ದಸರಾ: ಹೂವಿನ ಬೆಲೆ ಗಗನಕ್ಕೆ

7

ದಸರಾ: ಹೂವಿನ ಬೆಲೆ ಗಗನಕ್ಕೆ

Published:
Updated:

ಶ್ರೀನಿವಾಸಪುರ: ಹಬ್ಬ ಬಂತೆಂದರೆ ಹೂಗಳ ಬೆಲೆ ಗಗನಕ್ಕೇರುತ್ತದೆ. ದಸರಾ ಹಬ್ಬದಲ್ಲಿ ಹೂವೇ ಪ್ರಧಾನ. ದೇವರ ವಿಗ್ರಹ ಮಾತ್ರವಲ್ಲದೆ. ಎಲ್ಲ ಬಗೆಯ ವಾಹನಗಳನ್ನೂ ಹೂವಿನಿಂದ ಅಲಂಕರಿಸುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಹಾಗಾಗಿ ಹೂವಿನ ಬೇಡಿಕೆ ಹೆಚ್ಚಿದೆ. ಬೆಲೆ ಗ್ರಾಹಕರನ್ನು ಬೆಚ್ಚಿಬೀಳಿಸುತ್ತಿದೆ.ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಚೆಂಡು ಹೂವಿನದೇ ಪಾರುಪತ್ಯ. ಹಬ್ಬಕ್ಕೆ ಮೊದಲು ಕೆಜಿಯೊಂದಕ್ಕೆ ರೂ. 5 ರಂತೆ ಮಾರಾಟವಾಗುತ್ತಿದ್ದ ಚೆಂಡು ಹೂವಿನ ಬೆಲೆ ಈಗ ರೂ. 60 ರ ಗಡಿದಾಟಿದೆ. ಸೇವಂತಿಗೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲವಾದ್ದರಿಂದ ಅದರ ಬೆಲೆ ಚೆಂಡು ಹೂವಿಗಿಂತ ಹೆಚ್ಚಿದೆ. ನೆರೆಯ ಆಂಧ್ರಪ್ರದೇಶದಿಂದ ಬೆಳಿಗ್ಗೆ ಸೇವಂತಿಗೆ ಹೂವಿನ ಗೊಂಚಲುಗಳನ್ನು ಇಲ್ಲಿನ ಮಾರುಕಟ್ಟೆಗೆ ತರಲಾಗುತ್ತದೆ. ಹೂವಿನ ವ್ಯಾಪಾರಿಗಳು ಅವುಗಳನ್ನು ಸಗಟಾಗಿ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಕೈ ಬದಲಾಯಿತೆಂದರೆ ಮುಗಿಯಿತು. ಅದರ ಬೆಲೆ ಕೊಂಡ ಬೆಲೆಗಿಂತ ಮೂರು ಪಟ್ಟು ಹೆಚ್ಚುತ್ತದೆ.ಇನ್ನು ಕಾಕಡ, ಕನಕಾಂಬರ, ಮಲ್ಲಿಗೆ ಹೂಗಳ ಬೆಲೆಯನ್ನು ಕೇಳುವಂತೆಯೇ ಇಲ್ಲ. ಹಬ್ಬದ ಜೊತೆಗೆ ಮದುವೆ ಮತ್ತಿತರ ಶುಭ ಕಾರ್ಯಗಳನ್ನು ಮಾಡುವುದರಿಂದ ಸಹಜವಾಗಿಯೇ ಹೂವಿಗೆ ಬೇಡಿಕೆ ಹೆಚ್ಚುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ  ಚೆಂಡು ಹೂವನ್ನು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯಲಾಗಿದೆ. ಇದು ಬೆಲೆ ಕುಸಿತಕ್ಕೆ ಕಾರಣವಾಗಿ ಬಹಳಷ್ಟು ಹೂವು ತೋಟಗಳಲ್ಲಿಯೇ ಕೊಳೆತು ಹಾಳಾಯಿತು. ಆದರೆ ದಸರಾ ಹೂವಿನ ಬೇಡಿಕೆಯನ್ನು ಮತ್ತೆ ಸ್ಥಾಪಿಸಿದೆ.  ವಿಶೇಷವೆಂದರೆ ಕೆರೆಗಳು ಮತ್ತು ಕೊಳೆತ ಚರಂಡಿಗಳ ಪಕ್ಕದಲ್ಲಿ ದಟ್ಟವಾಗಿ ಹಸಿರೆಲೆಗಳನ್ನು ಹೊಂದಿ ಬೆಳೆಯುವ ಪಿಶಾಚಿ ಕಮಲ ಹೂವಿನ ಹಾರಗಳ ತಯಾರಿಕೆಯಲ್ಲಿ ಬಳಕೆ ಯಾಗುತ್ತಿದೆ. ದೊಡ್ಡ ಹಾರಗಳ ತಯಾರಿಕೆಯಲ್ಲಿ ಪಿಶಾಚಿ ಕಮಲದ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತಿದೆ.ಹಾಗಾಗಿ ಪಟ್ಟಣದ ಸುತ್ತ ಮುತ್ತ ಬೆಳೆದಿರುವ ಈ ಕಳೆ ಗಿಡಕ್ಕೆ ಎಲ್ಲಿಲ್ಲದ ಮಾನ್ಯತೆ ಬಂದಿದೆ. ಚೆಂಡು ಹೂವಿನ ಪಕ್ಕದಲ್ಲಿ ಇದರ ಎಲೆಗಳನ್ನು ದಾರಕ್ಕೆ ಹೊಲೆದು ಹೊರ ಚಾಚಿದ ಎಲೆಗಳನ್ನು ಕತ್ತರಿಯಲ್ಲಿ ಮಟ್ಟವಾಗಿ ಕತ್ತರಿಸಿ ಕಲಾತ್ಮಕ ಹಾರ ತಯಾರಿಸಲಾಗುತ್ತಿದೆ.ಉಚಿತವಾಗಿ ತರಲಾದ ಸೊಪ್ಪಿಗೂ ಗ್ರಾಹಕ ಹೂವಿನ ಬೆಲೆಯನ್ನು ತೆರಬೇಕಾಗಿ ಬಂದಿದೆ.

ಕಾಕಡ, ಕನಕಾಂಬರ ಮತ್ತು ಮಲ್ಲಿಗೆ ಹೂವಿನ ಜೊತೆ ಹೊಂಗೆ ಅಥವಾ ಉತ್ತರಾಣಿ ಸೊಪ್ಪನ್ನು ಸೇರಿಸಿ ಕಟ್ಟುವುದು ಹಿಂದಿನಿಂದಲೂ ನಡೆದು ಬಂದಿದೆ. ಹೂವಿಗೆ ಬೇಡಿಕೆ ಹೆಚ್ಚಿದ ದಿನಗಳಲ್ಲಿ  ಹೂಗಳ ಸಂಖ್ಯೆಗಿಂತ ಈ ಸೊಪ್ಪುಗಳೇ ಪ್ರಧಾನವಾಗಿ ಕಂಡು ಬರುತ್ತವೆ. ಹೂವಿನಿಂದ ದಾರಕ್ಕೆ ಮೋಕ್ಷ ಎನ್ನುವ ಮಾತು ಹಳೆಯದು. ಅಧಿಕ ಬೇಡಿಕೆಯಿಂದಾಗಿ ಹೂವಿನ ಜೊತೆ ಅಂತಿಂಥ ಸೊಪ್ಪಿಗೆ ಮೋಕ್ಷ ಸಿಗುವಂತಾಗಿದೆ.  ಇಷ್ಟಾದರೂ ಹೂವು  ಬೆಳೆದ ರೈತರು ನೇರವಾಗಿ ಮಾರು ಕಟ್ಟೆಗೆ ತಂದು ಚಿಲ್ಲರೆಯಾಗಿ ಮಾರು ವುದು ಅಪರೂಪ. ಅವರು ಹೂವನ್ನು ಕಿತ್ತು ಸಗಟು ವ್ಯಾಪಾರಿಗಳಿಗೆ ಮಾರಿ ಕೈ ತೊಳೆದುಕೊಳ್ಳುತ್ತಾರೆ. ಇದರಿಂದ ಮಧ್ಯವರ್ತಿಗಳು ಒಳ್ಳೆ ಲಾಭ ಮಾಡಿಕೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry