`ದಾಖಲೆ' ಬರಹಗಾರ!

7

`ದಾಖಲೆ' ಬರಹಗಾರ!

Published:
Updated:

ಹಲವರದು ವಿಭಿನ್ನ ಬಗೆಯ ಹವ್ಯಾಸ. ಭಿನ್ನ ರೀತಿಯ ಅಭಿರುಚಿ. ಮಾಡುವ ವೃತ್ತಿಗೂ ಅಳವಡಿಸಿಕೊಂಡ ಹವ್ಯಾಸಕ್ಕೂ ಸಂಬಂಧವೇ ಇರುವುದಿಲ್ಲ. ಅದೊಂದು ರೀತಿಯಲ್ಲಿ ಸಮುದ್ರದೊಳಗಿನ ಉಪ್ಪು, ಬೆಟ್ಟದ ಮೇಲಿನ ನೆಲ್ಲಿಕಾಯಿಗೆ ಇರುವಂತಹ ಅನುಬಂಧ. ನಿವೃತ್ತಿಯಾಗುವ ತನಕ ವೃತ್ತಿಯಾದರೆ, ಬದುಕು ಇರುವ ತನಕ ಪ್ರವೃತ್ತಿ. ಈ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡವರು `ದಾಖಲೆ ಪ್ರೇಮಿ' ಚನ್ನಗಿರಿ ಕೇಶವಮೂರ್ತಿ.ಕಾಫಿ ಮಂಡಳಿಯಲ್ಲಿ ವೃತ್ತಿ ಬದುಕು ಕಳೆದು ಕ್ರಿಕೆಟ್ ಅಂಗಣದ ಮಧ್ಯೆ, ಆಟಗಾರರ ನಡುವೆ ಕ್ರೀಡೆಯಲ್ಲಿಯೇ ಕೇಶವಮೂರ್ತಿಯವರ ನಿವೃತ್ತ ಬದುಕು ಸಾಗುತ್ತಿದೆ. ಯುವಕರಾಗಿದ್ದಾಗ ಹುಟ್ಟಿಕೊಂಡ ಕ್ರಿಕೆಟ್ ಬಗೆಗಿನ ಪ್ರೀತಿ, ಬದುಕಿನ ಇಳಿಸಂಜೆಯಲ್ಲೂ ಪ್ರವಾಹದ ರೀತಿಯಲ್ಲಿ ಹರಿಯುತ್ತಿದೆ. ಪ್ರತಿ ರಣಜಿ ಪಂದ್ಯ ನಡೆದಾಗ ಅವರು ಪ್ರೆಸ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಪ್ರತಿ ಶತಕ, ಅರ್ಧ ಶತಕ. ವಿಕೆಟ್ ಹೀಗೆ ಏನಾದರೂ ಸಂಗತಿ ಸಂಭವಿಸಿದರೆ, ಅದರಲ್ಲೊಂದು ದಾಖಲೆ ಅಳಿಸಿ ಹೋಗಿರುತ್ತದೆ. ಹೊಸ ದಾಖಲೆ ಸೃಷ್ಟಿಯಾಗಿರುತ್ತದೆ. ಅದರ ಬಗ್ಗೆ ಮಾಹಿತಿ ನೀಡುವ, ಅಂಕಿ ಅಂಶಗಳನ್ನು ಶೇಖರಿಸಿ ಇಡುವ ಭಿನ್ನ ಹವ್ಯಾಸ ಇವರದು. ಈ ಕಾರ್ಯವನ್ನು ಅವರು 35 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಅನೇಕ ಸಲ ರಾಜ್ಯ ತಂಡದ ಆಟಗಾರರೇ ಇವರನ್ನು `ನಮ್ಮ ದಾಖಲೆಗಳ ಬಗ್ಗೆ ಹೇಳಿ' ಎಂದು ಕೇಳಿದ್ದಿದೆ.2002ರಲ್ಲಿ ಪಾಕಿಸ್ತಾನದಲ್ಲಿ `ಕ್ಯಾಲೆಂಡರ್ ಇಯರ್ ಕಿಂಗ್ಸ್' ಪುಸ್ತಕ ಪ್ರಕಟವಾಗಿತ್ತು. ಆ ಪುಸ್ತಕಕ್ಕೆ ಇವರು ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು. ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ಸ್ಪಿನ್ ದಂತಕತೆ ಆಸ್ಟ್ರೇಲಿಯಾದ ಶೇನ್ ವಾರ್ನ್, ಮತ್ತೊಬ್ಬ `ಮೋಡಿ'ಗಾರ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಬಗ್ಗೆ ವಿಶೇಷ ಲೇಖನಗಳನ್ನೂ ಬರೆದಿದ್ದಾರೆ. ಕ್ರಿಕೆಟ್ ದೇವರನ್ನು ಆರಾಧಿಸುವ ಸಾಕಷ್ಟು ಅಭಿಮಾನಿಗಳ ಹಾಗೆ ಸಚಿನ್ ಅವರನ್ನು ಕಂಡರೆ ಕೇಶವಮೂರ್ತಿಯವರಿಗೆ ತುಂಬಾ ಗೌರವ. ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕು ಎನ್ನುವ ಕನಸಿತ್ತು. ವಿಶೇಷವೆಂದರೆ, ಈ ಕನಸನ್ನು ನನಸು ಮಾಡಿದ್ದು ಖುದ್ದು `ಲಿಟಲ್ ಚಾಂಪಿಯನ್'.ಆಸೆ ಈಡೇರಿಸಿದ ಸಚಿನ್

ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರಿಗೂ ಕೇಶವಮೂರ್ತಿ ಅವರನ್ನು ಕಂಡರೆ ತುಂಬಾ ಪ್ರೀತಿ. ಅದಕ್ಕೆ ಈ ಸಂದರ್ಭ ನಿದರ್ಶನ: ಅದೊಂದು ಸಲ ಕ್ರಿಕೆಟ್ ಪಂದ್ಯವನ್ನಾಡಲು ಸಚಿನ್ ಉದ್ಯಾನನಗರಿಗೆ ಬಂದಿದ್ದರು. ಅದೇ ಕೆಲ ದಿನಗಳ ಹಿಂದೆ ಕೇಶವಮೂರ್ತಿಯವರು `ಭಾರತೀಯ ಕ್ರಿಕೆಟ್ ಇತಿಹಾಸ' ಎನ್ನುವ ಪುಸ್ತಕ ಬರೆದಿದ್ದರು.

ಅದನ್ನು ಸಚಿನ್ ಅವರಿಗೆ ತೋರಿಸಿ ಹಸ್ತಾಕ್ಷರ ಪಡೆಯಬೇಕು ಎನ್ನುವ ಆಸೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಮುಗಿಸಿ ಹೋಟೆಲ್‌ಗೆ ತೆರಳುತ್ತಿದ್ದಾಗ, ತಮ್ಮ ಮನದ ಇಂಗಿತವನ್ನು ಇವರು ಮುಂಬೈಕರ್ ಮುಂದೆ ವ್ಯಕ್ತಪಡಿಸಿದ್ದರು. `ಹೋಟೆಲ್‌ಗೆ ಬನ್ನಿ' ಎಂದಷ್ಟೇ ಹೇಳಿದ ಸಚಿನ್, ಅವರ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದರು. ಹೋಟೆಲ್‌ಗೆ ತೆರಳಿ ಕೆಲ ಸಮಯದ ನಂತರ ಮಾಸ್ಟರ್ ಬ್ಲಾಸ್ಟರ್ ದೂರವಾಣಿ ಮೂಲಕ ಬರಹೇಳಿ ಅವರ ಆಸೆಯನ್ನು ಈಡೇರಿಸಿದ್ದರು.`ಸಚಿನ್ ಅವರಿಗೆ ನನ್ನ ಕನಸನ್ನು ನನಸು ಮಾಡುವ ಅಗತ್ಯವೇನೂ ಇರಲಿಲ್ಲ. ಆದರೂ ಅವರು, ತಮ್ಮನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟು ದೊಡ್ಡತನ ಮೆರೆದರು. ಆ ಕ್ಷಣವನ್ನು ಬದುಕಿನಲ್ಲಿ ಮರೆಯಲು ಸಾಧ್ಯವೇ ಇಲ್ಲ. ಹಿರಿಯರ ಬಗ್ಗೆ ಸಚಿನ್ ಹೊಂದಿದ್ದ ಗೌರವಕ್ಕೆ ಈ ಸಂದರ್ಭವೇ ಸಾಕ್ಷಿ' ಎಂದು ಆ ಖುಷಿಯ ಕ್ಷಣವನ್ನು ಕೇಶವಮೂರ್ತಿ ಮೆಲುಕು ಹಾಕುತ್ತಾರೆ.ಪುಸ್ತಕಗಳ ಭಂಡಾರ

ಬನಶಂಕರಿಯಲ್ಲಿರುವ ಕೇಶವಮೂರ್ತಿಯವರ ಮನೆಯಲ್ಲಿ ಪುಸ್ತಕಗಳ ಭಂಡಾರವಿದೆ. ಅಲ್ಲಿರುವ ಹೆಚ್ಚಿನ ಪುಸ್ತಕಗಳು ಕ್ರಿಕೆಟ್‌ಗೆ ಸಂಬಂಧಿಸಿದವು. ದೇಶೀಯ ಟೂರ್ನಿಗಳಲ್ಲಿ (ದುಲೀಪ್ ಟ್ರೋಫಿ, ಬುಚ್ಚಿ ಬಾಬು, ಸಿ.ಕೆ. ನಾಯ್ಡು ಮತ್ತಿತರ ಟೂರ್ನಿಗಳು) ಕರ್ನಾಟಕ ತಂಡ ಎಲ್ಲಿಯೇ ಹೋಗಿ ಆಡಿ ಬಂದರೂ ಅವುಗಳ ಬಗ್ಗೆ ಕೇಶವಮೂರ್ತಿಯವರ ಬಳಿ ದಾಖಲೆ ಇರುತ್ತದೆ. ದಾಖಲೆಗಳನ್ನು ಸಂಗ್ರಹಿಸಿಡುವಲ್ಲಿ ಅವರು ಹೊಂದಿರುವ ಶಿಸ್ತಿಗೆ ಸಾಕಷ್ಟು ಕ್ರಿಕೆಟ್ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಖ್ಯಾತ ಕ್ರೀಡಾ ಅಂಕಣಕಾರ ಹಾಗೂ ಲೇಖಕ ಕೆರ್ಸಿ ಮೆಹೆರ್ ಹೋಂಜಿ ಇವರು ಕಲೆ ಹಾಕಿರುವ ಅಂಕಿಅಂಶಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸಾಹಿತ್ಯದಲ್ಲೂ ಒಲವು

ಕಾಫಿ ಮಂಡಳಿಯಲ್ಲಿ ಕೆಲಸ, ಕ್ರಿಕೆಟ್ ಬಗ್ಗೆ ಪ್ರೀತಿಯ ಜೊತೆಗೆ ಸಾಹಿತ್ಯದ ಒಲವೂ ಇದೆ. `ಅವಳೇಕೆ ಸತ್ತಳು', `ಬೆದರಿಕೆ ಪತ್ರ', `ಅವನಲ್ಲ ಅಪರಾಧಿ', `ಗುರುತು ಸಿಗದ ಶವ' ಎಂಬ ನಾಟಕಗಳನ್ನು ಅವರು ಬರೆದಿದ್ದಾರೆ. ಅಷ್ಟೇ ಅಲ್ಲ, ಶರ್ಲಾಕ್ ಹೋಮ್ಸ ಪಾತ್ರವನ್ನು ಒಳಗೊಂಡ (ಆಂಗ್ಲ ಲೇಖಕ ಹರ್ಬರ್ಟ್ ರಚಿಸಿರುವ) `ಫನ್ ವಿತ್ ಮೆಕ್ಯಾನಿಕ್ಸ್' ಪುಸ್ತಕವನ್ನು ಕನ್ನಡಕ್ಕೆ `ಬಯಲಾಗದ ರಹಸ್ಯ' ಹೆಸರಿನಲ್ಲಿ ಅನುವಾದಿಸಿದ್ದಾರೆ. ಸಾಹಿತ್ಯ ಹಾಗೂ ಕ್ರಿಕೆಟ್‌ನತ್ತ ಅವರ ಒಲವು ಬದುಕಿನ ಪ್ರೀತಿಯನ್ನು ಹೆಚ್ಚಿಸಿದೆ. ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುವಂತೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry