ದಶಕದಿಂದ ತೆರೆಯದ ಗೋದಾಮು!

ಲಿಂಗಸುಗೂರು: ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ದಾಸ್ತಾನು ಸಂಗ್ರಹದ ಸುಸಜ್ಜಿತ ಗೋದಾಮು ಕಳೆದ ಒಂದು ದಶಕದಿಂದ ತೆರೆಯದಿರುವುದರ ಹಿಂದಿರುವ ರಹಸ್ಯದ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಮಧ್ಯೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕರ್ಮೊರಾವ್ ಮಂಗಳವಾರ ಭೇಟಿ ನೀಡಿದಾಗ ಗೋದಾಮು ಸುತ್ತಮುತ್ತ ಮುಳ್ಳು ಗಿಡ ಬೆಳೆದಿತ್ತು. ಪರಿಶೀಲನೆ ನಡೆಸಿ ಗೋದಾಮು ತೆರೆಯುವಂತೆ ಸೂಚಿಸಿದ್ದರು.
ಅಧಿಕಾರಿ ಮುಂದೆ ಬೀಗದ ಕೈಗೆ ಓಡಾಡಿದ ಸಿಬ್ಬಂದಿ ಕಾಲಹರಣ ಮಾಡಿದರು. ಪುನಃ ಬಂದಾಗ ಪರಿಶೀಲಿಸುವುದಾಗಿ ಹೇಳಿ ಹೋದರು.
ಸಿಇಒ ಮರಳಿ ಕಚೇರಿಗೆ ಬರಬಹುದು ಎಂದು ವ್ಯವಸ್ಥಾಪಕ ಬಸವರಾಜ ನೇತೃತ್ವದಲ್ಲಿ ಡಿ ಗ್ರೂಪ್ ನೌಕರರು ಗೋದಾಮು ಸುತ್ತಮುತ್ತಲಿನ ಮುಳ್ಳು ಗಿಡ ಕಡಿದು ಸ್ವಚ್ಛಗೊಳಿಸಿದರು.
ಬೀಗದ ಕೈ ಹುಡುಕಿ ಸುಸ್ತಾದ ಸಿಬ್ಬಂದಿ 10 ವರ್ಷಗಳ ಹಿಂದೆ ಹಾಕಿದ ಬೀಗ ತೆರೆದಿಲ್ಲ. ಅದರಲ್ಲಿ ಕೂಲಿಗಾಗಿ ಕಾಳು ಯೋಜನೆಯ ಆಹಾರಧಾನ್ಯ ಹಾಗೂ ಇತರೆ ವಸ್ತುಗಳಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದು ಕೇಳಿಬಂತು.
ಬುಧವಾರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರುದ್ರಗೌಡ ತುರಡಗಿ ಅವರು, ವ್ಯವಸ್ಥಾಪಕ ಬಸವರಾಜಗೆ ಗೋದಾಮು ಬೀಗ ತೆರೆಯಲು ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಾಣೇಶರಾವ್ ಅವರನ್ನು ಕೇಳಲಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಗೋದಾಮು ತೆರೆಯಬಾರದು ಎಂದು ಹೇಳಿದ್ದಾರೆ ಎಂದು ವ್ಯವಸ್ಥಾಪಕರು ಹೇಳಿದ್ದು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
ಗೋದಾಮು ಬೀಗ ತೆರೆಯದಿರುವ ಬಗ್ಗೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರುದ್ರಗೌಡ ತುರಡಗಿ ಅವರನ್ನು ಸಂಪರ್ಕಿಸಿದಾಗ, ತಮಗೂ ಕುತೂಹಲ ಮೂಡಿಸಿದೆ. ಸಿಇಒ ಅವರು ಬಂದು ಹೋದ ನಂತರ ಗೋದಾಮು ಪರಿಶೀಲನೆ ಮಾಡಲು ಮುಂದಾಗಿದ್ದೆ. ಇರುವ ಸ್ಥಿತಿಗತಿ ಬಗ್ಗೆ ವೀಕ್ಷಿಸಲು ಚುನಾವಣಾ ನೀತಿ ಸಂಹಿತೆ ನೆಪ ಹೇಳಿದ್ದು ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.
***
ಗೋದಾಮಿನಲ್ಲಿ ಕೂಲಿಗಾಗಿ ಕಾಳು ಯೋಜನೆ ಸೇರಿ ಇತರೆ ಯೋಜನೆಗಳ ಆಹಾರಧಾನ್ಯ ಇರುವ ಬಗ್ಗೆ ಸಂಶಯವಿದೆ. ತನಿಖೆ ನಡೆಸುವ ಅಗತ್ಯವಿದೆ.
-ರುದ್ರಗೌಡ ತುರಡಗಿ, ಉಪಾಧ್ಯಕ್ಷ, ತಾ.ಪಂ, ಲಿಂಗಸುಗೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.