ಶನಿವಾರ, ಏಪ್ರಿಲ್ 17, 2021
27 °C

ದಲಿತರ ಮನೆಗಳಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಮೇಲ್ಜಾತಿಯ ಯುವತಿಯೊಬ್ಬಳು ದಲಿತ ಯುವಕನನ್ನು ಮದುವೆಯಾದ ಹಿನ್ನೆಲೆಯಲ್ಲಿ ಧರ್ಮಪುರಿ ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಜಾತಿ ಕಲಹ ಉದ್ಭವಿಸಿದ್ದು, 250ಕ್ಕೂ ಹೆಚ್ಚು ದಲಿತರ ಮನೆಗಳನ್ನು ಸುಟ್ಟುಹಾಕಲಾಗಿದೆ.ವಾರದ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ಪಿ. ಮುತುರಾಮಲಿಂಗ ತೇವರ್ ಅವರ ಜನ್ಮದಿನದ ಸಂದರ್ಭದಲ್ಲಿ ಉದ್ಭವಿಸಿದ ಜಾತಿ ಕಲಹದಿಂದಾಗಿ ದಕ್ಷಿಣ ತಮಿಳುನಾಡಿನ ಜಿಲ್ಲೆಗಳಲ್ಲಿ 9 ಜನ ಮೃತಪಟ್ಟ ಘಟನೆ ಇನ್ನೂ ಹಸಿರಾಗಿರುವಾಗಲೇ, ಧರ್ಮಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಧರ್ಮಪುರಿ ಸಮೀಪದ ನಾಥಮ್, ಅಣ್ಣಾನಗರ ಹಾಗೂ ಕೊಂಡಂಪಟ್ಟಿ ಗ್ರಾಮಗಳ ದಲಿತ ಕಾಲನಿಯ 268 ಗುಡಿಸಲುಗಳಿಗೆ ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ವನ್ನಿಯಾರ್ ಸಮುದಾಯದ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ.ವಿವರ: ನಾಥಮ್‌ನ ದಲಿತ ಕಾಲನಿಗೆ ಸೇರಿದ್ದ ಇಳವರಸನ್ (23) ಎಂಬ ಯುವಕ ಪಕ್ಕದ ಸೆಲ್ಲಂಕೊಟ್ಟೈ ಗ್ರಾಮದ ವನ್ನಿಯಾರ್ ಸಮುದಾಯದ ದಿವ್ಯಾ (20) ಎಂಬಾಕೆಯನ್ನು ಪ್ರೀತಿಸಿದ್ದ. ಮನೆಯವರ ವಿರೋಧ ಲೆಕ್ಕಿಸದೇ ಈ ಇಬ್ಬರು ಅಕ್ಟೋಬರ್‌ನಲ್ಲಿ ಮದುವೆಯಾಗಿದ್ದರು.

ಪೊಲೀಸ್ ರಕ್ಷಣೆಯಲ್ಲಿ ದೂರದ ಊರಿನಲ್ಲಿ ಸಂಸಾರ ಆರಂಭಿಸಿದ್ದರು. ಆಗಿನಿಂದ ಈ ಭಾಗದ ಹಳ್ಳಿಗಳಲ್ಲಿ ದಲಿತರ ವಿರುದ್ಧ ಆಕ್ರೋಶ ಎದ್ದಿತ್ತು. ಬೂದಿ ಮುಚ್ಚಿದ ಕೆಂಡದಂಥ ವಾತಾವರಣವಿತ್ತು.

ಮನೆಗೆ ಮರಳುವಂತೆ ದಿವ್ಯಾಳ ತಂದೆ ನಾಗರಾಜ್ ಮಗಳ ಮೇಲೆ ಒತ್ತಾಯ ಹೇರಿದ್ದ. ಆಕೆ ಮರಳಲು ನಿರಾಕರಿಸಿದಾಗ ಬುಧವಾರ ಆತ್ಮಹತ್ಯೆ ಮಾಡಿಕೊಂಡ.ಇದರಿಂದ ಕೆರಳಿದ ವನ್ನಿಯಾರ್ ಸಮುದಾಯದ 1000ಕ್ಕೂ ಹೆಚ್ಚು ಜನ ಬುಧವಾರ ಈ ದಲಿತರ ಕಾಲನಿಗಳಿಗೆ ಗುಂಪು, ಗುಂಪಾಗಿ ನುಗ್ಗಿದರು. ಜನರನ್ನು ಅಲ್ಲಿಂದ ಓಡಿಸಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದರು ಎನ್ನಲಾಗಿದೆ.

ಗಲಭೆಯಿಂದ ಸಂತ್ರಸ್ತರಾದ ದಲಿತರಿಗೆ ತಮಿಳುನಾಡು ಸರ್ಕಾರ ಆಹಾರ, ಬಟ್ಟೆ ಇತ್ಯಾದಿ ಸೌಲಭ್ಯ ಒದಗಿಸಿದ್ದು, 50,000 ರೂಪಾಯಿ ಪರಿಹಾರ ನೀಡಲು ಸಹ ಆದೇಶಿಸಿದೆ.ಬಂಧನ (ಪಿಟಿಐ ವರದಿ): ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ 92 ಜನರನ್ನು ಬಂಧಿಸಲಾಗಿದ್ದು, ಅಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆ ಭಾಗದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಲ್ಲಿ ಜನಜೀವನ ಈಗ ಸಹಜ ಸ್ಥಿತಿಗೆ ಮರಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.