ದಶಕ ಕಳೆದರೂ ದೊರಕದ ಆಶ್ರಯ ಮನೆ!

7

ದಶಕ ಕಳೆದರೂ ದೊರಕದ ಆಶ್ರಯ ಮನೆ!

Published:
Updated:
ದಶಕ ಕಳೆದರೂ ದೊರಕದ ಆಶ್ರಯ ಮನೆ!

ಹರಪನಹಳ್ಳಿ: ವಸತಿರಹಿತ ಕುಟುಂಬಗಳ ತಲೆಯ ಮೇಲೊಂದು ಸೂರು ಒದಗಿಸುವ ಆಶಯದೊಂದಿಗೆ ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿ ದಶಕಗಳೇ ಗತಿಸಿದರೂ, ಪುರಸಭೆ ಹಕ್ಕುಪತ್ರ ವಿತರಿಸದೇ ಗಾಢನಿದ್ರೆಗೆ ಜಾರಿರುವ ಪರಿಣಾಮ ಇಲ್ಲಿನ ನಿವಾಸಿಗಳು ಅತಂತ್ರ ಪರಿಸ್ಥಿತಿಯಲ್ಲಿಯೇ ಜೀವಿಸಬೇಕಾದ ಅನಿವಾರ್ಯತೆ ಎದುರಾಗಿದೆ!.ಪಟ್ಟಣದ ಬಡ ಹಾಗೂ ನಿರ್ಗತಿಕ ಕುಟುಂಬಗಳು ಸೇರಿದಂತೆ ಆಶ್ರಯಕ್ಕಾಗಿ ಪರಿತಪಿಸುತ್ತಿರುವ ಕುಟುಂಬಗಳಿಗಾಗಿ ನೆರಳಿನ ನೆರವು ಕಲ್ಪಿಸುವ ಉದ್ದೇಶದೊಂದಿಗೆ ಸರ್ಕಾರ 2000-01ನೇ ಆರ್ಥಿಕ ವರ್ಷದಲ್ಲಿ ಪಟ್ಟಣದ ಹೊಸಪೇಟೆ ರಸ್ತೆ ಸಮೀಪ ಆಶ್ರಯ ಯೋಜನೆ ಅಡಿಯಲ್ಲಿ ವಸತಿ ನಿರ್ಮಾಣಕ್ಕೆ ಮುಂದಾಯಿತು.ಮೊದಲ ಕಂತಿನಲ್ಲಿ 50ಮನೆ ಹಾಗೂ ಎರಡನೇ ಕಂತಿನಲ್ಲಿ 70ಮನೆ ಸೇರಿದಂತೆ ಒಟ್ಟು 120ಮನೆಗಳನ್ನು ನಿರ್ಮಿಸುವ ಮೂಲಕ `ಮಹಾತ್ಮಗಾಂಧಿ ಆಶ್ರಯ ಬಡಾವಣೆ~ ಎಂದು ನಾಮಕರಣ ಮಾಡಲಾಯಿತು. ಆದರೆ, ಸುಸಜ್ಜಿತ ಚರಂಡಿ, ಪರಿಶುದ್ಧ ಕುಡಿಯುವ ನೀರು ಪೂರೈಕೆ, ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಾಣ ಹಾಗೂ ವಿದ್ಯುತ್ ಪೂರೈಕೆಯಂತಹ ಅಗತ್ಯ ಮೂಲಸೌಕರ್ಯಗಳ ಅಳವಡಿಸಲು ಮೀನ-ಮೇಷ ಎಣಿಸುತ್ತಿದೆ.ಸಣ್ಣಪುಟ್ಟ ಕೈಗಾಡಿ ಹೋಟೆಲ್, ಕಟ್ಟಡ ಕಾರ್ಮಿಕರು, ಒಂಟೆತ್ತಿನಬಂಡಿ ಹಮಾಲರು, ಆಟೋರಿಕ್ಷಾ ಚಾಲಕರು ಹಾಗೂ ಅವರಿವರ ಮನೆಯ ಕಸಮುಸುರಿ ತೊಳೆದು ಹೊಟ್ಟೆ ಹೊರೆಯುತ್ತಿರುವ ಬಹುತೇಕ ಬಡ ಕುಟುಂಬಗಳೇ ಇಲ್ಲಿ ವಾಸಿಸುತ್ತಿವೆ. ನಿರ್ಮಾಣವಾಗಿರುವ ಮನೆಗಳ ಪೈಕಿ ಕೇವಲ 75ಕುಟುಂಬಗಳು ವಾಸಿಸುವ ಮನೆಗಳಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಉಳಿದ 50ಮನೆಗಳ ಪೈಕಿ, 25-30ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ.

 

ಈ ಕುರಿತು ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ಇಂದು-ನಾಳೆ ಎನ್ನುತ್ತಲೇ ಕಾಲತಳ್ಳುತ್ತಿದ್ದಾರೆ ಹೊರತು, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ, ಆತಂಕದ ಸ್ಥಿತಿಯಲ್ಲಿರುವ ಕುಟುಂಬಗಳಿಗೆ ನೆಮ್ಮದಿ ಮೂಡಿಸುವಲ್ಲಿ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ನಿವಾಸಿ ಹನುಮಂತಪ್ಪ.ಉಳಿದ 20ಕ್ಕೂ ಅಧಿಕ ಮನೆಗಳನ್ನು ಯಾವ ಕುಟುಂಬಕ್ಕೂ ವಿತರಿಸದೆ ಇರುವ ಪರಿಣಾಮ ಮನೆಯ ಮೇಲ್ಛಾವಣಿಗೆ ಹೊದಿಸಲಾಗಿದ್ದ ಸಿಮೆಂಟ್ ಶೀಟ್, ಬಾಗಿಲು, ಕಿಟಕಿಗಳೆಲ್ಲ ಕಿತ್ತುಹೋಗಿದ್ದು, ಸಂಪೂರ್ಣ ಶಿಥಿಲಗೊಂಡಿವೆ. ಮನೆಯ ಒಳಗಡೆ ಗಿಡಗಂಟೆಯ ಪೊದೆಗಳು ಬೆಳೆದು ನಿಂತಿವೆ!.

 

ನಿರಾಶ್ರಿತರಿಗೆ ನೆರಳಾಗುವ ಮುನ್ನವೇ ಮನೆಗಳು ಪಾಳುಬಿದ್ದಿರುವುದು ಅಧಿಕಾರಿ ಹಾಗೂ ಜನಪತ್ರಿನಿಧಿಗಳ ನಿರ್ಲಕ್ಷ್ಯತೆಯ ಜತೆಗೆ, ಸರ್ಕಾರಿ ಯೋಜನೆಗಳು ಹೇಗೆ ವೈಫಲ್ಯವಾಗುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಕಣ್ಣೆದುರು ಗೋಚರಿಸುತ್ತಿವೆ.ಇಡೀ ಪಟ್ಟಣಕ್ಕೆ ತುಂಗಭದ್ರಾ  ನದಿಯ ಶುದ್ಧೀಕರಿಸಿದ ಸಿಹಿ ನೀರನ್ನು ಪೂರೈಸುವ ಪುರಸಭೆ, ಈ ಕಾಲೊನಿಗೆ ಮಾತ್ರ ಕೊಳವೆಬಾವಿ ನೀರು ಸರಬರಾಜು ಮಾಡುವ ಮೂಲಕ `ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ~ಎಂಬ ಗಾದೆ ಮಾತಿನಂತೆ ನಡೆದುಕೊಳ್ಳುತ್ತಿದೆ. ಮೂರ‌್ನಾಲ್ಕು ದಿನಕ್ಕೊಮ್ಮೆ  ಸರಬರಾಜುಗೊಳ್ಳುವ ನೀರು ಸಂಗ್ರಹಿಸಲು ಕಾಲೊನಿಯ ನಿವಾಸಿಗಳು ಹರಸಾಹಸ ನಡೆಸಬೇಕಾಗಿದೆ.ವಿದ್ಯುತ್ ಸರಬರಾಜುವಿನಲ್ಲಿಯೂ ಈ ಕಾಲೊನಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದ ವಿದ್ಯುತ್‌ಮಾರ್ಗಕ್ಕೆ ಜೋಡಣೆ ಕಲ್ಪಿಸಿರುವ ಬೆಸ್ಕಾಂ, ಕೇವಲ ಆರೇಳು ತಾಸು ವಿದ್ಯುತ್ ಪೂರೈಸುತ್ತದೆ. ಉಳಿದ ಅವಧಿಯಲ್ಲಿ ಇಡೀ ಕಾಲೊನಿಗೆ ಕಗ್ಗತ್ತಲು ಆವರಿಸಿರುತ್ತದೆ.ದಶಕದ ನಂತರ ಈಗ ಕೆಲ ಕಡೆಗಳಲ್ಲಿ ಚರಂಡಿ, ಒಂದು ಶೌಚಾಲಯ ಹಾಗೂ ಒಂದರೆಡು ಬೀದಿ ನಳ ಅಳವಡಿಕೆ ನಿರ್ಮಾಣದ ಕಾಮಗಾರಿ ಆರಂಭ ಆಗಿದೆಯಾದರೂ, ಕುಡಿಯುವ ನೀರಿನ ಭವಣೆ ಮಾತ್ರ ಬಡಾವಣೆಯ ನಿವಾಸಿಗಳಿಗೆ ನಿತ್ಯವೂ ಕಾಡುತ್ತಿರುವ ಸಮಸ್ಯೆ. ಜನ ಸಹನೆ ಕಳೆದುಕೊಳ್ಳುವ ಮುನ್ನ ಅಗತ್ಯ ಮೌಲಸೌಕರ್ಯ ಹಾಗೂ ಹಕ್ಕುಪತ್ರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕೆಂಬುದು ಕಾಲೊನಿ ನಿವಾಸಿಗಳ ಅನಿಸಿಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry