ಭಾನುವಾರ, ಮೇ 16, 2021
21 °C

ದಶಕ ಕಳೆದರೂ ಮುಗಿಯದ ರಸ್ತೆ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಜಿಲ್ಲಾ ಕೇಂದ್ರದಲ್ಲಿ ಒಂದು ರಸ್ತೆ ನಿರ್ಮಿಸಲು ಎಷ್ಟು ಕಾಲಬೇಕು ? ಒಂದು ವರ್ಷ ?  ಎರಡು ವರ್ಷ... ? ಆದರೆ ಇಲ್ಲೊಂದು ರಸ್ತೆ ಇದೆ. ಸಂಪರ್ಕದ ದೃಷ್ಟಿಯಿಂದ ಮತ್ತು ನಗರದೊಳಗಿನ ವಾಹನಗಳ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಅತಿ ಮುಖ್ಯ ರಸ್ತೆ ಎನಿಸಿದ್ದರೂ ದಶಕ ಕಳೆದರೂ ಪೂರ್ಣಗೊಂಡಿಲ್ಲ. ವಾಸ್ತವವೆಂದರೆ ಕಾಮಗಾರಿ ಆರಂಭವಾಗಿಯೇ ಇಲ್ಲ.ನಗರದ ಅತ್ಯಂತ ಮಹತ್ವಾಕಾಂಕ್ಷೆಯ ರಿಂಗ್ ರಸ್ತೆ ಕಾಮಗಾರಿಯೇ ಇನ್ನೂ ಪೂರ್ಣಗೊಳ್ಳದಿರುವಾಗ ಈ ರಸ್ತೆ ಕಾಮಗಾರಿ ಮುಂದೆ ಸಾಗದಿರುವುದು ಅಷ್ಟೇನೂ ಅಚ್ಚರಿ ಮೂಡಿಸುವುದಿಲ್ಲ. ಈ ಭಾಗದ ಜನರನ್ನು ಕೇಳಿದರೆ ನಮ್ಮ ನಾಯಕರಿಗೆ ಇಚ್ಛಾಶಕ್ತಿ ಇಲ್ಲದಿರುವುದೇ ಕಾಮಗಾರಿಗಳು ಅರ್ಧಕ್ಕೆ ನಿಲ್ಲಲು ಕಾರಣ ಎನ್ನುತ್ತಾರೆ.ಹಾಸನದಲ್ಲಿ ಅಭಿವೃದ್ಧಿ ಆಗುತ್ತಿರುವುದು ಹೊಸ ಬಡಾವಣೆಗಳಲ್ಲಿ ಮಾತ್ರ. ಹಳೆಯ ಹಾಸನಕ್ಕೆ ಹೋಗಿ ನೋಡಿದರೆ ಎಷ್ಟರ ಮಟ್ಟಿಗೆ ಅವ್ಯವಸ್ಥೆ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ರಸ್ತೆಗಳೇ ಇಲ್ಲ, ಎಲ್ಲೆಂದರಲ್ಲಿ ಕಸ ಚೆಲ್ಲಿರುವುದು... ಹೀಗೆ ಜನರು ಇಲ್ಲಿ ಕಷ್ಟದಿಂದಲೇ ವಾಸಿಸುತ್ತಿದ್ದಾರೆ.  ಬಿ.ಎಂ. ರಸ್ತೆಯಿಂದ ರಿಂಗ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಯ ಕಾಮಗಾರಿ ಪೂರ್ಣಗೊಂಡರೆ ಅದರ ಲಾಭ ಹಳೆಯ ಹಾಸನಕ್ಕೂ ಒಂದಿಷ್ಟು ಲಭಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.ಸುಮಾರು ಒಂದು ದಶಕದ ಹಿಂದೆ, ರಿಂಗ್ ರಸ್ತೆಯ ಕನಸಿನೊಂದಿಗೇ ಈ ಭಾಗದ ಜನರು ಬಿ.ಎಂ. ರಸ್ತೆ ಹಾಗೂ ರಿಂಗ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಈ 80ಅಡಿ ರಸ್ತೆಯ ಕನಸನ್ನೂ ಕಂಡಿದ್ದರು. ನಿರೀಕ್ಷೆಯಂತೆ ಆರಂಭದಲ್ಲಿ ಒಂದಿಷ್ಟು ಕೆಲಸಗಳೂ ಆದವು.

 

ನಗರಸಭೆಯವರು ಜಾಗವನ್ನು ಗೊತ್ತುಮಾಡಿ ರಸ್ತೆಗೆ ಬೇಕಾದ ಜಾಗವನ್ನು ಅಳತೆ ಮಾಡಿ ಸುತ್ತಮುತ್ತಲಿನ ನಿವಾಸಿಗಳಿಗೆ ತಿಳಿಸಿದ್ದೂ ಆಗಿದೆ. ಹುಣಸಿನ ಕೆರೆಯ ಒಂದು ಭಾಗದಲ್ಲಿ ಸೇತುವೆಯೂ ನಿರ್ಮಾಣವಾಗಿ ರಸ್ತೆ ಇನ್ನೇನು ಸಿದ್ಧವಾಗಿಬಿಡುತ್ತದೆ ಎಂಬ ವಾತಾವರಣ ನಿರ್ಮಾಣವಾಯಿತು. ಅಷ್ಟೇ... ನಂತರ ಏನೂ ಆಗಿಲ್ಲ.

 

ಈಗ ಉದ್ದೇಶಿತ ರಸ್ತೆಯ ಇಕ್ಕೆಲಗಳಲ್ಲಿ ಮನೆಗಳೆದ್ದಿವೆ. ಈ ವರೆಗೆ ಅಲ್ಲಿ ರಸ್ತೆ ಅತಿಕ್ರಮಣ ನಡೆದಿಲ್ಲ. (ನಗರಸಭೆಗೆ ಸೇರಿದ ಸುತ್ತಲಿನ ಜಾಗದಲ್ಲಿ ಅಲ್ಲಲ್ಲಿ ಅತಿಕ್ರಮಣ ಆಗಿದೆ) ಆದರೆ ಕೆಲವು ಮನೆಯವರು ಮನೆ ಮುಂದೆ, ರಸ್ತೆಯಲ್ಲೇ ಹೂವಿನ ಗಿಡ, ತೆಂಗಿನ ಗಿಡಗಳನ್ನು ಬೆಳೆಸಿದ್ದಾರೆ. ತೆಂಗಿನ ಗಿಡಗಳು ಫಲ ನೀಡಲು ಆರಂಭಿಸಿವೆ.

 

ಕಟ್ಟಡ ನಿರ್ಮಾಣ ಆಗದಿದ್ದರೂ ವ್ಯಾಪಾರಿಗಳು ಸಾಮಾನುಗಳ ಮೂಟೆಯನ್ನು ರಸ್ತೆಯ ಮೇಲೆಯೇ ಇಟ್ಟು ರಸ್ತೆಯನ್ನು ಬಳಸುತ್ತಿದ್ದಾರೆ. ಇನ್ನೂ ಒಂದಿಷ್ಟು ವರ್ಷ ಕಳೆದರೆ ಹೊಸಲೈನ್ ರಸ್ತೆಯಂತೆ 80ಅಡಿಯ ಈ ರಸ್ತೆ 40  ಅಡಿಗೆ ಇಳಿದರೆ ಅಚ್ಚರಿ ಇಲ್ಲ. ಆಗ ತೆರವು ಕಾರ್ಯಾಚರಣೆ, ಪ್ರತಿಭಟನೆ... ನೆಪದಲ್ಲಿ ರಸ್ತೆ ಇನ್ನಷ್ಟು ವಿಳಂಬವಾಗಬಹುದು.ಉದ್ದೇಶಿತ ಈ ರಸ್ತೆ ಪೂರ್ಣಗೊಂಡರೆ ಸಕಲೇಶಪುರ ರಸ್ತೆಯಿಂದ ವಿದ್ಯಾನಗರ, ಸಾಲಗಾಮೆ ರಸ್ತೆ ಮುಂತಾದ ಕಡೆಗೆ ಬರುವವರು ನಗರದೊಳಗೆ ಬಾರದೆ ನೇರವಾಗಿ ಹೋಗಬಹುದು. ಅದರಂತೆ ಈ ಭಾಗಗಳಿಂದ ಸಕಲೇಶಪುರ, ಬೇಲೂರು ಮತ್ತಿತರ ಭಾಗಗಳಿಗೆ ಹೋಗುವವರಿಗೂ ಅನುಕೂಲವಾಗುತ್ತದೆ.

 

ಆದರೆ ಈಗ ಆ ಭಾಗದ ಕೆಲವೇ ಕೆಲವು ವ್ಯಾಪಾರಿಗಳು ರಸ್ತೆಯನ್ನು ಬಳಸುತ್ತಿದ್ದಾರೆ. ಅಲ್ಲಲ್ಲಿ ಇದ್ದ ದೊಡ್ಡ ದೊಡ್ಡ ಗುಂಡಿಗಳಲ್ಲಿ ಕಸ ಕಡ್ಡಿ, ಮಣ್ಣನ್ನು ಮುಚ್ಚಿ ಕಚ್ಚಾ ರಸ್ತೆ ನಿರ್ಮಾಣ ಮಾಡಿದ್ದಾರೆ. ಹುಣಸಿನಕೆರೆ ಲೇಔಟ್  ಸೇರಿದಂತೆ ಇಲ್ಲಿ ವಿವಿಧ ಲೇಔಟ್‌ಗಳ ಅಭಿವೃದ್ಧಿ ಆಗುತ್ತಿದೆ. ಈ ರಸ್ತೆ ಪೂರ್ಣಗೊಂಡರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ. ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.