ಬುಧವಾರ, ಫೆಬ್ರವರಿ 24, 2021
24 °C

ದಲಿತ ಏಳಿಗೆಯ ಬಂಡವಾಳದ ದಾರಿಯಲ್ಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಲಿತ ಏಳಿಗೆಯ ಬಂಡವಾಳದ ದಾರಿಯಲ್ಲಿ...

* ‘ಡಿಐಸಿಸಿಐ’ ಸ್ಥಾಪನೆಗೆ ಸ್ಫೂರ್ತಿ ಏನು?

‘ಡಿಐಸಿಸಿಐ’ ಸ್ಥಾಪನೆಗೆ ಮುಂಚೆ ನನ್ನನ್ನು ಕಾಡಿದ್ದು– ನಮ್ಮ ದೇಶಕ್ಕೆ ‘ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ’ ಅಥವಾ ‘ಭಾರತೀಯ ಕೈಗಾರಿಕಾ ಒಕ್ಕೂಟ’ದಂಥ ಔದ್ಯೋಗಿಕ ಪ್ರಾತಿನಿಧಿಕ ಸಂಸ್ಥೆಗಳ ಅಗತ್ಯ ಯಾವ ರೀತಿಯದು ಎನ್ನುವ ಅಂಶ. ಈ ಸಂಸ್ಥೆಗಳು ರಾಜಕೀಯ ನಾಯಕರು ಹಾಗೂ ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರಿ, ತಮ್ಮ ಸದಸ್ಯರುಗಳ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸಿಕೊಳ್ಳುತ್ತವೆ. ದಲಿತರು ಕೂಡ ಇಂತಹದ್ದೇ ಹಾದಿ ಹಿಡಿದರೆ ಹೇಗೆ ಎನ್ನುವ ಚಿಂತನೆಯೇ ‘ಡಿಐಸಿಸಿಐ’ ರೂಪುಗೊಳ್ಳಲು ಕಾರಣವಾಯಿತು. ಆದರೆ, ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತರು ಯಾವುದೇ ವ್ಯಾಪಾರ, ವ್ಯವಹಾರ ಹಾಗೂ ಉದ್ಯಮಗಳನ್ನು ಈ ಹಿಂದೆ ಹೊಂದಿರುವ ಇತಿಹಾಸ ಕಾಣಲಿಲ್ಲ.ಬದಲಿಗೆ, ದಲಿತರಲ್ಲಿ ವಿದ್ಯಾರ್ಥಿ ಸಂಘ– ಸಂಸ್ಥೆಗಳಿಂದ ರಾಜಕೀಯದವರೆಗೆ ಸಾವಿರಾರು ಸಂಘಟನೆಗಳಿವೆ. ಈ ಸಂಘಟನೆಗಳು ಅವರನ್ನು ಆರ್ಥಿಕವಾಗಿ ಸದೃಢಗೊಳಿಸಿ, ಅವರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ವಿಫಲವಾಗಿವೆ. ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ಯುಗದಲ್ಲಿ ದಲಿತರು ಔದ್ಯೋಗಿಕ ಕ್ಷೇತ್ರವನ್ನು ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲೂ ಪರಿಣತಿ ಹೊಂದುತ್ತಿದ್ದಾರೆ. ದಲಿತರ ಅಭ್ಯುದಯಕ್ಕಾಗಿ ಅಂಬೇಡ್ಕರ್‌ ತೋರಿದ ಅತ್ಯಂತ ಪ್ರಮುಖವಾದ ಆರ್ಥಿಕ ಹಾದಿಯನ್ನು ಅವರಿನ್ನೂ ಕ್ರಮಿಸಿಲ್ಲ. ಈಗಿನ ಜಾಯಮಾನಕ್ಕೆ ಆರ್ಥಿಕ ಸದೃಢತೆಯೊಂದೇ ದಲಿತರ ಸರ್ವಾಂಗೀಣ ಅಭಿವೃದ್ಧಿಯ ಸಾಧನ. ಈ ಎಲ್ಲಾ ಅಂಶಗಳು ‘ಡಿಐಸಿಸಿಐ’ ಹುಟ್ಟಿಗೆ ಕಾರಣವಾದವು.* ಪರಿಶಿಷ್ಟ ಜಾತಿ ಮತ್ತು ಪಂಗಡದ ಉದಯೋನ್ಮುಖ ಉದ್ಯಮಿಗಳು ‘ಡಿಐಸಿಸಿಐ’ ಸದಸ್ಯರಾಗುವುದು ಹೇಗೆ? ಅವರಿಗೆ ನೀವು ಯಾವ ರೀತಿ ನೆರವಾಗುವಿರಿ?

ಉತ್ಪಾದನಾ ಕ್ಷೇತ್ರ (ಕೆಮಿಕಲ್ಸ್‌, ಕೃಷಿ  ಮತ್ತು ಆಹಾರ ಉತ್ಪನ್ನಗಳು, ಪ್ಲಾಸ್ಟಿಕ್‌, ಟೆಕ್ಸ್‌ಟೈಲ್ಸ್‌, ಪೆಸ್ಟ್‌ ಕಂಟ್ರೊಲ್‌, ಲೋಹ, ಮರೈನ್‌ ಎಂಜಿನಿಯರಿಂಗ್, ಸೌರಶಕ್ತಿ, ಸಕ್ಕರೆ, ರಿಫೈನಿಂಗ್‌ ಇತ್ಯಾದಿ), ಕಟ್ಟಡ ನಿರ್ಮಾಣ ಹಾಗೂ ಸೇವಾ ವಲಯಗಳಲ್ಲಿ ತೊಡಗಿರುವ ದಲಿತ ಮಾಲೀಕರು, ಸಂಸ್ಥೆಯ ವೆಬ್‌ಸೈಟ್‌ನಲ್ಲಿರುವ (www.Dicci.org) ಅರ್ಜಿ ನಮೂನೆಯನ್ನು ಪಡೆದುಕೊಂಡು ತಾವು ನಡೆಸುತ್ತಿರುವ ಉದ್ಯಮದ ವಿವರಗಳನ್ನು ತುಂಬಿ, ಸಹಿ ಮಾಡಿ ಸಂಸ್ಥೆಯ ಇಮೇಲ್‌ಗೆ ಕಳುಹಿಸಬೇಕು. ಅರ್ಜಿಯನ್ನು ಪರಿಶೀಲಿಸಿದ ನಂತರ ಅವರಿಗೆ ಸದಸ್ಯತ್ವ ನೀಡುತ್ತೇವೆ. ಉದ್ಯಮಶೀಲತೆಗೆ ಸಂಬಂಧಿಸಿದ ಮಾರ್ಗದರ್ಶನ, ಔದ್ಯೋಗಿಕ ಜಾಲ (ಬಿಜಿನೆಸ್‌ ನೆಟ್‌ವರ್ಕಿಂಗ್‌), ಹಣಕಾಸು ಮತ್ತು ತೆರಿಗೆ ನಿರ್ವಹಣೆ ನೆರವು, ಕೈಗಾರಿಕಾ ಸಂಯೋಜನೆ (ಇಂಡಸ್ಟ್ರಿ ಲಿಂಕೇಜ್‌), ಸೇವಾ ಗುಣಮಟ್ಟ ನಿರ್ವಹಣೆ, ಪ್ರಮಾಣೀಕರಣ, ಮಾರ್ಗದರ್ಶನ, ತರಬೇತಿ, ಕೈಗಾರಿಕಾ ಮತ್ತು ವಾಣಿಜ್ಯ ಮೇಳ, ಸಮಾವೇಶಗಳು ಹಾಗೂ ವಿಚಾರ ಸಂಕಿರಣಗಳ ಮೂಲಕ ‘ಡಿಐಸಿಸಿಐ’ ತನ್ನ ಸದಸ್ಯರಿಗೆ ನೆರವು ನೀಡುತ್ತದೆ.* ಹತ್ತು ವರ್ಷಗಳ ಅವಧಿಯಲ್ಲಿ ‘ಡಿಐಸಿಸಿಐ’ ಎದುರಿಸಿದ ಸವಾಲುಗಳೇನು?

ದೇಶದೆಲ್ಲೆಡೆ ಚದುರಿರುವ ಎಸ್‌ಸಿ/ಎಸ್‌ಟಿ ಉದ್ಯಮಿಗಳ ನಡುವೆ ಪರಸ್ಪರ ವಿಶ್ವಾಸ ವೃದ್ಧಿಸಿ, ಉದ್ದೇಶವೊಂದರ ಈಡೇರಿಕೆಗಾಗಿ ಒಂದೆಡೆ ಸೇರಿಸುವುದೇ ಆರಂಭದಲ್ಲಿ ನಮಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದಕ್ಕಾಗಿ ನಾವು ವಿವಿಧ ಉದ್ಯಮ ಕ್ಷೇತ್ರಗಳ ಹೆಸರಾಂತ ತಜ್ಞರು ಮತ್ತು ಚಿಂತಕರನ್ನು ನಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಂಡು, ಉದ್ಯಮಿಗಳ ಮಧ್ಯೆ ಪರಸ್ಪರ ನಂಬಿಕೆ ಹುಟ್ಟುವಂತೆ ಮಾಡಿದೆವು. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅವರೆಲ್ಲರಿಗೂ ಹಲವು ಸೇವೆಗಳನ್ನು ಒದಗಿಸುತ್ತಾ ಬಂದೆವು.ಆರಂಭಿಕ ಯೋಜನೆಗಳನ್ನು ರೂಪಿಸಿ, ಅವುಗಳನ್ನು  ಕಾರ್ಯರೂಪಕ್ಕೆ ತರುವಾಗ ಹಣಕಾಸು ಲಭ್ಯತೆ, ಸದಸ್ಯರ ಅಗತ್ಯಕ್ಕೆ ಅನುಗುಣವಾಗಿ ವೃತ್ತಿಪರ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳ ರಚನೆ ಹಾಗೂ ಈಗಾಗಲೇ ಯಶಸ್ವಿಯಾಗಿ ಉದ್ಯಮಗಳನ್ನು ನಡೆಸುತ್ತಿರುವ ಉದ್ಯಮಿಗಳ ಚಟುವಟಿಕೆ­ಯನ್ನು ವಿಸ್ತರಿಸಿ, ಮತ್ತಷ್ಟು ಪ್ರಗತಿ ಕಾಣುವಂತೆ ಮಾಡುವುದು ನಮ್ಮ ಮುಂದಿದ್ದ ಪ್ರಮುಖ ಸವಾಲುಗಳಾಗಿದ್ದವು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಕ್ಕೆ ವಿವಿಧ ಕ್ಷೇತ್ರಗಳ ಜನರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬೆಂಬಲ ನೀಡಿ, ‘ಡಿಐಸಿಸಿಐ’ ಮುನ್ನಡೆಗೆ ನೆರವಾದರು.* ‘ಡಿಐಸಿಸಿಐ’ನ ಒಂದು ದಶಕದ ಪ್ರಮುಖ ಸಾಧನೆಗಳೇನು?

ಒಂದು ದಶಕದ ಅವಧಿಯಲ್ಲಿ ‘ಡಿಐಸಿಸಿಐ’ ಹಲವು ಸಾಧನೆಗಳನ್ನು ಮಾಡಿದೆ. ಜಾಗತಿಕ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ವಾಣಿಜ್ಯ ಮೇಳಗಳನ್ನು ಆಯೋಜಿಸಿದ್ದೇವೆ. ಈ ಮೇಳಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳಿಂದ ಹಿಡಿದು, ಸರ್ಕಾರದ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಆ ಮೂಲಕ ದಲಿತರ ಉದ್ಯಮಶೀಲತೆ ಮತ್ತು ಅವರಲ್ಲಿರುವ ಪ್ರತಿಭೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದೇವೆ. We want connections, not concessions ಎನ್ನುವುದು ನಮ್ಮ ತತ್ವ.ಅದರಂತೆ, ದಲಿತರ ಮಾಲೀಕತ್ವದ 100ಕ್ಕೂ ಹೆಚ್ಚು ಕಂಪೆನಿಗಳು ಮುಂಚೂಣಿ ಉದ್ಯಮಗಳ ಜತೆ ವ್ಯವಹಾರ ಸಂಪರ್ಕ ಸಾಧಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಭಾರತದ ರಾಷ್ಟ್ರೀಯ ಕೈಗಾರಿಕಾ ಮಹಾಮಂಡಲ ಹಾಗೂ ಭಾರತದ ಸರ್ಕಾರದ ಯೋಜನಾ ಆಯೋಗದಲ್ಲಿ ಪ್ರಾತಿನಿಧ್ಯತೆ ಹೊಂದಿರುವ ನಾವು, ರಾಷ್ಟ್ರೀಯ ಮತ್ತು ಕೈಗಾರಿಕಾ ನೀತಿ ನಿರೂಪಣೆ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರದಾರರಾಗುವ ಮಟ್ಟಕ್ಕೆ ಬೆಳೆದಿದ್ದೇವೆ. ನಮ್ಮ ಬೆನ್ನ ಹಿಂದೆ ಚಂದ್ರಬಾನ್‌ ಪ್ರಸಾದ್‌ರಂತಹ ಚಿಂತಕರು ಸೇರಿದಂತೆ ವಿವಿಧ ಕ್ಷೇತ್ರಗಳ ಅನೇಕ ತಜ್ಞರ ಮಾರ್ಗದರ್ಶನವಿದೆ. ಇದು ಆರಂಭ ಅಷ್ಟೆ, ನಾವು ಕ್ರಮಿಸಬೇಕಾದ ಹಾದಿ ಇನ್ನು ಬಹಳಷ್ಟಿದೆ.* ತಮ್ಮ ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆಯೇ? ದೇಶದಲ್ಲಿ ‘ಡಿಐಸಿಸಿಐ’ ಜಾಲ ಹೇಗೆ ಹಬ್ಬಿದೆ?

ಸಾವಿರಕ್ಕೂ ಹೆಚ್ಚು ಮಂದಿ ಇದುವರೆಗೆ ‘ಡಿಐಸಿಸಿಐ’ ಸದಸ್ಯತ್ವ ಪಡೆದಿದ್ದಾರೆ. ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಸಾಧನೆಗಾಗಿ ನಾನೂ ಸೇರಿದಂತೆ ನಮ್ಮ ಬಳಗದ ನಾಲ್ವರಿಗೆ (ಕಲ್ಪನಾ ಸರೋಜ್‌, ರಾಜೇಶ್‌ ಸರಿಯಾ, ರವಿ ಕುಮಾರ್‌ ನರ್ರಾ) ‘ಪದ್ಮಶ್ರೀ’ ಪುರಸ್ಕಾರ ಸಂದಿದೆ. ಈ ಗೌರವ ದಲಿತ ಉದ್ಯಮಿಗಳ ಚಟುವಟಿಕೆಗಳು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವುದರ ಪ್ರತೀಕವಾಗಿದೆ. ಪುಣೆಯಲ್ಲಿ ಆರಂಭಗೊಂಡ ‘ಡಿಐಸಿಸಿಐ’ ಸದ್ಯ ಮಹಾರಾಷ್ಟ್ರ,  ದೆಹಲಿ ಹಾಗೂ ಉತ್ತರಪ್ರದೇಶದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿ­ಸುತ್ತಿದ್ದು, 201*ರ ಹೊತ್ತಿಗೆ ಪಶ್ಚಿಮ ಬಂಗಾಳ, ಬಿಹಾರ ಹಾಗೂ ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಖೆಗಳನ್ನು ತೆರೆಯಲಿದ್ದೇವೆ. ಸದ್ಯದಲ್ಲೇ ದೆಹಲಿಯಲ್ಲಿ ಕಚೇರಿ ತೆರೆದು, ಎಸ್‌ಸಿ/ಎಸ್‌ಟಿ ಉದ್ಯಮಿಗಳ ರಾಷ್ಟ್ರೀಯ ಮಟ್ಟದ ವ್ಯಾಪಾರ ಮೇಳವನ್ನು ಆಯೋಜಿಸಲಿದ್ದೇವೆ.* ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು ‘ಹೊಸ ಸಾರ್ವಜನಿಕ ಖರೀದಿ ನೀತಿ –2012’ರ ಅನ್ವಯ ಲಾಭ ಪಡೆಯಲು ನಿಮ್ಮಲ್ಲಿನ ಯೋಜನೆಗಳೇನು?

ದಲಿತ ಉದ್ಯಮಿಗಳು ಮಾರುಕಟ್ಟೆ ಮತ್ತು ವ್ಯಾಪಾರದ ಅವಕಾಶಗಳನ್ನು ಹೆಚ್ಚಿನ ಮಟ್ಟದಲ್ಲಿ ಪಡೆಯಲು ‘ಹೊಸ ಸಾರ್ವಜನಿಕ ಖರೀದಿ ನೀತಿ–2012’ ಹೆಚ್ಚಿನ ಅವಕಾಶ ಕಲ್ಪಿಸಿದೆ. ಇದರ ಅನ್ವಯ ವರ್ಷಕ್ಕೆ ಶೇ *ರಷ್ಟು ಸರಕು ಮತ್ತು ಸೇವೆಗಳನ್ನು ಎಸ್‌ಸಿ/ಎಸ್‌ಟಿ ಉದ್ಯಮ ಮೂಲಗಳಿಂದ ಖರೀದಿಸಬೇಕಾಗಿದೆ. ಈ ನೀತಿಯ ಲಾಭ ಪಡೆಯುವ ಸಲುವಾಗಿ ನಾವು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಲಹಾ ಸಂಸ್ಥೆಯಾದ ‘ವಾರಹಾದ್‌ ಗ್ರೂಪ್‌’ ಜತೆ ಸೇರಿಕೊಂಡು ವರದಿಯೊಂದನ್ನು ತಯಾರಿಸಿದ್ದೇವೆ. ಅದರಂತೆ, 2020ನೇ ಹಣಕಾಸು ವರ್ಷಕ್ಕೆ ಭಾರತದ ‘ಎಂಎಸ್‌ಎಂಇ’ ಸಾರ್ವಜನಿಕ ಖರೀದಿ 28 ಲಕ್ಷ ಕೋಟಿ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಶೇ *ರಷ್ಟು ಸರಕು ಮತ್ತು ಸೇವೆಗಳನ್ನು ಎಸ್‌ಸಿ/ಎಸ್‌ಟಿ ಉದ್ಯಮಗಳಿಂದ ಖರೀದಿಸಬೇಕಾಗಿ­ರುವುದರಿಂದ, ಆ ಉದ್ಯಮಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ.* ಬ್ಯಾಂಕ್‌ ನಿಧಿಗಳನ್ನು ಹೊರತುಪಡಿಸಿದರೆ, ದಲಿತ ಉದ್ಯಮಿಗಳಿಗೆ ಇರುವ ಇತರೆ ಪ್ರಮುಖ ಹಣಕಾಸಿನ ಮೂಲಗಳಾವುವು?

ದಲಿತ ಉದ್ಯಮಿಗಳನ್ನು ಕೇಂದ್ರವಾಗಿಟ್ಟುಕೊಂಡು ‘ಡಿಐಸಿಸಿಐ’ ವತಿಯಿಂದ ‘ಎಸ್‌ಎಂಇ ನಿಧಿ’ (ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿಧಿ) ಸ್ಥಾಪಿಸಲಾಗಿದೆ. ಆ ಮೂಲಕ ಉದಯೋನ್ಮುಖ ದಲಿತ ಉದ್ಯಮಿಗಳಿಗೆ ಹಣಕಾಸು ನೆರವು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. 201*ರ ಹೊತ್ತಿಗೆ ಇದರ ಪ್ರಕ್ರಿಯೆಯನ್ನು ಮುಗಿಸಿ ಎಸ್‌ಸಿ/ಎಸ್‌ಟಿ ಉದ್ಯಮಿಗಳು ನಡೆಸುತ್ತಿರುವ ಉದ್ದಿಮೆಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಲಾಗುವುದು. ‘ಎಸ್‌ಎಂಇ ನಿಧಿ’ ಹಾಗೂ ಬ್ಯಾಂಕ್‌ಗಳಿಂದ ಹಣಕಾಸಿನ ನೆರವು ಪಡೆಯುವ ಜತೆಗೆ ಖಾಸಗಿ ಷೇರು, ಅಭಿವೃದ್ಧಿ ಹಂತದಲ್ಲಿರುವ ಷೇರು ಮಾರುಕಟ್ಟೆಯ ಬಿಎಸ್‌ಇ, ಎಸ್‌ಎಂಇ ವಿನಿಯಮ ಹಾಗೂ  ‘ಇನ್‌ಸ್ಟಿಟ್ಯೂಷನಲ್‌ ಟ್ರೇಡಿಂಗ್ ಫ್ಲಾಟ್‌ಫಾರಂ’ (ಐಟಿಪಿ) ಇತ್ತೀಚೆಗೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಧನ ಸಹಾಯ ನೀಡುವ ಮೂಲಗಳಾಗಿ ಹೊರಹೊಮ್ಮುತ್ತಿವೆ. ಇವುಗಳ ಲಾಭ ಪಡೆದುಕೊಳ್ಳಲು ದಲಿತ ಉದ್ಯಮಿಗಳು ಮುಂದಾಗಬೇಕು.* ನಿಮ್ಮ ಮುಂದಿನ ಐದು ವರ್ಷಗಳ ಯೋಜನೆ ಏನು? ಇತರೆ ಔದ್ಯೋಗಿಕ ಸಂಸ್ಥೆಗಳಾದ ‘ಎನ್‌ಎಸ್‌ಐಸಿ’, ‘ಎಫ್‌ಐಸಿಸಿಐ’, ‘ಸಿಐಐ’ಗಳಿಗಿಂತ ಅವು ಹೇಗೆ ಭಿನ್ನ?

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಉತ್ತೇಜಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ‘ಎನ್‌ಎಸ್‌ಐಸಿ’, ‘ಎಫ್‌ಐಸಿಸಿಐ’, ‘ಸಿಐಐ’ ಭಾರತದ ಅತ್ಯಂತ ದೊಡ್ಡ ಕಾರ್ಪೋರೇಟ್‌ಗಳಾಗಿವೆ. ಆದರೆ, ಪರಿಶಿಷ್ಟ ಜಾತಿ/ಪಂಗಡ ಸಮುದಾಯದ ಉದ್ಯಮಿಗಳು ಸವಾಲುಗಳು ಇತರೆಲ್ಲರಿಗಿಂತ ಭಿನ್ನವಾಗಿವೆ. ಕಳೆದ ಎರಡು ಸಾವಿರ ವರ್ಷಗಳಿಂದ ಈ ಸಮುದಾಯಗಳು ಶಿಕ್ಷಣ, ಆರೋಗ್ಯ, ಉದ್ಯೋಗ, ವ್ಯವಹಾರ ಸೇರಿದಂತೆ ಹಲವು ಅವಕಾಶಗಳಿಂದ ವಂಚಿತವಾಗಿವೆ. 1950ರಲ್ಲಿ ದೇಶ ಗಣರಾಜ್ಯ ಆದಾಗಿನಿಂದ ಈ ಸಮುದಾಯಗಳಿಗೆ ಶಿಕ್ಷಣ ಪಡೆಯುವ ಯೋಗ ಕೂಡಿ ಬಂತಲ್ಲದೆ, ಇದರ ಜತೆಗೆ ಸಂವಿಧಾನದ ಮೂಲಕ ಕೆಲವು ಹಕ್ಕುಗಳು ಹಾಗೂ ಸೌಲಭ್ಯಗಳು ದಕ್ಕಿದವು. 1991ರಲ್ಲಿ ಭಾರತದ ಆರ್ಥಿಕತೆ ಉದಾರೀಕರಣಕ್ಕೆ ತೆರೆದುಕೊಂಡ ನಂತರವೇ ಸ್ವಲ್ಪಮಟ್ಟಿಗೆ ಔದ್ಯೋಗಿಕ ಪ್ರಜ್ಞೆ ಬೆಳೆದು, ಕೆಲವರು ಉದ್ಯಮಗಳು ವ್ಯವಹಾರಗಳನ್ನು ಶುರು ಮಾಡಿದರು.‘ಡಿಐಸಿಸಿಐ’ ಈ ಸಮುದಾಯಗಳ ಯುವಜನತೆಯಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಸ್ಥಾಪನೆಯಾಗಿದೆ. ಜತೆಗೆ ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ, ಔದ್ಯೋಗಿಕ ಜಗತ್ತಿಗೆ ಅವರನ್ನು ಪರಿಚಯಿಸುವ ಇರಾದೆ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವರ್ಷಗಳಲ್ಲಿ ಕೌಶಲ್ಯ ಅಭಿವೃದ್ಧಿ ಮಂಡಳಿ, ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ, ಸಹಾಯವಾಣಿ, ವೆಂಚರ್‌ ಕ್ಯಾಪಿಟಲ್ ಫಂಡ್‌, ದಲಿತ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದೇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.