ದಸರಾ: ಸೌಂದರ್ಯಗೊಳ್ಳದ ಮಂಡ್ಯ ನಗರ

7

ದಸರಾ: ಸೌಂದರ್ಯಗೊಳ್ಳದ ಮಂಡ್ಯ ನಗರ

Published:
Updated:

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಆರಂಭಕ್ಕೆ, ನಾಲ್ಕೈದು ದಿನಗಳಷ್ಟೇ ಬಾಕಿ ಇದೆ. ಈ ಬಾರಿ ದಸರಾಗೆ ಬಿಡುಗಡೆ ಆಗಿರುವ ಮೊತ್ತ 25 ಲಕ್ಷ ರೂ. ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ 50ರಷ್ಟು ಕಡಿಮೆ.ಜಿಲ್ಲೆಯ ಮಟ್ಟಿಗೆ ಶ್ರೀರಂಗಪಟ್ಟಣದ ದಸರಾ, ಮೈಸೂರು ದಸರಾದಷ್ಟು ಖ್ಯಾತಿ, ವೈಭವವನ್ನು ಪಡೆಯದಿದ್ದರೂ ಜನಾಕರ್ಷಣೆಯಲ್ಲಿ ಹಿಂದೆ ಬಿದ್ದಿಲ್ಲ. ದಸರಾ ಉತ್ಸವಕ್ಕೀಗ ದಿನಗಣನೆಯೂ ಆರಂಭವಾಗಿದೆ.ಮೈಸೂರು ದಸರಾ ಅ. 16 ರಿಂದ 24ರ ವರೆಗೆ ನಡೆದರೆ, ಶ್ರೀರಂಗಪಟ್ಟಣದಲ್ಲಿ ಇದೇ 19 ರಿಂದ ಮೂರು ದಿನ ನಡೆಯಲಿದೆ. ನಗರದಲ್ಲಿ ನಾಡಹಬ್ಬದ ಫ್ಲೆಕ್ಸ್‌ಗಳು ಕಾಣಿಸದಿದ್ದರೂ, ಇತರೆ, ಫ್ಲೆಕ್ಸ್‌ಗಳಿಗೇನೂ ಕೊರತೆಯಿಲ್ಲ.ಈ ಎರಡೂ ದಸರಾ ಕಾರ್ಯಕ್ರಮಗಳಿಗೆ ರಾಜಧಾನಿಯಿಂದ ಬರುವ ಪ್ರವಾಸಿಗರಿಗೆ, ಮೈಸೂರು-ಬೆಂಗಳೂರು ಹೆದ್ದಾರಿಯೇ ಮುಖ್ಯ ಮಾರ್ಗ. ಹಾಗೇ ಸಾಗುವ ಪ್ರವಾಸಿಗರು, ಜಿಲ್ಲಾ ಕೇಂದ್ರವನ್ನು ದಾಟಿಯೇ ಹೋಗಬೇಕು.ಅದ್ದೂರಿತನದ ದಸರಾಗೆ ಸಾಕ್ಷಿಯಾಗುವ ಮುನ್ನ ಪ್ರವಾಸಿಗರು, ನಗರದ ಸೌಂದರ್ಯವನ್ನು `ಸವಿಯಬೇಕಾದ~  ಅನಿವಾರ್ಯತೆಯೂ ಇದೆ. ದಸರಾ ಆಚರಣೆಗೆ ಒತ್ತು ನೀಡಬೇಕೆಂಬುದು ಸರಿ. ಅದೇ, ಸಮಯದಲ್ಲಿ ನಗರದಲ್ಲಿ ಕನಿಷ್ಠ ಹೆದ್ದಾರಿಯ ಬದಿಯ ಸೌಂದರ್ಯವನ್ನು ಕಾಪಾಡಿಕೊಳ್ಳುವ ಆಸಕ್ತಿಯನ್ನು ನಗರಸಭೆ ತೋರಿದಂತೆ ಕಂಡುಬರುತ್ತಿಲ್ಲ.ತಿಂಗಳುಗಟ್ಟಲೆ ರಾರಾಜಿಸುವ ಶುಭಾಶಯದ ಫ್ಲೆಕ್ಸ್‌ಗಳು, ರಾಜಕೀಯ ಉದ್ದೇಶದ ಫ್ಲೆಕ್ಸ್‌ಗಳು, ರಸ್ತೆ ಬದಿಯ ಗೋಡೆಯಲ್ಲಿ ಚಲನಚಿತ್ರಗಳ ಭಿತ್ತಿಪತ್ರಗಳು ನಗರದಲ್ಲಿ ಹೆದ್ದಾರಿಯುದ್ದಕ್ಕೂ ರಾರಾಜಿಸುತ್ತಿವೆ. ಇದರ ಜತೆಗೆ, ರಸ್ತೆ ವಿಭಜಕದ ನಡುವೆ ಹಾಕಿರುವ ಗಿಡಗಳು ನಗರದ ಹೊರವಲಯದಲ್ಲಿ ರಸ್ತೆಯ ಎರಡು ಬದಿಗೂ ಬೆಳೆದು ವಾಹನ ಚಾಲಕರಿಗೆ ಸಮಸ್ಯೆಯಾಗಿದ್ದರೂ ಅದನ್ನು ತೆಗೆಸುವ ಗೋಜಿಗೂ ಹೋಗಿಲ್ಲ.ರಸ್ತೆ ಬದಿಯ ಭಿತ್ತಿಪತ್ರಗಳನ್ನು ತೆರವು ಗೊಳಿಸಿ, ಆ ಸ್ಥಳದಲ್ಲಿ ಜಿಲ್ಲೆಯ ಸಂಸ್ಕೃತಿ, ಪ್ರವಾಸಿ ತಾಣ ಪರಿಚಯಿಸುವ ಚಿತ್ರಗಳು, ವಿವರಗಳನ್ನಾದರೂ ಹಾಕಬಹುದು. ಆದರೆ, ಆ ಯತ್ನವೂ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.ದಸರಾಕ್ಕೂ ನಗರಕ್ಕೂ ಏನು ಸಂಬಂಧ ಇಲ್ಲದಿದ್ದರೂ, ಜಿಲ್ಲೆಯ ಶ್ರೀರಂಗಪಟ್ಟಣ ದಸರಾ ಮತ್ತು ಮೈಸೂರು ದಸರಾಕ್ಕೆ ಹೆಚ್ಚಿನ ಪ್ರವಾಸಿ ಗಳು ಆಗಮಿಸುವ, ನಗರದ ಮೂಲಕವೇ ಹಾದು ಹೋಗುವ ಕಾರಣ ಹೆದ್ದಾರಿಯಲ್ಲಿ ಕನಿಷ್ಠ ನಿರ್ವಹಣೆಯನ್ನಾದರೂ ಮಾಡುವುದು ಅಗತ್ಯ ಎನ್ನುತ್ತಾರೆ ನೆಹರು ನಗರದ ನಿವಾಸಿ ದೀಪಕ್.ಶ್ರೀರಂಗಪಟ್ಟಣ ದಸರಾ ಅ. 19ಕ್ಕೆ ಆರಂಭವಾಗಲಿದೆ. ಉಳಿದ ನಾಲ್ಕೈದು ದಿನದಲ್ಲಿಯಾದರೂ ಈ ಬಗೆಗೆ ಕ್ರಮ ಜರುಗಿಸಲು ಜಿಲ್ಲಾಡಳಿತ, ನಗರಸಭೆ ಮುಂದಾಗ ಬೇಕು ಎಂಬುವುದು ನಾಗರಿಕರ ನಿರೀಕ್ಷೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry