ದಾನಮ್ಮದೇವಿ ದರ್ಶನಕ್ಕೆ ಭಕ್ತರ ದಂಡು

7

ದಾನಮ್ಮದೇವಿ ದರ್ಶನಕ್ಕೆ ಭಕ್ತರ ದಂಡು

Published:
Updated:

ವಿಜಾಪುರ: ಪಾದಯಾತ್ರೆಯ ಮೂಲಕ ಎಲ್ಲ ರಸ್ತೆಗಳಿಂದಲೂ `ಪ್ರವಾಹ'ದಂತೆ ಹರಿದು ಬರುತ್ತಲೇ ಇರುವ ಭಕ್ತರು. ದೂರದ ಊರುಗಳಿಂದ ನಡೆಯುತ್ತ ಬಂದು, ಗಂಟೆಗಟ್ಟಲೆ ಸರದಿಯಲ್ಲಿ ನಿಂತಿದ್ದರೂ ಆಯಾಸ ಮರೆತು ಭಕ್ತಿಯ ಉನ್ಮಾದದಲ್ಲಿ ತೇಲುತ್ತಿದ್ದರು.ತಮ್ಮ ಆರಾಧ್ಯ ದೇವಿಯ ದರ್ಶನ ಪಡೆಯುವ ತವಕ ಅವರಲ್ಲಿ. ದೇವಿ ದರ್ಶನ ಪಡೆದ ನಂತರ ಧನ್ಯತಾ ಭಾವ; ಹರಕೆ ತೀರಿಸಿದ ಸಂತೃಪ್ತಿ. ಪ್ರಸಾದ ಸ್ವೀಕರಿಸಿ, ಪಕ್ಕದಲ್ಲಿಯೇ ಹಾಕಿರುವ ವಿಶಾಲವಾದ ಶಾಮಿಯಾನಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಜಿಲ್ಲೆಯ ಗಡಿ ಪ್ರದೇಶ ಮಹಾರಾಷ್ಟ್ರದ ಜತ್ತ ತಾಲ್ಲೂಕಿನಲ್ಲಿರುವ ಗುಡ್ಡಾಪುರದ ದಾನಮ್ಮ ದೇವಿ ಜಾತ್ರೆಯಲ್ಲಿ ಬುಧವಾರ ಕಂಡು ಬಂದ ದೃಶ್ಯಗಳಿವು.ಕನ್ನಡಿಗರೇ ಹೆಚ್ಚಾಗಿ ಇರುವ ಪುಟ್ಟ ಗ್ರಾಮ ಗುಡ್ಡಾಪುರ ಭಕ್ತರಿಂದ ತುಂಬಿ ಹೋಗಿತ್ತು. ಎಲ್ಲಿ ನೋಡಿದಲ್ಲಿ ಜನವೋ ಜನ.

`ದಾನಮ್ಮದೇವಿ ಕರ್ನಾಟಕ-ಮಹಾರಾಷ್ಟ್ರದ ಬಹುಪಾಲು ಭಕ್ತರ ಮನೆದೇವತೆ. ಎಲ್ಲ ಜಾತಿ-ಜನಾಂಗದವರೂ ಬರುತ್ತಾರೆ. ಛಟ್ಟಿ ಅಮಾವಾಸ್ಯೆಯ ಸಂದರ್ಭದಲ್ಲಿ ನಡೆಯುವ ಈ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ' ಎಂದು ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಗೊಬ್ಬಿ ತಿಳಿಸಿದರು.`50ಕ್ಕೂ ಹೆಚ್ಚು ಕಿ.ಮೀ. ದೂರದಿಂದ ನಾವು ಮಿತ್ರರೆಲ್ಲ ಪಾದಯಾತ್ರೆಯಲ್ಲಿ ಆಗಮಿಸಿದ್ದೇವೆ. ರಾತ್ರಿ ಇಡೀ ನಡೆಯುತ್ತ ಬಂದರೂ ನಮಗೆ ಆಯಾಸ ಆಗಿಲ್ಲ. ಎಲ್ಲವೂ ದೇವಿಯ ಮಹಿವೆು' ಎಂದು ವಿಜಾಪುರದ ಭಕ್ತರಾದ ಮನೋಜ್, ವಿಜಯಕುಮಾರ, ವಿಶಾಲ್ ಮತ್ತಿತರರು ಹೇಳಿದರು.ದೀಪೋತ್ಸವ: ಬುಧವಾರ ಸಂಜೆ ನಡೆದ ಕಾರ್ತೀಕ ದೀಪೋತ್ಸವದಲ್ಲಿ ಭಕ್ತರು ಸಾಮೂಹಿಕವಾಗಿ ದೀಪ ಬೆಳಗಿಸಿದರು. ತಮ್ಮ ಜ್ಞಾನ ಮತ್ತು ಸಮೃದ್ಧಿಯೂ ಈ ದೀವಿಗೆಯಂತೆ ಬೆಳಗಲಿ ಎಂದು ದೇವಿಗೆ ಪ್ರಾರ್ಥಿಸಿಕೊಂಡರು. ನಂತರ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.ದೇವಸ್ಥಾನ ಟ್ರಸ್ಟ್‌ನವರು ಭಕ್ತರು ಮಲಗಿಕೊಳ್ಳಲು ಸುಮಾರು ಎರಡು ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಬೃಹತ್ ಶಾಮಿಯಾನ ಹಾಕಿ ನೆಲಹಾಸು ಹಾಸಿದ್ದರು. ರಾತ್ರಿ ಇಡೀ ಕಾಲ್ನಡಿಗೆಯಲ್ಲಿ ಬಂದಿದ್ದ ಭಕ್ತರು ದೇವಿಯ ದರ್ಶನ ಪಡೆದು ಆ ಶಾಮಿಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.ಸುಮಾರು 25 ಟನ್‌ನಷ್ಟು ಅನ್ನ, ಸಜ್ಜಕ ಮಾಡಲಾಗಿತ್ತು. ಮಹಿಳೆಯರು ಮತ್ತು ಪುರುಷರು ತಮಗೆ ವ್ಯವಸ್ಥೆ ಮಾಡಿದ್ದ ಪ್ರತ್ಯೇಕವಾದ ದಾಸೋಹದಲ್ಲಿ ಸಜ್ಜಕ, ಅನ್ನ-ಸಾರು ಪ್ರಸಾದ ರೂಪದಲ್ಲಿ ಸೇವಿಸುತ್ತಿದ್ದರು.ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗಳು ಹೆಚ್ಚುವರಿ ಬಸ್ ಸೇವೆ ಆರಂಭಿಸಿದ್ದು, ಗುಡ್ಡಾಪುರದಲ್ಲಿಯೇ ತಾತ್ಕಾಲಿಕ ನಿಯಂತ್ರಣ ಕೊಠಡಿ ತೆರೆದ್ದಾರೆ. ಬಹುಪಾಲು ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ, ಬಸ್‌ಗಳಲ್ಲಿ ಮರಳುತ್ತಿರುವುದರಿಂದ ಬಸ್‌ಗಳ ಟಾಪ್‌ನಲ್ಲಿ ಕುಳಿತು ಪ್ರಯಾಣಿಸುತ್ತಿರುವುದು ಸಾಮಾನ್ಯವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry