ದಲಿತ ಪಂಚಾಯ್ತಿ ಪಾರ್ಲಿಮೆಂಟ್ ರಚನಾ ಸಭೆ.ಮೂಲ ನಿವಾಸಿಗಳ ಧರ್ಮ ಸ್ಥಾಪನೆಯಾಗಲಿ

7

ದಲಿತ ಪಂಚಾಯ್ತಿ ಪಾರ್ಲಿಮೆಂಟ್ ರಚನಾ ಸಭೆ.ಮೂಲ ನಿವಾಸಿಗಳ ಧರ್ಮ ಸ್ಥಾಪನೆಯಾಗಲಿ

Published:
Updated:

ದಾವಣಗೆರೆ: ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ದೇವದಾಸಿ, ಹರಿಜನ ಶಬ್ದಗಳು ತೊಲಗಲಿ. ಈ ದೇಶದ ಮೂಲ ನಿವಾಸಿಗಳ ಧರ್ಮ ಸ್ಥಾಪನೆಯಾಗಬೇಕು. ನಮ್ಮ ಪೂರ್ವಿಕರ ಸಂಸ್ಕೃತಿಯನ್ನು ಮತ್ತೆ ತರಬೇಕು...ಇದು ತುಮಕೂರಿನ ಭೂಶಕ್ತಿ ಕೇಂದ್ರದ ಪೀಠಾಧ್ಯಕ್ಷೆ ಜ್ಯೋತಿರಾಜ್(ಅಮ್ಮಾಜಿ) ಅವರ ದಿಟ್ಟ ನುಡಿ.

ಸಂದರ್ಭ: ನಗರದಲ್ಲಿ ಗುರುವಾರ ಭೂಶಕ್ತಿ ವೇದಿಕೆ ಕರ್ನಾಟಕ ವತಿಯಿಂದ ನಡೆದ ದಲಿತ ಪಂಚಾಯ್ತಿ ಪಾರ್ಲಿಮೆಂಟ್ ರಚನಾ ಸಭೆಯಲ್ಲಿ ಹೇಳಿದ್ದು.‘ಪಾರ್ಲಿಮೆಂಟ್’ ಸಾರಾಂಶ...ಎಲ್ಲ ದೇವರಿಗೆ ನಮಸ್ಕಾರ ಮಾಡಿದರೂ ಕೆಲವು ದೇವರು ನಮ್ಮನ್ನು ಇನ್ನೂ ದೂರವಿಟ್ಟಿದ್ದಾನೆ. ಅದಕ್ಕಾಗಿ ನಮ್ಮೆಲ್ಲರನ್ನು ಹೊತ್ತಿರುವ ಭೂಮಿತಾಯಿಯನ್ನು ನಾವು ದೇವರೆಂದು ಭಾವಿಸಬೇಕು. ಈಗಿನ ಧರ್ಮಗಳು ಬರುವ ಮೊದಲು ನಮ್ಮದೇ ಆದ ಮೂಲನಿವಾಸಿಗಳ ಧರ್ಮ ಇತ್ತು.



ರಾಮಾಯಣದಲ್ಲಿ ಸೀತೆಗೆ ಆಶ್ರಯ ಕೊಟ್ಟ ವಾಲ್ಮೀಕಿ ಅಸ್ಪೃಶ್ಯ ಕುಲಕ್ಕೆ ಸೇರಿದವನು. ಅಂದರೆ ಇತರರಿಗೆ ಆಶ್ರಯ ಕೊಡುವವರು ನಾವು. ಆ ಸಂಸ್ಕೃತಿ ಮತ್ತೆ ಬರಬೇಕಿದೆ. 3,500 ವರ್ಷಗಳ ಹಿಂದೆ ಇದ್ದ ಪರಂಪರೆ, ನಮ್ಮದೇ ಆದ ಆಡಳಿತ ವ್ಯವಸ್ಥೆಯನ್ನು ಮತ್ತೆ ತರಬೇಕಿದೆ.ದಲಿತ ಪಾರ್ಲಿಮೆಂಟ್: 18ರಿಂದ 35 ವರ್ಷದ ಒಳಗಿನ ದಲಿತ ಸಮುದಾಯದ ಮಂದಿ ತಮ್ಮೊಳಗೆ ಒಂದು ಗುಂಪು ರಚಿಸಿ ದಲಿತ ಪಾರ್ಲಿಮೆಂಟ್ ರಚಿಸಬೇಕು. ಅದರಲ್ಲಿ ಒಬ್ಬರು ಭೂಶಕ್ತಿ ಕೇಂದ್ರದ ಪ್ರತಿನಿಧಿ ಇರುತ್ತಾರೆ. ದಲಿತ ಸಂಸ್ಕೃತಿ ಬೆಳವಣಿಗೆ, ಅವರ ಹಕ್ಕುಗಳು ಸೌಲಭ್ಯ, ಸಾಮಾಜಿಕ ಸ್ಥಾನಮಾನಕ್ಕಾಗಿ ಶ್ರಮಿಸುವುದು ಈ ‘ಪಾರ್ಲಿಮೆಂಟ್’ ವ್ಯವಸ್ಥೆಯ ಗುರಿ.



ಕುಟುಂಬಕ್ಕೆ 5 ಎಕರೆ ಭೂಮಿ: ಪ್ರತಿ ದಲಿತ ಕುಟುಂಬಕ್ಕೆ 5 ಎಕರೆ ಭೂಮಿ ಸಿಗಬೇಕು. ಕೇಂದ್ರ ಸರ್ಕಾರದ ಕೈಯಲ್ಲಿ 3 ಕೋಟಿ ಎಕರೆ, ಕರ್ನಾಟಕ ಸರ್ಕಾರದ ಕೈಯಲ್ಲಿ 22 ಲಕ್ಷ ಎಕರೆ ಭೂಮಿಯಿದೆ. ಅದನ್ನು ದಲಿತರಿಗೆ ಹಂಚಬೇಕು. ಈಗಾಗಲೇ ‘ಪಾರ್ಲಿಮೆಂಟ್’ ಹೋರಾಟದ ಮೂಲಕ 10 ಸಾವಿರ ಎಕರೆ ಭೂಮಿಯನ್ನು ದಲಿತರಿಗೆ ಹಂಚಲಾಗಿದೆ. ಅದರಲ್ಲಿ 1 ಸಾವಿರ ಎಕರೆ ಕರ್ನಾಟಕದಲ್ಲಿ ಹಂಚಲಾಗಿದೆ. ಎಲ್ಲವನ್ನೂ ಒಂದು ಕಾಲದಲ್ಲಿ ದಲಿತರ ಕೈಯಿಂದ ಮೋಸದಿಂದ ಪಡೆಯಲಾಗಿತ್ತು.



ಮಾರಿಹಬ್ಬ ಬೇಡ: ಜ. 10, ಏ. 14, ಜೂನ್ 3, ಆ. 4, ಡಿ. 6ರಂದು ತುಮಕೂರಿನಲ್ಲಿ ದಲಿತರು ಹಬ್ಬ ಆಚರಿಸುತ್ತಾರೆ. ಅದರಲ್ಲಿ ಜೂನ್ 3 ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರ ಜನ್ಮದಿನ, ಅದು ಮಹಿಳೆಯರಿಗೆ ಸ್ಫೂರ್ತಿ ತುಂಬುವ ದಿನ. ಹಾಗೆಂದು ಯಾರೂ ಕೂಡಾ ಮಾರಿಹಬ್ಬ ಆಚರಿಸಬಾರದು. ಅದರ ನೆಪದಲ್ಲಿ ದಲಿತನ ಹತ್ಯೆ ಮಾಡುವ ಪರಿಕಲ್ಪನೆಯನ್ನು ನೆನಪಿಸಲಾಗುತ್ತದೆ. ಅದು ಕೂಡದು. ಭೂಶಕ್ತಿ ಕೇಂದ್ರದ ಈ ಸುಧಾರಣಾ ಕ್ರಮಗಳಿಂದ ತುಮಕೂರಿನಲ್ಲಿ ಶೇ. 90ರಷ್ಟು ಅಸ್ಪಶ್ಯತೆ ದೂರವಾಗಿದೆ ಎಂದು ಹೇಳಿದರು.

ಶ್ರೀನಿವಾಸ ಮೂರ್ತಿ, ಪ್ರಕಾಶ್, ಪುಷ್ಪಲತಾ, ಪ್ರಕಾಶ್, ಉಚ್ಚಂಗೆಪ್ಪ, ರವಿಕುಮಾರ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry