ದಸರಾ: ಅಲ್ಲಿ ಉತ್ಸಾಹ, ಇಲ್ಲಿ ನಿರುತ್ಸಾಹ!

7

ದಸರಾ: ಅಲ್ಲಿ ಉತ್ಸಾಹ, ಇಲ್ಲಿ ನಿರುತ್ಸಾಹ!

Published:
Updated:

ಮಂಡ್ಯ: `ಸಾಂಸ್ಕೃತಿಕ ನಗರಿ~ ಮೈಸೂರಿನಲ್ಲಿ ನಡೆವ ದಸರಾ ಎಂದರೆ ಜನೋತ್ಸವ, ಸಂಭ್ರಮ, ಹೊಸ ಹುರುಪು, ಉತ್ಸಾಹ, ಎಲ್ಲೆಡೆ ಸಡಗರ. ಆದರೆ, ಮೈಸೂರು ದಸರಾ ಉತ್ಸಾಹಕ್ಕೆ ಮೂಲ ನೆಲೆಯಾದ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದಲ್ಲಿ ಮಾತ್ರ ಅಂತಹ ಉತ್ಸಾಹ-ಸಡಗರದ ಛಾಯೆ ಕಾಣಿಸುತ್ತಿಲ್ಲ.ದಸರಾ ಸಮೀಪಿಸುತ್ತಿದ್ದಂತೆ ಯಾಂತ್ರಿಕವೇನೊ ಎಂಬಂತೆ ಸಿದ್ಧತೆಗಳು ಆಗುತ್ತಿವೆ. ಅದಕ್ಕೂ, ಈಗ ಆಮೆವೇಗ. ಇದೇ 20 ರಿಂದ ಮೂರು ದಿನ ನಡೆವ ದಸರಾ ಉತ್ಸವಕ್ಕೆ ಕ್ಷಣಗಣನೇ ಆರಂಭವಾಗಿದ್ದರೂ, ಕಾರ್ಯಕ್ರಮಗಳ ವೇಳಾ ಪಟ್ಟಿ, ಆಹ್ವಾನ ಪತ್ರಿಕೆ ಮುದ್ರಣ ಸೇರಿದಂತೆ ಬಹುತೇಕ ಕೆಲಸಗಳು ಅಂತಿಮಗೊಂಡಿಲ್ಲ.ಸುಣ್ಣ-ಬಣ್ಣ ಬಳಿದುಕೊಂಡು, ವಿದ್ಯುತ್ ದೀಪಗಳಿಂದ ಸಿಂಗಾರಗೊಳ್ಳಬೇಕಿದ್ದ ದೇವಾಲಯಗಳು, ಸ್ಮಾರಕಗಳಿಗೆ ಈ ಭಾಗ್ಯ ಲಭ್ಯವಾಗಿಲ್ಲ. ರಸ್ತೆಗಳು ದುರಸ್ತಿ ಕಂಡಿಲ್ಲ. ಪ್ರವಾಸಿಗರ ದಂಡೇ ದಾಳಿಯಿಡುವುದರಿಂದ ಕುಡಿಯುವ ನೀರು, ಶೌಚಾಲಯ ಕಲ್ಪಿಸುವ ಸಿದ್ಧತೆಗಳೂ ನಡೆದಿಲ್ಲ.ದಸರಾ ಉತ್ಸವದ ಯಶಸ್ಸಿಗಾಗಿ ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಅವುಗಳ ಬಗೆಗೂ ಅಪಸ್ವರಗಳು ಕೇಳಿ ಬರುತ್ತಿವೆ. ಸ್ಥಳೀಯ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಕಲಾವಿದರ ಸಭೆ ನಡೆಸಿಲ್ಲ. ವೇಳಾಪಟ್ಟಿ ಬಗೆಗೂ ಜನರಿಗೆ ಮಾಹಿತಿಯಿಲ್ಲ.`ಬರ~ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸುವ ಬಗೆಗೆ ಜಿಲ್ಲಾಡಳಿತ ಸಾಕಷ್ಟು ಮಾತುಗಳನ್ನು ಹೇಳುತ್ತಿದೆಯಾದರೂ, ಅಲ್ಲಿನ ಸಿದ್ಧತೆಗಳನ್ನು ಗಮನಿಸಿದರೆ, ಅದೂ ಕಷ್ಟಸಾಧ್ಯ ಎನ್ನಿಸುತ್ತಿದೆ. ಪಟ್ಟಣದಲ್ಲಿ ತುರ್ತಾಗಿ ಮೂರು ಸಭೆ, ದಸರಾ ಲೋಗೊ ಬಿಡುಗಡೆ ಮಾಡಿದ್ದು ಬಿಟ್ಟರೆ ಹೆಚ್ಚೇನೂ ಸಾಧನೆ ಆಗಿಲ್ಲ.ಕಳೆದ ಬಾರಿ 50 ಲಕ್ಷ ರೂಪಾಯಿ ಬಿಡುಗಡೆ ಆಗಿದ್ದ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಈಗ ದೊರತಿರುವುದು ಕೇವಲ 25 ಲಕ್ಷ ರೂಪಾಯಿ. ಇನ್ನು 25 ಲಕ್ಷ ರೂಪಾಯಿ ಹಣ ಭರವಸೆಯ ಹಂತದಲ್ಲಿಯೇ ಇದೆ. ದಸರಾ ಆಚರಣೆಯ ನೆಪದಲ್ಲಿ ಆ ಭಾಗದ ಐತಿಹಾಸಿಕ ಸ್ಥಳಗಳ ಪುನರುಜ್ಜೀವನ, ರಸ್ತೆ, ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ಆಗಬೇಕು. ಆದರೆ, ಅದರ ಭಾಗ್ಯವೂ ಇಲ್ಲ.ಜಿಲ್ಲಾಡಳಿತದ ಪ್ರಕಾರ, ಈ ವರ್ಷ ದಸರಾ ಸರಳವಾಗಿ ಇರಲಿದೆ. ಈಗ ತಾತ್ಕಾಲಿಕವಾಗಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಬಾಣ ಬಿರುಸುಗಳ ಪ್ರದರ್ಶನ, ಕವಿಗೋಷ್ಠಿ, ಮಹಿಳಾ ಸಂಭ್ರಮ, ಪುಸ್ತಕ ಪ್ರದರ್ಶನ ಇವೆ. ಸಾಂಸ್ಕೃತಿಕ ಕಾರ್ಯಕ್ರಮ, ಮನರಂಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.ಆದರೆ, ಊರೊಟ್ಟಿನ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡಬೇಕು ಎಂಬುದು ಸ್ಥಳೀಯ ಕಲಾವಿದರ ಪ್ರಮುಖ ಬೇಡಿಕೆ. ಈ ಬಗೆಗೆ ಪ್ರತಿ ಬಾರಿಯೂ ಒತ್ತಾಯಗಳು ಕೇಳಿ ಬಂದರೂ, ಅವು ನೇಪಥ್ಯಕ್ಕೆ ಸರಿದು ಬಿಡುತ್ತದೆ. ಸ್ಥಳೀಯ ಕಲಾವಿದರ ಜೊತೆಗೆ ಹೊರಗಿನವರಿಗೂ ಅವಕಾಶ ನೀಡಲಿ. ಆದರೆ, ಹೆಚ್ಚಿನ ಆದ್ಯತೆ ಸ್ಥಳೀಯರಿಗೆ ಸಿಗಬೇಕು ಎನ್ನುತ್ತಾರೆ ಅರಕೆರೆ ಗ್ರಾಮದ ಎ.ಆರ್. ಅನಿಲಬಾಬು.ಪ್ರತಿವರ್ಷವೂ, ಕಿರಂಗೂರಿನ ಬನ್ನಿಮಂಟಪದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಚಾಮುಂಡೇಶ್ವರಿ ವಿಗ್ರಹದ ಅಂಬಾರಿಯನ್ನು ಆನೆಗಳು ಹೊತ್ತು ಹೊರಡಲಿವೆ. ಆದರೆ, ಈ ಬಾರಿ ಎಷ್ಟು ಆನೆಗಳು ಬರುತ್ತವೆ ಎಂಬ ಬಗೆಗೂ ಮಾಹಿತಿಯಲ್ಲ.ಕಾರ್ಯಕ್ರಮಗಳ ಪಟ್ಟಿ ತಯಾರಿಕೆ ಬಗೆಗೆ ಸಮಗ್ರ ಚರ್ಚೆಯಾಗಿಲ್ಲ. ಸಿದ್ಧತೆ ಹಾಗೂ ಕಾರ್ಯಕ್ರಮಗಳಲ್ಲಿ ತಮ್ಮ ಹಿಂಬಾಲಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ದಸರಾ ಉತ್ಸವ ಕೆಲವರಿಗೆ ಮಾತ್ರ ಸೀಮಿತ ಎಂಬ ಭಾವನೆ ಬಂದಿದೆ ಎಂದು ದೂರುತ್ತಾರೆ ಕಿರಂಗೂರು ಪಾಪು.ದಸರಾ ಎಂದರೆ ಅಲ್ಲಿ (ಮೈಸೂರು) ಉತ್ಸಾಹ, ಇಲ್ಲಿ (ಶ್ರೀರಂಗಪಟ್ಟಣ) ನಿರುತ್ಸಾಹ ಎನ್ನುವ ವಾತಾವರಣ. ಜೊತೆಗೆ ಜನಪ್ರತಿಧಿಗಳ ಮತ್ತು ಅಧಿಕಾರಿಗಳ ಉತ್ಸಾಹ ಎಂಬುವ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry