ದಲ್ಲಾಳಿಗಳ ಹಾವಳಿಗೆ ನಲುಗಿದ ರೈತ

7

ದಲ್ಲಾಳಿಗಳ ಹಾವಳಿಗೆ ನಲುಗಿದ ರೈತ

Published:
Updated:

ಮಂಡ್ಯ: ಮಧ್ಯವರ್ತಿಗಳ ಹಾವಳಿಯಿಂದಾಗಿ ಕಲ್ಪವೃಕ್ಷ ಎನಿಸಿಕೊಂಡಿರುವ `ತೆಂಗು~ ಬೆಳೆಯ ಲಾಭ ರೈತರಿಗೆ ದಕ್ಕುತ್ತಿಲ್ಲ. ಜತೆಗೆ ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ.ಜಿಲ್ಲೆಯ ಮದ್ದೂರಿನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ಷಕ್ಕೆ ರೂ 110 ಕೋಟಿ  ಹೆಚ್ಚು ಮೊತ್ತದ ಎಳನೀರು ವಹಿವಾಟು ನಡೆಯುತ್ತದೆ. ಇಲ್ಲಿ ನಡೆಯುತ್ತಿರುವ ವಹಿವಾಟಿನ ಲಾಭವು ಎಪಿಎಂಸಿ ಖಜಾನೆ ಹಾಗೂ ಮಧ್ಯವರ್ತಿಗಳ ಜೇಬು ಸೇರುತ್ತಿದೆ. ಎಳನೀರಿನ ಕಾಯಿ ಬೆಳೆಯುವ ರೈತರಿಗೆ, ಪ್ರತಿ ಕಾಯಿಗೆ ರೂ 4 ರಿಂದ ರೂ 6 ವರೆಗೆ ಲಭಿಸುತ್ತದೆ. ಆದರೆ, ಅದೇ ಕಾಯಿ ಮದ್ದೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ರೂ 15, ಮುಂಬೈನಲ್ಲಿ ರೂ 20ಯಂತೆ ಮಾರಾಟವಾಗುತ್ತದೆ.ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ಮದ್ದೂರು ಮಾರುಕಟ್ಟೆಗೆ ನಿತ್ಯ 3 ರಿಂದ 9 ಲಕ್ಷ ಎಳನೀರು ಕಾಯಿಗಳ ಆವಕವಿದೆ. ಇವುಗಳನ್ನು ಇಲ್ಲಿಂದ ಮುಂಬೈ, ಪುಣೆ, ಹೈದರಾಬಾದ್, ನಾಗಪುರ, ಔರಂಗಾಬಾದ್ ಮುಂತಾದೆಡೆ ಸಾಗಿಸಲಾಗುತ್ತದೆ.ಮಧ್ಯವರ್ತಿಗಳ ಹಾವಳಿ: ರೈತರ ಹೊಲದಿಂದ ಮುಕ್ತ ಮಾರುಕಟ್ಟೆಗೆ ಆಗಮಿಸುವ ವೇಳೆಗೆ ಎಳನೀರು ಕಾಯಿಯು ಇಬ್ಬರು ಮಧ್ಯವರ್ತಿಗಳನ್ನು ದಾಟಬೇಕು. ಮೊದಲನೇ ಹಂತದಲ್ಲಿ ಮಧ್ಯವರ್ತಿಗಳು, ರೈತರ ಹೊಲಗಳಿಗೆ ತೆರಳಿ ಅವರಿಂದ ರೂ 4 ರಿಂದ ರೂ 6ಗೆ ಖರೀದಿ ಮಾಡಿಕೊಂಡು ಮಾರುಕಟ್ಟೆಗೆ ತರುತ್ತಾರೆ.ಎರಡನೇ ಹಂತದಲ್ಲಿ ಅವರು, ಎಪಿಎಂಸಿಯಲ್ಲಿನ ವ್ಯಾಪಾರಸ್ಥರಿಗೆ ರೂ 9 ರಿಂದ ರೂ 10.50 ವರೆಗೆ ಮಾರಾಟ ಮಾಡುತ್ತಾರೆ.ಕೊಂಡಿಯಾಗದ ಮಾರುಕಟ್ಟೆ: ರೈತರು ಹಾಗೂ ಮಾರಾಟಗಾರರ ನಡುವೆ ನೇರ ಸಂಪರ್ಕ ಕೊಂಡಿಯಾಗುವಲ್ಲಿ ಮದ್ದೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ವಿಫಲವಾಗಿದೆ. ಹರಾಜು ಪದ್ಧತಿಯ ಮೂಲಕ ಇಲ್ಲಿ ಎಳನೀರಿನ ಕಾಯಿಗಳನ್ನು ಮಾರಾಟ ಮಾಡುವುದಿಲ್ಲ.

 

ಎಪಿಎಂಸಿಯಲ್ಲಿರುವ ನೋಂದಾಯಿತ ಎಳನೀರು ವ್ಯಾಪಾರಸ್ಥರು, ಮಾರುಕಟ್ಟೆಗೆ ರೈತರಿಂದ ಖರೀದಿಸಿ ತರುವ ಮಧ್ಯವರ್ತಿಗಳಿಂದ ಖರೀದಿಸಿ ಬೇರೆ, ಬೇರೆ ಕಡೆಗೆ ಕಳುಹಿಸಿ ಕೊಡುತ್ತಾರೆ. ಹರಾಜು ನಡೆಯುವುದಿಲ್ಲವಾದ್ದರಿಂದ ವ್ಯಾಪಾರಸ್ಥರು ನಿಗದಿ ಮಾಡಿದ್ದೇ `ದರ~.ಎಪಿಎಂಸಿ ವತಿಯಿಂದ ಶೇ 1.5 ರಷ್ಟನ್ನು ಮಾರುಕಟ್ಟೆ ಶುಲ್ಕ ರೂಪದಲ್ಲಿ ವಸೂಲು ಮಾಡಲಾಗುತ್ತದೆ. ಕಳೆದ ಆರ್ಥಿಕ ವರ್ಷ ರೂ 1.65 ಕೋಟಿ  ಶುಲ್ಕ ಸಂಗ್ರಹವಾಗಿದೆ. ಆದರೆ, ಮಾರುಕಟ್ಟೆ ಮಾತ್ರ ಅಭಿವೃದ್ಧಿ ಕಂಡಿಲ್ಲ.`ಟೆಂಡರ್ ಮಾಡಲು ಎಪಿಎಂಸಿಯಲ್ಲಿರುವ ಸ್ಥಳ ಸಾಕಾಗುವುದಿಲ್ಲ. ಜತೆಗೆ ಕಾಯಿಗಳನ್ನು ಗ್ರೇಡ್ ಆಧಾರದ ಮೇಲೆ ಮಾರಾಟ ಮಾಡಬೇಕಾಗುತ್ತದೆ. ಇದಕ್ಕೆ ರೈತರು ಒಪ್ಪುವುದಿಲ್ಲ. ಆದ್ದರಿಂದ ನೇರ ಮಾರಾಟ ಪದ್ಧತಿ ಮೂಲಕ ವಹಿವಾಟು ನಡೆಸಲಾಗುತ್ತಿದೆ~ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ ರೆಡ್ಡಿ.`ನೇರವಾಗಿ ನಾವೇ ಮಾರುಕಟ್ಟೆಗೆ ಎಳನೀರು ತರಲು ಸಾಗಣೆ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಸಿಕ್ಕಷ್ಟು ಸಿಗಲಿ ಎಂದು ಹೊಲಗಳಿಗೆ ಆಗಮಿಸುವ ಮಧ್ಯವರ್ತಿಗಳಿಗೆ ನೀಡಿ ಬಿಡುತ್ತೇವೆ ಎನ್ನುತ್ತಾರೆ ನಗರಕೆರೆಯ ರೈತ ಬೋರೇಗೌಡ.

ಮದ್ದೂರಿನ ಸುತ್ತ-ಮುತ್ತಲ ಗ್ರಾಮಗಳಲ್ಲಿ ಎಳನೀರು ಕಾಯಿಗಳನ್ನು ಬೆಳೆಯುವ ರೈತರು, ಕೆಲಸಕ್ಕೆಂದು ಮದ್ದೂರು ಪಟ್ಟಣಕ್ಕೆ ಆಗಮಿಸಿದಾಗ ಬಿಸಿಲಿನ ಬೇಗೆಯಿಂದ ಬಳಲಿ ಎಳನೀರು ಕುಡಿಯಬೇಕು ಎನಿಸಿದರೆ ರೂ15 ಕೊಡಬೇಕಾದ ದುಃಸ್ಥಿತಿ ಅವರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry