ಶುಕ್ರವಾರ, ಏಪ್ರಿಲ್ 16, 2021
31 °C

ದವಸ-ಧಾನ್ಯ ಕಲಾಕೃತಿಯಾಗಿ...

ಪ್ರಜಾವಾಣಿ ವಾರ್ತೆ ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಶಿರಸಿ: ಅಡುಗೆಮನೆಯಲ್ಲಿ ಮಿಶ್ರಣವಾಗಿ, ಮಿಕ್ಸರ್‌ನಲ್ಲಿ ಅದೃಶ್ಯಗೊಂಡು ರುಚಿಕಟ್ಟಾದ ಸಾಂಬಾರವಾಗಿ ರೂಪುಗೊಳ್ಳುವ ಕಾಳು-ಬೇಳೆ, ಸಾಂಬಾರ ಪದಾರ್ಥಗಳಿಗೆ ಪಂಚಲಿಂಗದ ಮಹಿಳೆಯರು ಪ್ರಮೋಶನ್ ಕೊಟ್ಟಿದ್ದಾರೆ. ಅಡುಗೆಮನೆಗೆ ಸೀಮಿತವಾದ ಕಾಳು- ಬೇಳೆ, ದವಸ-ಧಾನ್ಯಗಳನ್ನು ಜೋಡಿಸಿ ಬಣ್ಣದ ಮೆರುಗು ನೀಡಿ ಹಳ್ಳಿ ಹೆಂಗಳೆಯರು ಕೈಚಳಕ ತೋರಿದ್ದಾರೆ.

ಬಿಳಿ ಎಳ್ಳಿನ ಗಣಪ, ಸಬ್ಬಕ್ಕಿಯ ವಿನಾಯಕ, ಅಕ್ಕಿಯ ಸೂರ್ಯ, ಗೋಧಿಯ ಚಕ್ರ, ಭತ್ತದ ಹೂ ಗೊಂಚಲು ಹೀಗೆ ಅವರವರ ಭಾವಕ್ಕೆ ತಕ್ಕಂತೆ ಕಲಾಕೃತಿ ಸೃಷ್ಟಿಯಾಗಿದೆ. ಮಗೆಕಾಯಿ-ಸವತೆಕಾಯಿ ಬೀಜಗಳಂತೂ ಸಹಸ್ರ ಸಂಖ್ಯೆಯಲ್ಲಿ ಸಮ್ಮಿಲನಗೊಂಡಿವೆ. ಮಗೆಕಾಯಿ ಬೀಜಗಳು ಒಂದಕ್ಕೊಂದು ಬೆಸೆದು ಮೋದಕ ರೂಪುಗೊಂಡಿದೆ, ಇನ್ನೊಂದು ಬಟ್ಟಲಲ್ಲಿ ಅಷ್ಟ ದಳಗಳ ಪುಷ್ಪವಾಗಿ ಹೊರ ಹೊಮ್ಮಿದೆ, ಮೊತ್ತೊಂದು ತಾಟಿನಲ್ಲಿ ಸಹಸ್ರ ಎಸಳಿನ ಸೇವಂತಿಗೆಯಾಗಿ, ನಂದಾದೀಪವಾಗಿ ಬೆಳಗುತ್ತಿದೆ, ಸೇಬುಹಣ್ಣಿನ ಜೊತೆಗೆ ಮುಚ್ಚಿಕೊಂಡು ಬಂದು ಕಸದ ಬುಟ್ಟಿಗೆ ಸೇರಬೇಕಿದ್ದ ಕನಕನ ಕಿಂಡಿಯ ಚೀಲ ಹೂಗೊಂಚಲಾಗಿ, ಹತ್ತಿಯ ಎಳೆ ಹೂ ದಳಗಾಗಿ ಸೃಷ್ಟಿಯಾಗಿವೆ. ಒಂದೆರಡಲ್ಲ 43 ಬಟ್ಟಲಿನಲ್ಲಿ ಒಂದಕ್ಕೊಂದು ಸಾಮ್ಯತೆ ಇಲ್ಲದಂತೆ ಭಿನ್ನ ಕಲಾಕೃತಿ ರಚಿಸಿ ಗ್ರಾಮೀಣ ಮಹಿಳೆಯರು ತಮ್ಮಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಕಟಿಸಿದ್ದಾರೆ. ಆಶಾ ಹೆಗಡೆ ಚಿಕ್ಕ ಚಿಕ್ಕ ಬಿಳಿ ಎಳ್ಳನ್ನು ಜೋಡಿಸಿ ಸೃಷ್ಟಿಸಿದ ಗಣಪ ಪ್ರಥಮ ಸ್ಥಾನ ಪಡೆದು ಬೀಗಿದ.

ಶಿರಸಿ ತಾಲ್ಲೂಕಿನ ಪಂಚಲಿಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಶಾಲೆಯ ವಿದ್ಯಾರ್ಥಿಗಳ ಅಮ್ಮಂದಿರಿಗೆ ಏರ್ಪಾಟಾಗಿದ್ದ ಕರಕುಶಲ ವಸ್ತುಗಳ ಸ್ಪರ್ಧೆಯಲ್ಲಿ ಇಂತಹ ದೇಸಿ ಬೀಜಗಳ ಕಲಾಕೃತಿಗಳು ಕಣ್ಮನ ಸೆಳೆದವು.

ತಮ್ಮ ಊರಿನ ಶಾಲೆಯ ಸುವರ್ಣ ಮಹೋತ್ಸವಕ್ಕೆಂದು ವಿಶೇಷ ಆಸಕ್ತಿ ವಹಿಸಿ ಅಮ್ಮಂದಿರು ಬಿಡುವಿನ ವೇಳೆಯಲ್ಲಿ ಕರಕುಶಲ ವಸ್ತು ಸಿದ್ಧಪಡಿದ್ದರು. ಬಹುಶಃ ಬಟ್ಟಲಿಗೆ ಅಂಟಿಸಲು ಗಮ್, ಅಲ್ಪ ಸ್ವಲ್ಪ ಬಣ್ಣ ಹೊರತುಪಡಿಸಿದರೆ ಕಲಾಕೃತಿಗೆ ಬಳಸಿದ ಕಚ್ಚಾವಸ್ತುಗಳು ಅಡುಗೆಮನೆಯಲ್ಲೇ ಲಭ್ಯವಾಗುವಂಥವು. ಕೆಲವೊಂದು ಕಲಾಕೃತಿಗೆ ಕೈಗೆ ತೊಡುವ ಬಳೆಗಳನ್ನು ಬಳಸಲಾಗಿದೆ. ಯಜಮಾನನ ಕಿಸೆಗೆ ಕತ್ತರಿ ಬೀಳದೆ ಅಡುಗೆಮನೆಯಲ್ಲೇ ಸಿದ್ಧಗೊಂಡ ಆಕರ್ಷಕ ಕಲಾಕೃತಿಗಳನ್ನು ನೋಡಿ ಗಂಡಸರೇ ಮೂಗಿನ ಮೇಲೆ ಬೆರಳಿಡುವಂತಿತ್ತು!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.