ಭಾನುವಾರ, ನವೆಂಬರ್ 17, 2019
21 °C
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಳಿ ಬಚಾವೋ ಆಂದೋಲನ ಪತ್ರ

ದಾಂಡೇಲಿ ಕಾಗದ ಕಾರ್ಖಾನೆ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:

ಶಿರಸಿ: ಕಾಳಿ ನದಿಗೆ ವಿಷ ಉಣಿಸುವ ದಾಂಡೇಲಿ ಕಾಗದ ಕಾರ್ಖಾನೆ  ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಾಳಿ ಬಚಾವೋ ಆಂದೋಲನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಆಂದೋಲನದ ಸಂಯೋಜಕ ಪಾಂಡುರಂಗ ಹೆಗಡೆ, ಕಾಳಿ ಬಚಾವೋ ಆಂದೋಲನ ಇದೇ 4ಕ್ಕೆ ಹತ್ತು ವರ್ಷ ಪೂರೈಸಲಿದ್ದು, ಈ ಸಂದರ್ಭದಲ್ಲಿ ಪಾದಯಾತ್ರೆ, ಜನಜಾಗೃತಿ ಹಾಗೂ ಹೋರಾಟ ಬಲಗೊಳಿಸುವ ಹಲವಾರು ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

ದಶಕದ ಅವಧಿಯಲ್ಲಿ ಕಾಳಿ ಬಚಾವೋ ಆಂದೋಲನ ಮರಳು ಸಾಗಣಿಕೆಗೆ ಪ್ರತಿಬಂಧ, ಮಾವಳಂಗಿ ಅಣೆಕಟ್ಟು ನಿರ್ಮಾಣ ಯೋಜನೆ ಸ್ಥಗಿತ ಹಾಗೂ ಕಾಳಿ ಕೊಳ್ಳದ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಸಫಲವಾಗಿದೆ. ಕಾಳಿ ನದಿಗೆ ತ್ಯಾಜ್ಯವನ್ನು ಬಿಡುವ ದಾಂಡೇಲಿಯ ಕಾಗದ ಕಾರ್ಖಾನೆ ಪ್ರತಿ ದಿನ ಶುದ್ಧ ನೀರನ್ನು ನದಿಯಿಂದ ಪಡೆದುಕೊಂಡು ಅದಕ್ಕೆ ಪ್ರತಿಯಾಗಿ ವಿಷಯುಕ್ತ ರಾಸಾಯನಿಕವನ್ನು ನದಿಗೆ ಬಿಡುತ್ತಿದೆ. ಈ ಮಾಲಿನ್ಯ ನಿಲ್ಲಿಸುವಂತೆ ಕಾಳಿ ಬಚಾವೋ ಆಂದೋಲನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದು ಗಮನ ಸೆಳೆದಿದೆ.ಕಾಗದ ಕಾರ್ಖಾನೆ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದಂತೆ ಕಾಗದ ಉತ್ಪಾದನೆಗೆ ಡಿಯೋಕ್ಸಿನ್ ಎಂಬ ರಾಸಾಯನಿಕ ಬಳಸುತ್ತಿದೆ. ಈ ರಾಸಾಯನಿಕ ತ್ಯಾಜ್ಯದಲ್ಲಿ ಸೇರಿ ಕಾಳಿ ನದಿಯನ್ನು ಮಲಿನಗೊಳಿಸಿದೆ. ಇದರಿಂದ ಕ್ಯಾನ್ಸ್‌ರ್ ರೋಗ ಬರುವುದೆಂಬ ಸಂಗತಿ ದೃಢಪಟ್ಟಿದೆ. ಕಾಗದ ಕಾರ್ಖಾನೆ ತಾನು ಉತ್ಪಾದಿಸುತ್ತಿರುವ ಕಾಗದಕ್ಕೆ ಅನುಗುಣವಾಗಿ ಸಂಸ್ಕರಣಾ ಘಟಕ ಸ್ಥಾಪಿಸದೆ, ಆ ಮೂಲಕ ಮತ್ತಷ್ಟು ಹೆಚ್ಚಿನ ವಿಷವನ್ನು ಪ್ರತೀ ದಿನ ನದಿಗೆ ಬಿಡುತ್ತಿದೆ.

ಇತ್ತೀಚೆಗೆ ಭೇಟಿ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ವಾಮನಾಚಾರ್ಯ, ಕಾರ್ಖಾನೆ ಯಾವ ತರಹದ ಕಲ್ಮಶ ಬಿಡುತ್ತಿಲ್ಲ; ಎಲ್ಲವನ್ನೂ ಸಂಸ್ಕರಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದು ಸುಳ್ಳಿನ ಕಂತೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮಾಲಿನ್ಯ ನಿಯಂತ್ರಿಸುವ ಬದಲು ಅದನ್ನು ಹೆಚ್ಚಿಸಲು ಸಹಕಾರ ನೀಡುತ್ತಿರುವುದು ಖೇದಕರ ಸಂಗತಿಯಾಗಿದೆ.50 ಕಿ.ಮೀ. ವರೆಗೆ ವ್ಯಾಪಿಸಿದ ಮಾಲಿನ್ಯ: ಇತ್ತೀಚಿನ ವರ್ಷಗಳಲ್ಲಿ ಕಾಗದ ಉತ್ಪಾದನೆ ಹೆಚ್ಚಿದ್ದರಿಂದ ಕಾಗದ ಕಾರ್ಖಾನೆಯಲ್ಲಿ ನೀರು ಹಾಗೂ ವಾಯು ಮಾಲಿನ್ಯ ಪ್ರಮಾಣವೂ ಹೆಚ್ಚಿದೆ. ಕಾರ್ಖಾನೆಯ ಮಾಲಿನ್ಯ ಪ್ರಮಾಣ ದಾಂಡೇಲಿಯಿಂದ 50 ಕಿ.ಮೀ. ದೂರದ ಯಲ್ಲಾಪುರದವರೆಗೂ ವ್ಯಾಪಿಸಿದೆ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉಸಿರಾಟದ ಸಮಸ್ಯೆ, ಹೆಚ್ಚಿದ ಕ್ಯಾನ್ಸರ್ ರೋಗಿಗಳು ಮತ್ತು ಸಾಯುತ್ತಿರುವ ಜಾನುವಾರುಗಳಿಂದಾಗಿ ಮಾಲಿನ್ಯದ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.ಈ ಹಿಂದೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 4 ಸಾವಿರ ಜನ ಖಾಯಂ ಕೆಲಸಗಾರರನ್ನು ಕಡಿಮೆಗೊಳಿಸಿ ಕೇವಲ 1300 ಜನರಿಗೆ ಮಾತ್ರ ಖಾಯಂ ಕೆಲಸ ನೀಡಿ, ಪ್ರತಿ ದಿನ ಉಳಿದ 6ಸಾವಿರ ಜನ ಕೆಲಸಗಾರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ.ಬಾಲ ಕಾರ್ಮಿಕರನ್ನು ಸಹ ಕೆಲಸಕ್ಕೆ ತೆಗೆದುಕೊಂಡು, ಹೈಕೋರ್ಟ್ ನಿಗದಿಪಡಿಸಿದ ದಿನಗೂಲಿ ನೀಡದೆ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಸಾಮಾಜಿಕವಾಗಿ ಜನರನ್ನು ಶೋಷಣೆ ಮತ್ತು ಪರಿಸರ ದೃಷ್ಟಿಯಿಂದ ಕಾಳಿ ನದಿಗೆ ವಿಷ ಉಣಿಸುತ್ತಿರುವ ಕಾಗದ ಕಾರ್ಖಾನೆಯ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ಕಾಳಿಯನ್ನು ಉಳಿಸುವಂತೆ ಆಂದೋಲನ ಆಗ್ರಹಿಸಿದೆ.

ಪ್ರತಿಕ್ರಿಯಿಸಿ (+)