ದಲಿತರ ಒಳಮೀಸಲಾತಿ ವರ್ಗೀಕರಣ: ಅವೈಜ್ಞಾನಿಕ ಅಂಶಗಳು

7

ದಲಿತರ ಒಳಮೀಸಲಾತಿ ವರ್ಗೀಕರಣ: ಅವೈಜ್ಞಾನಿಕ ಅಂಶಗಳು

Published:
Updated:

ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣದ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಜೂನ್ 14 ರಂದು ಸಲ್ಲಿಸಿದ್ದಾರೆ.1935ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಪರಿಶಿಷ್ಟರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 101 ಪರಿಶಿಷ್ಟ ಜಾತಿಗಳನ್ನು (ಅಸ್ಪೃಶ್ಯ ಮತ್ತು ಸ್ಪೃಶ್ಯ ಜಾತಿಗಳು ಸೇರಿ) ಗುರುತಿಸಲಾಗಿತ್ತು. ಆದರೆ ಕರ್ನಾಟಕದಲ್ಲಿ ಬಲಾಢ್ಯ ಅಸ್ಪೃಶ್ಯ ಜಾತಿಗಳಾದ ಮಾದಿಗ ಮತ್ತು ಛಲವಾದಿ ಜೊತೆಗೆ ಸಣ್ಣ ಪುಟ್ಟ ಜಾತಿಗಳು ಸೇರಿದಂತೆ ಅಸ್ಪೃಶ್ಯರಲ್ಲದ ಹಲವಾರು ಜಾತಿಗಳೂ ಈ ಮೀಸಲಾತಿ ಸೌಲಭ್ಯದ ಅಡಿಯಲ್ಲಿ ಬಂದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮತ್ತು ಸಂಖ್ಯೆಯಲ್ಲಿ ಬಲಾಢ್ಯರಾದ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಿರುವುದು ಸತ್ಯ.ಧರ್ಮಸಿಂಗ್ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ (2005) ಪರಿಶಿಷ್ಟರ ಒಳಮೀಸಲಾತಿ ವರ್ಗೀಕರಣಕ್ಕೆ ಆಯೋಗವನ್ನು ನೇಮಿಸಲಾಯಿತು. ನಂತರದಲ್ಲಿ ಸರ್ಕಾರದಿಂದ ಸರಿಯಾದ ಸಮಯಕ್ಕೆ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಹಾಗೂ  ಇಬ್ಬರು ನ್ಯಾಯಮೂರ್ತಿಗಳು ಅದಕ್ಕೆ ಒಪ್ಪದಿದ್ದಾಗ ಈ ಸ್ಥಾನಕ್ಕೆ  ಜಸ್ಟಿಸ್ ಎ.ಜೆ. ಸದಾಶಿವ ಅವರ ನೇಮಕವಾಯಿತು.2008ರಲ್ಲಿ ಯಡಿಯೂರಪ್ಪನವರು ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ಆಯೋಗಕ್ಕೆ ಸುಮಾರು 12ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ಬಿಜೆಪಿ ಸರ್ಕಾರದ ಹಿತಾಸಕ್ತಿಯೂ ಅಡಗಿತ್ತು. ನಿಜವಾದ ಆಯೋಗದ ಕೆಲಸ ಶುರುವಾದದ್ದೇ ಇಲ್ಲಿಂದ. (ಸುಮಾರು ನಾಲ್ಕು ವರ್ಷಗಳು) ಈ ಅವಧಿಯಲ್ಲಿ ಸಂಗ್ರಹಿಸಿದ ಮಾಹಿತಿಯಿಂದ ಸಿದ್ಧಪಡಿಸಿದ ಸುಮಾರು 200 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.ವರದಿಯ ಸತ್ಯಾಸತ್ಯತೆಗಳೇನು?:  2010ರ ಸಾಮಾನ್ಯ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ  101 ಪರಿಶಿಷ್ಟ ಜಾತಿಗಳ ಒಟ್ಟು ಕುಟುಂಬಗಳು 20.54ಲಕ್ಷ ಮತ್ತು ಜನಸಂಖ್ಯೆ 96.60 ಲಕ್ಷಗಳು ಮಾತ್ರ. ಇದರಲ್ಲಿಅಸ್ಪೃಶ್ಯ ಮತ್ತು ಸ್ಪೃಶ್ಯರು ಸೇರಿದ್ದಾರೆ. ಇದೇ ಅಂಕಿ ಅಂಶಗಳನ್ನು ಆಯೋಗ ಯಥಾವತ್ತಾಗಿ ತನ್ನ ಆಯೋಗದ ವರದಿಯಲ್ಲಿ ದಾಖಲಿಸಿರುವುದನ್ನು ಗಮನಿಸಿದರೆ ಇದು ಆಯೋಗವೇ ಸಂಗ್ರಹಿಸಿದ ನೈಜವಾದ ಮಾಹಿತಿಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆರು ಲಕ್ಷ ಪರಿಶಿಷ್ಟರು ತಮ್ಮ ಉಪ ಜಾತಿಗಳನ್ನು ಹೇಳಿಕೊಳ್ಳಲು ಹಿಂಜರಿದು ಮುಚ್ಚಿಟ್ಟಿರುವುದು ಈ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆಯ ಕರಾಳ ದರ್ಶನ ಮಾಡಿಸುತ್ತದೆ. ಇಂತಹ ಅರ್ಧ ಸತ್ಯಗಳನ್ನು ಆಧರಿಸಿ ಮಾದಿಗ ಮತ್ತು ಸಮಾನಾಂತರ ಉಪಜಾತಿಗಳಿಗೆ ಶೇ 6, ಛಲವಾದಿ ಮತ್ತು ಸಮಾನಾಂತರ  ಉಪಜಾತಿಗಳಿಗೆ ಶೇ 5, ಇತರೆ ಪರಿಶಿಷ್ಟ ಜಾತಿಗಳಿಗೆ ಶೇ 1 ಮತ್ತು ಪರಿಶಿಷ್ಟರಲ್ಲೆೀ ಟಚ್ಚಬಲ್ಸ್(ಸ್ಪೃಶ್ಯ) ಪರಿಶಿಷ್ಟರಿಗೆ ಶೇ 3 ಎಂದು ವರ್ಗೀಕರಿಸಬಹುದೆಂದು ಅಭಿಪ್ರಾಯಪಡಲಾಗಿದೆ (ಒಟ್ಟು 15)ಆದರೆ, ಉಪಜಾತಿ ಹೇಳಲಿಚ್ಛಿಸದ ಆರು ಲಕ್ಷ ಜನರನ್ನು ವರದಿಯಲ್ಲಿ ದಾಖಲಿಸಲಾಗಿದೆ, ಇವರು ಅಸ್ಪೃಶ್ಯರೇ ಇದ್ದಾರೆಂಬುದನ್ನು ಕರಾರುವಕ್ಕಾಗಿ ವರದಿಯಲ್ಲಿ ಹೇಳಲಾಗಿದೆ.ಹೀಗಿರುವಾಗ ಈ ಆರು ಲಕ್ಷ ಅಸ್ಪೃಶ್ಯರಿಗೆ ನೀಡಿರುವ ಪಾಲು ಎಷ್ಟು? ಈ ಆರು ಲಕ್ಷ ಜನರು ಸಮೀಕ್ಷೆ ಸಂದರ್ಭದಲ್ಲಿ ಉಪ ಜಾತಿ ಹೇಳದೇ ಇದ್ದರೂ ಸಹ ಮೀಸಲಾತಿ ಸೌಲಭ್ಯ ಪಡೆಯುವ ಸಂದರ್ಭದಲ್ಲಿ ತಮ್ಮ ಉಪ ಜಾತಿಯನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಯೇ ಪಡೆಯುತ್ತಾರೆ, ಹೀಗಿರುವಾಗ ಇವರನ್ನು ಯಾವ ಗುಂಪಿನಿಂದ ಗುರುತಿಸಬಹುದು? ಇಂತಹ ಹಲವಾರು ಗಂಭೀರ ಅಂಶಗಳನ್ನು ಗಣತಿಗೆ ಒಳಪಡಿಸಲಾಗಿದೆ. ಇದರಿಂದ ಈಗ ಸೂಚಿಸಿರುವ ಶೇಕಡಾವಾರು ಹಂಚಿಕೆಯಲ್ಲಿ  ಬಹುದೊಡ್ಡ ಏರುಪೇರಾಗುವ ಸಾಧ್ಯತೆಗಳಿವೆ.ಕರ್ನಾಟಕದಲ್ಲಿ ಅಸ್ಪೃಶ್ಯತೆಯ ಕಾರಣದಿಂದ ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟರು ಕ್ರಮೇಣ ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಸಾಮಾಜಿಕವಾಗಿ ಸಮಾನತೆ ಕಂಡುಕೊಳ್ಳಲು ಪ್ರಯತ್ನಿಸಿದರು, ಈ ಪ್ರಕ್ರಿಯೆಯಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟರಿಗೆ 1992ರಲ್ಲಿ ಕೇಂದ್ರ ಸರ್ಕಾರ ಪರಿಶಿಷ್ಟರ ಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿದೆ, ಇದರಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿಯ ಸೌಲಭ್ಯ ದೊರೆತಂತಾಗಿದೆ.ಆದರೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯವನ್ನು ಪರಿಶಿಷ್ಟರ ಮೀಸಲಾತಿಯ ನಿಯಮದಡಿಯಲ್ಲಿ  ತರಲಾಗಿಲ್ಲ. ಹೀಗಿರುವಾಗ ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ  ಮತಾಂತರಗೊಂಡ ಕ್ರಿಶ್ಚಿಯನ್ನರಿಗೆ ಯಾವ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ.ಒಮ್ಮೆ ಧಾರ್ಮಿಕ ವಿಧಿವಿಧಾನಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರು ಅಲ್ಪಸಂಖ್ಯಾತರ ಮೀಸಲಾತಿ ಪಡೆಯಲು ಎಲ್ಲಾ ರೀತಿಯಿಂದಲೂ ಅರ್ಹರಾಗುತ್ತಾರೆ. ಆದರೆ ಇವರನ್ನು ಜಸ್ಟೀಸ್ ಸದಾಶಿವ ವರದಿಯಲ್ಲಿ ಮತ್ತೆ ಪರಿಶಿಷ್ಟರ ಪಟ್ಟಿಯಲ್ಲೇ ಉಳಿಸಿ ನಿಜವಾದ ಅಸ್ಪೃಶ್ಯರಿಗೆ ಅನ್ಯಾಯ ಮಾಡಲಾಗಿದೆ.ಮೈಸೂರು ಪ್ರಾಂತದಲ್ಲಿ  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಲ್ಲಿ  ಛಲವಾದಿ ಜನಾಂಗ ಸುಮಾರು ಶೇ 5 ಇದ್ದರೆ, ಉತ್ತರ ಕರ್ನಾಟಕದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮಾದಿಗ ಜನಾಂಗ ಶೇ 45 ರಷ್ಟಿದೆ. ಇವರಿಗೆ ಮೀಸಲಾತಿ ಕಲ್ಪಿಸಲು ಯಾವ ನಿಯಮ ಅನುಸರಿಸಬೇಕು ಎಂಬುದು ನ್ಯಾಯಮೂರ್ತಿ ಸದಾಶಿವ ಅವರ ವರದಿಯಲ್ಲಿ ಸ್ಪಷ್ಟವಾಗಬೇಕು.ವರದಿಯಲ್ಲಿನ ಗೊಂದಲ: ಪ್ರಸ್ತುತ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರು ಪರಿಶಿಷ್ಟರ ಮೀಸಲಾತಿಯನ್ನೇ ಅನುಭವಿಸುತ್ತಿದ್ದಾರೆ, ಜೊತೆಗೆ ಅಲ್ಪಸಂಖ್ಯಾತರ ಮೀಸಲಾತಿಯನ್ನೂ ಸಹ ಅನುಭವಿಸುತ್ತಿದ್ದಾರೆ. ಇದರಿಂದ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರು ಮತ್ತು ಅಸಹಾಯಕ ದಲಿತರು ಇಬ್ಬರಿಗೂ ಮೋಸಮಾಡಿದಂತಾಗುತ್ತದೆ.ಇಂತಹ ಗೊಂದಲ ಕೊನೆಗೊಳ್ಳಬೇಕಾದರೆ ಮತಾಂತರಗೊಂಡ ಕ್ರಿಶ್ಚಿಯನ್ನರಿಗೆ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತವಾಗಿ ಸಲ್ಲಬೇಕಾದ ಮೀಸಲಾತಿಯನ್ನು ನ್ಯಾಯಮೂರ್ತಿ ಸದಾಶಿವ ಅವರ ವರದಿಯಲ್ಲಿ ಶಿಫಾರಸು ಮಾಡಬೇಕು. ಇಲ್ಲವಾದರೆ ಅಲ್ಪಸಂಖ್ಯಾತರ ಮೀಸಲಾತಿ ಪಡೆಯಬೇಕೆಂದಾದರೂ ಸ್ಪಷ್ಟವಾಗಿ ಹೇಳಬೇಕಾಗಿತ್ತು.ಹಾಗೂ ಉಪ ಜಾತಿ ಹೇಳಲಿಚ್ಛಿಸದ ಆರು ಲಕ್ಷ ಅಸ್ಪೃಶ್ಯರನ್ನು ಉಪ ಜಾತಿಯೊಂದಿಗೆ ಗುರುತಿಸದೇ ಇರುವುದು ಕೂಡ ವರದಿಯ ಗೊಂದಲಕ್ಕೆ ಕಾರಣವಾಗಿದೆ. ವರದಿಯಲ್ಲಿ ಮೀಸಲಾತಿಯನ್ನು ವಿಂಗಡಿಸುವಾಗ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಲೆಫ್ಟ್ ಹಾಗೂ ಛಲವಾದಿ ಮತ್ತು ಸಮಾನಾಂತರ ಜಾತಿಗಳಿಗೆ ರೈಟ್ ಎಂತಲೂ ದಾಖಲಿಸಲಾಗಿದೆ. ಇದು ಅವೈಜ್ಞಾನಿಕ ಮತ್ತು ಅಸಂವಿಧಾನಿಕ. ಲೆಫ್ಟ್ ಮತ್ತು ರೈಟ್ ಎನ್ನುವ ಶಬ್ದಗಳು ಮೈಸೂರು ಭಾಗದಲ್ಲಿ ರೂಢಿಯಲ್ಲಿವೆಯಾದರೂ ಇವು ಸಂವಿಧಾನ ಬದ್ಧ ಶಬ್ದಗಳಲ್ಲ. ಮತ್ತೊಂದು ಗಂಭೀರ ಅಂಶವನ್ನು ಗಮನಿಸಲಾಗಿ ಛಲವಾದಿ ಮತ್ತು ಸಂಬಂಧಿತ ಜಾತಿಗಳು ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಬುದ್ಧನ ಅನುಯಾಯಿಗಳೆಂದೂ, ಮಾದಿಗ ಮತ್ತು ಸಂಬಂಧಿತ ಜಾತಿಗಳು ಜಗಜೀವನರಾಂ ಅವರ ಅನುಯಾಯಿಗಳೆಂದೂ ಹೇಳಲಾಗಿದೆ.ಇದು ಸಹ ಆಕ್ಷೇಪಾರ್ಹ ಸಂಗತಿ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅಥವಾ ಜಗಜೀವನರಾಂ ಇವರುಗಳು ನಿರ್ದಿಷ್ಟವಾಗಿ ಒಂದು ಕೋಮುಗಳೊಂದಿಗೆ ಗುರುತಿಸಿಕೊಂಡವರಲ್ಲ. ಇಂತಹ ಹಲವಾರು ಅಸ್ಪಷ್ಟ ಅಂಶಗಳನ್ನು ಸರಿಪಡಿಸಿ ದಮನಿತ ದಲಿತ ಜಾತಿಗಳಿಗೆ ವರ್ಗೀಕರಣ ಮಾಡಿ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ ಮತ್ತು ಸಂಪತ್ತಿನಲ್ಲಿ ಮೀಸಲಾತಿ ಕಲ್ಪಿಸಿದಾಗ ಮಾತ್ರ ನಿಜವಾದ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ. ಇಲ್ಲವಾದರೆ ಕೇವಲ ಇದೊಂದು ರಾಜಕೀಯ ಪ್ರೇರಿತ ವರದಿಯಾಗಿ ಕೆಲವು ರಾಜಕೀಯ ಪಕ್ಷಗಳ ಓಟ ಬ್ಯಾಂಕ್‌ಗಾಗಿ ಮಾಡಿದ ವ್ಯರ್ಥ ಪ್ರಯತ್ನವಾಗುವುದರಲ್ಲಿ ಸಂಶಯವಿಲ್ಲ.ಪರಿಶಿಷ್ಟರಲ್ಲಿಯೇ ಒಳಮೀಸಲಾತಿ ಕಲ್ಪಿಸಲು ಈ ಸದ್ಯ ಸಂವಿಧಾನದಲ್ಲಿ ಅವಕಾಶವಿಲ್ಲ, ಆದರೆ ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಅಸಮತೋಲನಗಳನ್ನು ಪರಿಗಣಿಸಿ ಜನಸಂಖ್ಯೆ ಆಧಾರದ ಮೇಲೆ ಸಂವಿಧಾನದ ಪರಿಚ್ಛೇಧ 341 ಕ್ಕೆ ತಿದ್ದುಪಡಿ ತರುವ ಮೂಲಕ ಈ ಸೌಲಭ್ಯ ಕಲ್ಪಿಸಬಹುದಾಗಿದೆ. ಇದಕ್ಕೆ ಸಂಸತ್ತಿನ ಒಪ್ಪಿಗೆ ಪಡೆಯುವುದು ಕಡ್ಡಾಯ. 

   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry