ಶನಿವಾರ, ಮೇ 8, 2021
18 °C

ದಸರಾ ಸಭೆಯಲ್ಲಿ ಸಿಎಂ ಡಿ.ವಿ.ಸದಾನಂದಗೌಡ: ಗುಣಮಟ್ಟದಲ್ಲಿ ರಾಜಿ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ದಸರಾ ಮಹೋತ್ಸವದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟದೊಂದಿಗೆ ಯಾವುದೇ ರಾಜಿ ಬೇಡ. ಯಾರದ್ದೇ ಶಿಫಾರಸು ಅಥವಾ  ಒತ್ತಡಕ್ಕೆ ಮಣಿಯದೇ ನಿಜವಾದ ಪ್ರತಿಭೆಗಳಿಗೆ ಅವಕಾಶ ಕೊಡಬೇಕು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುರುವಾರ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉನ್ನತ ಸಮಿತಿಯ ಸಭೆಯಲ್ಲಿ ನಾಡಹಬ್ಬದ ಕುರಿತು ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದ ಅವರು ಸೂಚನೆ ನೀಡಿದರು.`ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ಒಂದು ದೂರು ಬಂದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಪ್ರಮಾದ ವಾಗದಂತೆ ನೋಡಿಕೊಳ್ಳಿ~ ಎಂದು ಸಾಂಸ್ಕೃತಿಕ ಕಾರ್ಯಕ್ರಮದ ಉಪ ಸಮಿತಿಯ ವಿಶೇಷಾಧಿಕಾರಿಯೂ ಆಗಿರುವ ಮುಡಾ ಆಯುಕ್ತ ಬೆಟ್‌ಸೂರಮಠ ಅವರಿಗೆ ಸೂಚಿಸಿದರು.`ದಸರಾ ದೀಪಾಲಂಕರಾದಲ್ಲಿ ಹೊಸತನ ಇರಬೇಕು. ಅಲ್ಲದೇ   ಈ ಸಂದರ್ಭದಲ್ಲಿ ವಿದ್ಯುತ್ ಕೈಕೊಡುವ ದೂರುಗಳು ಬರಬಾರದು. ಈ ಬಗ್ಗೆ ವಿಶೇಷ ನಿಗಾ ಅವಶ್ಯಕ. ಯಾವುದೇ ಕುಂದು ಬರಕೂಡದು~ ಎಂದು ಸೆಸ್ಕ್ ಅಧಿಕಾರಿಗಳಿಗೆ ಹೇಳಿದರು.ಇದಕ್ಕೆ ಉತ್ತರಿಸಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಾ. ಬೋರೇಗೌಡ, `ದೀಪಾಲಂಕಾರಕ್ಕಾಗಿ ಹಲವಾರು ಪ್ರಾಯೋಜಕರು ಮುಂದೆ ಬಂದಿವೆ. ಈ ಬಾರಿ ನಗರದ ವಿವಿಧ ಪ್ರದೇಶಗಳಲ್ಲಿ ಅಲ್ಲಿಯ ವಿಶೇಷತೆಗಳು ಮತ್ತು ಐತಿಹಾಸಿಕ ಕಥೆಗಳ ಆಧಾರಿತ ಲೈಟಿಂಗ್ ಪ್ರದರ್ಶವನ್ನು ಏರ್ಪಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ~ ಎಂದರು.ಜಾಹೀರಾತು ಫಲಕ ತೆರವು

`ನಗರದಲ್ಲಿ ಸರ್ಕಾರಿ ಪ್ರಾಯೋಜಿತ ಫಲಕಗಳನ್ನು ಬಿಟ್ಟು ಬೇರೆ ಎಲ್ಲ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ವೈಯಕ್ತಿಕ ಪ್ರಚಾರದ  ಕಟೌಟ್‌ಗಳು, ಜಾಹೀರಾತುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಕೆಲಸವಾಗಬೇಕು. ನಗರದ ಸೌಂದರ್ಯಕ್ಕೆ ಚ್ಯುತಿ ಬರಬಾರದು~ ಎಂದು ಸಿಎಂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.`ಮಹೋತ್ಸವಕ್ಕೆ ಸಿಗುತ್ತಿರುವ ಪ್ರಾಯೋಜಕತ್ವದ ದುರ್ಬಳಕೆ ಆಗಬಾರದು. ರಸ್ತೆಯ ಹೊಂಡಗಳನ್ನು ಮುಚ್ಚುವ ಮತ್ತು ದುರಸ್ತಿ ಮಾಡುವ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು~ ಎಂದು ಹೇಳಿದರು.ಜನಸ್ನೇಹಿ ಪೊಲೀಸ್

ಕಾನೂನು ಮತ್ತು ಸುವ್ಯವಸ್ಥೆ ಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದ ಪೊಲೀಸ್ ಆಯುಕ್ತ ಸುನಿಲ ಅಗರವಾಲ್, `ದೇಶ, ವಿದೇಶಗಳಿಂದ ಬರುವ ಲಕ್ಷಾಂತರ ಪ್ರವಾಸಿಗರೊಂದಿಗೆ ಸೌಜನ್ಯ ಮತ್ತು ನಗುಮುಖದೊಂದಿಗೆ ವರ್ತಿಸಲು ಜನಸ್ನೇಹಿಯಾಗಿರಲು ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಜನರಿಗೆ ಮಾಹಿತಿ ನೀಡಲು 40 ಕಿಯಾಸ್ಕ್‌ಗಳನ್ನು ಆರಂಭಿಸಲಾಗುವುದು. ನಗರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಶುಕ್ರವಾರ ಪೊಲೀಸ್ ಪಥಸಂಚಲನ ನಡೆಸಲಾಗುವುದು~ ಎಂದು ಹೇಳಿದರು.2012ರ ದಸರೆಗೆ ಚಾಲನೆ

`ಮುಖ್ಯಮಂತ್ರಿಗಳು ದಸರಾದಲ್ಲಿ ಹೊಸ ರೂಢಿಯನ್ನು ಆರಂಭಿಸಬೇಕು. ಈ ದಸರಾ ಉತ್ಸವದ ಅಂತ್ಯವಾಗುತ್ತಿದ್ದಂತೆಯೇ ಮುಂದಿನ ವರ್ಷದ ಉತ್ಸವಕ್ಕೆ ಚಾಲನೆ ನೀಡಬೇಕು. ಕೇವಲ ಒಂದು ತಿಂಗಳಲ್ಲಿ ತಯಾರಿ ನಡೆಸುವ ಬದಲು, ಇಡೀ ವರ್ಷ ಉತ್ತಮ ಯೋಜನೆ, ವಿನೂತನ ಚಟುವಟಿಕೆಗಳನ್ನ ರೂಪಿಸಲು ಒತ್ತು ನೀಡಬೇಕು~ ಎಂದು ಸಭೆಯಲ್ಲಿದ್ದ ಸಂಸದ ಅಡಗೂರು ಎಚ್. ವಿಶ್ವನಾಥ್ ಸಲಹೆ ನೀಡಿದರು.`ಮೈಸೂರಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತುಂಬಲು ದಸರಾ ದುಡ್ಡೇ ಬೇಕಾ?. `ಬೇರೆ ಹಣವೇ ಇಲ್ಲವೇ. ಇಡೀ ವರ್ಷ ಕೆಟ್ಟುಹೋದ ರಸ್ತೆಗಳ ರಿಪೇರಿಗೆ ದಸರಾ ಹಣವೇ ಏಕೆ ಬೇಕು. ಉಳಿದ ಹಣ ಎಲ್ಲಿ ಹೋಯಿತು. ಕಳೆದ ವರ್ಷ ಕೆಲಸ ಮಾಡಿದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಿಲ್ಲ~ ಎಂದು ತರಾಟೆ ತೆಗೆದುಕೊಂಡರು.ದಸರಾ ಪ್ರಾಧಿಕಾರ ರಚಿಸಿ


`ಒಂದೇ ತಿಂಗಳಲ್ಲಿ ತರಾತುರಿಯ ತಯಾರಿ ನಡೆಸುವ ಬದಲಿಗೆ ದಸರಾ ಮಹೋತ್ಸವಕ್ಕಾಗಿ ಒಂದು ಪ್ರತ್ಯೇಕ ಮತ್ತು ಶಾಶ್ವತವಾದ ದಸರಾ ಪ್ರಾಧಿಕಾರ ಆರಂಭಿಸಬೇಕು. ಇಡೀ ವರ್ಷ ಅತ್ಯುತ್ತಮ ಯೋಜನೆ ರೂಪಿಸಬೇಕು~ ಎಂದುವಿಧಾನ ಪರಿಷತ್ ಸದಸ್ಯ ತೋಂಟದಾರ್ಯ ಸಲಹೆ ನೀಡಿದರು.`ಮೈಸೂರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ ಬೇರೆ ಬೇರೆ ಕಡೆಗಳಿಂದ ವಿಮಾನ ಸಂಚಾರ ಆರಂಭವಾಗಬೇಕು. ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಮೈಸೂರಿಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಅವರಿಗೆ ವಿಮಾನಯಾನದ ಅನುಕೂಲತೆ ಒದಗಿಸಬೇಕು. ಈ ಬಗ್ಗೆ ವಿಮಾನ ಹಾರಾಟ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು~ ಎಂದು ಅಭಿಪ್ರಾಯಪಟ್ಟರು.ಸಂಸ್ಕೃತಿಗೆ ಕುಂದು ಬರದಿರಲಿ

`ಯುವ ದಸರಾದಲ್ಲಿ ನಾಡು, ನುಡಿ, ಪರಂಪರೆಗೆ ಧಕ್ಕೆಯಾಗುವಂತಹ ಕಾರ್ಯಕ್ರಮಗಳು ಬೇಡ. ಉತ್ತಮ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ನಾಡಹಬ್ಬದ ಘನತೆ ಹೆಚ್ಚಿಸಬೇಕು. ದೆಹಲಿ ಗಣರಾಜ್ಯೋತ್ಸವ  ಪರೇಡ್ ಮಾದರಿಯ ಶಿಸ್ತು ಅಗತ್ಯವಿದೆ~ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ ಸಲಹೆ ನೀಡಿದರು. 

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಗೋ.ಮಧೂಸೂದನ, ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್, ಮೇಯರ್ ಪುಷ್ಪಲತಾ ಟಿ.ಬಿ. ಚಿಕ್ಕಣ್ಣವರ, ಶಾಸಕ ಸಾ.ರಾ.  ಮಹೇಶ್, ಜಿ.ಪಂ. ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಮುಡಾ ಅಧ್ಯಕ್ಷ ನಾಗೇಂದ್ರ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.