ಗುರುವಾರ , ಮೇ 26, 2022
29 °C

ದಾಂಪತ್ಯ ಜೀವನಕ್ಕೆ ಕಾಲಿಟ್ಟ 183 ಜೋಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ 12ನೇ ವರ್ಷದ ಸಾಮೂಹಿಕ ವಿವಾಹದಲ್ಲಿ 183 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಸಮಾರಂಭದಲ್ಲಿ ಉಪಸ್ಥಿತರಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್, ಸಿ.ಎಚ್.ವಿಜಯಶಂಕರ್, ವಿ.ಸೋಮಣ್ಣ ಅವರ ಸಮ್ಮುಖದಲ್ಲಿ ವೇದಿಕೆಯ ಮೇಲೆ ಮೊದಲಿಗೆ ಸಾಂಕೇತಿಕವಾಗಿ 6 ಜೋಡಿಗಳಿಗೆ ವಿವಾಹ ಮಾಡಿಸಲಾಯಿತು. ಅರ್ಚಕರ ಮಂತ್ರಘೋಷ, ಗಟ್ಟಿ ಮೇಳದ ನಡುವೆ ಗಣ್ಯರು ನೂತನ ವಧು-ವರರಿಗೆ ಮಂತ್ರಾಕ್ಷತೆ ಹಾಕಿ ಆಶೀರ್ವದಿಸಿದರು.ಬಳಿಕ ವೇದಿಕೆಯ ಮುಂಭಾಗದ ಬೃಹತ್ ಚಪ್ಪರದ ವಿಶಾಲ ಜಾಗದಲ್ಲಿ ವ್ಯವಸ್ಥಿತವಾಗಿ ಸಾಲಾಗಿ ನಿಲ್ಲಿಸಲಾಗಿದ್ದ ಉಳಿದ 177 ವರರು ತಮ್ಮ ಬಾಳ ಸಂಗಾತಿಗೆ ತಾಳಿ ಕಟ್ಟಿದರು. ಪ್ರತಿ ವಧುವಿಗೆ ತಾಳಿ, ಸೀರೆ, ರವಿಕೆ, ಕಾಲುಂಗರ ಮತ್ತು ಪ್ರತಿ ವರನಿಗೆ ಪಂಚೆ, ಅಂಗಿ, ವಲ್ಲಿಯನ್ನು ಮಠದ ವತಿಯಿಂದ ಉಚಿತವಾಗಿ ಒದಗಿಸಲಾಗಿತ್ತು.

ಈವರೆಗೆ 1383 ಜೋಡಿಗಳು ಇಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಈ ಬಾರಿ 183 ಜೋಡಿಗಳು ವಿವಾಹವಾದರು. ಈ ಪೈಕಿ 4 ಅಂತರ ಜಾತಿ, 4 ಅಂಗವಿಕಲ ಜೋಡಿಗಳು ಸೇರಿವೆ. ಎರಡೂ ಕಣ್ಣು ಇಲ್ಲದವರನನ್ನು ಒಂದು ಕಣ್ಣು ಇಲ್ಲದ ವಧು ವಿವಾಹವಾಗಿದ್ದು ವಿಶೇಷವಾಗಿತ್ತು.ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಪ್ರತಿ ದಂಪತಿಗೆ ತಲಾ ರೂ.10 ಸಾವಿರ ಪ್ರೋತ್ಸಾಹ ಧನ ನೀಡುತ್ತದೆ. ಹೊಸ ನಿಯಮದಂತೆ ನೂತನ ದಂಪತಿಗಳಿಗೆ ಉಪ ನೋಂದಣಾಧಿಕಾರಿ ಸ್ಥಳದಲ್ಲೇ ಹಾಜರಿದ್ದು ದೃಢೀಕರಣ ಪತ್ರ ವಿತರಿಸಿದರು.ಉಪಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಸ್ವಾಗತಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.