ಗುರುವಾರ , ಅಕ್ಟೋಬರ್ 17, 2019
21 °C

ದಲಿತ ಚಳವಳಿಗಳ ಐಕ್ಯತೆ ಅಗತ್ಯ: ದಸಂಸ ಗೋಷ್ಠಿ

Published:
Updated:

ಮಂಡ್ಯ: ಸಮಾಜದಲ್ಲಿ ಬ್ರಾಹ್ಮಣಶಾಹಿ ಮನೋಭಾವ ಮತ್ತು ದಲಿತ ಸಮುದಾದಲ್ಲಿನ ಕೀಳರಿಮೆ, ಲೋಪಗಳೇ ಅಸ್ಪೃಶ್ಯತೆ ಜೀವಂತವಾಗಿರಲು  ಕಾರಣ ಎಂದು ಭಾನುವಾರ ಇಲ್ಲಿ ನಡೆದ `ಜಾತಿ ವಿನಾಶ~ ಗೋಷ್ಠಿಯಲ್ಲಿ ವ್ಯಕ್ತವಾಯಿತು. ದಲಿತ ಸಂಘರ್ಷ ಸಮಿತಿ ಸಮನ್ವಯ ವೇದಿಕೆ ಕೋರೆಗಾಂವ್ ಮಹಾಯುದ್ಧದ ಅಸ್ಪೃಶ್ಯರ ವಿಜಯ ದಿನ ನಿಮಿತ್ತ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಧರ್ಮ  ಎಂದಿಗೂ ಶೋಷಿತರ ಹಕ್ಕುಗಳನ್ನು ಕಸಿಯಬಾರದು. ಅಂಥ ಧರ್ಮವನ್ನು ನಾಶ ಮಾಡುವುದೇ ಒಳ್ಳೆಯದು ಎಂದರು. ಪ್ರಾಧ್ಯಾಪಕ ಡಾ.ವಿ.ಷಣ್ಮುಗಂ, ಸಮಾಜದಲ್ಲಿ ಬುದ್ಧನ ನಂತರ ಸಾಮಾಜಿಕ ಕ್ರಾಂತಿ ನಡೆದಿಲ್ಲ. ಚತುವರ್ಣ ವ್ಯವಸ್ಥೆ ಹುಟ್ಟು ಹಾಕಿದ ಜಾತಿ ಪಿಡುಗು, ಶೂದ್ರರಿಗೆ ನೈತಿಕ, ರಾಜಕೀಯ ಶಕ್ತಿಯನ್ನು ನಿರಾಕರಿಸಿದ್ದು ಎಂದರು. ಚರ್ಚೆಗೆ ಚಾಲನೆ ನೀಡಿದ ವೇದಿಕೆಯ ಮುಖಂಡ ಗುರುಪ್ರಸಾದ್‌ಕೆರೆಗೋಡು, ದಲಿತರು ಮತ್ತು ದಲಿತ ಚಳವಳಿಗಳು ಐಕ್ಯತೆ ಸಾಧಿಸುವುದು ಪ್ರಸ್ತುತ ವ್ಯವಸ್ಥೆಯಲ್ಲಿ ಅನಿವಾರ್ಯ. ಐಕ್ಯತೆಯಲ್ಲಿ ಸಾಗುತ್ತಾ ಗೌರವ ಮತ್ತು ಸಮಾನತೆ ಪಡೆಯಬೇಕಾಗಿದೆ ಎಂದರು. ಪ್ರಸ್ತುತ ಸಮಾಜ ಬ್ರಾಹ್ಮಣಶಾಹಿಯ ಹಿಡಿತದಲ್ಲಿದೆ. ಈ ಬದಲಾವಣೆಗೆ ಅಂತರ್ಜಾತಿ ವಿವಾಹ ಹೆಚ್ಚಾಗಿ ನಡೆಯುವುದೇ ಪಿಡುಗು ನಿವಾರಣೆಗೆ ಪರಿಹಾರ ಎಂಬ ಅಭಿಪ್ರಾಯವೂ ಗೋಷ್ಠಿಯಲ್ಲಿ ವ್ಯಕ್ತವಾಯಿತು. ವೇದಿಕೆ ಮುಖಂಡ ಎಂ.ಬಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮಂಗ್ಳೂರು ವಿಜಯ, ವೆಂಕಟಗಿರಿಯಯ್ಯ, ಬ್ಯಾಡರಹಳ್ಳಿ ಪ್ರಕಾಶ್, ಕೆಂಪಯ್ಯ ಸಾಗ್ಯ ಉಪಸ್ಥಿತರಿದ್ದರು.

Post Comments (+)