊಂಡ ಸಚಿವರು, `ಇದು ಆಡಳಿತ ನಡೆಸುವ ರೀತಿ ಅಲ್ಲ. ಸಿಎಂ ತವರು ಜಿಲ್ಲೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ಆಗಿದೆ ಎಂದರೆ ನೀವೆಲ್ಲ ಯಾವ ಸೀಮೆ ಕೆಲ್ಸ ಮಾಡ್ತೀರಾ?~ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಅವರನ್ನು ನೇರವಾಗಿ ಪ್ರಶ್ನಿಸಿದರು.`ದಲಿತರ ವಿಷಯದಲ್ಲಿ ನಿಮ್ಮ ಭಾವನೆ ಇದೇ ರೀತಿ ಇದ್ದರೆ ದಲಿತರಿಗೆ ಮುಕ್ತಿ ಸಿಗುವುದಿಲ್ಲ. ಅದು ಸಿಗುವುದಕ್ಕೆ ಇನ್ನೊಂದು ಸ್ವಾತಂತ್ರ್ಯ ಚಳವಳಿಯೇ ನಡೆಯಬೇಕು. ನನಗೆ ಹಸಿವಿನ ಅರ್ಥ ಗೊತ್ತಿದೆ. ನನ್ನ ಬಗ್ಗೆ ನೀವು ಏನು ಅಂದುಕೊಂಡರೂ ಬೇಸರವಿಲ್ಲ~ ಎಂದು ಅಧಿಕಾರಿಗಳ ವಿರುದ್ಧ ಮಾತಿನ ಚಾಟಿ ಬೀಸಿದರು.ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿದಾಕ್ಷಣ ತಮ್ಮ ಕೆಲಸ ಮುಗಿತು ಎಂದು ಜಿಲ್ಲಾಧಿಕಾರಿ ತಿಳಿಯಬಾರದು. ಅವುಗಳಿಗೆ ಹಕ್ಕುಪತ್ರ ನೀಡುವುದು ನಿಮ್ಮ ಕೆಲಸ. ಯಾವ ಸರ್ಕಾರವೂ ನಿಮಗೆ ಹಕ್ಕುಪತ್ರ ನೀಡಬೇಡಿ ಎಂದು ಹೇಳಿಲ್ಲ. ಕಾನೂನು ತೆಗೆದು ನೀಡಿ. ದಲಿತರ ವಿಷಯ ಎಂದರೆ ಬೇರೆಯವರ ಮೇಲೆ ಎತ್ತಿಹಾಕಬೇಡಿ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರಿಗೆ ಹೇಳಿದರು.ಜಿಲ್ಲಾ ಜಾಗೃತಿ ಸಮಿತಿ ಸಭೆಯ ನಡಾವಳಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ ಅವರನ್ನು, ಗ್ರಾ.ಪಂ.ಮಟ್ಟದಲ್ಲಿ ತೆರಿಗೆ ಸಂಗ್ರಹಿಸುವಲ್ಲಿ ವಿಫಲರಾದ ಜಿ.ಪಂ. ಸಿಇಒ ಡಾ.ಸಂಜಯ್ ಬಿಜ್ಜೂರು ಅವರನ್ನು ತರಾಟೆಗೆ ತೆಗೆದುಕೊಂಡರು.ಸಮಾಜ ಕಲ್ಯಾಣ ಇಲಾಖೆ ಎಂದರೆ ಕೇವಲ ವಿದ್ಯಾರ್ಥಿಗಳಿಗೆ ಊಟ, ವಸತಿ ಕೊಡುವುದಲ್ಲ; ದಲಿತರ ಸ್ವಾಭಿಮಾನ, ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು; ದಲಿತರ ಬಗ್ಗೆ ಅಧಿಕಾರಿಗಳಿಗೆ ಕನಿಷ್ಠ ಕಾಳಜಿ ಇರಬೇಕು ಎಂದು ಗುಡುಗಿದರು.ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಇಲಾಖೆ ಕಾರ್ಯವೈಖರಿ ಸಮಾಧಾನ ಇಲ್ಲ ಎನ್ನುವುದು ಸಭೆಯಲ್ಲಿ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿ ಅಧಿಕಾರಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಉಪಾಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ನಗರಸಭಾ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಉಪಸ್ಥಿತರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry