ಮಂಗಳವಾರ, ಮೇ 11, 2021
25 °C

ದಲಿತ ದೃಷ್ಟಿಪ್ರಜ್ಞೆಗೊಂದು ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೃಶ್ಯಕಲೆಯಲ್ಲಿ ದಲಿತ ಸಂವೇದನೆ ಕುರಿತ ಚರ್ಚೆಯು ಇನ್ನೂ ಬಾಲ್ಯಾವಸ್ಥೆಯಲ್ಲಿದೆ. ಆದರೆ, ಆ ಸಂವೇದನೆಗಳ ಅಸಲಿ ಮೊತ್ತ ಮತ್ತು ಪ್ರೌಢಿಮೆಯು ವಿಸ್ತೃತವಾಗಿದೆ. ಅಂದರೆ ಚಿತ್ರಕಲೆಯಲ್ಲಿ ದಲಿತ ಸಿದ್ಧಾಂತದ ಸಾಧ್ಯತೆ ಈಗಾಗಲೇ ಸಾಕಷ್ಟಿದ್ದರೂ ಅದರ ಇರುವಿಕೆಯನ್ನೂ ಒಪ್ಪದವರೇ ಹೆಚ್ಚು.ಇದೊಂದು ರೀತಿಯಲ್ಲಿ ಉದ್ದೇಶಪೂರ್ವಕವಾದ ಮರೆವಿನ ಸಾಂಸ್ಕೃತಿಕ ರಾಜಕಾರಣವೂ ಹೌದು. ಕರ್ನಾಟಕದ ಸಂದರ್ಭದಲ್ಲಿ ಸಿ.ಚಂದ್ರಶೇಖರ್ ಅವರು ಸುಮಾರು ಒಂದೂವರೆ ದಶಕದ ಹಿಂದೆ (1994) `ತುಳಿತಕ್ಕೊಳಗಾದವರು ಮತ್ತು ನಾವು~ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಕಲಾಸೃಷ್ಟಿಯ ಶಿಬಿರವನ್ನು ಏರ್ಪಡಿಸಿದ್ದರು.ವೈ.ಎಸ್. ಅಲೋನೆ ಎಂಬ ದೆಹಲಿಯ ವಿಮರ್ಶಕರು ಸವಿ ಸಾವರ್ಕರ್ ಎಂಬ ಕಲಾವಿದರ ದೃಶ್ಯಕೃತಿಗಳನ್ನು ಕುರಿತು ಬರೆದಿರುವ ಲೇಖನಗಳು, ಕೆಟಲಾಗ್‌ಗಳು ಅಪರೂಪಕ್ಕೆಂಬಂತೆ ಈ ದಲಿತತ್ವದ ದೃಶ್ಯ ಸಾಧ್ಯತೆಗಳತ್ತ ಬೆಳಕು ಚೆಲ್ಲುತ್ತವೆ. ಕೆ.ಟಿ. ಶಿವಪ್ರಸಾದ್ ಅವರು ದಶಕಗಳಿಂದ ದಲಿತರ ಪರವಾದ ಕಲೆಯ ಕುರಿತು ಆಲೋಚಿಸುತ್ತಿದ್ದಾರೆ ಕೂಡ.ಸಾಹಿತ್ಯದಲ್ಲಿ ಮತ್ತು ಸಾಹಿತ್ಯದ ಮೂಲಕ ನಿರ್ಮಿತವಾಗಿರುವ ದಲಿತತ್ವಕ್ಕಿಂತಲೂ ದೃಶ್ಯ-ದಲಿತತ್ವ ವ್ಯತಿರಿಕ್ತವಲ್ಲದಿದ್ದರೂ ಭಿನ್ನ. ಸಾಹಿತ್ಯದಲ್ಲಿ `ಸವರ್ಣೀಯತೆ-ದಲಿತ~ ಪರಿಕಲ್ಪನೆಗೆ ಜಾತಿ, ಕುಲ, ಭಾಷೆಗಳು ವಾಹಕಗಳಾಗಬಹುದು. ಆದರೆ `ಚಿತ್ರಕಲೆಯೊಳಗೆ~ ಬ್ರಾಹ್ಮಣ್ಯ-ದಲಿತತ್ವವು ಅಡಕವಾಗಿರುವ ಬದಲು, ಸ್ವತಃ ಸಮಗ್ರ ಚಿತ್ರಕಲೆಯೇ ಸಾಹಿತ್ಯ ಪ್ರಣೀತ ಸಾಂಸ್ಕೃತಿಕ ನಿರ್ವಚನೆಯಲ್ಲಿ ದಲಿತತ್ವದ ಸಂಕೇತ.ಸಾಹಿತ್ಯಿಕ, ಸಾಂಸ್ಕೃತಿಕ ಅಗ್ರಹಾರದಿಂದ ಹೊರಗುಳಿದ ಹೊಲಗೇರಿ ದೃಶ್ಯಕಲೆ! ಒನಪು ವೈಯಾರವೆಂಬ `ಶೇಷ~ ಕೊಳೆಯ ನಿರ್ಮೂಲನಕ್ಕೆ ಕಲಾವಿದರ ಅವಶ್ಯಕತೆ ಸಾಹಿತಿಗಳಿಗೆ ಇದೆಯೇ ಹೊರತು ದೃಶ್ಯ-ತಾತ್ವಿಕ ನಿರ್ವಚನಕ್ಕೆ ಸಾಹಿತ್ಯವು ಅಕ್ಷರವಾಗಿ, ತತ್ವವಾಗಿ ಒದಗಿಬರಲು ಇಚ್ಛಾಪೂರ್ವಕವಾಗಿ ಒಲ್ಲದು.ಇಲ್ಲಿ `ಅಸ್ಪೃಶ್ಯತೆ~ ಎಂಬ ಪರಿಕಲ್ಪನೆಗೆ ಹೊಸದೊಂದು ಆಯಾಮ ದೊರಕಿಬಿಡುತ್ತದೆ. ಸಾಹಿತ್ಯಕ್ಕೆ ದೃಶ್ಯಕಲೆ ಅಸ್ಪೃಶ್ಯ. ಆದರೆ ಸಾಹಿತ್ಯದೊಳಗೇ ಅಸ್ಪೃಶ್ಯತೆಯ ವಿಂಗಡಣೆಯನ್ನು ಒಳಗಿನವರು ಮಾಡಿ ಹೊರಗಿನವರು ಅದನ್ನು ಒಪ್ಪಿರುವಾಗ, ಸಾಹಿತ್ಯ-ದೃಶ್ಯಕಲೆಯನ್ನು ಬ್ರಾಹ್ಮಣ್ಯ-ದಲಿತತ್ವಕ್ಕೆ ಸಮೀಕರಿಸಿಬಿಡುವಲ್ಲಿ ಸರಳತೆಯ ಅಪಾಯ ನಿಶ್ಚಿತವಾದುದು.ಇದನ್ನು ಮತ್ತೊಂದು ರೀತಿಯಲ್ಲಿ ಹೇಳಬಹುದಾದರೆ, ದಲಿತ ವರ್ಗಕ್ಕೆ ಸೇರಿದವರು ಬಿಡಿಸಿದ ಚಿತ್ರಗಳನ್ನು ಮಾತ್ರ ದಲಿತಕಲೆ ಎಂದು ವರ್ಗೀಕರಿಸಿಬಿಡಲಿಕ್ಕೆ ಎರಡು ಸಮಸ್ಯೆಗಳಿವೆ. ಸಾಹಿತ್ಯಿಕ ಅಭಿವ್ಯಕ್ತಿ ಕ್ರಮದೆದುರು ದೃಶ್ಯಾಭಿವ್ಯಕ್ತಿಯು ಸಮಗ್ರವಾಗಿ ದಮನಕ್ಕೆ ಒಳಗಾಗಿರುವುದಾದಲ್ಲಿ ಅದರೊಳಗೊಂದು ಉಪವಿಭಜನೆಯು ದಲಿತ-ಕಲೆಯ ಪರಿಕಲ್ಪನೆಯನ್ನೇ ವಿಭಜಿಸಿಬಿಡುತ್ತದೆ.ಐತಿಹಾಸಿಕವಾಗಿ ಅನಕ್ಷರಸ್ಥ ತಂದೆಯಿಂದ ಮಗನಿಗೆ ಬಂದ ಬಳುವಳಿ ಈ ಚಿತ್ರ ಮತ್ತು ಶಿಲ್ಪಸೃಷ್ಟಿ, ಮತ್ತು ಅನಕ್ಷರಸ್ಥ ಗುಣ ಸಹ. ರಾಜಾಶ್ರಯ ಮತ್ತು ವಸಾಹತು ಎಂಬ ಎರಡು ವ್ಯಕ್ತಿಗತ-ರಾಜಕಾರಣದ ಕಾಲಘಟ್ಟಗಳಲ್ಲೂ ಪ್ರಸ್ತುತವಾಗಿದ್ದ ಈ ಅನಕ್ಷರತೆಯ ಮಾತು ಮತ್ತು ಲಿಂಗತಾರತಮ್ಯವು ಈಗಲೂ ಕಣ್ಣಿಗೆ ಕಟ್ಟಿದಂತಿದೆ.ತದ್ವಿರುದ್ಧವಾಗಿ ಸಮಗ್ರ ಚಿತ್ರಸೃಷ್ಟಿಯು `ದಮನಿತ~ ಎಂದಾದಲ್ಲಿ ಅದನ್ನು ಸಾಹಿತ್ಯ-ಚಿತ್ರ ಪ್ರಕಾರಗಳ ಘರ್ಷಣೆಗಿಂತಲೂ ದೃಶ್ಯ-ಶ್ರಾವ್ಯ ಗ್ರಹಿಕಾ ಕ್ರಮದ ವೈದ್ಯಕೀಯ ಹಾಗೂ ತಾತ್ವಿಕ ಭಿನ್ನತೆಯ ನೆಲೆಯಲ್ಲಿಟ್ಟು ನೋಡುವ ತುರ್ತು ಇರುತ್ತದೆ.ಅಂದರೆ ಸೌಂದರ್ಯಶಾಸ್ತ್ರೀಯ ಅನುಭವವನ್ನು ತಾತ್ವಿಕ ಚೌಕಟ್ಟಿನೊಳಗಿನ ಅಕ್ಷರಸ್ವಾಮ್ಯದ ಬಂಧನದಿಂದ ಮುಕ್ತಗೊಳಿಸಿದರೆ ದೃಶ್ಯಕಲೆಯ ದಲಿತತ್ವದ ದ್ವಂದ್ವಕ್ಕೆ ತಾತ್ವಿಕ ಚೌಕಟ್ಟೊಂದನ್ನು ಒದಗಿಸಿಕೊಡಬಹುದೇನೋ?   ದೃಶ್ಯ-ದಲಿತತೆಯನ್ನು ಕುರಿತಾದ ಸಿ.ಚಂದ್ರಶೇಖರ್ ಅವರ ಪ್ರಾತ್ಯಕ್ಷಿಕಾ ಪರಿಕಲ್ಪನೆ, ಅಲೋನೆಯವರ ತಾತ್ವಿಕ ನಿಲುವು, ಶಿವಪ್ರಸಾದರ ಆಶಯ ಇವೆಲ್ಲ ಒಟ್ಟಾರೆ ದೃಶ್ಯ-ದಲಿತತ್ವವನ್ನು ಈ ಹಿನ್ನೆಲೆಯಲ್ಲಿ ವಿವರಿಸಬಹುದಾಗಿದೆ:  ಚಿತ್ರವೊಂದು ಸ್ವತಃ ತಾನೇ ಅನಾವರಣಗೊಳ್ಳಬೇಕೇ ಹೊರತು ಅದಕ್ಕೆ ಮಾತಿನ, ಬರಹದ ವಿವರಣೆ ಅನವಶ್ಯಕ ಎಂಬುದು ಆಧುನಿಕ ಕಲಾವಿದರಲ್ಲಿ ಮನೆಮಾಡಿರುವ ಒಂದು ನಂಬಿಕೆ.ಸವರ್ಣೀಯತೆಯ ಬೆದರಿಕೆಯ ಪರಿಧಿಯ ಹೊರಗೆ ದಲಿತರು ಸ್ವತಃ ನಿರ್ಮಿಸಿಕೊಂಡು, ಅದನ್ನು ಭಾಷಾಂತರಿಸಲಾಗದಂತೆ ಮಾಡಿಕೊಂಡಿರಬಹುದಾದ ಉಪಾಯಗಳಲ್ಲೊಂದು ಇದು. ಇದರ ಉಪವಿಭಜನೆಯೊಂದನ್ನು ಗಮನಿಸಿ: ಚಿತ್ರವನ್ನು ಅಕ್ಷರವಾಗಿ ಬಿಡಿಸಿಟ್ಟಲ್ಲಿ ಅದು ವಿಮರ್ಶೆಯಾಗುತ್ತದೆ, ಅದೇ ತಿರುವು ಮುರುವು ಆದಾಗ ಅದನ್ನು ಇಲ್ಲಸ್ಟ್ರೇಷನ್ ಎನ್ನುತ್ತೇವೆ.  ದೃಶ್ಯ-ದಲಿತತ್ವ ಇದನ್ನು ಒಪ್ಪದು.

 

ಏಕೆಂದರೆ ಆ ರೂಢಿಗತ ನಂಬಿಕೆಯ ಪ್ರಕಾರ ಇಲ್ಲಸ್ಟ್ರೇಷನ್ (ಪೂರಕ ಚಿತ್ರಗಳು) ದಲಿತ. ಅದನ್ನು ಕ್ಯಾನ್ವಾಸಿ ಚಿತ್ರಗಳಂತೆ (ಯಾವುದರ ಅರ್ಥವನ್ನು ಅಕ್ಷರವು ಸಾದ್ಯಂತವಾಗಿ ಬಿಡಿಸಿಟ್ಟು, ತತ್ಪರಿಣಾಮವಾಗಿ ಅಂತಹ ಚಿತ್ರಗಳನ್ನು ಸಂಗ್ರಹಾಲಯಗಳಿಗೆ ಸೇರಿಸಿದ್ದಾವೋ ಅವು) ಸಂಗ್ರಹಿಸಲಾಗದು.ಈ ನಿಟ್ಟಿನಲ್ಲಿ ಕೆ.ವೆಂಕಟಪ್ಪ ಮತ್ತು ಕೆ.ಕೆ.ಹೆಬ್ಬಾರರ ಚಿತ್ರಗಳು ಸವರ್ಣೀಯವಾದರೆ ಕೆನ್ ಕಲಾಶಾಲೆಯ ಹರಿಕಾರ ಆರ್.ಎಂ.ಹಡಪದರ ಪ್ರತಿಭೆಯು ದಲಿತ ಎನ್ನುವುದಕ್ಕಿರುವ ಒಂದಾದರೂ ಕಾರಣವೆಂದರೆ, ಹಡಪದರು ಸಂಗ್ರಹಾಲಯಾತೀತರಾಗಿರುವುದು (ಸಾಹಿತ್ಯದಲ್ಲಿ ಕೀ.ರಂ ಇದ್ದಂತೆ) ಮತ್ತು ಅದಕ್ಕೆ ಅವಶ್ಯಕವಿರುವ ಕೃತಿಸಮುದಾಯವೊಂದನ್ನು ಒಟ್ಟುಗೂಡಿಸದಿರುವುದು.

 

ಕೃತಿಸಂಗ್ರಹ ಕಾರ್ಯವನ್ನು, ವ್ಯಕ್ತಿತ್ವ-ಪ್ರಣೀತ ಪ್ರತಿಭೆಗಳನ್ನು ಪರಸ್ಪರ ವಿರುದ್ಧವಿರಿಸುವ ಹುನ್ನಾರ ಅಲ್ಲವಿದು. ಬದಲಿಗೆ ವ್ಯಕ್ತಿಪೂಜೆಯ ವಿರುದ್ಧ ಸಾರ್ವತ್ರಿಕ ಗುಣವನ್ನು ಪ್ರತಿಷ್ಠಾಪಿಸುವುದು ದಲಿತ-ದೃಶ್ಯಗುಣವಾಗಬಹುದು.  

*

`ಬ್ಲಾಕ್ ಆರ್ಟ್~ (ಕಪ್ಪು ಕಲೆ) ಉದ್ದೀಪಿಸಿ, 1980ರ ದಶಕದಲ್ಲಿ ಕಪ್ಪುವರ್ಣೀಯ ಕಲಾವಿದರ ಹಕ್ಕಿಗಾಗಿ ಹೋರಾಡಿದ ಕಲಾ ಕ್ಯುರೇಟರ್ ಎಡ್ಡಿ ಚೇಂಬರ್ಸ್ ಲಂಡನ್ನಿನ ಪ್ರತಿಷ್ಠಿತ `ಟೇಟ್ ಮಾಡರ್ನ್ ಗ್ಯಾಲರಿ~ಯ ವಿನ್ಯಾಸವನ್ನು ವಿವರಿಸುವುದು ಹೀಗೆ: ಸಂಗ್ರಹಾಲಯದ ಮೇಲಂತಸ್ತಿನಲ್ಲಿರುವ ಗ್ಯಾಲರಿಗಳ ಅನರ್ಘ್ಯ ಬೆಲೆಬಾಳುವ ಕೃತಿಗಳನ್ನು ಕಾಯಲು ಬಿಳಿಯರು ನೇಮಕಗೊಂಡಿದ್ದರೆ, ಕೆಳಗೆ ಕೆಫೆಯಲ್ಲಿ ತಿಂಡಿತೀರ್ಥವನ್ನು ಕೊಡಮಾಡಲು ಕರಿಯರು ಇರುತ್ತಾರೆ, ಆದ್ದರಿಂದ ಯುರೋಪಿನ ಗ್ಯಾಲರಿಗಳು (ಪ್ಯಾರಿಸ್ಸಿನ ಲೂವ್ರ್ ಸಂಗ್ರಹಾಲಯವನ್ನೂ ಒಳಗೊಂಡಂತೆ) `ವೈಟ್ ವಾಷ್~ ಆಗಿಬಿಟ್ಟಿವೆ ಎನ್ನುವ ಆತನ ಜನಪ್ರಿಯ ಆರೋಪ, ಆತನದೇ `ಅನೊಟೇಷನ್ಸ್~ ಪುಸ್ತಕದಲ್ಲಿದೆ.ಯುವ ಕಲಾವಿದರಾದ ಬಾದಲ್ ನರಸಿಂಹಸ್ವಾಮಿ, ಡಾ.ಚರಿತಾ, ಎಂ.ಜಿ.ದೊಡ್ಡಮನಿ, ಪಿ.ಬಿ.ಹರಸೂರ, ಎಸ್.ವಿಷ್ಣು, ಆರೋಗ್ಯಸ್ವಾಮಿ, ಪ್ರಕಾಶ್, ಹನುಮಂತ ಮಂತಟ್ಟಿ, ಸುಬ್ರಹ್ಮಣ್ಯ, ಚೇತನ್‌ರ ಕೃತಿ - ಬರಹಗಳನ್ನೂ ಒಳಗೊಂಡಂತೆ ಹಡಪದರ ಪ್ರಜ್ಞಾಪೂರ್ವಕವಾದ ಕಡುಗೆಂಪು ವರ್ಣೀಯರ ಭಾವಚಿತ್ರಗಳನ್ನು ಈ ದಲಿತ ದೃಶ್ಯತ್ವದ ಹಿನ್ನೆಲೆಯಲ್ಲಿ ಗಮನಿಸಬಹುದು.ಮುಖ್ಯವಾಹಿನಿಯ ಚಿತ್ರಕಲೆ ಎಂದರೆ ಇಂದು ಗುಣಮಟ್ಟವಿಲ್ಲದ್ದನ್ನು ಹೊರಗಿಟ್ಟ ಮೊತ್ತ ಎಂದಾಗದೆ ಅಧಿಕಾರಕ್ಕೆ ಹತ್ತಿರವಾದವರು ಅಥವಾ ಅಧಿಕಾರಸ್ಥರಾದವರು ಎಂದು ಭಾವಿಸುತ್ತದೆ ದಲಿತತ್ವ.ಸಂಗ್ರಹಿಸಿ ಹೇಳಬಹುದಾದರೆ, ಚಿತ್ರಕಲೆಯಲ್ಲಿ ದಲಿತ-ಪರಿಕಲ್ಪನೆಯು ಸ್ವಾಯತ್ತವಾಗಿಯೂ ಇದೆ, ಇಚ್ಛಿತವಾಗಿಯೂ ಇದೆ. ಆದರೆ ಅದರ ದೃಷ್ಟಿಯನ್ನು ಗ್ಯಾಲರಿ-ವಿಮರ್ಶೆ-ಸಂಗ್ರಹಾಲಯ ಎಂಬ ಸಾಂಸ್ಥೀಕರಣವು ಇಚ್ಛಾಪೂರ್ವಕವಾಗಿ ಒತ್ತಿ ಹಿಡಿದಿದೆಯೋ ಎಂಬುದು ಒಂದು ದೊಡ್ಡ ಅನುಮಾನ. ಲಿಂಗ ರಾಜಕಾರಣವು ದೃಶ್ಯಕಲೆಯನ್ನು ನಿರ್ವಚಿಸಿದ ರೀತಿಯಲ್ಲಿ ದಲಿತ ಪ್ರಜ್ಞೆಗೆ ಅದಿನ್ನೂ ಸಾಧ್ಯವಾಗಿಲ್ಲದಿರಲು ಒಂದು ಕಾರಣವಿರಬಹುದು.ಅದೇನೆಂದರೆ, ಸಿದ್ಧ ಮಾದರಿ, ಸಿದ್ಧ ಸಮಸ್ಯೆಗಳ ಪರಿಧಿಯ ಹೊರಗಿನಿಂದ ದಲಿತದೃಶ್ಯಪ್ರಜ್ಞೆಯು ಮರುಹುಟ್ಟು ಪಡೆದುಕೊಳ್ಳಬೇಕಿದೆ.ಈ ಪ್ರಜ್ಞೆಯು ಚಿಂತನಾಕ್ರಮಗಳಿಗೆ ಸೇರಿದಂತೆ ನಿರ್ದಿಷ್ಟ ವ್ಯಕ್ತಿಗಳಿಗೆ ಸೇರಿರಬಾರದು, ಸಾಹಿತ್ಯದಿಂದ ಮೂಲ ಮಾದರಿಗಳನ್ನು ಕಸಿ ಮಾಡಬಾರದು. ಬದಲಿಗೆ ಮುಖ್ಯವಾಹಿನಿಯ ಜೊತೆಗೆ ಪೂರಕ ಚಿತ್ರಗಳನ್ನು; ವೆಂಕಟಪ್ಪ, ಹೆಬ್ಬಾರರಂತೆ ಏಕಾಂಗಿಗಳೊಂದಿಗೆ ಹಡಪದರಂತಹ ಸಾರ್ವತ್ರಿಕ ಪ್ರಜ್ಞೆಯನ್ನು; ಶೈಕ್ಷಣಿಕ ಸಂಸ್ಥೆಗಳೊಂದಿಗೆ ಚಿತ್ರಸಂತೆ, ಮೇಳ ಮುಂತಾದುವನ್ನು ಮನಃಪೂರ್ವಕವಾದ ಸಂವಾದಗಳಿಗೆ ಒಡ್ಡಬೇಕು. ಆಗ ದಲಿತ ಪ್ರಜ್ಞೆಗೆ ದೃಷ್ಟಿ ದೊರಕೀತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.