ದಲಿತ ವೇದಿಕೆ ಪ್ರತಿಭಟನೆ

ಶನಿವಾರ, ಜೂಲೈ 20, 2019
27 °C

ದಲಿತ ವೇದಿಕೆ ಪ್ರತಿಭಟನೆ

Published:
Updated:

ರಾಮನಗರ: ಜಿಲ್ಲೆಯ ಕನಕಪುರ ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂ ಸ್ವಾಧೀನ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ದಲಿತ ಹಿಂದುಳಿದ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ, ಕನಕಪುರದ ಮರಳವಾಡಿ ಹೋಬಳಿಯ ಚೀಲೂರು ಗ್ರಾಮ ಪಂಚಾಯಿತಿಯಲ್ಲಿ 2006ರಲ್ಲಿ ಹೊರಡಿಸಲಾಗಿರುವ 1336 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಕುರಿತು ಜಿಲ್ಲಾಡಳಿತ ಕೂಡಲೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಆರು ವರ್ಷದ ಹಿಂದೆ ಸರ್ಕಾರ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದು ಇದುವರೆಗೂ ಯಾವುದೇ ತೀರ್ಮಾನವನ್ನು ಕೈಗೊಳ್ಳದ ಕಾರಣ ಸಂತ್ರಸ್ತ ರೈತರು ಜಮೀನನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮಕ್ಕಳ ಮದುವೆ, ಅನಾರೋಗ್ಯ, ಉನ್ನತ ವ್ಯಾಸಂಗ ಮುಂತಾದ ಅನಿವಾರ್ಯ ಕಾರಣಗಳಿಗೂ ಸಹಾ ಜಮೀನನ್ನು ಮಾರಾಟ ಮಾಡಲು ಅಥವಾ ಆಧಾರ ಮಾಡಲು ಸಾಧ್ಯವಾಗದೆ ಸಮಸ್ಯೆಯುಂಟಾಗಿದೆ. ಹಾರೋಹಳ್ಳಿ 1 ಮತ್ತು 2ನೇ ಹಂತದಲ್ಲಿ ವಶಪಡಿಸಿಕೊಂಡಿರುವ 1200 ಎಕರೆ ಪ್ರದೇಶದಲ್ಲಿ ಶೇಕಡ 20ರಷ್ಟು ಭಾಗವನ್ನು ಮಾತ್ರ ಬಳಕೆ ಮಾಡಲಾಗಿದೆ. ಉಳಿದ ಜಾಗ ಖಾಲಿ ಬಿದ್ದಿರುವಾಗ ಪುನಃ 1336 ಎಕರೆ ಭೂ ಸ್ವಾಧೀನದ ಅಗತ್ಯವಾದರೂ ಏಕೆ ಎಂದು ಪ್ರಶ್ನಿಸಿದರು.

ಸರ್ಕಾರಕ್ಕೆ ಜಮೀನು ತೀರಾ ಅಗತ್ಯ ಎನಿಸಿದ್ದಲ್ಲಿ ತಕ್ಷಣವೇ ಬೆಲೆ ನಿಗದಿಪಡಿಸಿ ಹಣ ಬಿಡುಗಡೆ ಮಾಡಿ  ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿ. ತಪ್ಪಿದಲ್ಲಿ ಸದರಿ ಭೂ ಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿ ರೈತರು ತಂತಮ್ಮ ಜಮೀನುಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶವನ್ನಾದರೂ ನೀಡಲಿ ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ವಿ.ಶ್ರಿರಾಮರೆಡ್ಡಿ ಮನವಿ ಸ್ವೀಕರಿಸಿ ಮಾತನಾಡಿ, ಕೆಐಎಡಿಬಿ ಅಧಿಕಾರಿಗಳ ಜತೆ ಚರ್ಚಿಸಿ ಆಗಸ್ಟ್ 4 ರಂದು ರೈತರು ಮತ್ತು ಭೂ ಸ್ವಾಧೀನ ಪ್ರಾಧಿಕಾರದ ಅಧಿಕಾರಿಗಳ ಸಭೆಯನ್ನು ಕರೆಯುವುದಾಗಿ ತಿಳಿಸಿದರು.

ಅಖಿಲ ಕರ್ನಾಟಕ ದಲಿತ ಹಿಂದುಳಿದವರ ವೇದಿಕೆ  ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ್, ಕಾರ್ಯಾಧ್ಯಕ್ಷ ಕುಮಾರ್, ಉಪಾಧ್ಯಕ್ಷ ಮೋಹನ್, ಜಿಲ್ಲಾ ಯುವ ಘಟಕದ ಅಧ್ಯಕ್ಷ  ಡಿ.ಸಿ.ಮರಿಯಪ್ಪ, ಶ್ರಿನಿವಾಸ್, ಸಿ.ನಾಗರಾಜ್, ರೈತರಾದ ಮುನಿರಾಜು, ಸಿದ್ದಪ್ಪ, ರಾಜು, ಪುಟ್ಟಮಾದಯ್ಯ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry